ಬೆಂಗಳೂರು – ಸೆ.೨೮ , ಶನಿವಾರ ಪಾಂಚಜನ್ಯ ಪ್ರತಿಷ್ಠಾನದ ಹನ್ನೆರಡನೇ ವಾರ್ಷಿಕೋತ್ಸವ ಮತ್ತು ಆರೋಗ್ಯ ಕ್ಷೇತ್ರದ ಅನನ್ಯ ಸೇವೆಗಾಗಿ ಖ್ಯಾತ ವೈದ್ಯ ಬರಹಗಾರ ಡಾ.ನಾ. ಸೋಮೇಶ್ವರಅವರಿಗೆ ೨೦೨೪ನೇ ಸಾಲಿನ ಪ್ರತಿಷ್ಠಿತ ‘ಪಾಂಚಜನ್ಯ ಪುರಸ್ಕಾರ’ ಪ್ರದಾನ ಸಮಾರಂಭ ನಡೆಯಲಿದೆ.
ಆಧ್ಯಾತ್ಮಿಕತೆಯ ತಳಹದಿಯ ಮೇಲೆ ಅಕ್ಷರ – ಆರೋಗ್ಯ ಕ್ಷೇತ್ರದಲ್ಲಿ ನಿಸ್ವಾರ್ಥ ಸೇವೆ ಸಲ್ಲಿಸುತ್ತಿರುವ ಪಾಂಚಜನ್ಯ ಪ್ರತಿಷ್ಠಾನದ ಕಳೆದ ಹನ್ನೊಂದು ವರ್ಷಗಳಿಂದ ಹಲವಾರು ಸಮಾಜಮುಖಿ ಕಾರ್ಯಚಟುವಟಿಕೆಗಳನ್ನು ಹಮ್ಮಿಕೊಂಡು ಬರುತ್ತಿದೆ . ಪ್ರತಿಷ್ಠಾನದ ವಾರ್ಷಿಕೋತ್ಸವದ ಸಂದರ್ಭದಲ್ಲಿ ಅಕ್ಷರ, ಆರೋಗ್ಯ , ಅಧ್ಯಾತ್ಮ ಕ್ಷೇತ್ರದಲ್ಲಿನ ಸಾಧಕ ಶ್ರೇಷ್ಠರನ್ನು ಗುರುತಿಸಿ ಪಾಂಚಜನ್ಯ ಪುರಸ್ಕಾರ ನೀಡಿ ಗೌರವಿಸುವ ಪರಿಪಾಠ ಬೆಳೆದು ಬಂದಿದೆ.
ಸೆ.೨೮ , ಶನಿವಾರ ಮಧ್ಯಾಹ್ನ ೧೧.೩೦ಕ್ಕೆ ಬೆಂಗಳೂರು ಜಯನಗರ ೪ನೇ ಬ್ಲಾಕ್‌ನ ಯುವಪಥ , ವಿವೇಕ ಆಡಿಟೋರಿಯಂನಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಆರೋಗ್ಯ ಕ್ಷೇತ್ರದ ಅನನ್ಯ ಸೇವೆಗಾಗಿ ಖ್ಯಾತ ವೈದ್ಯ ಬರಹಗಾರ ಡಾ. ನಾ. ಸೋಮೇಶ್ವರ ಅವರಿಗೆ ಪ್ರತಿಷ್ಠಿತ ‘ಪಾಂಚಜನ್ಯ ಪುರಸ್ಕಾರ’ ವನ್ನು ನೀಡಿ ಸನ್ಮಾನಿಸಲಾಗುವುದು., ಅಭಿನಂದನಾ ಪತ್ರ, ಸ್ಮರಣಿಕೆ ,ಫಲ ತಾಂಬೂಲದ ಜೊತೆಗೆ ಪ್ರಸ್ತುತ ವರ್ಷದಿಂದ ಪುರಸ್ಕಾರವು ರೂ.ಒಂದು ಲಕ್ಷ ನಗದನ್ನು ಒಳಗೊಂಡಿದೆ. ಮೆ|| ಆನಂದ್ ರಾಥಿ ವೆಲ್ತ್ ಲಿಮಿಟೆಡ್ , ಆರ್ಕಿಡ್ ಲ್ಯಾಮಿನೇಟ್ಸ್ ಪ್ರೈ ಲಿ. ಮತ್ತು ಬ್ಲೂನೀಮ್ ಮೆಡಿಕಲ್ ಡಿವೈಸೆಸ್ ಪ್ರೈ.ಲಿ. ರವರು ಕಾರ್ಯಕ್ರಮವನ್ನು ಪ್ರಾಯೋಜಿಸಿದ್ದಾರೆ.
ನಿಮ್ಹಾನ್ಸ್ ನ ನಿವೃತ್ತ ಮನೋವಿಜ್ಞಾನ ಪ್ರಾಧ್ಯಾಪಕ , ಪದ್ಮಶ್ರೀ ಪುರಸ್ಕೃತ ಡಾ.ಸಿ.ಆರ್.ಚಂದ್ರಶೇಖರ್ ರವರು ಪ್ರಶಸ್ತಿ ಪ್ರದಾನ ಮಾಡುವರು. ಆರ್.ವಿ.ಶಿಕ್ಷಣ ಸಮೂಹದ ನಿರ್ದೇಶಕರು (ಯೋಜನೆ) ಡಾ.ಟಿ.ವಿ.ರಾಜು ಮತ್ತು ಬಿಹೆಚ್‌ಎಸ್ ಉನ್ನತ ಶಿಕ್ಷಣ ಸಂಸ್ಥೆ ಜಂಟಿ ಕಾರ್ಯದರ್ಶಿ , ಡಾ.ಕೆ.ಎಸ್.ಸಮೀರ ಸಿಂಹ ವಿಶೇಷ ಅತಿಥಿಗಳಾಗಿ ಪಾಲ್ಗೊಳ್ಳುವರು
ಪ್ರತಿಷ್ಠಾನ ಟ್ರಸ್ಟೀಗಳಾದ ಎಸ್.ವಿ.ಸುಬ್ರಹ್ಮಣ್ಯ , ಅನಂತ ವೇದಗರ್ಭಂ ಹಾಗು ವೆಂಕಟೇಶ ಆರ್. ವೇದಾಂತಿ ಉಪಸ್ಥಿತರಿರುವರು ಎಂದು ಸಂಸ್ಥಾಪಕ ಗೌ.ಕಾರ್ಯದರ್ಶಿ ಮುರಳಿ ಎಸ್.ಕಾಕೋಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ವಿವರಗಳಿಗೆ ೯೮೪೫೦ ೭೫೨೫೦
ಪ್ರಶಸ್ತಿ ಪುರಸ್ಕೃತರ ಕಿರು ಪರಿಚಯ :
ಡಾ. ನಾ. ಸೋಮೇಶ್ವರ ದೂರದರ್ಶದ ದಾಖಲೆಯ ಥಟ್ ಅಂತ ಹೇಳಿ ರಸಪ್ರಶ್ನೆ ಕಾರ್ಯಕ್ರಮದ ಮೂಲಕ ವಿಶ್ವ ಮಾನ್ಯತೆ ಗಳಿಸಿ ಜನಪ್ರಿಯರಾದ ಶ್ರೀಯುತರು ವೃತ್ತಿಯಿಂದ ವೈದ್ಯರು, ಔದ್ಯೋಗಿಕ ವೈದ್ಯಕೀಯ ಇವರ ತಜ್ಞತೆಯ ಕ್ಷೇತ್ರ.
೩೭ ವರ್ಷ ವೃತ್ತಿ ನಿರತರಾಗಿ ಅನೇಕ ಸಂಸ್ಥೆಗಳಲ್ಲಿ ಕಾರ್ಯನಿರ್ವಹಿಸಿ ಪ್ರವೃತ್ತಿಯಿಂದ ಲೇಖಕರಾಗಿ ೬೦ಕ್ಕೂ ಅಧಿಕ ಪುಸ್ತಕಗಳನ್ನು ಕನ್ನಡ ಸಾರಸ್ವತ ಲೋಕಕ್ಕೆ ಸಮೃದ್ಧ ಕೊಡುಗೆ ನೀಡಿರುವ ಇವರು ಉತ್ತಮ ವಾಗ್ಮಿಗಳು.
ಅಧ್ಯಯನ -ಅಧ್ಯಾಪನ ಇವರ ಉಸಿರು : ಕಲಿ – ಕಲಿಸು ಇದು ಅವರ ಜೀವಮಾನದ ಧ್ಯೇಯ. ಕನ್ನಡದಲ್ಲಿ ಆರೋಗ್ಯ ಸಾಹಿತ್ಯ ಸಂವಹವನಕ್ಕಾಗಿ ಕನ್ನಡ ಸಾಹಿತ್ಯ ಅಕಾಡೆಮಿ ಪ್ರಶಸ್ತಿ, ಕ್ವಿಜ್ ಕ್ಷೇತ್ರಕ್ಕೆ ಸಲ್ಲಿಸಿದ ಅನುಪಮ ಸೇವೆಗಾಗಿ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಸೇರಿದಂತೆ ಅನೇಕ ಪ್ರತಿಷ್ಠಿತ ಪ್ರಶಸ್ತಿಗಳು ಸಂದಿವೆ .
ಪ್ರಸ್ತುತ ಆಧ್ಯಾತ್ಮಿಕ ಅಸ್ತಿಭಾರದ ಮೇಲೆ ಸಮಾಜದ ಅಕ್ಷರ ಆರೋಗ್ಯಕರ ಸಮೃದ್ಧಿಗಾಗಿ ಕಟಿಬದ್ಧವಾಗಿರುವ ಲಾಭರಹಿತ ಸಂಸ್ಥೆ ಪಾಂಚಜನ್ಯ ಪ್ರತಿಷ್ಠಾನ ಆರೋಗ್ಯ ಕ್ಷೇತ್ರದ ಅನನ್ಯ ಸಾಧನೆಗೆ ಕೊಡಮಾಡುವ ೨೦೨೪ ನೇ ಸಾಲಿನ ಪಾಂಚಜನ್ಯ ಪುರಸ್ಕಾರಕ್ಕೆ ಭಾಜನರು.
ಪಾಂಚಜನ್ಯ ಪ್ರತಿಷ್ಠಾನದ ಕಿರು ಪರಿಚಯ
“ಸೇವಾಯಜ್ಞದಲ್ಲಿ…”
ಸಮಾನ ಮನೋಧರ್ಮದ ಗೆಳೆಯರು ಒಂದಾಗಿ ಗ್ರಾಮೀಣ ಪ್ರದೇಶದಲ್ಲಿ ಅಕ್ಷರ ,ಆರೋಗ್ಯ ಮತ್ತು ಅಧ್ಯಾತ್ಮವೆಂಬ ಮಂತ್ರಗಳ ಬುನಾದಿಯ ಮೇಲೆ ಭವ್ಯ ಸಮಾಜ ನಿರ್ಮಾಣದ ದೀಕ್ಷೆ ತೊಟ್ಟು, ಹಲವಾರು ಜನಮುಖಿ ಕಾರ‍್ಯಗಳನ್ನು ನಡೆಸುತ್ತ ಸಾರ್ಥಕ ಒಂದು ದಶಕದಿಂದ ನಿಸ್ವಾರ್ಥ ಚಿಂತನೆ ವಿಶಾಲದೃಷ್ಟಿಯಿಂದ ಸದ್ದಿಲ್ಲದೆ ಸೇವಾಕ್ರಾಂತಿ ಮಾಡುತ್ತ ಬಂದಿದೆ. ಪಾಂಚಜನ್ಯ ಮೊಳಗುವುದಕ್ಕಾಗಿ ಅಲ್ಲ, ದೀನರ ಬಾಳು ಬೆಳಗುವುದಕ್ಕಾಗಿ ಉದಯವಾಗಿದೆ.
ಪ್ರತಿ ವರ್ಷ ವಾರ್ಷಿಕೋತ್ಸವ ಸಂದರ್ಭದಲ್ಲಿ ಅಕ್ಷರ, ಆರೋಗ್ಯ ಮತ್ತು ಅಧ್ಯಾತ್ಮ ಕ್ಷೇತ್ರದಲ್ಲಿ ಅವಿರತ ಸೇವಾ- ಸಾಧನೆಯನ್ನು ಮಾಡುತ್ತಿರುವ ಸಾಧಕೋತ್ತಮರಿಗೆ ಪ್ರತಿಷ್ಠಿತ ಪಾಂಚಜನ್ಯ ಪುರಸ್ಕಾರ ಗೌರವಾರ್ಪಣೆ ಮಾಡಲಾಗುವುದು.
ಸಹಾನುಭೂತಿಯ ಸಂವೇದನೆಯೊಂದಿಗೆ ಗಮನಿಸುವಾಗ ಬದಲಾವಣೆ ಹೇಗೆ ಸಾಧ್ಯ ಎಂದು ತಿಳಿಯದೇ ಅಸಹಾಯಕತೆಯೂ(ಯೇ) ಮನೆಮಾಡಿ ಜನರಲ್ಲಿ ಉದಾಸೀನ ಮೂಡುವುದು ಸಹಜ ,ಹಾಗಿರುವಾಗ ಬದಲಾವಣೆಯ ದಾರಿಯನ್ನು ತೋರಿಸಿ , ಪೋಷಿಸಿದಾಗ ಅಸಹಾಯಕತೆಯೂ ದೂರವಾಗುತ್ತದೆ. ಜೊತೆಗೆ ಕಣ್ಣಿಗೆ ಕಾಣುವ ಬದಲಾವಣೆಯೂ ಸಾಧ್ಯ ಎಂದು ಪಾಂಚಜನ್ಯ ಪ್ರತಿಷ್ಠಾನ ನಂಬಿಕೊಂಡು ಬಂದಿದೆ . ನಿಮಗೂ ಪಾಂಚಜನ್ಯ ಪ್ರತಿಷ್ಠಾನದೊಂದಿಗೆ ಜೋಡಿಸಿಕೊಳ್ಳಬೇಕೆನಿಸಿದರೆ ಕರೆಮಾಡಿ ೯೮೪೫೦ ೭೫೨೫೦ ಹಾಗೂ ಸಮಾಜದಲ್ಲಿನ ಬದಲಾವಣೆಗೆ ಪಾತ್ರರಾಗಿರಿ .