ಕೃತಿ ಪರಿಚಯ: ಬೆಳಗಾವಿ ಜಿಲ್ಲೆಯ ಸ್ಥಳನಾಮಗಳು

Must Read

ಮೂಡಲಗಿ ತಾಲೂಕಾ ಪತ್ರಕರ್ತರ ಸಂಘದ ಕಚೇರಿ ಉದ್ಘಾಟನೆ

ಮೂಡಲಗಿ - ಹಲವಾರು ಯುವ ಪತ್ರಕರ್ತರ ಉತ್ಸಾಹ ಹಾಗೂ ಕಾರ್ಯಶೀಲತೆಯ ಪ್ರತೀಕವಾಗಿ ರಚನೆಗೊಂಡ ಮೂಡಲಗಿ ತಾಲೂಕಾ ಪತ್ರಕರ್ತರ ಸಂಘದ ಕಚೇರಿಯನ್ನು ಅರಭಾವಿ ಶಾಸಕ ಬಾಲಚಂದ್ರ ಜಾರಕಿಹೊಳಿಯವರ...

ಲೋಳಸೂರ ಹೊಸ ಸೇತುವೆ ನಿರ್ಮಿಸುವಂತೆ ನೂತನ ಸಿಎಂ ಅವರಿಗೆ ಕಡಾಡಿಯವರಿಂದ ಮನವಿ

ಮೂಡಲಗಿ: ಗೋಕಾಕ ನಗರಕ್ಕೆ ಸಂಪರ್ಕ ಕಲ್ಪಿಸುವ ಜತ್ತ ಜಾಂಬೋಟಿ ರಾಜ್ಯ ಹೆದ್ದಾರಿ-31 ರ ಲೋಳಸೂರ ಗ್ರಾಮದ ಹತ್ತಿರ ಘಟಪ್ರಭಾ ನದಿಗೆ ಅಡ್ಡಲಾಗಿ ಹೊಸ ಸೇತುವೆ ನಿರ್ಮಿಸುವಂತೆ...

ಭಾರತ ಮಾತೆಯ ಜ್ಞಾನ ಶಕ್ತಿ ಭಾರತೀಯ ಸ್ತ್ರೀಯಲ್ಲಿದೆ

ಪತಿವ್ರತೆಗೂ ಧರ್ಮ ಪತ್ನಿಗಿರುವ ವ್ಯತ್ಯಾಸವಿಷ್ಟೆ. ಪತಿವ್ರತೆ ಪತಿಯ ದಾರಿಯಲ್ಲಿ ತಾನೂ ನಡೆಯೋದು. ಧರ್ಮಪತ್ನಿ ಪತಿಯನ್ನು ಧರ್ಮದ ಹಾದಿಯಲ್ಲಿ ನಡೆಸೋದು. ಭೂಮಿ ಮೇಲೆ ಧರ್ಮ ನೆಲೆಸಬೇಕಾದರೆ ಸ್ತ್ರೀ...

2011-12 ನೆಯ ಸಂದರ್ಭ ಒಂದು ಭಾನುವಾರ ರಜೆ ಇತ್ತು ಮನೆಯಲ್ಲಿಯೇ ಇದ್ದೆ. ಲಕ್ಷ್ಮಣ ತಪಸಿ ಮತ್ತು ಶೋಭಾ ತಪಸಿ ಸಹೋದರ ಸಹೋದರಿ ನಮ್ಮ ಮನೆಗೆ ಬಂದಿದ್ದರು. ಅವರು ಬಂದಿರುವ ಉದ್ದೇಶ ತಿಳಿಸಿದರು. ಅದು ಬೆಳಗಾವಿ ಜಿಲ್ಲೆಯ ಸ್ಥಳನಾಮಗಳು ಕುರಿತು ಪಿ.ಎಚ್.ಡಿ. ಮಾಡುತ್ತಿರುವ ಸಂಗತಿ ತಿಳಿಸಿದರು. ಆಗ ಕನ್ನಡ ಪ್ರಭ ದಿನಪತ್ರಿಕೆಯ ಪ್ರತಿ ರವಿವಾರ ಚರಿತ್ರೆಗೊಂದು ಕಿಟಕಿ ಅಂಕಣದಲ್ಲಿ ಸ್ಥಳನಾಮಗಳ ಕುರಿತಂತೆ ನನ್ನ ಬರಹಗಳು ಬರುತ್ತಿದ್ದವು. ಅದರಲ್ಲಿ ಬಹುತೇಕ ಬರಹಗಳು ಬೆಳಗಾವಿ ಜಿಲ್ಲೆಯ ಸ್ಥಳನಾಮಗಳು ಕುರಿತಂತೆ ಇದ್ದವು. ಸಹೋದರಿಗೆ ಅವುಗಳ ಅವಶ್ಯಕತೆ ಇತ್ತು. ಹೀಗಾಗಿ ನಮ್ಮ ಮನೆಗೆ ಬಂದಿದ್ದರು. ನಾನು ನನ್ನ ಬರಹಗಳನ್ನು ಅವರಿಗೆ ನೀಡಿದೆ. ನಂತರ ಮುಂದಿನ ಭಾನುವಾರ ಅಥಣಿ ತಾಲೂಕಿಗೆ ಹೋಗುತ್ತಿರುವುದಾಗಿ ನನಗೂ ತಮ್ಮ ಜೊತೆಗೆ ಬರುವಂತೆ ಕೇಳಿದರು. ರವಿವಾರ ಹೋಗುತ್ತಿರುವ ಕಾರಣ ನಾನು ಅವರೊಟ್ಟಿಗೆ ಹೋದೆ. ಅಲ್ಲಿ ನನ್ನ ಪರಿಚಿತ ಹಿರಿಯರಾದ ಅಪ್ಪಾಸಾಬ ಅಲಿಬಾದಿ. ಶಿವಪುತ್ರಪ್ಪ ಯಾದವಾಡ(ರೋಹಿಣಿ ಯಾದವಾಡ ಅವರ ತಂದೆ) ಅವರ ಮನೆಗೆ ಹೋದೆವು. ಸಂಜಯ ಕುರಣಿ. ಅವರನ್ನು ಸಂಪರ್ಕಿಸಿದೆವು. ಇಡೀ ದಿನ ಅಥಣಿ ತಾಲೂಕಿನ ಬಹುತೇಕ ಸ್ಥಳಗಳನ್ನು ಸುತ್ತಾಡಿ ಮಾಹಿತಿಯನ್ನು ಕಲೆ ಹಾಕಿದೆವು. ಆ ದಿನ ಸಹೋದರ ಲಕ್ಷ್ಮಣ ತಪಸಿ ಅವರು ನನಗೆ ಗೋಕಾಕದಲ್ಲಿ ವಸತಿ ವ್ಯವಸ್ಥೆ ಮಾಡಿದರು. ಇದು ಹತ್ತು ವರ್ಷಗಳ ಹಿಂದಿನ ಘಟನೆ.

ಆ ದಿನಗಳ ಅವರ ಭೇಟಿಯಿಂದ ಅವರು ನಮ್ಮ ಸಹೋದರ ಸಹೋದರಿಯ ಬಾಂಧವ್ಯ ಜರುಗುತ್ತ ಅವರ ಪಿ.ಎಚ್.ಡಿ ಕುರಿತಂತೆ ನನ್ನಿಂದ ಎಷ್ಟು ಸಹಾಯ ಸಾಧ್ಯವೋ ಅಷ್ಟು ಮಾಹಿತಿ ನೀಡುತ್ತ ಹೋದೆನು.ನಿಜಕ್ಕೂ ಅವರ ಪರಿಶ್ರಮ ಈ ಕೃತಿ ಕಂಡಾಗ ಅದ್ಬುತವೆನಿಸಿತು. ಕ್ಷೇತ್ರಕಾರ್ಯವೇ ಮುಖ್ಯವಾಗಿರುವ ಈ ಸಂಶೋಧನೆ ಇಡೀ ಜಿಲ್ಲೆಯನ್ನು ಸುತ್ತಾಡಿ ಸಾಕಷ್ಟು ಮಾಹಿತಿ ಕಲೆ ಹಾಕಿರುವುದನ್ನು ಈ ಕೃತಿಯಲ್ಲಿ ಕಾಣುತ್ತೇವೆ.

ಶೋಭಾ ತಪಸಿಯವರ ಪರಿಚಯ

- Advertisement -

ಸಹೋದರಿ ಶೋಭಾ ತಪಸಿ ಮೂಲತಃ ಗೋಕಾಕ ತಾಲೂಕಿನ ಲೋಳಸೂರಿನವರು. ರೈತ ದಂಪತಿಗಳ ನಾಲ್ಕನೇ ಮಗಳು. ತಮ್ಮ ಪ್ರಾಥಮಿಕ ಶಿಕ್ಷಣವನ್ನು ಕೆ.ಎಲ್.ಇ.ಸಂಸ್ಥೆಯ ಸಿ.ಎಸ್.ಅಂಗಡಿ ಶಾಲೆ ಹಾಗೂ ಪದವಿವರೆಗಿನ ಶಿಕ್ಷಣವನ್ನು ಜೆ.ಎಸ್.ಎಸ್.ಶಿಕ್ಷಣ ಸಂಸ್ಥೆ ಗೋಕಾಕದಲ್ಲಿ ಪೂರೈಸಿ ಕರ್ನಾಟಕ ವಿಶ್ವವಿದ್ಯಾಲಯದಲ್ಲಿ ಎಂ.ಎ. ಮುಗಿಸಿ ಸಾಗರ ಕಾಲೇಜ್ ಬೆಳಗಾವಿಯಲ್ಲಿ ಬಿ.ಈಡಿ ವ್ಯಾಸಂಗ ಪೂರೈಸಿ.ನಂತರ ಕರ್ನಾಟಕ ವಿಶ್ವವಿದ್ಯಾಲಯದಲ್ಲಿ ಪಿ.ಎಚ್.ಡಿ ಸಂಶೋಧನೆಗೆ ” ಬೆಳಗಾವಿ ಜಿಲ್ಲೆಯ ಸ್ಥಳನಾಮಗಳು ” ವಿಷಯವನ್ನು ಆಯ್ದುಕೊಂಡು ಡಾಕ್ಟರೇಟ್ ಪದವಿಗೆ ಭಾಜನರಾದರು. ಅಷ್ಟೇ ಅಲ್ಲ ಎನ್.ಇ.ಟಿ ಮತ್ತು ಕೆ.ಸೆಟ್ ಎರಡೂ ಉತ್ತೀರ್ಣರಾಗಿರುವರು.

ನಂತರ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದು ಕಾಗಿನೆಲೆಯ ಕನಕ ಪೀಠದ ಪ್ರಾಧಿಕಾರಿಗಳಾದ ಕನ್ನಡ ಪಂಡಿತ ಜಗನ್ನಾಥ ಗೇಣ್ಣೆನ್ನವರ ಇವರೊಡನೆ ವಿವಾಹವಾಗುತ್ತಾರೆ. ಪ್ರಖ್ಯಾತ ಎಂಬ ಮಗುವಿದೆ.ತಾವೇ ಸ್ವತಃ ಹಾಡು ಕಟ್ಟಿ ಬರೆದು ಹಾಡುವುದು ಅವರಿಗಿದ್ದ ಹವ್ಯಾಸ ಇಲ್ಲಿಯೂ ಗಂಡನ ಪ್ರೋತ್ಸಾಹದಿಂದ ಮುಂದುವರೆಯಿತು. ತಮ್ಮ ಬಿಡುವಿನ ಸಮಯದಲ್ಲಿ ಕೇಶಾಲಂಕಾರ ವಸ್ತ್ರಾಲಂಕಾರ, ಕಸೂತಿ, ಚಿತ್ರಕಲೆಯಲ್ಲಿ ತಮ್ಮನ್ನು ತೊಡಗಿಸಿಕೊಂಡಿರುವರು. ಚಂದ್ರಬಿಂಬ ಅಭಿನಂದನಾ ಗ್ರಂಥದಲ್ಲಿ ” ಬಸುರಿಗೇನು ಗೊತ್ತು ಬಂಜೆ ಸಂಕಟ”, ಕನಕದಾಸರ ಸಾಹಿತ್ಯದಲ್ಲಿ ಕೃಷಿ ಪದ್ಧತಿ(ತಂಬೆಲರು)., ಭಾಷೆಯನ್ನು ಸಮೃದ್ಧಗೊಳಿಸಿದ ತಂತ್ರಜ್ಞಾನ (ಕನ್ನಡ ಭಾಷೆ ಮತ್ತು ತಂತ್ರಜ್ಞಾನ). ಜನಪದ ಸಾಹಿತ್ಯದಲ್ಲಿ ತಾಯಿ-ತವರು.(ಆರೂಢ) ಇವರ ಪ್ರಮುಖ ಬರಹಗಳು. ಕನಕಾಂಬರ ಎಂಬ ತ್ರೈಮಾಸಿಕ ಪತ್ರಿಕೆ ಮತ್ತು ಶ್ರೀ ಸಂಪದ ಪತ್ರಿಕೆಯಲ್ಲಿ ಸಂಪಾದಕ ಸಮಿತಿಯ ಸದಸ್ಯರಾಗುವ ಜೊತೆಗೆ ಹಲವಾರು ಬರಹಗಳನ್ನು ಬರೆದಿರುವರು.

ಬೆಳಗಾವಿ ಜಿಲ್ಲೆಯ ಸ್ಥಳನಾಮಗಳು

ಬೆಳಗಾವಿ ಜಿಲ್ಲೆಯ ಸ್ಥಳನಾಮಗಳು’ ಎಂಬ ಸಂಶೋಧನಾ ಮಹಾಪ್ರಬಂಧ ಒಟ್ಟು 292 ಪುಟಗಳ ಹರವನ್ನು ಒಳಗೊಂಡಿದೆ. ಡಾ.ಧನವಂತ ಹಾಜವ್ವಗೋಳ ಅವರ ಮುನ್ನುಡಿಯ ಮಹತ್ವದ ಬಹುತೇಕ ಸಂಗತಿಗಳನ್ನು ನಾನಿಲ್ಲಿ ಉಲ್ಲೇಖಿಸಿರುವೆನು. ಡಾ. ಶೋಭಾ ತಪಸಿ ಅವರು ತುಂಬಾ ಶ್ರಮವಹಿಸಿ ಕ್ಷೇತ್ರ ಕಾರ್ಯವನ್ನು ಮಾಡಿ, ಈ ಮೌಲಿಕವಾದ ಮಹಾಪ್ರಬಂಧವನ್ನು ರಚಿಸಿದ್ದಾರೆ. `ಬೆಳಗಾವಿ ಜಿಲ್ಲೆಯ ಸ್ಥಳನಾಮಗಳು’ ಎಂಬ ಸಂಶೋಧನಾ ಮಹಾಪ್ರಬಂಧದಲ್ಲಿ ಒಟ್ಟು ಏಳು ಅಧ್ಯಾಯಗಳಿವೆ. ಮೊದಲ ಅಧ್ಯಾಯ ಅಧ್ಯಯನದ ಉದ್ದೇಶ, ಸ್ವರೂಪ ವ್ಯಾಪ್ತಿ ಎಂದಿದೆ. ಇದರಲ್ಲಿ ಈ ತಲೆಬರಹವನ್ನಿಟ್ಟುಕೊಂಡು ಅಧ್ಯಯನ ಮಾಡುವ ಅನಿವಾರ್ಯತೆಯನ್ನು ಇಲ್ಲಿ ಸ್ಪಷ್ಟಪಡಿಸಿದ್ದಾರೆ. ಈ ಮಹಾಪ್ರಬಂಧವನ್ನು ಸಿದ್ಧಗೊಳಿಸಲು ಹಲವು ಉದ್ದೇಶಗಳನ್ನು ಇಟ್ಟುಕೊಳ್ಳಲಾಗಿದೆ. ಈ ಜಿಲ್ಲೆಯ ಸ್ಥಳನಾಮಗಳಿಗೆ ಸಂಬಂಧಿಸಿದ ಸಾಹಿತ್ಯಾವಲೋಕನವನ್ನು ಇಲ್ಲಿ ಮಾಡಲಾಗಿದೆ. ಅಲ್ಲದೆ ಈ ಜಿಲ್ಲೆಯನ್ನು ಹೊರತುಪಡಿಸಿ ರಚನೆಯಾದ ಸ್ಥಳನಾಮಗಳಿಗೆ ಸಂಬಂಧಿಸಿದ ಗ್ರಂಥಗಳನ್ನೂ ಅವಲೋಕನ ಮಾಡಿದ್ದಾರೆ.

ಈ ಅಧ್ಯಯನ ಸ್ವರೂಪದಲ್ಲಿ ಕ್ಷೇತ್ರ ಕಾರ್ಯ ಮಾಡಿ ಮಾಹಿತಿಯನ್ನು ಸಂಗ್ರಹಿಸಿದ ವಿವರಗಳನ್ನು ಕೊಟ್ಟಿದ್ದಾರೆ. ಅದರೊಂದಿಗೆ ಉಪಲಬ್ಧವಾದ ಗ್ರಂಥಗಳು, ಶಾಸನಗಳು, ಪತ್ರಿಕೆಯಲ್ಲಿ ಪ್ರಕಟವಾದ ಬಿಡಿ ಲೇಖನಗಳು ಹಾಗೂ ಸ್ಥಳನಾಮಗಳಿಗೆ ಸಂಬಂಧಪಟ್ಟಂತೆ ಗ್ರಾಮ ಪಂಚಾಯಿತಿಗಳ ದಾಖಲಾತಿಗಳನ್ನು ಈ ಪ್ರಬಂಧ ರಚನೆಗೆ ಆಕರವಾಗಿ ಬಳಸಿಕೊಂಡಿರುವುದು ಅವರ ಕ್ಷೇತ್ರಕಾರ್ಯದ ಪರಿಶ್ರಮ ಕಾಣುತ್ತದೆ. ಇಲ್ಲಿಯ ಅಧ್ಯಾಯಗಳ ವಿಂಗಡನೆ ಆಯಾ ಅಧ್ಯಾಯಗಳು ಒಳಗೊಂಡ ವಿಷಯ ವಿವರಣೆಯನ್ನು ಸ್ಪಷ್ಟಪಡಿಸಿದ್ದಾರೆ. ಇದು ಬೆಳಗಾವಿ ಜಿಲ್ಲೆಯ ಸ್ಥಳನಾಮಗಳ ಅಧ್ಯಯನವಾದ್ದರಿಂದ ಈ ಜಿಲ್ಲೆಯ ವ್ಯಾಪ್ತಿಯನ್ನು ನಿಗದಿಪಡಿಸಿಕೊಂಡು ಅಧ್ಯಯನ ಮಾಡಿರುವುದು ಸಮಂಜಸವಾಗಿದೆ. ಈ ಮಹಾಪ್ರಬಂಧದ ಅನುಬಂಧದಲ್ಲಿ ನಕ್ಷೆಗಳು, ಪ್ರಶ್ನಾವಳಿ, ವಕ್ತøಗಳ ಅಕಾರಾದಿ ಪಟ್ಟಿ, ಸ್ಥಳನಾಮಗಳ ಅಕಾರಾದಿ ಸೂಚಿ, ಸಹಾಯಕ ಗ್ರಂಥಗಳ ಪಟ್ಟಿಗಳನ್ನು ಕೊಟ್ಟಿರುವುದು ಸೂಕ್ತವಾಗಿದೆ.

ಅಧ್ಯಾಯ ಎರಡರಲ್ಲಿ ಸ್ಥಳನಾಮಗಳ ಚಾರಿತ್ರಿಕ ನೆಲೆಯನ್ನು ಗುರುತಿಸಲಾಗಿದೆ. ಸ್ಥಳನಾಮಗಳ ಚಾರಿತ್ರಿಕ ಬದಲಾವಣೆ ಹಾಗೂ ಮಹತ್ವವನ್ನು ವಿವರಿಸಿದ್ದಾರೆ. ಇದು ಸ್ಥಳನಾಮಗಳ ಅಧ್ಯಯನಕ್ಕೆ ಒಂದು ವ್ಯವಸ್ಥಿತವಾದ ಪ್ರವೇಶಿಕೆಯನ್ನು ಒದಗಿಸಿದಂತಾಗಿದೆ. ನಾನಾ ಕಾರಣಗಳಿಂದ ಸ್ಥಳನಾಮಗಳು ಈ ರೀತಿಯ ಬದಲಾವಣೆಗಳಿಗೆ ಪ್ರಮುಖ ಕಾರಣಗಳನ್ನು ಪತ್ತೆ ಹಚ್ಚಿರುವುದು ಸಂಶೋಧಕರ ಆಸಕ್ತಿಗೆ ಸ್ಪಷ್ಟ ನಿದರ್ಶನವಾಗಿದೆ.

ಅಧ್ಯಾಯ ಮೂರು ಬೆಳಗಾವಿ ಜಿಲ್ಲೆಯ ಭೌಗೋಳಿಕ ಮತ್ತು ಸಾಂಸ್ಕೃತಿಕ ಹಿನ್ನೆಲೆಯನ್ನು ಒಳಗೊಂಡಿದೆ. ಬೆಳಗಾವಿ ಜಿಲ್ಲೆ ಜನಸಂಖ್ಯೆ ಮತ್ತು ವಿಸ್ತೀರ್ಣತೆಯ ದೃಷ್ಟಿಯಿಂದ ದೊಡ್ಡದಾದ ಜಿಲ್ಲೆಯಾಗಿದೆ. ಆಡಳಿತದ ವಿಭಾಗಗಳನ್ನು ಭೌಗೋಳಿಕವಾಗಿ ವಿಂಗಡಿಸಿ ಆಯಾ ವಿಂಗಡಣೆಯಲ್ಲಿ ಬರುವ ಹಳ್ಳಿಗಳ ಸ್ಥಳನಾಮಗಳನ್ನು ಅಧ್ಯಯನಕ್ಕೆ ಒಳಪಡಿಸಿದ್ದಾರೆ. ಬೆಳಗಾವಿ ಜಿಲ್ಲೆಯ ಹವಾಮಾನ, ಖನಿಜಸಂಪತ್ತು, ಜಲಸಂಪತ್ತು, ಸಸ್ಯವರ್ಗ, ರಾಜಕೀಯ, ಇತಿಹಾಸ, ಈ ಜಿಲ್ಲೆಯನ್ನಾಳಿದ ರಾಜ ಮನೆತನಗಳೂ, ಸಾಂಸ್ಕೃತಿಕ ಹಿನ್ನೆಲೆ, ಸಾಮಾಜಿಕ ವ್ಯವಸ್ಥೆ, ಜನಸಂಖ್ಯೆ, ಭಾಷೆ, ಸಾಹಿತ್ಯಿಕ ಕೊಡುಗೆ ಪ್ರೇಕ್ಷಣೀಯ ಸ್ಥಳಗಳು ಮುಂತಾದವುಗಳನ್ನು ವಿಶ್ಲೇಷಿಸಿರುವುದು ಮಹತ್ವದ್ದಾಗಿದೆ. ಅಲ್ಲದೆ ಈ ಭಾಗದಲ್ಲಿ ಪ್ರಚಲಿತವಿರುವ ಆಡು ನುಡಿಯ ಮಾದರಿಯನ್ನು ಒದಗಿಸಿರುವುದು ಸ್ಥಳನಾಮಗಳ ಅಧ್ಯಯನಕ್ಕೆ ಪೂರಕವಾಗಿದೆ.

ಅಧ್ಯಾಯ ನಾಲ್ಕರಲ್ಲಿ ಬೆಳಗಾವಿ ಜಿಲ್ಲೆಯ ಸ್ಥಳನಾಮಗಳ ವರ್ಗೀಕರಣ ವಿಶ್ಲೇಷಣೆ ಎಂಬುದಾಗಿದೆ. ಇದು ಈ ಮಹಾಪ್ರಬಂಧದ ಹೃದಯ ಭಾಗ ಎನ್ನಬಹುದು. ಬೆಳಗಾವಿ ಜಿಲ್ಲೆಯ ಸ್ಥಳನಾಮಗಳ ಸ್ವರೂಪವನ್ನು ಕೆಲವು ಘಟಕವನ್ನಾಗಿ ವಿಂಗಡಿಸಿ ವಿಶ್ಲೇಷಿಸಿದ್ದಾರೆ. ಒಂದು ಘಟಕವನ್ನು ಹೊಂದಿರುವ ಸ್ಥಳ ನಾಮಗಳು ಅದರಂತೆ ಎರಡು, ಮೂರು, ನಾಲ್ಕು, ಘಟಕಗಳನ್ನು ಹೊಂದಿರುವ ಸ್ಥಳನಾಮಗಳು ಎಂದು ಉದಾಹರಣೆಗಳೊಂದಿಗೆ ವಿವರಿಸಿರುವುದು ಉಪಯುಕ್ತವಾಗಿದೆ. ಇನ್ನು ಈ ಜಿಲ್ಲೆಯ ಸ್ಥಳನಾಮಗಳನ್ನು ಪ್ರಾಕೃತಿಕ ಸ್ಥಳನಾಮಗಳು ಹಾಗೂ ಸಾಂಸ್ಕೃತಿಕ ಸ್ಥಳನಾಮಗಳೆಂದು ವಿಂಗಡಿಸಿ ಅವುಗಳಲ್ಲಿ ಮತ್ತೆ ಉಪಶೀರ್ಷಿಕೆಗಳ ಅಡಿಯಲ್ಲಿ ವಿಂಗಡಿಸಿ ವಿಶ್ಲೇಷಣೆ ಮಾಡಿರುವುದು ಸಂಶೋಧಕರ ಸೂಕ್ಷ್ಮದೃಷ್ಟಿಗೆ ಸಾಕ್ಷಿಯಾಗಿದೆ.

ಅಧ್ಯಾಯ ಐದರಲ್ಲಿ ಬೆಳಗಾವಿ ಜಿಲ್ಲೆಯ ಸ್ಥಳನಾಮಗಳ ಭಾಷಿಕ ವಿಶ್ಲೇಷಣೆ ಇದೆ. ನಿರ್ದಿಷ್ಟ ವಾರ್ಗಿಕಗಳು, ಸಾಪೇಕ್ಷ ಸ್ಥಳನಾಮಗಳು ವಿಶೇಷಣಗಳನ್ನು ಹೊಂದಿದ ಸ್ಥಳನಾಮಗಳು, ಸ್ವರಾದಿ, ವ್ಯಂಜನಾದಿ ಸ್ಥಳನಾಮಗಳು, ಸ್ಥಳನಾಮಗಳ ಬರಹ ಮತ್ತು ಬಳಕೆ, ಸ್ಥಳನಾಮಗಳಲ್ಲಿ ಉಂಟಾಗುವ ಸಂಧಿಕಾರ್ಯಗಳು, ಸಮಾಜ ಸಂಬಂಧಿತ ಸ್ಥಳನಾಮಗಳು ಭಾಷಿಕ ನೆಲೆಯಲ್ಲಿ ವಿಂಗಡಿಸಿ ವಿಶ್ಲೇಷಿಸಿರುವುದು ಈ ಪ್ರಬಂಧದ ಮಹತ್ವದ ಭಾಗವಾಗಿದೆ.

ಬೆಳಗಾವಿ ಜಿಲ್ಲೆಯ ಸ್ಥಳನಾಮಗಳ ಜಾನಪದೀಯ ನೆಲೆಯನ್ನು ಅಧ್ಯಾಯ ಆರರಲ್ಲಿ ಗುರುತಿಸಿದ್ದಾರೆ. ಜಾನಪದ ಸಾಹಿತ್ಯ ಹಳ್ಳಿಗರ ಜೀವಾಳವಾಗಿದೆ. ಅದನ್ನು ಅವರ ನೆನಪಿನ ನಿಧಿ ಎಂದು ಹೇಳಲಾಗುತ್ತದೆ. ಜನಪದರು ತಮ್ಮ ಊರುಗಳಿಗೆ ಹೆಸರು ಬಂದಿರುವುದನ್ನು ವಿವಿಧ ನೆಲೆಗಳ ಹಿನ್ನೆಲೆಯಲ್ಲಿ ವಿವರಿಸುತ್ತಾರೆ. ಡಾ. ಶೋಭಾ ತಪಿಸಿಯವರು ಕ್ಷೇತ್ರ ಕಾರ್ಯದ ಸಂದರ್ಭದಲ್ಲಿ ಸಂಗ್ರಹಿಸಿದ ಜಾನಪದ ನೆಲೆಯ ಆಕರಗಳನ್ನು ಐತಿಹ್ಯಗಳು ಮತ್ತು ಸ್ಥಳನಾಮಗಳು, ಪುರಾಣಗಳು ಮತ್ತು ಸ್ಥಳನಾಮಗಳು, ಲಾವಣಿಗಳು ಮತ್ತು ಸ್ಥಳನಾಮಗಳು, ಜನಪದ ಹಾಡುಗಳು ಮತ್ತು ಸ್ಥಳನಾಮಗಳು, ಗಾದೆಗಳು ಮತ್ತು ಸ್ಥಳನಾಮಗಳು ಎಂದು ವಿಂಗಡಿಸಿ ಸ್ಥಳನಾಮಗಳನ್ನು ಗುರುತಿಸುವ ಪ್ರಯತ್ನ ಮಾಡಿರುವುದು ತಿಳಿಯುತ್ತದೆ. ಇಂಥ ಅಧ್ಯಯನಕ್ಕೆ ಜಾನಪದ ಅಕರಗಳನ್ನು ಪೂರಕವಾಗಿ ಬಳಕೆ ಮಾಡಿಕೊಂಡಿರುವುದು ಈ ಅಧ್ಯಯನಕ್ಕೆ ಒಂದು ಅಂತರ್ ಶಿಸ್ತಿಯತೆಯನ್ನು ಒದಗಿಸಿದಂತಾಗಿದೆ. ಈ ಪ್ರಬಂಧದ ಕೊನೆಯ ಅಧ್ಯಾಯ ಸಮಾರೋಪದಲ್ಲಿ ಇಡೀ ಅಧ್ಯಯನದ ಒಟ್ಟೂ ನೋಟವನ್ನು ಸಂಕ್ಷಿಪ್ತವಾಗಿ ಕೊಟ್ಟಿದ್ದಾರೆ. ಈ ಅಧ್ಯಯನದ ಫಲಿತಗಳನ್ನು ಪಟ್ಟಿ ಮಾಡಿ ಹೇಳಿದ್ದಾರೆ. ಇಡೀ ಪ್ರಬಂಧದ ಸಾರ್ಥಕತೆಯನ್ನು ಸಮಾರೋಪದಲ್ಲಿ ದಾಖಲುಗೊಳಿಸಿದ್ದಾರೆ. ಅಲ್ಲದೆ ಮುಂದಿನ ಅಧ್ಯಯನದ ಸುಳಿವುಗಳನ್ನು ಕೊಡುವುದರ ಮೂಲಕ ಹೆಚ್ಚಿನ ಸಂಶೋಧನೆಗೆ ಇರುವ ಅವಕಾಶಗಳನ್ನು ತೋರಿಸಿದ್ದಾರೆ.

ಅನುಬಂಧದಲ್ಲಿ ಬೆಳಗಾವಿ ಜಿಲ್ಲೆ ತಾಲ್ಲೂಕುಗಳ ನಕ್ಷೆಯನ್ನು ಒದಗಿಸಿದ್ದು ತುಂಬಾ ಪ್ರಯೋಜನಕಾರಿಯಾಗಿದೆ, ಪ್ರಶ್ನಾವಳಿ ಮತ್ತು ವಕ್ತೃಗಳ ಸೂಚಿಯನ್ನು ಒದಗಿಸಿರುವುದು ಅವರ ಕ್ಷೇತ್ರಕಾರ್ಯದ ಹರವನ್ನು ತಿಳಿಸುತ್ತವೆ. ಅಲ್ಲದೆ ಬೆಳಗಾವಿ ಜಿಲ್ಲೆಯ ಸ್ಥಳನಾಮಗಳ ಆಕಾರಾದಿ ಸೂಚಿಯನ್ನು ಕೊಟ್ಟಿದ್ದಾರೆ. ಸಹಾಯಕ ಗ್ರಂಥಗಳ ಪಟ್ಟಿಯನ್ನು ಒದಗಿಸಿದ್ದಾರೆ. ಕೊನೆಯಲ್ಲಿ ಬೆಳಗಾವಿ ಜಿಲ್ಲೆಯ ಸ್ಥಳನಾಮಗಳಿಗೆ ಸಂಬಂಧಿಸಿದ ಹಾಗೂ ಸಾಂಸ್ಕೃತಿಕ ಚರಿತ್ರೆಯನ್ನು ಸಾರಿ ಹೇಳುವ ಆಕರ್ಷಕ ಭಾವ ಚಿತ್ರಗಳನ್ನು ಕೊಡಲಾಗಿದೆ.ಅಷ್ಟೇ ಅಲ್ಲ ಕೃತಿಯ ಕುರಿತು ಡಾ.ಎಫ್.ಟಿ. ಹಳ್ಳಿಕೇರಿ, ಡಾ.ವಾಯ್.ಎಂ. ಯಾಕೊಳ್ಳಿ ಪ್ರೋ.ಜಿ.ವ್ಹಿ. ಮಾಳಗಿ, ಡಾ.ಶೋಭಾ ನಾಯಕ, ಡಾ. ರಮೇಶ ತೆವರಿ, ಪ್ರೋ.ಎಂ.ಬಿ.ಹೂಗಾರ ಇವರ ಅಭಿಪ್ರಾಯಗಳನ್ನು ಪ್ರಕಟಿಸಿರುವರು ಕೊನೆಯ ರಕ್ಷಾಪುಟದಲ್ಲಿ ಕೂಡ ಅಭಿಪ್ರಾಯಗಳ ಪ್ರಮುಖ ಅಂಶಗಳನ್ನು ಪ್ರಕಟಿಸಿ ರಕ್ಷಾಪುಟದ ಅಂದವನ್ನು ಹೆಚ್ಚಿಸಿರುವರು.

ಲೇಖಕಿಯ ಅಂತರಂಗ

ಬೆಳಗಾವಿ ಜಿಲ್ಲೆಯ ಸ್ಥಳನಾಮಗಳು ಅಧ್ಯಯನ ನನ್ನಲ್ಲಿ ಮೊಳಕೆಯೊಡಲು ಕಾರಣ ಮುಂಚಿನಿಂದಲೂ ಆಸಕ್ತಿ ವಿಷಯವಾಗಿತ್ತು. ಸೃಷ್ಟಿಯ ಪ್ರತಿಯೊಂದು ಅಂಶವು ಕೂಡ ಕುತೂಹಲಕರವಾದ ಸಂಗತಿಯನ್ನು ಹೊಂದಿರುತ್ತದೆ. ಅಂತಯೇ ಬಾಲ್ಯದಲ್ಲಿ ಸಾಮಾನ್ಯವಾಗಿ ಪ್ರತಿಯೊಬ್ಬರಿಗೂ ಆಕಾಶ, ಭೂಮಿ, ಸೂರ್ಯ, ಚಂದ್ರ ಮುಂತಾದುವುಗಳ ಕುರಿತು ಒಂದು ರೀತಿಯ ಕುತೂಹಲ ಇದ್ದೇ ಇರುತ್ತದೆ. ಹಾಗೆಯೇ ನನಗೂ ಕೂಡ ಬಸ್ಸಿನಲ್ಲಿ ಪ್ರಯಾಣ ಮಾಡುವ ಸಂದರ್ಭದಲ್ಲಿ ದಾರಿಯಲ್ಲಿಯ ಗಿಡಮರಗಳು ನಮ್ಮ ವಿರುದ್ಧ ದಿಕ್ಕಿನಲ್ಲಿ ಚಲಿಸುತ್ತಿರುವಂತೆ ಬಾಸವಾಗುತ್ತಿತ್ತು. ಗಿಡಗಳು ಹೀಗೇಕೆ ನಡೆದಾಡುತ್ತಿವೆ ಎಂದು ಪ್ರಶ್ನಿಸಿಕೊಳ್ಳುತ್ತಿದ್ದೆ. ಅದರಂತಯೇ ದಾರಿಯಲ್ಲಿ ಕಾಣುವ ಹಲವು ಊರುಗಳ ಹೆಸರನ್ನು ಕೇಳಿ ಆಶ್ಚರ್ಯವಾಗುತ್ತಿತ್ತು. ಆ ಊರು ಹೆಸರುಗಳ ಬಗೆಗೆ ಆಗಲೇ ನನ್ನಲ್ಲಿ ಆಸಕ್ತಿ ಮೂಡಿತ್ತು.

ಸ್ಥಳನಾಮಗಳ ವಿಕಾಸದ ಅಧ್ಯಯನ ಮಾಡುವುದೆಂದರೆ ಮಾನವನ ಇತಿಹಾಸದ ಹೆಜ್ಜೆ ಗುರುತುಗಳನ್ನು ಕಂಡುಕೊಳ್ಳುವುದು ಎಂದೇ ಹೇಳಬಹುದು. ಇಂಥ ಮಹತ್ವ ಪೂರ್ಣ ಅಧ್ಯಯನಕ್ಕೆ ಅವಕಾಶ ಕೊಟ್ಟ ಕರ್ನಾಟಕ ವಿಶ್ವ ವಿದ್ಯಾಲಯಕ್ಕೆ ಕೃತಜ್ಞತಾ ಪೂರ್ವಕ ನಮಸ್ಕಾರಗಳು.

ಹೀಗೆ ತಮ್ಮ ಎಲ್ಲ ಮನದಾಳದ ಮಾತುಗಳನ್ನು ಅವರು ನನ್ನ ಮಾತು ಸಂಗತಿಯಲ್ಲಿ ತಿಳಿಸಿ ಕೃತಿಗೆ ರಚನೆಗೆ ಸಹಕಾರಿಯಾದವರೆಲ್ಲರನ್ನೂ ನೆನೆದಿದ್ದಾರೆ. ಉತ್ತಮ ಗುಣಮಟ್ಟದಿಂದ ಮುದ್ರಿಸಿದ ಮುದ್ರಕರನ್ನು ಸ್ಮರಿಸಿರುವರು.ಒಂದು ಮಹತ್ವದ ಮೌಲಿಕ ಸಂಶೋಧನೆ ಮಾಡಿದ ಸಹೋದರಿಗೆ ಅಭಿನಂದಿಸುತ್ತ ಇನ್ನಷ್ಟು ಮಹತ್ವದ ಕೃತಿಗಳು ಡಾ.ಶೋಭಾ ಅವರಿಂದ ಮೂಡಿ ಬರಲಿ ಎಂದು ಆಶಿಸುವೆನು.


ವೈ.ಬಿ.ಕಡಕೋಳ
ಶಿಕ್ಷಕ ಸಂಪನ್ಮೂಲ ವ್ಯಕ್ತಿಗಳು

- Advertisement -

2 COMMENTS

LEAVE A REPLY

Please enter your comment!
Please enter your name here

- Advertisement -

Latest News

ಮೂಡಲಗಿ ತಾಲೂಕಾ ಪತ್ರಕರ್ತರ ಸಂಘದ ಕಚೇರಿ ಉದ್ಘಾಟನೆ

ಮೂಡಲಗಿ - ಹಲವಾರು ಯುವ ಪತ್ರಕರ್ತರ ಉತ್ಸಾಹ ಹಾಗೂ ಕಾರ್ಯಶೀಲತೆಯ ಪ್ರತೀಕವಾಗಿ ರಚನೆಗೊಂಡ ಮೂಡಲಗಿ ತಾಲೂಕಾ ಪತ್ರಕರ್ತರ ಸಂಘದ ಕಚೇರಿಯನ್ನು ಅರಭಾವಿ ಶಾಸಕ ಬಾಲಚಂದ್ರ ಜಾರಕಿಹೊಳಿಯವರ...
- Advertisement -

More Articles Like This

- Advertisement -
close
error: Content is protected !!