spot_img
spot_img

ಭಾವಗೀತೆಗಳ ಲೋಕದಲ್ಲೊಂದು ಹೊಸ ಪ್ರಯತ್ನ ಉಪಾಸನಾ

Must Read

- Advertisement -

ಬೆಂಗಳೂರಿನಲ್ಲಿ ಕಳೆದ ೨೩ ವರ್ಷಗಳಿಂದ ಉಪಾಸನಾ ಸಂಗೀತ ಶಾಲೆಯನ್ನು ನಡೆಸುವ ಜೊತೆಗೆ ಭಾವಗೀತೆಗಳ ಲೋಕದಲ್ಲಿ ವಿಶಿಷ್ಟ ಛಾಪನ್ನು ಮೂಡಿಸಿರುವ ಉಪಾಸನಾ ಮೋಹನ್ ಅವರ ಪರಿಚಯಕ್ಕೆ ಎರಡು ದಶಕಗಳೇ ಸಂದಿವೆ. ಆಗ ಗೃಹಶೋಭಾದಲ್ಲಿ ಸೇವೆ ಸಲ್ಲಿಸುತ್ತಿದ್ದ ನನ್ನ ಸ್ನೇಹಿತ ಅಶೋಕ ಚಿಕ್ಕಪರಪ್ಪ ಅವರ ಮನೆಗೆ ರಜೆ ಸಂದರ್ಭದಲ್ಲಿ ನಾನು ಹೋದಾಗ ಅಶೋಕ್ ನನ್ನನ್ನು ಉಪಾಸನಾ ಮೋಹನ್ ನಡೆಸಿಕೊಂಡು ಬರುತ್ತಿದ್ದ ಮನೆಯಂಗಳದಲ್ಲಿ ಭಾವಗೀತೆಗಳ ಯಾಣ ಕಾರ್ಯಕ್ರಮಕ್ಕೆ ಕರೆದೊಯ್ದಿದ್ದರು. ಇದು ೨೦ ವರ್ಷಗಳ ಹಿಂದಿನ ಘಟನೆ. ಆ ದಿನ ರಾತ್ರಿ ಕಾರ್ಯಕ್ರಮದಲ್ಲಿ ಅವರು ಹಾಡಿದ ದ.ರಾ.ಬೇಂದ್ರೆ ವಿರಚಿತ “ಇಳಿದು ಬಾ ತಾಯೇ ಇಳಿದು ಬಾ” ಭಾವಗೀತೆ. ಬಹಳ ಅದ್ಬುತವಾಗಿ ಮೂಡಿ ಬಂದಿತ್ತು. ಕಾರ್ಯಕ್ರಮ ಮುಗಿದ ಮೇಲೆ ಅಶೋಕ್ ಅವರ ಜೊತೆ ನಾನು ಉಪಾಸನಾ ಮೋಹನ್ ಪರಿಚಯ ಮಾಡಿಕೊಂಡು ಮರುದಿನ ಅವರ ಸಂಗೀತ ಶಾಲೆಗೆ ಬರುವುದಾಗಿ ತಿಳಿಸಿ ಬಂದೆನು.

ಮಾರನೆಯ ದಿನ ಅಶೋಕ ಅವರ ಮಾರ್ಗದರ್ಶನದಂತೆ ಉಪಾಸನಾ ಮೋಹನ್ ಅವರ ಸಂಗೀತ ಶಾಲೆಗೆ ತೆರಳಿದೆ.ಬಹಳ ಆತ್ಮೀಯತೆಯಿಂದ ಅವರು ನನ್ನನ್ನು ಬರಮಾಡಿಕೊಂಡು ತಮ್ಮ ಭಾವಲೋಕ ಬೆಳೆದು ಬಂದ ಬಗೆಯನ್ನು ತಿಳಿಸಿದರು.

ಅವತ್ತು ಗೃಹಶೋಭಾ ಪತ್ರಿಕೆಗೆ ಪುಟ್ಟ ವರದಿಯೊಂದನ್ನು ಸಿದ್ದಪಡಿಸಿ ನೀಡಿ ನಂತರ ನಮ್ಮ ಊರಿಗೆ ಮರಳಿ ಬಂದು ಕನ್ನಡಮ್ಮ ದಿನಪತ್ರಿಕೆಯಲ್ಲಿ ಉಪಾಸನಾ ಸಂಸ್ಥೆ ಬೆಳೆದು ಬಂದ ರೀತಿಯ ಪುಟ್ಟ ಬರಹವನ್ನು ಸಿದ್ದಪಡಿಸಿ ಪ್ರಕಟಿಸಿದೆ.ಅದನ್ನು ಉಪಾಸನಾ ಮೋಹನ್ ಅವರಿಗೂ ಕಳಿಸಿದೆ. ಅಂದಿನಿಂದ ಇಂದಿನವರೆಗೂ ನಮ್ಮ ಪರಿಚಯ ಆತ್ಮೀಯ ಸ್ನೇಹ ರೂಪದಲ್ಲಿ ಉಳಿದು ಬಂದಿದೆ.ಪ್ರತಿದಿನ ಬೆಳಗ್ಗೆ ಉಪಾಸನಾ ಮೋಹನ್ ತಮ್ಮ ಭಾವಗೀತೆಗಳನ್ನು ನನಗೆ ವ್ಯಾಟ್ಸಪ್ ಮೂಲಕ ಕಳಿಸುವರು. ಅವುಗಳನ್ನು ನಾನು ನನ್ನ ಸ್ನೇಹಬಳಗಕ್ಕೂ ಕಳಿಸುವ ಮೂಲಕ ನಮ್ಮ ಪರಿಚಯ ಮುಂದುವರಿದುಕೊಂಡು ಬಂದಿದೆ. ಇತ್ತೀಚಿಗೆ ಒಂದು ಸಂದೇಶ ವ್ಯಾಟ್ಸಪ್ ನಲ್ಲಿ ಬಂತು.

- Advertisement -

ಅದು ಉಪಾಸನಾ ಮೋಹನ್ ಅವರ  ೫೦೨ ಕನ್ನಡದ ಹಿರಿಯ ಕಿರಿಯ ಕವಿಗಳ ಭಾವಗೀತೆಗಳ ಪುಸ್ಕಕ ಹೊರತಂದಿರುವ ಸಂತಸದ ಸುದ್ದಿಯಾಗಿತ್ತು. ತಕ್ಷಣ ಉಪಾಸನಾ ಮೋಹನ್ ಅವರಿಗೆ ಅದು ನನಗೆ ಬೇಕು ಎನ್ನಲು ನನ್ನ ವಿಳಾಸ ಕೇಳಿ ನನಗೆ ಕೊರಿಯರ್ ಮಾಡಿಯೇ ಬಿಟ್ಟರು. ನಿಜಕ್ಕೂ ಬಹಳ ಹೆಮ್ಮೆಯ ಹಾಗೂ ಅಭಿಮಾನದ ಸಂಗತಿ. ಇದುವರೆಗೂ ಭಾವಗೀತೆಗಳ ಲೋಕದಲ್ಲಿ ಹೊಸ ಅಲೆಯ ಪುಸ್ತಕವಿದು.

ಈ ಕೃತಿಯ ಹೆಸರು ಉಪಾಸನಾ.ಇದರಲ್ಲಿ ಕನ್ನಡದ ಹಿರಿಯ ಕಿರಿಯ ಕವಿಗಳ ೫೦೨ ಭಾವಗೀತೆಗಳಿವೆ.ಅಷ್ಟೇ ಅಲ್ಲ ಪ್ರತಿ ಕವಿತೆಯ ಕೊನೆಗೆ ಕ್ಯೂ ಆರ್ ಕೋಡ್ ಅಳವಡಿಸಲಾಗಿದೆ. ಈ ಕೋಡ್ ನಿಮ್ಮ ಮೋಬೈಲ್ ನಲ್ಲಿ ಸ್ಕಾö್ಯನ್ ಮಾಡುವ ಮೂಲಕ ಆ ಗೀತೆಯನ್ನು ಕೇಳುವ ಅವಕಾಶ. ಜೊತೆಗೆ ನೀವು ಕೂಡ ಹಾಡಬಹುದು. ಇಲ್ಲಿರುವ ೫೦೨ ಭಾವಗೀತೆಗಳ ಸಾಹಿತ್ಯ ನೀವು ಓದುವ ಜೊತೆಗೆ ಪ್ರತಿ ಹಾಡಿನ ಜೊತೆಗೆ ಅಲ್ಲಿ ಅಳವಡಿಸಿರುವ ಕ್ಯೂ ಆರ್ ಸ್ಕಾö್ಯನ್ ಮಾಡುವ ಮೂಲಕ ಭಾವಗೀತೆಗಳನ್ನು ಕೇಳುವ ಮತ್ತು ನೋಡುವ ಅವಕಾಶವಿರುವುದು ಭಾವಗೀತೆಗಳ ಪುಸ್ತಕದ ಇತಿಹಾಸದಲ್ಲಿ ಇದು ಹೊಸದು.

- Advertisement -

ಭಾವಗೀತೆಗಳ ಕೇಳುವ ಮತ್ತು ನೋಡುವ ಅವಕಾಶ ನಾವು ಪಡೆದಾಗ ಆನಂದ ಹೇಳತೀರದ್ದು.ಇಂತಹ ತಂತ್ರಜ್ಞಾನವನ್ನು ಬಳಸಿಕೊಂಡ ಕನ್ನಡದ ಮೊದಲ ಕೃತಿ ಎಂಬ ಹೆಗ್ಗಳಿಕೆಯು ಇದರದ್ದು ಎಂದರೆ ಅತಿಶಯೋಕ್ತಿಯಲ್ಲ. ಅಂದ ಹಾಗೆ ಈ ಕೃತಿಯನ್ನು ಉಪಾಸನಾ ಮೋಹನ್ ಸುಗಮ ಸಂಗೀತದ ಗಾನ ಗಾರುಡಿಗ ಮತ್ತು ಪ್ರಸಿದ್ದ ಸಂಗೀತ ಸಂಯೋಜಕರಾದ ದಿವಂಗತ ಸಿ.ಅಶ್ವತ್ಥ ಅವರಿಗೆ ಅರ್ಪಿಸುವ ಮೂಲಕ ತಮ್ಮ ಅಭಿಮಾನ ಮೆರೆದಿರುವರು.ಇದರ ಬೆಲೆ ನಾಲ್ಕು ನೂರು ರೂಪಾಯಿಗಳು. ಅವರ ಪರಿಶ್ರಮಕ್ಕೆ ಇದು ಹೆಚ್ಚೇನು ಅಲ್ಲ. ಈ ಪುಸ್ತಕ ಕೊಂಡರೆ ೫೦೨ ಗೀತೆಗಳ ಸಾಹಿತ್ಯದ ಜೊತೆಗೆ ಗೀತೆ ಆಲಿಸುವ ಅವಕಾಶ.ಮುಖಪುಟದಿಂದ ಹಿಡಿದು ಕೊನೆಯ ರಕ್ಷಪುಟದವರೆಗೂ ಈ ಪುಸ್ತಕ ನಿಮ್ಮನ್ನು ಓದಿಸಿಕೊಂಡು ಹೋಗುತ್ತದೆ. ರಾಷ್ಟ್ರಕವಿ ಡಾ.ಜಿ.ಎಸ್.ಶಿವರುದ್ರಪ್ಪ(೨೦೧೫) ರ ಶುಭ ನುಡಿಯಿಂದ ಆರಂಭಗೊಂಡು.ಡಾ.ಎನ್.ಎಸ್.ಲಕ್ಷ್ಮೀನಾರಾಯಣ ಭಟ್ಟ (೨೦೧೫).ಸುಬ್ರಾಯ ಚೊಕ್ಕಾಡಿ.ಎಂ.ಎನ್.ವ್ಯಾಸರಾವ್.ಡಾ.ಕಾ.ವೆಂ.ಶ್ರೀನಿವಾಸಮೂರ್ತಿ.ರಂಜನಿ ಪ್ರಭು.ಬಾಗೂರು ಮಾರ್ಕಂಡೇಯ.ಡಾ.ಸಂತೋಷ.ಚೊಕ್ಕಾಡಿ.ಎಚ್.ಆರ್.ಲೀಲಾವತಿ.ಡಾ.ಶಿವಮೊಗ್ಗ ಸುಬ್ಬಣ್ಣ.ಬಿ.ಕೆ.ಸುಮಿತ್ರ.ಸಿ.ಅಶ್ವತ್ಥ.ಕಸ್ತೂರಿ ಶಂಕರ್.ಎಸ್.ಬಾಲಿ.ಶ್ರೀ ವಿ.ಲಕ್ಷ್ಮೀನಾರಾಯಣ್.ಅವರ ಅಭಿಪ್ರಾಯಗಳು ಕೂಡ ದಾಖಲಾಗಿವೆ. ಜೊತೆಗೆ ಉಪಾಸನಾ ಮೋಹನ್ ಅವರ ಸಂಯೋಜಕನ ಜೀವಸ್ವರಗಳಿಂದ ಮಾತುಗಳು ನೆನಪಿನ ಪುಟಗಳೊಂದಿಗೆ ದಾಖಲಾಗಿರುವುದು ಈ ಕೃತಿಯ ವಿಶೇಷತೆಗಳಲ್ಲೊಂದು. ಕೋರೋನಾ ಕಾಲಘಟ್ಟದಲ್ಲಿ ಬಹಳ ಮುತುವರ್ಜಿಯಿಂದ ಉಪಾಸನಾ ಮೋಹನ್ ಈ ಕೃತಿಯನ್ನು ರೂಪಿಸಿದ ಪರಿಶ್ರಮ ಅಭಿನಂದನಾರ್ಹ.೫೦೨ ಭಾವಗೀತೆಗಳ ನಂತರ ಉಪಾಸನಾ ಮೋಹನ್ ಅವರ ಕುರಿತು ಮಹತ್ವದ ಸಂಗತಿಗಳು ಹಾಗೂ ನಿರೂಪಕಿ ಸಂಧ್ಯಾ ಭಟ್ ಅವರ ಉಪಾಸನಾ ಮೋಹನ್ ಕುರಿತ ಪರಿಚಯಾತ್ಮಕ ಬರಹ ಕೂಡ ಈ ಕೃತಿಯಲ್ಲಿ ಅಳವಡಿಸಲಾಗಿದೆ. ಇಷ್ಟೆಲ್ಲ ಮಾಹಿತಿ ೪೦೦ ರೂ. ಗಳಲ್ಲಿ ಸಿಗುವುದು ಎಂದರೆ  ನಿಜಕ್ಕೂ ಖುಷಿಯ ಸಂಗತಿ.ಇದನ್ನು ಸಂಗೀತ ಪ್ರೀಯರೆಲ್ಲರೂ ತಮ್ಮ ಗ್ರಂಥಾಲಯದಲ್ಲಿ ಕಾಯ್ದಿಸಿಕೊಳ್ಳಲು ಅನುಕೂಲ ಇಂತಹ ಕೃತಿಗಳು ಕನ್ನಡ ಭಾವಗೀತ ಲೋಕದಲ್ಲಿ ಅಪರೂಪ ಕೂಡ.

ಮೋಹನ್ ಕೇವಲ ಭಾವಗೀತೆಗಳ ಲೋಕಕ್ಕಷ್ಟೇ ಪರಿಚಿತರಾಗದೇ ತಮ್ಮ ಸಂಗೀತ ಸಂಯೋಜನೆಯ ಮೂಲಕ ಹಸಿರು ರಿಬ್ಬನ್ ಅಮೃತವಾಹಿನಿ.ರಾಘವೇಂದ್ರ ರಾಜ್ ಕುಮಾರ ಅಭಿನಯದ ರಾಜಿ ಚಲನಚಿತ್ರಕ್ಕೆ ಸಂಗೀತ ಸಂಯೋಜಿಸಿರುವರು. ಜೊತೆಗೆ ಹಸಿರು ರಿಬ್ಬನ್ ಸಂಗೀತ ಸಂಯೋಜನೆಗೆ ರಾಜ್ಯ ಪ್ರಶಸ್ತಿಗೂ ಭಾಜನರಾಗಿರುವರು. ಕಲಾತ್ಮಕ ಚಲನಚಿತ್ರ ಭಾವನೆಗಳ ಬೆನ್ನೇರಿ ಚಿತ್ರಕ್ಕೆ ಸಂಗೀತ ಹಾಗೂ ಹಿನ್ನಲೆ ಸಂಗೀತ ಸಂಯೋಜಿಸಿದ್ದಾರೆ.ಗುಳ್ಳೆನರಿ ಹಾಗೂ ಮಂಜುಮಾಯೆ ನಾಟಕಕ್ಕೂ ಸಂಗೀತ ನೀಡಿರುವರು.

ಇತ್ತೀಚಿಗಷ್ಟೇ ಗೌರಿ ಸುಂದರ್ ಪ್ರಶಸ್ತಿಗೂ ಭಾಜನರಾಗಿರುವರು. ಜಿ.ವ್ಹಿ.ಅತ್ರಿ ಅವರ ಶಿಷ್ಯನಾಗಿ ನಂತರ ತಮ್ಮದೇ ಉಪಾಸನಾ ಸಂಸ್ಥೆ ಹುಟ್ಟು ಹಾಕಿರುವುದರ ಹಿಂದೆ ಬಹಳ ಪರಿಶ್ರಮವಿದೆ. ಇವರನ್ನು ಕುರಿತು ಹೆಚ್.ಎಸ್.ವೆಂಕಟೇಶಮೂರ್ತಿ ಹೀಗೆ ಹೇಳಿದ್ದಾರೆ “ಸಾಧನೆಯಲ್ಲಿ ನಿರಂತರತೆ ಮುಖ್ಯ. ಆ ನಿಟ್ಟಿನಲ್ಲಿ ಮೋಹನ್ ಪ್ರತಿಕ್ಷಣವೂ ಸುಗಮ ಸಂಗೀತ ಲೋಕದಲ್ಲೇ ಇರ್ತಾನೆ. ಅನೇಕ ಕವಿಗಳ ಗೀತೆಗಳನ್ನು ಸಂಯೋಜನೆ ಮಾಡುವುದು ಅವನ ದಿನಚರಿಯೇ ಆಗಿದೆ. ಸುಗಮ ಸಂಗೀತದ ನಿಜ ಉಪಾಸನೆಯನ್ನೇ ಆತ ಮಾಡುತ್ತಾನೆ” ಎಂಬ ಹಿರಿಯರ ಮಾತುಗಳು ನಿಜಕ್ಕೂ ಅಕ್ಷರಶಃ ಸತ್ಯ. ಈ ಕೃತಿಗೆ ಮುನ್ನುಡಿಯನ್ನು ಹೆಚ್.ಎಸ್.ವೆಂಕಟೆಶಮೂರ್ತಿಯವರು ಬರೆದಿದ್ದರೆ ಬೆನ್ನುಡಿಯನ್ನು ಕವಿ ಬಿ.ಆರ್.ಲಕ್ಷö್ಮಣರಾವ ಬರೆದಿರುವರು.” ಮೋಹನ್ ನದು ಏಕನಿಷ್ಠೆ. ಭಾವಗೀತೆಯಲ್ಲಿ ಕವಿಗೀತೆಗಳನ್ನಷ್ಟೇ ಆತ ಹಾಡುವುದು. ಅನಂತಸ್ವಾಮಿ ಹಾಗೂ ಅಶ್ವತ್ಥ ಇಬ್ಬರಿಂದಲೂ ಪ್ರಭಾವಿತನಾಗಿದ್ದಾನೆ. ಅನಂತಸ್ವಾಮಿ ಅವರಿಂದ ಮಾಧುರ್ಯ ಘರಾನಾ ಅಶ್ವತ್ಥ ಅವರಿಂದ ನಾಟಕೀಯತೆ, ಸಂಘಟನೆಯನ್ನು ಮೈಗೂಡಿಸಿಕೊಂಡಿದ್ದಾನೆ ಎನ್ನುವ ಬಿ.ಆರ್.ಲಕ್ಷö್ಮಣರಾವ್ ಅವರು ಉಪಾಸನಾ ಬಗ್ಗೆ ಹೆಮ್ಮೆ ವ್ಯಕ್ತಪಡಿಸುವರು.

ಆರಂಭದ ದಿನಗಳು:

ಮೋಹನ್ ಒಬ್ಬ ಅಪ್ರತಿಮ ಕಲಾವಿದರು.ಮಂಡ್ಯ ಜಿಲ್ಲೆಯ ಮೋಹನ್ ಜನಿಸಿದ್ದು ಮೈಸೂರಿನಲ್ಲಿ ೧೯೬೭ ಜನೇವರಿ ೨೮ ರಂದು ತಂದೆ ಎಂ.ಜಿ.ಜಯರಾಂ. ತಾಯಿ ವಿ.ಎಸ್.ಭಾಗ್ಯಲಕ್ಷ್ಮೀ. ದಂಪತಿಗಳ ಮೂರನೆಯ ಮಗ.ಮಂಡ್ಯದಲ್ಲಿ ಶಿಕ್ಷಣ ಮುಗಿಸಿ ಅಲ್ಲಿಯೇ ಕರ್ನಾಟಕ ಶಾಸ್ತ್ರೀಯ ಸಂಗೀತವನ್ನು ಮಡ್ಯದ ವಿದ್ವಾನ್ ತಾಂಡವಮೂರ್ತಿ ಹಾಗೂ ಶ್ರೀವತ್ಸರಲ್ಲಿ ಕಲಿತರು.ನಾದ ವಿನೋದಿನಿ ಕಲಾ ಸಂಸ್ಥೆಯಲ್ಲಿ ಹಾಡುವ ಅವಕಾಶ ದೊರೆಯಿತು.ಕೇವಲ ಸಂಗೀತದಿಂದ ಜೀವನ ನಡೆಸುವುದು ಸಾಧ್ಯವಿಲ್ಲ ಉಪಜೀವನಕ್ಕೆ ಏನಾದರೂ ಕೆಲಸ ಮಾಡಬೇಕು ಎಂದುಕೊಂಡು ಬೆಂಗಳೂರಿಗೆ ಆಗಮಿಸಿದರು. ಗೆಳೆಯರ ಸಹಕಾರದಿಂದ ಬೆಂಗಳೂರಿನ ಗಾಂಧಿ ಬಜಾರ ದಲ್ಲಿ ರೇಡಿಯೋ ಟೇಪ ರಕಾರ್ಡರ ರಿಪೇರಿ ಅಂಗಡಿಯೊಂದನ್ನು ತೆರೆದರು.

ಗಾಂಧಿಬಜಾರ ಆಗಿನ ಕಾಲದಲ್ಲಿ ಕವಿಗಳಿಗೆ ಸ್ಪೂರ್ತಿಯ ನೆಲೆವೀಡಾಗಿತ್ತು. ಕವಿ ಕವನಗಳನ್ನು ಗುನುಗುತ್ತಲೇ ಸುಗಮ ಸಂಗೀತದ ಕಲಿಕೆಗೆ ಸೇರ್ಪಟೆಯಾದರು. ನಂತರದ ದಿನಗಳಲ್ಲಿ ಪಿಲಿಪ್ಸ ಕಂಪನಿಯ ಉದ್ಯೋಗಿಯಾದರು. ಅದೇ ವೇಳೆ ಜಿ.ವಿ.ಅತ್ರಿಯವರು “ಸಂಗೀತಗಂಗಾ”ಎಂಬ ಸಂಸ್ಥೆಯೊಂದನ್ನು ತೆರೆದಿದ್ದರು. ಮೋಹನ್ ಅತ್ರಿಯವರಲ್ಲಿ ಶಿಷ್ಯವೃತ್ತಿ ಪ್ರಾರಂಭಿಸಿದರು. ಅತ್ರಿಯವರ ಬಳಿ ಸಂಗೀತದ ಎಲ್ಲಾ ಪ್ರಕಾರಗಳಲ್ಲಿಯೂ ಸೂಕ್ತ ಮಾರ್ಗದರ್ಶನ ಪಡೆಯುತ್ತ ಸಾಗಿದ ಮೋಹನ್ ಅದೇ ಸಂಸ್ಥೆಯಲ್ಲಿ ಪ್ರಾಧ್ಯಾಪಕ ಹಾಗೂ ಪ್ರಾಂಶುಪಾಲರಾಗಿ ಸೇವೆ ಸಲ್ಲಿಸಿದರು. ಅತ್ರಿಯವರ ಅವರ ನಂಟು ಗುರುಶಿಷ್ಯ ಬಾಂಧವ್ಯ ಇವರನ್ನು ಇಷ್ಟು ಎತ್ತರಕ್ಕೆ ಬೆಳೆಯಲು ಪ್ರೇರಕ ಶಕ್ತಿಯಾಯಿತು. ಈ ಸಂದರ್ಭದಲ್ಲಿ ಸಂಸ್ಥೆಗೆ ಬರುವ ಮಹನೀಯರ ಪರಿಚಯ ಇವರಿಗೆ ಸಂಗೀತ ಕ್ಷೇತ್ರದಲ್ಲಿ ಒಂದು ತಿರುವನ್ನು ನೀಡಿತು.

ಸಂಗೀತ ಕ್ಷೇತ್ರದಲ್ಲಿ ಏನಾದರೂ ಮಾಡಬೇಕೆಂದು ಕನಸು ಕಾಣುತ್ತಿದ್ದ ಇವರು “ಕಲಾಚಾವಡಿ”ಎಂಬ ಸಂಸ್ಥೆಯನ್ನು ಆರಂಭಿಸಿದರು.ಸುಗಮಸಂಗೀತ ಕಲಾವಿದರ ಕ್ಷೇಮಾಭಿವೃದ್ಧಿಗೆ ಸಹಾಯವಾಣಿಯಾಗುವಂತೆ ಈ ಸಂಸ್ಥೆಯನ್ನು ಬೆಳೆಸಿದರು. ಇದರ ಪ್ರಾರಂಭದಿಂದ ಅನೇಕ ಕಷ್ಟಕಾಲಗಳನ್ನು ಎದುರಿಸಿ ಮೋಹನ್ ಆ ಸಂಸ್ಥೆಯಿಂದ ಹಿಂದೆ ಸರಿದರು. ಕೊನೆಗೆ ಕೈಯಲ್ಲಿದ್ದ ಕೆಲಸವನ್ನು ತೊರೆದು ಗಟ್ಟಿ ಮನಸ್ಸು ಹಾಗೂ ದಿಟ್ಟ ನಿರ್ಧಾರದಿಂದ “ಉಪಾಸನಾ” ಸಂಸ್ಥೆ ಕಟ್ಟುವ ಕೈಂಕರ್ಯಕ್ಕೆ ಮುಂದಾದರು.

ಉಪಾಸನಾ:

ಉಪಾಸನಾ ಸಂಸ್ಥೆಗೆ ಜಾಗ ನೀಡಿದ್ದು ಹರಿಣಿ ಸತ್ಯಪ್ರಕಾಶ್. ಇದಕ್ಕೆ ಮಾರ್ಗದರ್ಶಕರೂ ಹಾಗೂ ಗೆಳೆಯರಾದ ಶಿವಮೊಗ್ಗ ಸುಬ್ಬಣ್ಣ,ರಾಜು ಅನಂತಸ್ವಾಮಿ,ಅಮೇರಿಕಾದ ಅಶ್ವತ್ಥ ನಾರಾಯಣ,ಪಲ್ಗುಣ,ಬಾಲಿ ಅಪ್ಪಗೆರೆ ತಿಮ್ಮರಾಜು ಅವರ ಜೊತೆಗೆ ಕನ್ನಡದ ಭಾವಕವಿ ಡಾ.ಎನ್.ಎಸ್.ಲಕ್ಷ್ಮೀನಾರಾಯಣ ಭಟ್ಟರು ಸೇರಿದಂತೆ ಅನೇಕರು ಮೋಹನ್ ಅವರಿಗೆ ಬೆನ್ನೆಲುಬಾಗಿ ನಿಂತರು. ಇವರನ್ನು ಇಂದಿಗೂ ಕೃತಜ್ಞತೆಯಿಂದ ಮೋಹನ್ ನೆನೆಯುತ್ತಾರೆ.ಈಗ ಈ ಸಂಸ್ಥೆ ಬೆಳೆದು ಹೆಮ್ಮರವಾಗಿ ಜನಮಾನಸದಲ್ಲಿ ನೆಲೆಯೂರಿದೆ.

ಸಂಗೀತಗಂಗೆಯಲ್ಲಿ ತೇಲಿಹೋದ ಜಿ.ವಿ.ಅತ್ರಿಯವರನ್ನು ಸ್ಮರಿಸುತ್ತ ಭಾವುಕರಾದ ಮೋಹನ್ ಅವರ ಸವಿನೆನಪಿಗಾಗಿ “ಜಿ.ವಿ.ಅತ್ರಿ” ಪ್ರಶಸ್ತಿ ಹುಟ್ಟು ಹಾಕಿದರು.ಉಪಾಸನಾ ಸಂಸ್ಥೆಯ ಈ ಪ್ರತಿಷ್ಠಿತ ಪ್ರಶಸ್ತಿಯನ್ನು ಅನೇಕ ಯುವ ಕಲಾವಿದರಿಗೆ ನೀಡಿ ಪುರಸ್ಕರಿಸುತ್ತ ಬಂದಿರುವುದು ಅತ್ರಿಯವರ ಬಗೆಗಿನ ಅವರ ಗೌರವಕ್ಕೆ ಸಾಕ್ಷಿ.

ಗಾನಕೆ ನಲಿಯದ ಮನಸೇ ಇಲ್ಲ,ಗಾನಕೆ ಮಣಿಯದ ಜೀವವೇ ಇಲ್ಲ

ಗಾನಕೆ ಒಲಿಯದ  ದೇವರೇ ಇಲ್ಲ, ಗಾನವೇ ತುಂಬಿದೆ ಈ ಜಗವೆಲ್ಲ,

ಭಾವವೆಂಬ ಹೂವು ಅರಳಿ ಗಾನವೆಂಬ ಗಂಧ ಚೆಲ್ಲಿ

ಉಪಾಸನೆ ಚಲನಚಿತ್ರದ ಈ ಗೀತೆ ಕಾವ್ಯಶಕ್ತಿಯ ಮಹತ್ವ ಅದರ ಸ್ವರಸಂಯೋಜನೆಗಿರುವ ಮಹತ್ವವನ್ನು ಸೊಗಸಾಗಿ ಹೇಳಿದೆ. ಒಬ್ಬ ಕವಿ ಒಂದು ಕವನ ರಚನೆ ಮಾಡಿದರೆ ಅದರ ಭಾವವನ್ನು ಅರಿತ ಗಾಯಕ ಅದಕ್ಕೊಂದು ರಾಗ ಹುಡುಕುತ್ತಾನೆ.

ಅದಕ್ಕೆ ಸ್ವರಸಂಯೋಜಿಸಿ ಇಂಪಾದ ಸಂಗೀತವನ್ನು ಸಂಗೀತ ನಿರ್ದೇಶಕ ನೀಡುತ್ತಾನೆ. ಈ ಮೂವರ ಸಂಗಮದಿಂದ ರೂಪಗೊಂಡ ಆ ಕವಿತೆ ತನ್ನ ಸಾಹಿತ್ಯ, ಗಾಯಕರ ಮಾಧುರ್ಯ, ಸಂಗೀತ ಸಂಯೋಜಕರ ಸ್ವರ ಸಂಯೋಜನೆ ಮೂಲಕ ಕೇಳುಗರ ಮನಸಲ್ಲಿ ಸದಾ ಉಳಿಯುತ್ತದೆ. ಒಂದು ತಂಡ ಈ ರೀತಿ ಒಂದು ಲಹರಿಗೆ ಬಂದಾಗ ಒಂದು ಅದ್ಬುತ ಹಾಡು ಹುಟ್ಟುತ್ತದೆ. ಗಾಯಕರಾಗಿ,ಸಾಹಿತ್ಯ ರಚನೆಕಾರರಾಗಿ ಸಂಗೀತ ಸಂಯೋಜಕರಾಗಿ ಅರಳಿದ ಪ್ರತಿಭೆ ಉಪಾಸನಾ ಮೋಹನ್.೨೦೨೦ ರ ಕರ್ನಾಟಕ ಕಲಾಶ್ರೀ ಪ್ರಶಸ್ತಿಗೂ ಭಾಜನರಾಗಿರುವರು. ಸಂಗೀತ ಗಂಗೆಯಲ್ಲಿ ತೇಲಿ ಹೋದ ಜಿ.ವ್ಹಿ.ಅತ್ರಿಯವರನ್ನು ಸ್ಮರಿಸುತ್ತಾ ಅವರ ಸವಿನೆನಪಿಗಾಗಿ ಜಿ.ವ್ಹಿ.ಅತ್ರಿ ಪ್ರಶಸ್ತಿಯನ್ನೂ ಕೂಡ ನೀಡುತ್ತ ಬಂದಿರುವರು. ಹೀಗೆ ಬರೆಯುತ್ತ ಸಾಗಿದರೆ ಈ ಪುಟಗಳು ಸಾಲದು ಆ ರೀತಿ ತಮ್ಮ ಭಾವಲೋಕ ಯಾನವನ್ನು ಉಪಾಸನಾ ಮೋಹನ್ ಸಾಗಿರುವರು. ಇತ್ತೀಚಿಗಷ್ಟೇ ಸಿಂಗಾಪೂರ್‌ದಲ್ಲಿ ಕೂಡ ತಮ್ಮ ಕಾರ್ಯಕ್ರಮ ನೀಡಿ ಬಂದಿರುವರು. ನಮ್ಮ ಪರಿಚಯ ನನ್ನ ಗೀತೆಗಳಿಗೂ ಕೂಡ ರಾಗ ಸಂಯೋಜನೆ ಮಾಡುವಂತೆ ಅವರಲ್ಲಿ ವಿನಂತಿಸಿರುವೆ.

ನೂತನ ವರ್ಷದಲ್ಲಿ ಅದು ಕೈಗೂಡುವ ಭರವಸೆ ಹೊಂದಿರುವೆ. ಹಿರಿಯರಾದ ಉಪಾಸನಾ ಮೋಹನ್ ಭಾವಲೋಕದ ಪಯಣ ಹೀಗೆಯೇ ನಿರಂತರವಾಗಿ ಸಾಗಲಿ.

ಅವರ ಈ ಕೃತಿ ಪಡೆಯಲು ಬಯಸುವವರು. ಈ ನಂಬರ್ ಸಂಪರ್ಕಿಸಿರಿ.೯೮೪೫೩೩೮೩೬೩


ವೈ.ಬಿ.ಕಡಕೋಳ

- Advertisement -
- Advertisement -

Latest News

ಸಮಾಜದಲ್ಲಿ ಹೆಣ್ಣು ಮಕ್ಕಳಿಗೆ ಸಮಾನತೆ ದೊರಕಬೇಕು- ಸಿಡಿಪಿಓ ಶ್ವೇತಾ

ಮೈಸೂರು ನಗರ ವರ್ತಲ ರಸ್ತೆಯಲ್ಲಿರುವ ಮಾರ್ವೆಲ್ ಪದವಿ ಪೂರ್ವ ಕಾಲೇಜಿನಲ್ಲಿ ಇಂದು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಹಾಗೂ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ...
- Advertisement -

More Articles Like This

- Advertisement -
close
error: Content is protected !!
Join WhatsApp Group