ಹೊಸ ಪುಸ್ತಕ ಓದು: ಸಾಮಾನ್ಯರ ಸ್ವಾಮೀಜಿ

Must Read

ಕುಡಿಯುವ ನೀರು ವ್ಯತ್ಯಯ ಆಗದಂತೆ ನೋಡಿಕೊಳ್ಳುವ ಭರವಸೆ ನೀಡಿದ ರುದ್ರೇಶ ಘಾಳೆ

ಬೆಳಗಾವಿ - ಕಾರ್ಮಿಕರು ತಮ್ಮ ಬೇಡಿಕೆಗಳನ್ನು ಈಡೇರಿಸಲು ನಡೆಸಿದ ಮುಷ್ಕರದಿಂದಾಗಿ ಬೆಳಗಾವಿ ಜನತೆಗೆ ಕುಡಿಯುವ ನೀರಿನ ವ್ಯವಸ್ಥೆಯಲ್ಲಿ ತೊಂದರೆ ಉಂಟಾಗಿದ್ದು ವಿಷಾದನೀಯವಾಗಿದೆ ವ್ಯವಸ್ಥೆಯನ್ನು ಸಂಪೂರ್ಣವಾಗಿ ಸರಿ...

ಹೆಣ್ಣು ಮಕ್ಕಳು ಪೌಷ್ಠಿಕ ಆಹಾರ ಸೇವನೆ ಮಾಡಬೇಕು – ಡಾ.ನಯನಾ ಭಸ್ಮೇ

ಸವದತ್ತಿ - “ಹೆಣ್ಣು ಮಕ್ಕಳು ಮಾನಸಿಕವಾಗಿ ಹಾಗೂ ದೈಹಿಕವಾಗಿಯೂ ಸದೃಢವಾಗಿರಬೇಕು ಅವರು ಹದಿ ಹರೆಯದ ವಯಸ್ಸಿಗೆ ಬಂದಾಗ ಅವರಲ್ಲಿ ನೈಸರ್ಗಿಕವಾದ ಬದಲಾವಣೆಗಳು ಆಗುತ್ತವೆ ಅಂತಹ ಸಂದರ್ಭದಲ್ಲಿಯೂ...

ಪ್ರೊ.ಅಲಕಾ ಕುರಣೆ ಯವರಿಗೆ ‘ ಶಿಕ್ಷಕ ಶ್ರೀ ‘ ರಾಜ್ಯ ಮಟ್ಟದ ಪ್ರಶಸ್ತಿ

ಬೆಳಗಾವಿ: ಅಕ್ಷರ ದೀಪ ಸಾಹಿತ್ಯ ಮತ್ತು ಸಾಂಸ್ಕೃತಿಕ ಕಲಾ ವೇದಿಕೆ, ಧಾರವಾಡ ಬೆಂಗಳೂರು ಘಟಕದಿಂದ ನೀಡಲಾಗುವ ರಾಜ್ಯ ಮಟ್ಟದ ಶಿಕ್ಷಕ ಶ್ರೀ ಪ್ರಶಸ್ತಿಗೆ ಭಾಜನರಾಗಿದ್ದಾರೆ. ಬೆಳಗಾವಿಯ...

ಸಾಮಾನ್ಯರ ಸ್ವಾಮೀಜಿ

(ಪರಿಷ್ಕೃತ ಆವೃತ್ತಿ)

ಸಂಪಾದಕರು : ಪ್ರೊ. ಚಂದ್ರಶೇಖರ ವಸ್ತ್ರದ
ಪ್ರಕಾಶಕರು : ಕ್ಷಮಾ ಪ್ರಕಾಶನ, ಗದಗ, ೨೦೧೯
ಬೆಲೆ: ೧೫೦/-
ಮೊ: ೯೪೪೮೬೭೭೪೩೪


ಕನ್ನಡದ ಕುಲಗುರು, ಪುಸ್ತಕದ ಸ್ವಾಮೀಜಿ ಎಂದು ಖ್ಯಾತರಾಗಿದ್ದ ಗದಗ ಜಗದ್ಗುರು ತೋಂಟದಾರ್ಯ ಸಂಸ್ಥಾನಮಠದ ಪೂಜ್ಯ ಶ್ರೀ ಜಗದ್ಗುರು ಡಾ. ತೋಂಟದ ಸಿದ್ಧಲಿಂಗ ಮಹಾಸ್ವಾಮಿಗಳು ಈ ಎಲ್ಲ ಬಿರುದು-ಪ್ರಶಸ್ತಿಗಳಿಗಿಂತ ‘ಸಾಮಾನ್ಯರ ಸ್ವಾಮೀಜಿ’ ಎಂದು ಜನಮಾನಸದಲ್ಲಿ ಅಚ್ಚಳಿಯದೆ ಉಳಿದವರು.

- Advertisement -

ಐದು ದಶಕಗಳ ಕಾಲ ಕನ್ನಡ ನಾಡಿನ ಧಾರ್ಮಿಕ-ಸಾಮಾಜಿಕ-ಸಾಹಿತ್ಯಿಕ-ಶೈಕ್ಷಣಿಕ ಕ್ಷೇತ್ರದಲ್ಲಿ ಅನನ್ಯವಾದ ಕ್ರಾಂತಿಯನ್ನೇ ಮಾಡಿದ್ದ ಪೂಜ್ಯ ಶ್ರೀಗಳು ನಾಡು-ನುಡಿ-ಗಡಿ-ಪರಿಸರ ರಕ್ಷಣೆಗಾಗಿ ಹೋರಾಟವನ್ನೂ ಮಾಡಿದವರು. ಗೋಕಾಕ ಚಳವಳಿ, ಕಪ್ಪತಗುಡ್ಡದ ರಕ್ಷಣೆಯ ಚಳವಳಿ, ರೈತರ ಭೂಮಿಯನ್ನು ವಿದೇಶ ಕಂಪನಿಗಳಿಗೆ ಕೊಡುವ ಪೋಸ್ಕೋ ವಿರುದ್ಧ ಚಳವಳಿ ಮೊದಲಾದ ಹೋರಾಟಗಳಲ್ಲಿ ಶ್ರೀಗಳು ವಹಿಸಿದ ನೇತೃತ್ವ ಮಾಡಿದ ಮಾರ್ಗದರ್ಶನ ಅನ್ಯಾದೃಶ್ಯವಾದುದು.

ಪೂಜ್ಯ ಶ್ರೀಗಳು ಸಾಮಾಜಿಕ ಜಾಗೃತಿ ಮತ್ತು ಪುಸ್ತಕ ಸಂಸ್ಕೃತಿಯ ಉಳುವಿಗಾಗಿ ಮಾಡಿದ ಕಾರ್ಯ ಅಸಾಮಾನ್ಯವಾದುದು. ಇಂಥ ಪ್ರಾತಃಸ್ಮರಣೀಯ ಪೂಜ್ಯರ ಭೂಮ ವ್ಯಕ್ತಿತ್ವವನ್ನು ಕುರಿತು ಜನಸಾಮಾನ್ಯರು ವ್ಯಕ್ತಪಡಿಸಿದ ಅಭಿಪ್ರಾಯಗಳನ್ನು ಪ್ರೊ. ಚಂದ್ರಶೇಖರ ವಸ್ತ್ರದ ಅವರು ‘ಸಾಮಾನ್ಯರ ಸ್ವಾಮೀಜಿ’ ಎಂಬ ಕೃತಿಯಲ್ಲಿ ಅತ್ಯಂತ ಸಾರವತ್ತಾಗಿ ಸಂಪಾದಿಸಿದ್ದಾರೆ.

ಪೂಜ್ಯ ಶ್ರೀಗಳರಲ್ಲಿದ್ದ ಅನುಪಮವಾದ ಜೀವನ ವಿಶ್ವಾಸ, ಅಗಾಧವಾದ ಜ್ಞಾಪಕ ಶಕ್ತಿ, ಅಪ್ರತಿಮವಾದ ಮುನ್ನೋಡ, ಅಸಾಮಾನ್ಯವಾದ ಲೋಕಪ್ರಜ್ಞೆ, ಅಸಂದಿಗ್ಧವಾದ ವೈಚಾರಿಕ ನಿಲುವು, ಅನುಸಂಧಾನದ ಅಚಲ ನಿರ್ಧಾರ, ಅನನ್ಯ ಕ್ರಿಯಾಶೀಲತೆ, ಅಪರಿಮಿತ ತಾಳ್ಮೆ, ಆಧುನಿಕ ಅಗತ್ಯದ ಅರಿವು ಮೊದಲಾದ ಸದ್ಗುಣಗಳಿಂದ ಲೋಕಜಂಗಮರಾಗಿದ್ದರು.

ಶೂನ್ಯದ ನಿರ್ವಾತದಲ್ಲಿದ್ದ ಮಠದ ಅಧಿಕಾರವನ್ನು ಪಡೆದಿದ್ದ ಶ್ರೀಗಳು ಸಾಮಾನ್ಯ ರೈತರಂತೆ ಹೊಲದಲ್ಲಿ ದುಡಿದರು, ಬಾವಿ ತೋಡಿದರು, ಗೋಸೇವೆ ಮಾಡಿದರು. ಸ್ವತಃ ಹೊಲದಲ್ಲಿ ನಿಂತು ಉತ್ತಿದರು, ಬಿತ್ತಿದರು. ಮಠದಲ್ಲಿ ಎಲ್ಲ ಜಾತಿ ಜನಾಂಗದವರಿಗೂ ಮುಕ್ತ ಪ್ರವೇಶ ನೀಡಿ ಜಾತ್ಯತೀತ ಮಠವನ್ನಾಗಿ ರೂಪಿಸಿದರು. ಹೀಗೆ ಶ್ರೀಗಳ ಸಂಪರ್ಕ ವಲಯಕ್ಕೆ ಬಂದ ಎಲ್ಲ ಜಾತಿ-ಧರ್ಮದ ಜನರು ಶ್ರೀಗಳವರನ್ನು ಕುರಿತು ವ್ಯಕ್ತಪಡಿಸಿದ ಮಹತ್ವದ ವಿಚಾರಗಳನ್ನು ‘ಸಮಾನ್ಯರ ಸ್ವಾಮೀಜಿ’ ಕೃತಿ ಅತ್ಯಂತ ರಸಾರ್ದ್ರವಾಗಿ ಕಟ್ಟಿಕೊಡುತ್ತದೆ.

೧೧೦ ಜನರ ಲೇಖನಗಳು ಇಲ್ಲಿವೆ. ‘ಸಾಮಾನ್ಯರ ಸ್ವಾಮೀಜಿ’, ‘ಶ್ರೀಮುಖ’ ಮತ್ತು ‘ಹಾರಿಹೋದ ಹಂಸ’ ಎಂಬ ಮೂರು ವಿಭಾಗಗಳಲ್ಲಿ ಈ ಲೇಖನಗಳನ್ನು ವಿಂಗಡಿಸಲಾಗಿದೆ. ಸಾಮಾನ್ಯರ ಸ್ವಾಮೀಜಿ ಮೊದಲ ಭಾಗದಲ್ಲಿ ಪೂಜ್ಯರ ಪೀಠಾರೋಹಣ ರಜತ ಮಹೋತ್ಸವ ಸಂದರ್ಭದಲ್ಲಿ ಶ್ರೀಸಾಮಾನ್ಯರು ಬರೆದ ಅಪರೂಪದ ಲೇಖನಗಳು ಪ್ರಕಟವಾಗಿವೆ. ಎರಡನೆಯ ಭಾಗದಲ್ಲಿ ನಾಡಿನ ಪ್ರಮುಖ ಮಠಾಧೀಶರ ಲೇಖನಗಳಿವೆ. ಅವರ ಆತ್ಮೀಯ ಗೆಳೆಯರೂ ಇದ್ದಾರೆ; ಶಿಷ್ಯರೂ ಇದ್ದಾರೆ. ‘ಹಾರಿ ಹೋದ ಹಂಸ’ ಮೂರನೆಯ ಭಾಗದಲ್ಲಿ ಶ್ರೀಗಳು ಲಿಂಗೈಕ್ಯರಾದ ನಂತರ ಬರೆದ ಬರೆಹಗಳಿವೆ.

ನೂರಾ ಹತ್ತು ಜನರ ಒಂದೊಂದು ಲೇಖನಗಳು ಒಂದು ಬಗೆಯ ಪೂಜ್ಯರ ವ್ಯಕ್ತಿತ್ವವನ್ನು ಅನಾವರಣ ಮಾಡುತ್ತವೆ. ‘ಮಾನವತಾವಾದಿ’, ಮಾರ್ಗದರ್ಶಿ, ಕೃಪಾಳು, ಕರುಣಾಳು, ಭಾಗ್ಯದ ಸಿರಿ, ಅಂತಃಕರುಣಿ, ದೀನಬಂಧು, ಭರವಸೆಯ ಬೆಳಕು, ಅವರು ನನ್ನ ತಾಯಿ, ಭಕ್ತವತ್ಸಲರು, ಕರ್ನಾಟಕದ ಹೆಮ್ಮೆ, ಪ್ರೇರಕ ಶಕ್ತಿ, ಮಮತಾಮಯಿ, ಕರುಳವಿಳಾಸ, ಮಾತೃಹೃದಯಿ, ಮಾನವೀಯ ಮಂದಾರ, ಹಿಮಾಲಯ ಸದೃಶ್ಯ ಘನವ್ಯಕ್ತಿತ್ವ, ಪ್ರತ್ಯಕ್ಷ ಸೇವಾಲಾಲ, ಬೆಳಕು ಕೊಟ್ಟ ಅಪ್ಪ, ನೊಂದ ಬದುಕಿಗೆ ಬೆಳಕಾದವರು., ಗುರು ಮಾವುಲಿ, ಸರಳತೆಯ ಸಾಕಾರ, ಕನ್ನಡ ಕುಲೋಜ, ಕರುಣೆಯ ಮೂರ್ತಿ, ತಾಯ್ಗರಳು, ಬದುಕಿನ ಬೆಳಕು ಈ ತಲೆಬರೆಹಗಳನ್ನು ಗಮನಿಸಿದರೆ ಸಾಕು ಶ್ರೀಗಳ ಘನ ವ್ಯಕ್ತಿತ್ವದ ಅರಿವು ನಮಗಾಗುತ್ತದೆ.

ಇಲ್ಲಿ ಶ್ರೀಸಾಮಾನ್ಯರಿದ್ದಾರೆ, ರೈತರಿದ್ದಾರೆ, ವೈದ್ಯರಿದ್ದಾರೆ, ವಕೀಲರಿದ್ದಾರೆ, ರಾಜಕಾರಣಿಗಳಿದ್ದಾರೆ, ಸ್ವಾಮಿಗಳಿದ್ದಾರೆ, ಅನ್ಯಧರ್ಮೀಯರಿದ್ದಾರೆ ಹೀಗೆ ಎಲ್ಲ ಮುಖಗಳಿಂದ ಶ್ರೀಗಳ ಬದುಕಿನ ಅನೇಕ ಮಹತ್ವದ ಘಟನೆಗಳು ಇಲ್ಲಿ ಮೊದಲ ಬಾರಿಗೆ ದಾಖಲಾಗಿರುವುದು ವಿಶೇಷ. ವೆಂಕಟಾಪುರ ಎಂಬ ಶರಣ ಕೆಳವರ್ಗದ ವ್ಯಕ್ತಿ, ವ್ಯಸನಕ್ಕೊಳಗಾಗಿ ತನ್ನದೆಲ್ಲವನ್ನು ಕಳೆದುಕೊಂಡ ಸಂದರ್ಭದಲ್ಲಿ ಶ್ರೀಗಳು ಆತನಿಗೆ ನೀಡಿದ ಪ್ರೇರಣೆ ಮುಂದೆ ಆತ ಪ್ರವಚನಕಾರನಾಗಿ, ಪುಸ್ತಕ ಬರಹಗಾರನಾಗಿ ಪರಿವರ್ತನೆಯಾದ ಘಟನೆ ಇಲ್ಲಿದೆ. ಒಬ್ಬ ಶ್ರೀಮಂತನ ಮಗ ಕೆಟ್ಟ ಚಟಕ್ಕೆ ದಾಸನಾಗಿ ತನ್ನ ಮನೆಯಲ್ಲಿ ಕಳುವು ಮಾಡುತ್ತಿದ್ದವನನ್ನು ಶ್ರೀಗಳು ಮನಪರಿವರ್ತನೆ ಮಾಡಿ ಬದುಕನ್ನು ಕಟ್ಟಿಕೊಟ್ಟ ಘಟನೆ ಇಲ್ಲಿದೆ. ಬರಿಗಾಲಲ್ಲಿ ಅಡ್ಡಾಡುವ ರೈತಾಪಿ ಜನರನ್ನು ಕಂಡಾಗ ಮನಕರಗಿ ಅವರಿಗೆಲ್ಲ ಚಪ್ಪಲಿ ಕೊಡಿಸಿದ ಅಂತಃರಣದ ಘಟನೆಗಳು ಇಲ್ಲಿವೆ. ಒಟ್ಟಾರೆ ಪೂಜ್ಯ ಶ್ರೀಗಳು ನೂರಾರು ಬಗೆಯ ಮಾನವೀಯ ಅಂತಃಕರಣದ ಮೌಲಿಕ ಘಟನೆಗಳು ಇಲ್ಲಿ ಪ್ರಸ್ತಾಪವಾಗಿವೆ.

ಮಾನವತೆಯ ಮಂದಾರಪುಷ್ಪವಾಗಿದ್ದ ಶ್ರೀಗಳನ್ನು ಸಹಿಸದ ಸಮುದಾಯವು ಇತ್ತು ಎಂಬುದರತ್ತ ಸಂಪಾದಕರಾದ ಪ್ರೊ. ಚಂದ್ರಶೇಖರ ವಸ್ತ್ರದ ಅವರು ತಮ್ಮ ಸಂಪಾದಕೀಯದಲ್ಲಿ ನಮ್ಮ ಗಮನ ಸೆಳೆಯುತ್ತಾರೆ. ಯಾರು ಸಮಾಜವನ್ನು ಎಚ್ಚರಿಸಲು ತೊಡಗುವರೋ ಅಂಥವರನ್ನು ಸಮಾಜದ ಕೆಲವು ದುಷ್ಟ ಶಕ್ತಿಗಳು ಕಿರುಕುಳ ಕೊಡುತ್ತವೆ ಎಂಬುದಕ್ಕೆ ಇತಿಹಾಸವೇ ಸಾಕ್ಷಿ. ಏಸುವನ್ನು ಗಲ್ಲಿಗೇರಿಸಿದವರು, ಗಾಂಧೀಜಿಗೆ ಗುಂಡು ಹೊಡೆದವರು ಇದ್ದಂತೆ, ಶ್ರೀಗಳ ಈ ಎಲ್ಲ ಸಾಮಾಜಿಕ ಪರಿವರ್ತನೆಯ ಹೋರಾಟದ ಹಿಂದೆ ಕೆಲವು ದುಷ್ಟ ಶಕ್ತಿಗಳು ಅವರಿಗೆ ಕಿರುಕುಳ ಕೊಟ್ಟವು. ಪೂಜ್ಯರು ಹಗ್ಗ ಹಿಡಿದರು, ಅದೇ ಹಾವಾಯಿತು, ಮಗ್ಗಲಾದರು ಮುಳ್ಳು ಚುಚ್ಚಿತು. ಅವರ ಮನಸ್ಸಿನ ಮೇಲೆ ಗಾಯವಿಲ್ಲದೆ ರಕ್ತ ಸುರಿಯುವಂತೆ ಕೆಲವರು ಮಾಡಿದರು. ಇದರಿಂದ ಪೂಜ್ಯರು ತುಂಬ ನೊಂದುಕೊಂಡಿದ್ದರು. ಪ್ರಾಯಶಃ ಇದೇ ಕಾರಣಕ್ಕೆ ಅವರಿಗೆ ಸಾವು ಸನಿಹಕ್ಕೆ ಬಂದಿತೇನೋ ಎಂದು ಅನಿಸುತ್ತದೆ. ಈ ಕುರಿತು ಸಂಪಾದಕರಾದ ಪ್ರೊ. ಚಂದ್ರಶೇಖರ ವಸ್ತ್ರದ ಅವರು ಹೀಗೆ ಹೇಳುತ್ತಾರೆ : ‘ಶ್ರೀಗಳದು ಏಸುವಿನ ತಾಳ್ಮೆ.

ಮನಸ್ಸಿಗೆ ಮೊಳೆ ಜಡಿಯುತ್ತಿದ್ದಾರೆ ಎಂದು ಗೊತ್ತಿದ್ದೂ ಅದನ್ನು ಸಹಿಸಿ ಅವರ ಒಳಿತನ್ನೇ ಹಾರೈಸುವ, ಅವರ ಬಗ್ಗೆ ಒಳಿತನ್ನೇ ನುಡಿವ, ಭೂಮಿತೂಕದ ಸಹನೆ. ‘ಬಿದಿರ ಹೂಟೆಯಲ್ಲಿ ಹರಿದ ಉರಿಯಂತೆ ಒಳಗೊಳಗೆ ಬೇಯುತಿದ್ದೇನೆ’ ಎಂದು ನುಡಿಯುತ್ತಾನೆ ಶರಣ ನಗೆ ಮಾರಿತಂದೆ. ಎಷ್ಟೋ ಸಲ ಶ್ರೀಗಳ ಸ್ಥಿತಿಯೂ ಅದೇ ರೀತಿ ಇದೆಯೇನೋ ಎನಿಸುತ್ತಿತ್ತು. ಆ ಉರಿಗೆ ಕಾರಣರಾದವರ ಬದುಕು ಬೂದಿಯಾಗದೇ ಇದ್ದೀತೆ?’

ಪ್ರೊ. ಚಂದ್ರಶೇಖರ ವಸ್ತ್ರದ ಅವರು ಶ್ರಮ ಶ್ರದ್ಧೆಗಳಿಂದ ಸಂಪಾದಿಸಿದ ‘ಸಾಮಾನ್ಯರ ಸ್ವಾಮೀಜಿ’ ಎಂಬ ವಿಶಿಷ್ಟ ಮೌಲಿಕ ಕೃತಿ ಶ್ರೀಗಳ ಘನ ವ್ಯಕ್ತಿತ್ವವನ್ನು ಅರಿಯಬಯಸುವವರಿಗೆ ಒಂದು ಪ್ರಮುಖ ಆಕರ ಕೃತಿಯಾಗಿದೆ.


ಪ್ರಕಾಶ ಗಿರಿಮಲ್ಲನವರ
ಬೆಳಗಾವಿ
೯೯೦೨೧೩೦೦೪೧

- Advertisement -
- Advertisement -

Latest News

ಕುಡಿಯುವ ನೀರು ವ್ಯತ್ಯಯ ಆಗದಂತೆ ನೋಡಿಕೊಳ್ಳುವ ಭರವಸೆ ನೀಡಿದ ರುದ್ರೇಶ ಘಾಳೆ

ಬೆಳಗಾವಿ - ಕಾರ್ಮಿಕರು ತಮ್ಮ ಬೇಡಿಕೆಗಳನ್ನು ಈಡೇರಿಸಲು ನಡೆಸಿದ ಮುಷ್ಕರದಿಂದಾಗಿ ಬೆಳಗಾವಿ ಜನತೆಗೆ ಕುಡಿಯುವ ನೀರಿನ ವ್ಯವಸ್ಥೆಯಲ್ಲಿ ತೊಂದರೆ ಉಂಟಾಗಿದ್ದು ವಿಷಾದನೀಯವಾಗಿದೆ ವ್ಯವಸ್ಥೆಯನ್ನು ಸಂಪೂರ್ಣವಾಗಿ ಸರಿ...
- Advertisement -

More Articles Like This

- Advertisement -
close
error: Content is protected !!