ಸಮತೆ ಹೂವಿನ ತೋಟಕೆ ಹಾರುವೆ
- Advertisement -
ಹಕ್ಕಿಯಂತೆ ನನಗೂ ರೆಕ್ಕಯಿದ್ದರೇ
ಭವದ ಹಂಗಿಲ್ಲದೆ ನಭಕೆ ಹಾರುತ್ತಿದ್ದೆ
ದುಃಖದ ನಾಡಿಂದ ರೆಕ್ಕೆ ಚಿಮ್ಮುತಾ
ಚುಕ್ಕಿಲೋಕಕೆ ನಲಿದು ತೇಲುತಾ
ರಗಡು ರಗಳೆ ಬೊಗಳೆ ಬಿಸಾಕಿ ನೀಲಿ
ಬಾನಿಗೆ ಹಾರಿ ತೂರಾಡಿ ನಲಿಯವೆ
- Advertisement -
ರಂಗಿನ ನವಿಲುಗರಿ ನವಿರುಭಾವಗಳ
ಗರಿಬಿಚ್ಚಿ ಜಂಜಡವ ಮುಚ್ಚಿ ಹಾರುತಿದ್ದೆ
ದಿಗಂತದ ವಿಸ್ಮಯಗಳ ಬೇಟೆಯಾಡಿ
ಜಗಸಿರಿಯ ನೋಟದಿ ಮನತಣಿಯುವೆ
ಕಟ್ಟು ಪಾಡುಗಳ ಬೇಡಿ ಬಿಸಾಕಿ
ಎದೆನೋವ ನೂಕಿ ತೇಲಿ ತೇಲಿ ನಲಿವೆ
- Advertisement -
ಜಾತಿ ಕುಲ ಪಂಥ ಧಮ೯ಗಳ ಪಾಚಿಕಳಚಿ
ನಿಮ೯ಲ ನಭದಿ ಸ್ವಚ್ಛಂದವಾಗಿ ತೇಲುವೆ
ಕಾಡುವ ಕನಿಷ್ಠರ ಖುಷಿ ಕದಿಯುವ ಅನಿಷ್ಟ
ಕಸ ಹೊರ ನೂಕಿ ನೆಮ್ಮದಿಯಲಿ ನಗೆಯುವೆ
ಕಾವಲುಗಾರನಿಲ್ಲದ ಬಾಂದಳದ ಸ್ವತಂತ್ರ
ಸ್ವಚ್ಚಂದದ ಖುಷಿನಿಶೆಯಲಿ ತೂರಾಡಿ ನಲಿಯುವೆ
ಮೌಢ್ಯಗಳ ಗುಡಿ ಕಟ್ಟುಪಾಡು ಗಡಿದಾಟಿ
ಸಮತೆ ಹೂವಿನ ತೋಟಕೆ ನಾ ಹಾರುವೆ
ಹರಿತೊರೆ ಜಲಪಾತ ನದಿ ಸಾಗರ ಮೇಲೇರಿ
ಭವಬಂಧ ಬಿಸುಟು ಖುಷಿ ತೊಟ್ಟು ಹಾರಿ ನಲಿವೆ
ರತ್ನಾ ಎಂ ಅಂಗಡಿ
ಹುಬ್ಬಳ್ಳಿ