ಹೊಸ ಪುಸ್ತಕ ಓದು: ಪತ್ರಕರ್ತನ ತವಕ-ತಲ್ಲಣ

Must Read

ಪ್ರವಾಹದಿಂದ ಹಾನಿಗೊಳಗಾದ ಮನೆ ಹಾಗೂ ಬೆಳೆ ಹಾನಿಗೆ ಕೂಡಲೇ ಪರಿಹಾರ ಕಲ್ಪಿಸಿಕೊಡಿ : ಅಧಿಕಾರಿಗಳಿಗೆ ಶಾಸಕ ಬಾಲಚಂದ್ರ ಜಾರಕಿಹೊಳಿ ಸೂಚನೆ

ಗೋಕಾಕ: ಕಳೆದ ಜುಲೈ ತಿಂಗಳಲ್ಲಿ ಮಳೆ ಹಾಗೂ ಪ್ರವಾಹದಿಂದಾಗಿ ಹಾನಿಗೊಳಗಾದ ನದಿ ತೀರದ ಗ್ರಾಮಗಳ ಮನೆ ಹಾಗೂ ಬೆಳೆಗಳ ಸಮೀಕ್ಷೆಯನ್ನು ಕೂಡಲೇ ಪೂರ್ಣಗೊಳಿಸಿ ಸಂತ್ರಸ್ತ ಕುಟುಂಬಗಳಿಗೆ ಪರಿಹಾರ...

ನದಿ ಸ್ವಚ್ಛತೆಗೆ ಚಾಲನೆ ನೀಡಿದ ಈರಣ್ಣ ಕಡಾಡಿ

ಗೋಕಾಕ: ಪ್ರಕೃತಿ ಉಚಿತವಾಗಿ ಕೊಟ್ಟಿರುವ ನೀರನ್ನು, ಗಿಡ ಮರಗಳು ಉಚಿತವಾಗಿ ಕೊಟ್ಟಿರುವ ಆಮ್ಲಜನಕವನ್ನು ನಾಶ ಮಾಡುವ ಮೂಲಕ ಸ್ವಯಂಕೃತ ಅಪರಾಧಗೈದ ನಾವೆಲ್ಲ ನದಿ ಸ್ವಚ್ಛತೆ ಮಾಡುವ...

ಮುಷ್ಕರ ಮತ್ತು ಆರ್ಥಿಕ ಪರಿಸ್ಥಿತಿ

ಇತ್ತೀಚಿನ ದಿನಗಳಲ್ಲಿ ಅತಿ ಹೆಚ್ಚು ಪ್ರಚಲಿತದಲ್ಲಿರುವ ಒಂದು ವಿದ್ಯಮಾನಗಳಲ್ಲಿ ಮುಷ್ಕರ ಕೂಡ ಒಂದು. ಬಂದ್ ಬಂದ್ ಬಂದ್.ಏನಿದು?ಏಕೆ ಮಾಡಬೇಕು? ಇದರಿಂದ ಆಗುವ ಬದಲಾವಣೆಗಳೇನು? ಯಾರಿಗೆ ಲಾಭ?...

ಪತ್ರಕರ್ತನ ತವಕ-ತಲ್ಲಣ

ಲೇಖಕರು : ಮಲ್ಲಿಕಾರ್ಜುನ ಹೆಗ್ಗಳಗಿ
ಪ್ರಕಾಶಕರು : ಸವಿಚೇತನ ಪ್ರಕಾಶನ, ಗದಗ,
ಬೆಲೆ : ರೂ. ೧೬೦


‘ರವಿ ಕಾಣದ್ದನ್ನು ಕವಿ ಕಾಣುತ್ತಾನೆ’ ಎಂಬ ಗಾದೆಗೆ ಪರ್ಯಾಯವಾಗಿ ‘ಕವಿ ಕಾಣದ್ದನ್ನು ಪತ್ರಕರ್ತ ಕಾಣುತ್ತಾನೆ’ ಎಂದು ಹೇಳಲಾಗುತ್ತಿದೆ. ಶ್ರೀ ಮಲ್ಲಿಕಾರ್ಜುನ ಹೆಗ್ಗಳಗಿ ಅವರು ಪ್ರವೃತ್ತಿಯಿಂದ ಪತ್ರಕರ್ತರು. ಅವರಿಗೆ ವರದಿಗಾರಿಕೆ ಮುಖ್ಯ. ಆದರೆ ಕೆಲವು ವರದಿಯ ಹಿಂದಿನ ಸತ್ಯಗಳು ದಿಗ್ಭ್ರಮೆಯನ್ನುಂಟು ಮಾಡುತ್ತವೆ. ಸತ್ಯದ ಅನ್ವೇಷನೆಯಲ್ಲಿರುವ ಪತ್ರಕರ್ತನಿಗೆ ಮಾತ್ರ ಈ ಸುದ್ದಿಯ ಹಿಂದಿನ ಸತ್ಯ ಗೋಚರಿಸುತ್ತದೆ. ಅಂಥ ಅಪರೂಪದ ಕೆಲವು ಮಹತ್ವದ ಸಂಗತಿಗಳನ್ನು ‘ಪತ್ರಕರ್ತನ ತವಕ-ತಲ್ಲಣ’ ಎಂಬ ಕೃತಿಯನ್ನು ಅತ್ಯಂತ ರೋಚಕವಾಗಿ ಕಟ್ಟಿಕೊಟ್ಟಿದ್ದಾರೆ.

ಶ್ರೀ ಮಲ್ಲಿಕಾರ್ಜುನ ಹೆಗ್ಗಳಗಿ ಅವರು ತಮ್ಮ ವೃತ್ತಿಬದುಕಿನಲ್ಲಿ ಅಸಂಖ್ಯಾತ ವರದಿಗಳನ್ನು ಬರೆದಿದ್ದಾರೆ. ಸಾವಿರಾರು ಗಣ್ಯಾತಿ ಗಣ್ಯರನ್ನು ಭೇಟಿಯಾಗಿದ್ದಾರೆ. ನೂರಾರು ವಿಶೇಷ ವರದಿಗಳನ್ನು ಬರೆದಿದ್ದಾರೆ. ಸಕ್ಕರೆ ಕಾರಖಾನೆಯಲ್ಲಿ ಸೇವೆ ಸಲ್ಲಿಸುತ್ತ ಪತ್ರಿಕಾ ಕ್ಷೇತ್ರದಲ್ಲಿ ಆಸಕ್ತಿಯನ್ನು ಬೆಳೆಸಿಕೊಂಡವರು. ಲಂಕೇಶ ಪತ್ರಿಕೆ ಒಂದು ಕಾಲಕ್ಕೆ ಇಡೀ ಕರ್ನಾಟಕದಲ್ಲಿಯೇ ದೊಡ್ಡ ಸಂಚಲನವನ್ನುಂಟು ಮಾಡಿತ್ತು. ಇಂಥ ಪತ್ರಿಕೆಯಲ್ಲಿ ಶ್ರೀ ಹೆಗ್ಗಳಗಿ ಅವರ ವರದಿಗಳು, ಲೇಖನಗಳು ಪ್ರಕಟವಾಗುತ್ತಿದ್ದವು ಎಂಬುದೇ ಹೆಮ್ಮೆಯ ಸಂಗತಿ. ಇಡೀ ಪತ್ರಿಕಾ ಸಂಕುಲಕ್ಕೆ ಲಂಕೇಶ ಒಂದು ವಿಭಿನ್ನ ರೀತಿಯ ಸಂವೇದನೆಯ ಮೂಲಕ ಜಾಗೃತಿಯನ್ನುಂಟು ಮಾಡಿದ್ದರು. ಲಂಕೇಶ, ಪಾಟೀಲ ಪುಟ್ಟಪ್ಪ ಮೊದಲಾದವರ ಗರಡಿಯಲ್ಲಿ ಬೆಳೆದ ಶ್ರೀ ಮಲ್ಲಿಕಾರ್ಜುನ ಹೆಗ್ಗಳಗಿ ಅವರು ಇಂದಿಗೂ ತಮ್ಮ ಬರವಣಿಗೆಯನ್ನು ಬಿಟ್ಟಿಲ್ಲ. ಪ್ರಜಾವಾಣಿ ಸಂಗತ ಕಾಲಂನಲ್ಲಿ ಅವರ ಬರಹಗಳ ಮೇಲಿಂದ ಮೇಲೆ ಪ್ರಕಟವಾಗುತ್ತಿರುವುದು ಸರ್ವರಿಗೂ ವೇದ್ಯವಾದ ಸಂಗತಿಯಾಗಿದೆ.

- Advertisement -

ಪ್ರಸ್ತುತ ‘ಪತ್ರಕರ್ತನ ತವಕ ತಲ್ಲಣ’ ನಾಡಿನ ಪ್ರಮುಖ ಪತ್ರಿಕೆಗಳಿಗೆ ಬರೆದ ಅಂಕಣಗಳ ಸಂಗ್ರಹ ಸಂಕಲನ. ಇಲ್ಲಿ ಒಟ್ಟು ೫೧ ಅಂಕಣ ಬರಹಗಳಿವೆ. ಐದು ವಿಭಾಗಗಳಲ್ಲಿ ಇಲ್ಲಿಯ ಲೇಖನಗಳನ್ನು ಜೋಡಿಸಲಾಗಿದೆ. ೧. ಗಾಂಧಿ ಹುಡುಕಾಟ, ೨. ವ್ಯಕ್ತಿಚಿತ್ರಗಳು, ೩.ಶಕ್ತಿ ಸ್ವರೂಪಿಣಿ, ೪. ವಿಮರ್ಶೆ, ಇತ್ಯಾದಿ, ೫. ಸಂಘ-ಸಂಸ್ಥೆಗಳು.

ಮೊದಲ ಭಾಗದಲ್ಲಿ ಗಾಂಧೀಜಿಯವರ ಹುಡುಕಾಟ ಕುರಿತು ೯ ಲೇಖನಗಳಿವೆ. ಗಾಂಧೀಜಿಯವರ ಬಗ್ಗೆ ನಮಗೆ ಗೊತ್ತಿರದ ಅನೇಕ ಹೊಸ ಸಂಗತಿಗಳನ್ನು ಶ್ರೀ ಮಲ್ಲಿಕಾರ್ಜುನ ಹೆಗ್ಗಳಗಿ ಅವರು ತುಂಬ ಹೃದ್ಯವಾಗಿ ಚಿತ್ರಿಸಿದ್ದಾರೆ. ಗಾಂಧೀಜಿಗೆ ಸಮಯ ಎಂಬುದೇ ಇರುತ್ತಿರಲಿಲ್ಲ. ಹೀಗಿದ್ದರೂ ಗಾಂಧೀಜಿ ಒಮ್ಮೆ ರೂಪದರ್ಶಿಯಾಗಿ ಮೂರು ದಿನಗಳ ಕಾಲ ಕುಳಿತ ಘಟನೆಯನ್ನು ಲೇಖಕರು ಸ್ವಾರಸ್ಯವಾಗಿ ದಾಖಲಿಸಿದ್ದಾರೆ. ‘ಹರಿಲಾಲ ಎಂಬ ದುಃಖಿತ ಆತ್ಮ’ ಎಂಬ ಅಂಕಣದಲ್ಲಿ ಗಾಂಧೀಜಿಯವರ ಮಗನಾದ ಹರಿಲಾಲ ಇಸ್ಲಾಂ ಧರ್ಮಕ್ಕೆ ಮತಾಂತರವಾದ ಸಂದರ್ಭದಲ್ಲಿ ಗಾಂಧೀಜಿಯವರು ತೆಗೆದುಕೊಂಡ ನಿಲುವುಗಳನ್ನು, ಅವರ ಅಭಿಪ್ರಾಯಗಳನ್ನು ಕೊಡುವ ಮೂಲಕ ಗಾಂಧೀಜಿ ತಮ್ಮ ಬದುಕಿನಲ್ಲಿ ಬರುವ ಎಂಥ ಗಂಡಾAತರದ ಪ್ರಸಂಗಗಳನ್ನು ಎಷ್ಟು ಸಲೀಸಾಗಿ ಎದುರಿಸುತ್ತಿದ್ದರು ಎಂಬುದನ್ನು ತೋರಿಸಿಕೊಟ್ಟಿದ್ದಾರೆ. ‘ಗಾಂಧಿ ಉಡುಪಿ ಭೇಟಿ’ ಎಂಬ ಬರಹದಲ್ಲಿ ಸ್ವತಃ ಭಗವಂತನೇ ದಲಿತರಿಗೆ ದೇವಸ್ಥಾನ ಪ್ರವೇಶವಿಲ್ಲದ ಕಾರಣಕ್ಕಾಗಿ, ತನ್ನ ಮುಖವನ್ನು ಹೊರಳಿಸಿದ ಘಟನೆ ಗಾಂಧೀಜಿಯವರಿಗೆ ತುಂಬ ಸೋಜಿಗವೆನಿಸಿತ್ತು. ಅದಕ್ಕಾಗಿ ಅವರು ಉಡುಪಿ ಕೃಷ್ಣ ದೇವಾಲಯಕ್ಕೆ ಭೇಟಿ ನೀಡಿದ ವಿಷಯವನ್ನು ಶ್ರೀ ಮಲ್ಲಿಕಾರ್ಜುನ ಹೆಗ್ಗಳಗಿ ಅವರು ದಾಖಲಿಸಿ ಹೊಸ ಚಿಂತನೆಗೆ ದಾರಿ ಮಾಡಿಕೊಟ್ಟಿದ್ದಾರೆ. ಗೋಡ್ಸೆ ಗಾಂಧೀಜಿಯವರನ್ನು ಕೊಂದ ನಂತರ, ಅವನನ್ನು ಗಲ್ಲಿಗೇರಿಸಬೇಕೆಂದು ಇಡೀ ದೇಶವೇ ಒಂದಾಗಿ ಸಾರಿತು. ಆದರೆ ಗಾಂಧೀಜಿಯವರ ಕಿರಿಯ ಮಗ ರಾಮದಾಸ ‘ಗೋಡ್ಸೆಯನ್ನು ಗಲ್ಲಿಗೇರಿಸಿಬೇಡಿ, ಹಿಂಸೆಗೆ ಪ್ರತಿ ಹಿಂಸೆಯೇ ಉತ್ತರವಲ್ಲ’ ಎಂದು ಪತ್ರ ಬರೆದರು. ಈ ವಿಷಯ ಸ್ವತಃ ಗೋಡ್ಸೆಗೆ ತಿಳಿಯಿತು. ರಾಮದಾಸ ಸಾವು ಬದುಕಿನ ನಡುವೆ ಹೋರಾಡುತ್ತಿದ್ದ ಸಂದರ್ಭದಲ್ಲಿ ಸ್ವತಃ ಗೋಡ್ಸೆ ರಾಮದಾಸರಲ್ಲಿಗೆ ಬಂದು ಕಣ್ಣೀರು ಹಾಕಿದ ಸಂಗತಿಯನ್ನು ‘ಗಾಂಧೀಜಿ ಮಗ ರಾಮದಾಸ-ಗೋಡ್ಸೆ ಭೇಟಿ’ ಎಂಬ ಬರಹದಲ್ಲಿ ನಿರೂಪಿಸಿದ್ದಾರೆ. ‘ಪತ್ರಕರ್ತ ಗಾಂಧೀ’ ಲೇಖನದಲ್ಲಿ ಗಾಂಧೀಜಿಯವರು ಸುಮಾರು ೯ ಪತ್ರಿಕೆಗಳ ಸಂಪಾದಕರಾಗಿ ಕಾರ್ಯನಿರ್ವಹಿಸಿದ ಘಟನೆಗಳನ್ನು, ಪತ್ರಕರ್ತನಿಗೆ ಇರಬೇಕಾದ ಸಕಲ ಸಲ್ಲಕ್ಷಣಗಳ ಕುರಿತು ತುಂಬ ಮಾರ್ಮಿಕವಾಗಿ ವಿವರಿಸಿದ್ದಾರೆ. ‘ಗಾಂಧಿಯೊಂದಿಗೆ ನಾಸ್ತಿಕನೊಬ್ಬನ ಸಂವಾದ’ ಎಂಬ ಲೇಖನದಲ್ಲಿ ನಾಸ್ತಿಕವಾದಿ ಆಗಿದ್ದ ಗೋರಾ ಅವರು ಗಾಂಧೀಜಿಯವರನ್ನು ಭೇಟಿಯಾಗಿ, ನಡೆಸಿದ ಸಂವಾದದ ಕ್ಷಣಗಳನ್ನು ತುಂಬ ಅರ್ಥಪೂರ್ಣವಾಗಿ ಕಟ್ಟಿಕೊಟ್ಟಿದ್ದಾರೆ. ‘ಗಾಂಧೀ ಬನಿಯಾ ಮತ್ತು ಓಶೋ’ ‘ಬದುಕಿನ ಮೌಲ್ಯಗಳು’ ಲೇಖನಗಳು ಗಂಭೀರವಾಗಿ ಮನ ಸೆಳೆಯುತ್ತವೆ.

ವ್ಯಕ್ತಿಚಿತ್ರಗಳು ವಿಭಾಗದಲ್ಲಿ ೨೧ ವ್ಯಕ್ತಿಚಿತ್ರಗಳಿವೆ. ದೇವರಾಜ ಅರಸರ ಆಡಳಿತದ ಅಪರೂಪದ ನೆನಪುಗಳು, ಹಂಪಿಯ ವೈಚಾರಿಕ ಶಿವಯೋಗಿ ಸ್ವಾಮಿಗಳ ನಿಲುವು ಪತ್ರಕರ್ತರಾದ ಶ್ರೀ ಹೆಗ್ಗಳಗಿ ಅವರ ದೃಷ್ಟಿಯಲ್ಲಿ ವಿನೂತನವಾಗಿ ಮೂಡಿ ಬಂದಿವೆ. ಪತ್ರಕರ್ತರಾದ ಎನ್.ವ್ಹಿ. ಜೋಶಿ, ಬಸವರಾಜ ಬಹೀರಶೆಟ್ಟಿ, ಬಾಬುರಡ್ಡಿ ತುಂಗಳ ಮೊದಲಾದವರ ಒಡನಾಟದ ಕ್ಷಣಗಳನ್ನು ಹಂಚಿಕೊಂಡಿದ್ದಾರೆ. ‘ಚಂಪಾ : ಕಂಡ ಹಾಗೆ ಕಂಡಷ್ಟು’ ತುಂಬ ಆಪ್ತವಾದ ಬರಹವಾಗಿದೆ. ತಮಗೆ ಇಂಗ್ಲಿಷ್ ಕಲಿಸಿದ ಚಂಪಾ ಅವರ ಬಗ್ಗೆ ಲೇಖಕರಿಗೆ ತುಂಬ ಗೌರವ. ಹಾಗೆಯೇ ಅವರ ಹಾಸ್ಯಭರಿತ ನುಡಿಗಳ ಕುರಿತು ಅವರಿಗೆ ಕುತೂಹಲ. ಬೇಂದ್ರೆ-ಚಂಪಾ ಮೇಲಿಂದ ಮೇಲೆ ವಾಗ್ವಾದಕ್ಕಿಳಿಯುತ್ತಿದ್ದ ಘಟನೆಗಳನ್ನು ಇಲ್ಲಿ ವಿವರಿಸಿದ್ದಾರೆ. ಬೇಂದ್ರೆ ಅವರ ನಾಲ್ಕು ತಂತಿ ಕೃತಿಗೆ ಜ್ಞಾನಪೀಠ ಬಂದಾಗ ಚಂಪಾ ಅವರು ‘ಬೇಂದ್ರೆ ಅವರ ಖಾಸಗಿ ವಲಯದ ಆತ್ಮೀಯ ಲೇಖಕರಾಗಿದ್ದ ಎನ್. ಕೆ. ಕುಲಕರ್ಣಿ, ಡಾ. ವಿ.ಕೃ.ಗೋಕಾಕ, ಪ್ರೊ. ಕುರ್ತಕೋಟಿ ಮತ್ತು ವಾಮನ ಬೇಂದ್ರೆ (ಬೇಂದ್ರೆ ಅವರ ಮಗ) ಇವರೇ ಬೇಂದ್ರೆ ಅವರ ನಾಲ್ಕು ತಂತಿ’ ಎಂದು ನಗೆ ಚಾಟಕಿ ಹಾರಿಸಿದ್ದ ಘಟನೆ ಇಲ್ಲಿದೆ.

ತಮ್ಮ ಗುರುಗಳಾಗಿದ್ದ ಕೃಷ್ಣಮೂರ್ತಿ ಪುರಾಣಿಕರ ಘನವ್ಯಕ್ತಿತ್ವವನ್ನು ತುಂಬ ಸುಂದರವಾಗಿ ಚಿತ್ರಿಸಿದ್ದಾರೆ. ಗೆಳೆಯ ಬಸವರಾಜ ಹೊರಟ್ಟಿ ಸಂಘಟಕನಾಗಿ, ವಿಧಾನ ಪರಿಷತ್ ಸದಸ್ಯನಾಗಿ ಸಾಗಿ ಬಂದ ರೋಮಾಂಚನಕಾರಿ ಇತಿಹಾಸವನ್ನು ಚಿಕ್ಕ ಲೇಖನದಲ್ಲಿ ಅತ್ಯಂತ ಆಪ್ಯಾಯಮಾನವಾಗಿ ನಿರೂಪಿಸಿದ್ದಾರೆ. ಈಶ್ವರ ಸಣಕಲ್ಲ, ಸನತ್ಕುಮಾರ ಬೆಳಗಲಿ ಮೊದಲಾದವರ ಕುರಿತು ಇಲ್ಲಿ ಬರಹಗಳಿವೆ.

ಶಕ್ತಿ ಸ್ವರೂಪಿಣಿ ಭಾಗದಲ್ಲಿ ೧೦ ಜನ ಮಹಿಳೆಯರ ಅಪರೂಪದ ಸಾಧನೆಗಳನ್ನು ವಿವರಿಸಿದ್ದಾರೆ. ಅಂಬೇಡ್ಕರ್ ಅವರ ಧರ್ಮಪತ್ನಿ ರಮಾಬಾಯಿ ಅಂಬೇಡ್ಕರ್ ಬರಹ ಓದುಗರ ಮನಸ್ಸಿನ ಮೇಲೆ ಅಚ್ಚಳಿಯದ ಪ್ರಭಾವ ಬೀರುತ್ತದೆ. ರಮಾಬಾಯಿ ಅವರು ತಮ್ಮ ಜೀವನದ ಕೊನೆಯ ಹಂತದಲ್ಲಿ ಪಂಢರಪುರದ ವಿಠ್ಠಲನ ದರ್ಶನ ಮಾಡಬೇಕೆಂದು ಬಯಸಿದ್ದರು. ಸ್ವತಃ ಅಂಬೇಡ್ಕರ್ ಅವರು ರಮಾಬಾಯಿ ಅವರನ್ನು ಪಂಢರಪುರಕ್ಕೆ ಕರೆದುಕೊಂಡು ಬಂದಿದ್ದರು. ಆದರೆ ಅಸ್ಪೃಶ್ಯರಿಗೆ ದೇವಸ್ಥಾನದಲ್ಲಿ ಪ್ರವೇಶವಿಲ್ಲ ಎಂಬ ಕಾರಣಕ್ಕಾಗಿ ದೇವರ ದರ್ಶನವಾಗುವುದಿಲ್ಲ. ಆಗ ಅಂಬೇಡ್ಕರ್ ಅವರು ‘ಭಕ್ತರಿಗೆ ದರ್ಶನ ಕೊಡದ ದೇವರು ದೇವರೆ ಅಲ್ಲ’ ಎಂದು ಹೇಳುವ ನುಡಿಗಳು ಓದುಗರ ಮನಸ್ಸಿನಲ್ಲಿ ಭಾರವಾದ ಅನುಭವವನ್ನುಂಟು ಮಾಡುತ್ತವೆ.

ಭಿಕ್ಷೆ ಬೇಡುತ್ತಿದ್ದ ಉಮಾಶ್ರೀ ಇಂದು ಕರ್ನಾಟಕ ಸರಕಾರದಲ್ಲಿ ಮಂತ್ರಿಯಾಗುವವರೆಗಿನ ಅವರ ಕಷ್ಟಜೀವನದ ಸಂಗತಿಗಳನ್ನು ಎಳೆಎಳೆಯಾಗಿ ಬಿಡಿಸಿಟ್ಟಿದ್ದಾರೆ. ಶ್ರೀಕೃಷ್ಣಪಾರಿಜಾತದ ಮಹಾನ್ ಕಲಾವಿದೆ ಯಲ್ಲವ್ವನಿಗೆ ಹಂಪಿ ಕನ್ನಡ ವಿಶ್ವವಿದ್ಯಾಲಯ ನಾಡೋಜ ಪದವಿ ನೀಡಿದಾಗ, ಅದರಿಂದ ತನ್ನ ಬದುಕಿಗೆ ಏನು ಪ್ರಯೋಜನ ಎಂದು ಕೇಳುವ ಅವಳ ಮಾತುಗಳು ಅಕ್ಷರಶಃ ನಿಜವೆನಿಸುತ್ತವೆ.

ಸಾಹಿತ್ಯ ವಿಮರ್ಶೆ ಭಾಗದಲ್ಲಿ ಕೆಲವು ಅಪರೂಪದ ಕೃತಿಗಳ ಪರಿಚಯ ಮಾಡಿಕೊಟ್ಟಿದ್ದಾರೆ. ಲಿಂಗಾಯತ ಧರ್ಮದ ಇತಿಹಾಸ ಸಾರುವ ಮೊಟ್ಟ ಮೊದಲು ಪಿಎಚ್.ಡಿ. ಮಹಾಪ್ರಬಂಧ ಹುಣಶ್ಯಾಳರ ಲಿಂಗಾಯತ ಚಳುವಳಿ ಕೃತಿಯನ್ನು ಪರಿಚಯಿಸಿದ್ದಾರೆ. ಫುಲೆ ಅವರ ಬದುಕಿನ ಅನಾವರಣ ಮಾಡಿದ್ದಾರೆ. ಗ್ರಾಮಾಯಣ ಕಾದಂಬರಿಗೆ ಆರವತ್ತು ವರ್ಷಗಳಾದಾಗ ಆ ಕುರಿತು ಬರೆದಿದ್ದಾರೆ.

ಕೊನೆಯ ಭಾಗದಲ್ಲಿ ಸಂಘ-ಸAಸ್ಥೆಗಳು ಕಾರ್ಮಿಕರ ಬದುಕಿನಲ್ಲಿ ಹೇಗೆಲ್ಲ ಆಟವಾಡುತ್ತವೆ. ಪಿಂಚಣಿ ಹೆಸರಿನಲ್ಲಿ ನಡೆಯುತ್ತಿರುವ ಶೋಷಣೆಗಳ ಕುರಿತು ಬರೆದ ಲೇಖನಗಳು ಗಮನ ಸೆಳೆಯುತ್ತವೆ.

ಈ ಕೃತಿಯಲ್ಲಿ ಅನೇಕ ಹಾಸ್ಯಪ್ರಸಂಗಗಳಿವೆ. ಕೆಲಸಗೇಡಿ ಎಂಬ ಲೇಖನದಲ್ಲಿ ಸ್ವಾಮಿಗಳೊಬ್ಬರು ಕೋಟಿ ಮಂತ್ರ ಬರೆದು ಪುಸ್ತಕಗಳ ರಾಶಿಯನ್ನೇ ಒಟ್ಟಿದ್ದರು. ಅವರ ಮಠದಲ್ಲಿ ಕಲಿಯುತ್ತಿದ್ದ ಹುಡುಗನಿಗೆ ಲೇಖಕರು, ನೀನು ಮಂತ್ರ ಬರೆ ಎಂದಾಗ, ಆತ ನನಗೆ ಸಮಯವಿಲ್ಲ, ಅಭ್ಯಾಸ ಮಾಡಬೇಕು, ಹೊಲಕ್ಕೆ ಹೋಗಬೇಕು, ಮನೆಯಲ್ಲಿ ಕೆಲಸ ಮಾಡಬೇಕು. ಇಷ್ಟೆಲ್ಲ ಮಾಡುವ ಹೊತ್ತಿಗೆ ಸಮಯವೇ ಮುಗಿದಿರುತ್ತದೆ ಎನ್ನುತ್ತಾರೆ. ಆಗ ಲೇಖಕರು ಹಾಗಾದರೆ ಮಂತ್ರ ಬರೆಯುವುದು ಕೆಲಸಗೇಡಿಗಳ, ನಿರುದ್ಯೋಗಿಗಳ ಕೆಲಸವೇ ಎಂದು ಕೇಳುತ್ತಾರೆ. ಅದಕ್ಕೆ ಆ ಹುಡುಗ ಇರಬಹುದು ಎನ್ನುತ್ತಾರೆ. ಇಂಥ ಅನೇಕ ಹಾಸ್ಯಪ್ರಸಂಗಗಳು ಇಲ್ಲಿವೆ.

ಶ್ರೀ ಮಲ್ಲಿಕಾರ್ಜುನ ಹೆಗ್ಗಳಗಿ ಅವರು ತಮ್ಮ ಪತ್ರಕರ್ತನ ದೃಷ್ಟಿಯಿಂದ ನೋಡಿದ ಲೋಕಜೀವನದ ಅನೇಕ ಘಟನೆಗಳಿಗೆ ಇಲ್ಲಿ ಬರಹದ ಸ್ಪರ್ಶ ನೀಡಿದ್ದಾರೆ. ಪ್ರತಿಯೊಂದು ಬರಹವೂ ತುಂಬ ಆಪ್ತವಾಗಿ ಓದಿಸಿಕೊಂಡು ಹೋಗುತ್ತವೆ. ಇಂಥ ಅಪರೂಪದ ಬರಹಗಳನ್ನು ನೀಡಿದ ಶ್ರೀ ಮಲ್ಲಿಕಾರ್ಜುನ ಹೆಗ್ಗಳಗಿ ಅವರಿಗೆ ಅಭಿನಂದನೆಗಳು. ಈ ಕೃತಿಯನ್ನು ಪ್ರಕಟಿಸಿದವರು ಶ್ರೀ ಮಲ್ಲಿಕಾರ್ಜುನ ಹೆಗ್ಗಳಗಿ ಅವರ ಅಳಿಯಂದಿರಾದ ಶ್ರೀ ಶಿವನಗೌಡ ಗೌಡರ ಅವರು. ಅವರಿಗೂ ವಂದನೆಗಳು.


(ಪುಸ್ತಕಕ್ಕಾಗಿ ಸಂಪರ್ಕಿಸಿ : ೯೪೪೮೧೪೪೪೧೯)

ಪ್ರಕಾಶ ಗಿರಿಮಲ್ಲನವರ
ಬೆಳಗಾವಿ
ಮೊ: ೯೯೦೨೧೩೦೦೪೧

- Advertisement -
- Advertisement -

Latest News

ಪ್ರವಾಹದಿಂದ ಹಾನಿಗೊಳಗಾದ ಮನೆ ಹಾಗೂ ಬೆಳೆ ಹಾನಿಗೆ ಕೂಡಲೇ ಪರಿಹಾರ ಕಲ್ಪಿಸಿಕೊಡಿ : ಅಧಿಕಾರಿಗಳಿಗೆ ಶಾಸಕ ಬಾಲಚಂದ್ರ ಜಾರಕಿಹೊಳಿ ಸೂಚನೆ

ಗೋಕಾಕ: ಕಳೆದ ಜುಲೈ ತಿಂಗಳಲ್ಲಿ ಮಳೆ ಹಾಗೂ ಪ್ರವಾಹದಿಂದಾಗಿ ಹಾನಿಗೊಳಗಾದ ನದಿ ತೀರದ ಗ್ರಾಮಗಳ ಮನೆ ಹಾಗೂ ಬೆಳೆಗಳ ಸಮೀಕ್ಷೆಯನ್ನು ಕೂಡಲೇ ಪೂರ್ಣಗೊಳಿಸಿ ಸಂತ್ರಸ್ತ ಕುಟುಂಬಗಳಿಗೆ ಪರಿಹಾರ...
- Advertisement -

More Articles Like This

- Advertisement -
close
error: Content is protected !!