ಗದುಗಿನ ತೋಂಟದಾರ್ಯಪೀಠದ ೧೯ನೇ ಪೀಠಾಧಿಪತಿಗಳಾಗಿದ್ದ ಪೂಜ್ಯ ಶ್ರೀ ಜಗದ್ಗುರು ಡಾ. ತೋಂಟದ ಸಿದ್ಧಲಿಂಗ ಮಹಾಸ್ವಾಮಿಗಳವರು ಪುಸ್ತಕದ ಸ್ವಾಮೀಜಿ, ಸಾಮಾನ್ಯರ ಸ್ವಾಮೀಜಿ ಎಂದು ಜನಮಾನಸದಲ್ಲಿ ಅಜರಾಮರವಾಗಿ ಉಳಿದವರು. ಧರ್ಮ-ಸಾಹಿತ್ಯ-ಸಂಸ್ಕೃತಿಗಳ ಪುನರುತ್ಥಾನಕ್ಕಾಗಿ ತಮ್ಮ ಸಮಸ್ತ ಬದುಕನ್ನು ಸಮರ್ಪಿಸಿ ಪೂಜ್ಯರು ಕನ್ನಡ ನಾಡಿನ ಪುಣ್ಯದ ಪುಂಜವಾಗಿದ್ದಾರೆ.
ಪೂಜ್ಯ ಜಗದ್ಗುರುಗಳು ಲಿಂಗಾಯತ ಅಧ್ಯಯನ ಸಂಸ್ಥೆಯನ್ನು ಅಸ್ತಿತ್ವಕ್ಕೆ ತಂದು ೫೦೦ಕ್ಕೂ ಹೆಚ್ಚು ಕೃತಿಗಳನ್ನು ಪ್ರಕಟಿಸಿ ಸಾಹಿತಿಗಳನ್ನು ಪ್ರೋತ್ಸಾಹಿಸಿದವರು. ಬಾಲ್ಯದಿಂದಲೂ ಕವಿಹೃದಯದ ಪೂಜ್ಯರು ತಾವು ಹೆಚ್ಚು ಬರೆಯದಿದ್ದರೂ, ಬರೆಯುವ ಲೇಖಕರಿಗೆ ಹೃದಯತುಂಬಿ ಪ್ರೋತ್ಸಾಹಿಸುತ್ತಿದ್ದರು. ಕವಿ ಹೃದಯದ ಪೂಜ್ಯರು ಸಾಹಿತ್ಯ ಲೋಕದಲ್ಲಿ ಕೃಷಿ ಮಾಡಿದ್ದರೆ, ನೂರಾರು ಪುಸ್ತಕಗಳನ್ನು ಬರೆಯಬಹುದಾಗಿತ್ತು, ಆದರೆ ಅವರ ಸಾಮಾಜಿಕ-ಶೈಕ್ಷಣಿಕ-ಸಾಹಿತ್ಯಿಕ-ಧಾರ್ಮಿಕ ಸೇವಾ ಕಾರ್ಯಗಳ ನಡುವೆ ಇದು ಸಾಧ್ಯವಾಗದೇ ಹೋಯಿತು.
ಪೂಜ್ಯರು ಅಪ್ರತಿಮವಾಗ್ಮಿಗಳು. ತಾವು ಓದಿದ ಅನುಭವಿಸಿದ ಲೋಕಸತ್ಯಗಳನ್ನು ಜನರ ಮುಂದೆ ಹೇಳುವ ಅವರ ರೀತಿ ಅನನ್ಯವಾಗಿತ್ತು. ಅವರ ಮಾತುಗಳಿಂದ ಪ್ರಭಾವಿತರಾದವರು ಸಾವಿರಾರು ಜನ. ಶ್ರೀಗಳ ಮಾತುಗಳನ್ನು ಒಂದೆಡೆ ಸಂಗ್ರಹಿಸಿದ್ದರೆ, ಹತ್ತಾರು ಕೃತಿಗಳು ಸಿದ್ಧವಾಗುತ್ತಿದ್ದವು.
೧೯೮೬ರಲ್ಲಿ ಬೆಂಗಳೂರಿನಲ್ಲಿ ಜರುಗಿದ ವೀರಶೈವ ವಿಚಾರ ಸಂಕಿರಣವೊAದರಲ್ಲಿ ಶ್ರೀಗಳು ಮಾಡಿದ ಭಾಷಣವೇ ಸುಮಾರು ೨೦ಪುಟಗಳ ವಿಸ್ತಾರವನ್ನು ಹೊಂದಿದೆ. ಶ್ರೀಗಳ ಅಪರೂಪದ ಭಾಷಣಗಳನ್ನು ಸಂಗ್ರಹಿಸಿ ಪ್ರಕಟಿಸಿದರೆ ಕನ್ನಡ ಸಾಹಿತ್ಯಲೋಕಕ್ಕೆ ಅದೊಂದು ಮಹತ್ವದ ಕೊಡುಗೆಯಾಗುವುದರಲ್ಲಿ ಸಂದೇಹವಿಲ್ಲ.
ಶ್ರೀಗಳು ಕನ್ನಡ ಪ್ರಭ ಪತ್ರಿಕೆ ಮತ್ತು ಇತರ ಪತ್ರಿಕೆಗಳಿಗೆ ಬರೆದ ಕೆಲವು ಚಿಂತನೆಗಳನ್ನು ಮತ್ತು ಇತರ ಕಡೆ ಪ್ರಕಟವಾದ ಚಿಂತನೆಗಳನ್ನೆಲ್ಲ ಶ್ರೀ ಶಿವನಗೌಡ ಗೌಡರ ಅವರು ತುಂಬ ಶ್ರಮ-ಶ್ರದ್ಧೆಯಿಂದ ಸಂಪಾದಿಸಿ ಪ್ರಕಟಿಸಿರುವುದು ಅತ್ಯಂತ ಸಂತೋಷದ ಸಂಗತಿಯಾಗಿದೆ.
ಶ್ರೀ ಶಿವನಗೌಡ ಗೌಡರ ಅವರು ಶ್ರೀಗಳ ಆಪ್ತವಲಯದಲ್ಲಿ ಸುಮಾರು ನಾಲ್ಕು ದಶಕಗಳ ಕಾಲ ಇದ್ದವರು. ಶ್ರೀಗಳ ಆಪ್ತಕಾರ್ಯದರ್ಶಿಗಳಾಗಿ ಅಪರೂಪದ ಸೇವೆ ಸಲ್ಲಿಸಿದವರು. ಶ್ರೀಗಳ ಭಾವನೆಗಳನ್ನು ಅರ್ಥಮಾಡಿಕೊಂಡು, ಕೆಲಸ ಮಾಡುವ ಗುಣಗ್ರಾಹಿಗಳಾದ ಶ್ರೀ ಶಿವನಗೌಡ ಗೌಡರು ‘ತೋಂಟದ ಶ್ರೀಗಳ ಚಿಂತನಗಳು’ ಎಂಬ ಕೃತಿಯನ್ನು ಸಂಪಾದಿಸಿ ಪ್ರಕಟಿಸುವ ಮೂಲಕ ಸಾರಸ್ವತ ಲೋಕಕ್ಕೆ ಮಹದುಪಕಾರ ಮಾಡಿದ್ದಾರೆ.
ಕನ್ನಡ ಪ್ರಭ ಪತ್ರಿಕೆಯ ‘ಧರ್ಮಜ್ಯೋತಿ’ ಅಂಕಣದಲ್ಲಿ ಪ್ರಕಟವಾದ ಚಿಂತನೆಗಳನ್ನು ಕಡೋಲಿ ದುರದುಂಡೀಶ್ವರಮಠದ ಶ್ರೀಗಳು ‘ಜ್ಞಾನಜ್ಯೋತಿ’ ಎಂಬ ಹೆಸರಿನಲ್ಲಿ ಪ್ರಕಟಿಸಿದ್ದರು, ಭೈರನಹಟ್ಟಿ ದೊರೆಸ್ವಾಮಿಮಠದ ಶ್ರೀಗಳು ‘ಧರ್ಮಜ್ಯೋತಿ’ ಹೆಸರಿನಲ್ಲಿ ಪ್ರಕಟಿಸಿದ್ದರು. ಅಲ್ಲದೆ ೧೯೮೧ರಲ್ಲಿ ಶ್ರೀ ಕಿದಿಯೂರ ಎಂಬವರು ಶ್ರೀಗಳ ಭಾಷಣಗಳನ್ನು ಸಂಗ್ರಹಿಸಿ ‘ಆಶೀರ್ವಾದ’ ಎಂಬ ಹೆಸರಿನ ಚಿಕ್ಕ ಕೃತಿಯನ್ನು ಪ್ರಕಟಿಸಿದ್ದರು. ಈ ಮೂರೂ ಕೃತಿಗಳ ಸಂಯುಕ್ತ ಸಂಪುಟವಾಗಿ ಪ್ರಸ್ತುತ ಕೃತಿ ರೂಪುಗೊಂಡಿದೆ. ಈ ಮೂರೂ ಕೃತಿಗಳ ಹೊರತಾಗಿ ಇರುವ ಇನ್ನಿತರ ಚಿಂತನಗಳು ಈ ಕೃತಿಯಲ್ಲಿವೆ.
ಶ್ರೀ ತೋಂಟದ ಸಿದ್ಧಲಿಂಗ ಸ್ವಾಮಿಗಳು ಬರೆದ ಚಿಂತನೆಗಳಲ್ಲಿ ಲೋಕಾನುಭವವಿದೆ. ಅಮೃತಾನುಭವವಿದೆ. ಈ ಚಿಂತನೆಗಳಲ್ಲಿ ಮಾನವೀಯತೆ ಮಂದಾರ ಪುಷ್ಪ ಅರಳುವ ಕಲೆಯಿದೆ. ನಾಡು-ನುಡಿ ಗಡಿಗಳಿಗೆ ಧಕ್ಕೆಯಾದಾಗಲೆಲ್ಲ ಶ್ರೀಗಳು ಸಿಡಿದು ನಿಲ್ಲುತ್ತಿದ್ದರು. ಅವುಗಳ ಕುರಿತು ಜಾಗೃತಿ ಮೂಡಿಸಲು ಅಪರೂಪದ ವಿಚಾರಗಳನ್ನು ಭಾಷಣದಲ್ಲಿ ಪ್ರಸ್ತಾಪಿಸುತ್ತಿದ್ದರು, ತಮ್ಮ ಚಿಂತನ ಬರೆಹಗಳಲ್ಲಿಯೂ ಇದೇ ಆದರ್ಶವನ್ನು ಅವರು ಮುಂದುವರಿಸಿರುವುದು ಕಂಡು ಬರುತ್ತದೆ. ಪ್ರತಿಯೊಂದು ಚಿಂತನೆಯೂ ಮನಸ್ಸಿನ ಕದ ತಟ್ಟುತ್ತದೆ. ಅಂಥ ಒಂದು ಆರ್ದ್ರ ಭಾವ ಅಲ್ಲಿದೆ.
ನಂಜುಂಡಪ್ಪ ಅವರ ವರದಿ ಬಂದ ನಂತರ ಶ್ರೀಗಳು ನಾಡಿನ ತುಂಬ ಆ ಕುರಿತು ಜಾಗೃತಿ ಮೂಡಿಸುವ ಕಾರ್ಯವನ್ನು ಮಾಡಿದ್ದರು. ನಂಜುAಡಪ್ಪ ವರದಿ ಅಕ್ಷರಶಃ ಅನುಷ್ಠಾನಕ್ಕೆ ಬರಬೇಕೆಂದು ಮೊದಲು ಪ್ರತಿಪಾದಿಸಿದವರೇ ಶ್ರೀಗಳು. ಈ ಕುರಿತು ಒಂದು ಚಿಂತನ ‘ನಿರ್ಲಕ್ಷಿತ ಉತ್ತರ ಕರ್ನಾಟಕ’ ನಮ್ಮ ಗಮನ ಸೆಳೆಯುತ್ತದೆ. ಕಪ್ಪತಗುಡ್ಡದ ಸಂರಕ್ಷಣೆ ವಿಷಯದಲ್ಲಿ ಶ್ರೀಗಳು ತೆಗೆದುಕೊಂಡ ನಿಲುವು ಇಂದು ಗದುಗಿನ ಜನ ಸ್ಮರಿಸುವಂತಾಗಿದೆ. ದೇಶದಲ್ಲಿಯೇ ಅತ್ಯಂತ ಶುದ್ಧ ಗಾಳಿ ಇರುವ ಊರುಗಳಲ್ಲಿ ಗದಗವೂ ಸೇರಿರುವುದು ಅದು ತೋಂಟದ ಶ್ರೀಗಳ ಕಾಳಜಿಯ ಫಲವೆಂದೇ ಹೇಳಬೇಕು.
‘ಯುವಕರ ನಡೆ ಕೃಷಿಯ ಕಡೆ’, ‘ಜನ ಕಟ್ಟುವುದು’, ‘ಶಿವಾನುಭವ ಶ್ರದ್ಧೆ ಸೌಹಾರ್ದತೆ’, ‘ನಿಜ ಧರ್ಮ’ ‘ಬಹುಮುಖಿ ಸಂಸ್ಕೃತಿಯ ಭಾರತ’, ‘ಭಾಷಾ ಸಂಕುಚಿತ ಮನಸ್ಸುಗಳು’ ಮೊದಲಾದ ಚಿಂತನೆಗಳು ಪ್ರಸ್ತುತ ದೇಶದ ವಾಸ್ತವ ಚಿತ್ರಣಕ್ಕೆ ಹಿಡಿದ ಕನ್ನಡಿಗಳಾಗಿವೆ.
‘ಪುಸ್ತಕ ಸಂಸ್ಕೃತಿ’, ‘ಸಂಸ್ಕಾರ;, ‘ಸತ್ಸಂಗ’, ‘ಶಿಕ್ಷಕ’, ‘ಸಮಾಜ ಸೇವೆ’, ‘ವಿದ್ಯೆ’, ‘ಮಾತು’ ಮೊದಲಾದ ಚಿಂತನಗಳು ನಮ್ಮ ಯುವಜನಾಂಗಕ್ಕೆ ದಾರಿದೀಪವೂ ತೋರುಬೆರಳಾಗಿಯೂ ಪರಿಣಮಿಸಿರುವುದನ್ನು ಕಾಣಬಹುದು.
‘ಅನ್ನ ದೇವರು’ ‘ನೇಗಿಲಯೋಗಿ’, ‘ಅರಣ್ಯ ರಕ್ಷಣೆ’ ಮೊದಲಾದ ಚಿಂತನಗಳು ನಮ್ಮ ಕೃಷಿ ಸಂಸ್ಕೃತಿಯ ಪುನರುಜ್ಜೀವನ ಮತ್ತು ಪರಿಸರ ಸಂರಕ್ಷಣೆಯ ಕುರಿತು ಅರಿವು ಮೂಡಿಸುವ ಬರಹಗಳಾಗಿವೆ.
ಪ್ರಸ್ತುತ ಕೃತಿಯಲ್ಲಿ ಕೆಲವು ವ್ಯಕ್ತಿಚಿತ್ರಗಳು ಮೂಡಿಬಂದಿವೆ. ಮೃತ್ಯುಂಜಯಪ್ಪಗಳು, ಮಹಾಂತಪ್ಪಗಳು, ಸಿಂದಗಿ ಪಟ್ಟಾಧ್ಯಕ್ಷರು ಮೊದಲಾದವರ ಘನ ವ್ಯಕ್ತಿತ್ವವನ್ನು ಯುಕ್ತ ಶಬ್ದಗಳಲ್ಲಿ ಶ್ರೀಗಳು ಹಿಡಿದಿಟ್ಟಿದ್ದಾರೆ.
ಕೃತಿಯ ಎರಡನೆಯ ಭಾಗದಲ್ಲಿ ಹ.ರಾ.ಕಿದಿಯೂರ ಅವರು ೧೯೮೧ರಲ್ಲಿ ಪ್ರಕಟಿಸಿದ ‘ಆಶೀರ್ವಾದ’ ಕೃತಿಯನ್ನು ಪ್ರಕಟಿಸಿರುವುದು ತುಂಬ ಔಚಿತ್ಯಪೂರ್ಣವಾಗಿದೆ. ಶ್ರೀಗಳು ಶ್ರೀಮಠದ ಪೀಠಾಧಿಪತಿಗಳಾಗಿ ಬಂದ ಹೊಸದರಲ್ಲಿ ಮಾಡಿದ ಚಿಂತನಗಳು ಇಲ್ಲಿರುವುದು ಆ ಕಾಲ ಘಟ್ಟದಲ್ಲಿ ಶ್ರೀಗಳ ಮನೋಧರ್ಮ ಏನಿತ್ತು ಎಂಬುದರ ಸಂಪೂರ್ಣ ಕಲ್ಪನೆ ನಮಗಾಗುತ್ತದೆ.
ಪ್ರೊ. ಟಿ. ವಿ. ಮಾಗಳದ ಅವರು ಈ ಕೃತಿಗೆ ಬೆಲೆಯುಳ್ಳ ಮುನ್ನುಡಿ ಬರೆದಿದ್ದಾರೆ, ಶರಣೆ ಗಿರಿಜಕ್ಕ ಧರ್ಮರಡ್ಡಿ ಅವರು ಬೆನ್ನುಡಿ ಬರೆದಿದ್ದಾರೆ.
ಶ್ರೀ ಶಿವನಗೌಡ ಗೌಡರ ಅವರು ಶ್ರೀಗಳ ನಾಲ್ಕು ದಶಕಗಳ ವಿಚಾರಗಳನ್ನು ಹೀಗೆ ಒಂದೆಡೆ ಸಂಗ್ರಹಿಸಿರುವುದು ಶ್ರೀಗಳ ಭಕ್ತ ಸಮುದಾಯಕ್ಕೆ ಸಂತಸದ ಸಂಗತಿಯಾಗಿದೆ. ಶ್ರೀಗಳ ವಿಚಾರಗಳನ್ನು ಹೀಗೆ ಸಂಗ್ರಹಿಸಿ, ಪ್ರಕಟಿಸುವ ಅವರ ಕಾರ್ಯ ಸಾರೋದ್ಧಾರವಾಗಿ ಸಾಗಲಿ ಎಂದು ಆಶಿಸುತ್ತ ಅವರಿಗೆ ಅಭಿನಂದನೆಗಳನ್ನು ಸಲ್ಲಿಸುವೆ.
ಪ್ರಕಾಶ ಗಿರಿಮಲ್ಲನವರ
ಬೆಳಗಾವಿ