spot_img
spot_img

ಬಾಸಿಂಗ ತಯಾರಿಸುವ ಪಂಚಪ್ಪ ವಾಲಿ

Must Read

- Advertisement -

ಬಾಸಿಂಗ, ದಂಡೆ ಮದುವೆಯ ಸಂಕೇತ. ಮದುವೆಯಲ್ಲಿ ಮುಖ್ಯ ಪಾತ್ರ ವಹಿಸುವ ಬಾಸಿಂಗಕ್ಕೆ ಗೌರವ ಸ್ಥಾನವಿದೆ. ನಮ್ಮ ಸಂಸ್ಕೃತಿ ಸಂಪ್ರದಾಯ ಬಿಂಬಿಸುವ ಕಲಾತ್ಮಕ ಬಳುವಳಿ ಬಾಸಿಂಗ.ಬಾಸಿಂಗ ಎಂದರೆ ಆಭರಣ.ಮದುಮಕ್ಕಳ ಹಣೆಗೆ ತೊಡಿಸುವ ಆಭರಣ. ಈ ಬಾಸಿಂಗ ಮತ್ತು ದಂಡೆ ಕಟ್ಟುವುದರ ಹಿಂದೆ ಜವಾಬ್ದಾರಿಯ ಸಂಕೇತವಿದೆ.

ಇಲ್ಲಿಯವರೆಗೂ ಯಾವುದೇ ಗೊತ್ತು ಗುರಿಯಿಲ್ಲದೆ ಉಂಡಾಡಿಯಂತೆ ತಿರುಗಾಡಿದ ವಧುವರರಿಗೆ ಸಂಸಾರ ಎಂಬ ಗಂಟನ್ನು ತಲೆಯ ಮೇಲೆ ಹೊರಿಸುವುದರ ಸಂಕೇತ.ಹೆಣ್ಣು ಮಕ್ಕಳಿಗೆ ದಂಡೆ ಗಂಡಿಗೆ ಬಾಸಿಂಗ ಎನ್ನುವುದು ತಲತಲಾಂತರದಿಂದ ಬಂದಿರುವ ಸಂಪ್ರದಾಯ.

ಹಾಗಾದರೆ ಇಂದು ಬಾಸಿಂಗ ಕಟ್ಟುವವರು ಕಡಿಮೆಯಾಗುತ್ತಿರುವರು. ಇದರ ಹಿಂದೆ ಶ್ರಮದ ಕಲಾತ್ಮಕತೆ ಅಡಗಿದೆ. ಒಂದೊಂದು ಸಮುದಾಯದಲ್ಲೂ ಒಂದೊಂದು ಬಗೆಯ ವಿಶಿಷ್ಟ ವಿನ್ಯಾಸದ ಬಾಸಿಂಗ ಬಳಕೆಯಲ್ಲಿದೆ. ಮುನವಳ್ಳಿಯಲ್ಲಿ ಪಂಚಪ್ಪ ಬಸಲಿಂಗಪ್ಪ ವಾಲಿ ಎಂಬ ೬೪ ವರ್ಷ ವಯಸ್ಸಿನ ಹಿರಿಯರು ತಮ್ಮ ಮನೆಯಲ್ಲಿ ಬಾಸಿಂಗ ತಯಾರಿಸುತ್ತಿರುವುದನ್ನು ಶುಕ್ರವಾರ ಅವರ ಮನೆಗೆ ಹೋದಾಗ ಗಮನಿಸಿದೆ.ಅದೂ ಅವರು ಕಾಮಣ್ಣನಿಗೆ ಬಾಸಿಂಗ ತಯಾರಿಸುತ್ತಿದ್ದರು.

- Advertisement -

ಹೋಳಿ ಹಬ್ಬ ಬಂದಾಗ ಕಾಮಣ್ಣನಿಗೆ ಅರ್ಪಿಸಲು ಮತ್ತು ಮನೆಯ ಮುಂದೆ ಅಗ್ನಿಸ್ಪರ್ಶ ಮಾಡಲಿರುವ ಮನೆ ಮನೆಗಳ ಕಾಮಣ್ಣನಿಗೆ ಇವರು ಬಾಸಿಂಗ ತಯಾರಿಸಿಕೊಡುವರು. ಇವರ ಮನೆಗೆ ಬಂದು ಬಾಸಿಂಗ ತಗೆದುಕೊಂಡು ಹೋಗುತ್ತಿರುವುದನ್ನು ಗಮನಿಸಿ ಅವರ ಈ ಬಾಸಿಂಗ ಕಲೆ ಬೆಳೆದು ಬಂದು ಬಗೆಯನ್ನು ಕುರಿತು ತಿಳಿದುಕೊಂಡೆನು.

ಅವರ ಆ ಕಲಾತ್ಮಕತೆಯ ಹಿಂದಿನ ಶಕ್ತಿ ಅವರ ಹಿರಿಯರು ತಂದೆ ಅಜ್ಜನ ಕಾಲದಿಂದಲೂ ಈ ಕಲೆಯನ್ನು ಮುಂದುವರೆಸಿಕೊಂಡು ಬಂದಿರುವುದಾಗಿ ಹೇಳುತ್ತ ಬಾಸಿಂಗ ತಯಾರಿಕೆಗೆ ಬಹಳ ಸಮಯ ಹಿಡಿಯುತ್ತದೆ. ಗಂಡಿನ ಕಡೆಯವರು ಕನಿಷ್ಠ ಹದಿನೈದು ದಿನಗಳ ಮುಂಚಿತವಾಗಿ ಬಾಸಿಂಗ ತಯಾರಿಸಲು ತಿಳಿಸಿದರೆ ಅನುಕೂಲ ಎನ್ನುವ ಇವರ ಮುಂದೆ ಬೆಂಡಿನ ಕಟ್ಟಿಗೆಯ ತುಂಡುಗಳು. ಮುತ್ತು.ಪೆವಿಕಾಲ್.ದಾರ.ಕತ್ತರಿ.ಬಣ್ಣದ ಹಾಳೆ.ಸುನೇರಿ ಹಾಳೆ.,ಕನ್ನಡಿ ಹರಳು.ಟಿಕಳಿ.ವಿವಿಧ ಬಗೆಯ ಚಿತ್ರಗಳನ್ನು ಇಟ್ಟುಕೊಂಡು ಒಂದೊಂದಾಗಿ ಜೋಡಿಸುತ್ತ ಕುಳಿತಿರುವುದನ್ನು ಕಂಡಾಗ ಇವುಗಳನ್ನು ಎಲ್ಲಿಂದ ತರುತ್ತೀರಿ ಎಂದು ಕೇಳಿದೆ.

- Advertisement -

ಬೆಂಡಿನ ಕಟ್ಟಿಗೆಯನ್ನು ಕಲಘಟಗಿ ಸುತ್ತ ಮುತ್ತಲಿನ ಪ್ರದೇಶದಿಂದ ತರುವುದಾಗಿಯೂ ಮುತ್ತುಗಳನ್ನು ಬೆಳಗಾವಿಯಿಂದ ಉಳಿದ ಸಾಮಗ್ರಿಗಳನ್ನು ಮುನವಳ್ಳಿಯಲ್ಲಿಯೇ ತಂದಿಟ್ಟುಕೊಳ್ಳುವುದಾಗಿ ತಿಳಿಸಿದರು. ಇವುಗಳಲ್ಲಿ ಗಣಪತಿ, ಈಶ್ವರ, ಬಸವಣ್ಣ, ದೇವರಗುಡಿ, ಕುಂಭ, ಹೂವು, ಕಳಸ, ಪ್ರಾಣಿಪಕ್ಷಿ ಕೂಡ ಅಲಂಕಾರಕ್ಕೆ ಬಳಕೆ ಮಾಡುತ್ತಾರೆ.

ಈ ಬಾಸಿಂಗದಲ್ಲಿ ಹಲವು ವಿಧಗಳು. ಅವುಗಳಲ್ಲಿ ಬುಟ್ಟಿ ಬಾಸಿಂಗ.ಮಹಾರಾಜ ಬಾಸಿಂಗ.ಕಿರೀಟ ಬಾಸಿಂಗ. ಎಲೆ ಬಾಸಿಂಗ.ಕಮಾನು ಬಾಸಿಂಗ. ದೇವಾಲಯದ ಬಾಸಿಂಗ(ದೇವತೆಗಳ ಮೂರ್ತಿಗಳಿಗೆ).ಸಾದಾ ಬಾಸಿಂಗ.ಹೀಗೆ ವಿವಿಧ ಬಾಸಿಂಗಗಳನ್ನು ತಯಾರಿಸುವುದಾಗಿ ತಿಳಿಸಿದರು. ಬಾಸಿಂಗಗಳ ವಿಧಗಳಿಗೆ ತಕ್ಕಂತೆ ಹಣವನ್ನು ತಿಳಿಸಿದರು.

ಇವರಿಗೆ ನಾಲ್ಕು ಜನ ಮಕ್ಕಳು ಇಬ್ಬರು ಹೆಣ್ಣು ಮಕ್ಕಳು ಇಬ್ಬರು ಗಂಡು ಮಕ್ಕಳು. ಇವರೂ ಕೂಡ ತಂದೆಯ ಕಲೆಯಲ್ಲಿ ಕೈಜೋಡಿಸುವುದಾಗಿ ತಿಳಿಸಿದರು. ಇವರ ಮನೆತನಕ್ಕೆ ಸುತ್ತಮುತ್ತಲಿನ ಇಪ್ಪತ್ತಕ್ಕೂ ಹೆಚ್ಚು ಹಳ್ಳಿಗಳ ಜನ ಬಾಸಿಂಗಕ್ಕೆ ಬೇಡಿಕೆ ನೀಡುತ್ತ ಬಂದಿದ್ದು ಕಾಯಂ ಕೆಲವು ಕುಟುಂಬಗಳು ಇವರ ಮನೆತನಕ್ಕೆ ಬಾಸಿಂಗದ ಬೇಡಿಕೆ ಸಲ್ಲಿಸುತ್ತವೆಯಂತೆ ಅಷ್ಟೇ ಅಲ್ಲ ಕೆಲವು ದೇವತೆಗಳ ದೇವಾಲಯಗಳಿಗೆ ಉದಾಹರಣೆಗೆ ದ್ಯಾಮವ್ವ ದುರ್ಗಾದೇವಿಯರ ದೇವಾಲಯಗಳಿಗೂ ಕೂಡ ಬಾಸಿಂಗ ಮಾಡಿ ಕೊಡುತ್ತಾರಂತೆ ಅವುಗಳಲ್ಲಿ ಪ್ರಮುಖವಾಗಿ ಸೊಗಲದ ದುರಗಮ್ಮ ದೇವಾಲಯ.ಜಕಬಾಳ.ಚುಂಚನೂರ.ಹಳ್ಳೂರು.ನರಗುಂದ ಹತ್ತಿರ ಸೊಟಕನಾಳ ಹೀಗೆ ದೇವಾಲಯಗಳಿಗೂ ಇವರು ಬಾಸಿಂಗ ತಯಾರಿಸಿ ನೀಡುತ್ತಾರಂತೆ.ಈ ಕಲೆ ತಮ್ಮ ಪೂರ್ವಜರಿಂದ ಬಂದ ಬಳುವಳಿ.

ಮದುವೆಯ ದಿನದಂದು ಅಕ್ಷತೆ ವೇಳೆಯಲ್ಲಿ ಹಸೆಮಣೆಯಲ್ಲಿ ಕುಳಿತುಕೊಳ್ಳುವ ವರನಿಗೆ ಬಾಸಿಂಗವನ್ನು ವಧುವಿಗೆ ದಂಡೆಯನ್ನು ಕಟ್ಟುವ ಸಂಪ್ರದಾಯ ಇಂದಿಗೂ ಇದೆ.ವರನ ಮಾವಂದಿರು ಅಥವ ಬಾಸಿಂಗ ಬಲ ಬಂದಿರುವ ಮಾವಂದಿರು ವರನಿಗೆ ಬಾಸಿಂಗ ಧಾರಣೆ ಮಾಡುತ್ತಾರೆ.ಈ ರೀತಿ ಬಾಸಿಂಗ ಮತ್ತು ದಂಡೆಯ ಧಾರಣೆಯ ನಂತರದ ಐದು ದಿನಗಳ ತರುವಾಯ ಬಾಸಿಂಗ ವಿಸರ್ಜನೆ ಜರಗುತ್ತದೆ.ಹಳ್ಳಿಗಳಲ್ಲಿ ಇವುಗಳನ್ನು ಪೂಜಿಸಿ ಮನೆಮಂದಿಯೊಂದಿಗೆ ನವ ದಂಪತಿಗಳು ತೀರ್ಥಕ್ಷೇತ್ರಗಳಿಗೆ ತೆರಳಿ ನದಿಯಲ್ಲಿ ಬಿಡುವರು.

ಇಂತಹ ಬಾಸಿಂಗ ತಯಾರಿಕೆಯೂ ಕೂಡ ಕಷ್ಟಕರ.ದಿಡೀರನೇ ಬಂದು ಬಾಸಿಂಗ ಮಾಡಿ ಕೊಡಿ ಎಂದಾಗ ಕಲಾತ್ಮಕತೆಗೆ ಬೇಕಾದ ಸಮಯ ಸಾಲದೇ ತಯಾರಿಸಿಕೊಡಬೇಕಾಗುತ್ತದೆ. ಇಂತಹ ಸಂದರ್ಭಗಳಲ್ಲಿ ಕಲೆಯು ಮಹತ್ವವಾಗದು. ಇತ್ತೀಚಿನ ದಿನಗಳಲ್ಲಿ ರೆಡಿಮೇಡ್ ಬಾಸಿಂಗ ಸಿಗುತ್ತಿರುವ ಕಾರಣ ಮುಂಚಿನ ದಿನಗಳಂತೆ ಹದಿನೈದು ಇಪ್ಪತ್ತು ದಿನಗಳ ಮೊದಲು ಬಾಸಿಂಗ ಮಾಡಿಕೊಡಲು ಹೇಳುವ ಕುಟುಂಬಗಳು ಈಗ ಇಲ್ಲವಾಗಿವೆ.ಆಧುನಿಕತೆಗೆ ಬಾಸಿಂಗ ಉದ್ಯೋಗವೂ ಕೂಡ ಕ್ಷೀಣಿಸುತ್ತಿದೆ. ವಧುವರರು ತಮ್ಮದೇ ಆದ ಉಡುಗೆ ತೊಡುಗೆ ಅಲಂಕಾರದ ಮೂಲಕ ಸಭಿಕರ ಗಮನ ಸೆಳೆಯುವಂತೆಯೇ ಕಲಾತ್ಮಕ ಬಾಸಿಂಗ ಕೂಡ ಧರಿಸುವುದು ಸೂಕ್ತ.ಇತ್ತೀಚಿನ ದಿನಗಳಲ್ಲಿ ಶಾಸ್ತ್ರ ಸಂಪ್ರದಾಯಗಳು ಕೂಡ ಮರೆಯಾಗುತ್ತಿರುವುದರಿಂದ ಬಾಸಿಂಗ ಎಂದರೆ ಎಷ್ಟೋ ಜನರಿಗೆ ಗೊತ್ತಿಲ್ಲದ ಪರಿಸ್ಥಿತಿ ಕೂಡ ಎದುರಾಗಿದೆ.

ವಿಶಿಷ್ಟ ಜಾತಿಯ ಬೆಂಡಿನ ಗಿಡಗಳು ಕೆಸರಿರುವ ಸ್ಥಳದಲ್ಲಿ ಬೆಳೆಯುತ್ತವೆ.ಅದು ಕೂಡ ಮಲೆನಾಡಿನ ಸ್ಥಳಗಳಲ್ಲಿ ಇವು ಲಭ್ಯ. ಇವುಗಳನ್ನು ತಂದು ಒಣಗಿಸಿ.ತಮಗೆ ಬೇಕಾದ ಆಕೃತಿಗೆ ಹೊಂದಿಸಿಕೊಳ್ಳುವಲ್ಲಿ ಪರಿಶ್ರಮವಿದೆ. ಅಂತಹುದರಲ್ಲಿ ಬಾಸಿಂಗಕ್ಕೆ ಬೇಡಿಕೆ ಕುಸಿತವಾದರೆ ಕಲೆಗಾರನ ಆದಾಯಕ್ಕೂ ಹೊಡೆತ ಬೀಳುತ್ತದೆ. ಇಂದಿಗೂ ಗ್ರಾಮೀಣ ಪ್ರದೇಶಗಳಲ್ಲಿ ಬಾಸಿಂಗ ತಯಾರಕರು ಉಳಿದುಕೊಂಡು ಬಂದಿದ್ದಾರೆಂದರೆ ಗ್ರಾಮೀಣ ಸ್ಥಳಗಳಲ್ಲಿ ಬಾಸಿಂಗಕ್ಕೆ ಬೇಡಿಕೆ ಇದೆ ಎಂದರ್ಥ. ಇದು ಇನ್ನೂ ಜೀವಂತವಾಗಿರಬೇಕಾದರೆ ನಮ್ಮ ದೇಶದ ಸಂಪ್ರದಾಯ ಆಚರಣೆ ಶಾಸ್ತ್ರಗಳು ಹೆಚ್ಚು ಆಚರಣೆಗೆ ಒಳಪಡಬೇಕು. ಅಂದಾಗ ಗ್ರಾಮೀಣ ಕಲೆಗಳು ಮತ್ತೆ ಚೇತರಿಕೆ ಕಾಣಲು ಸಾಧ್ಯ.

ಈ ದಿಸೆಯಲ್ಲಿ ಹಿರಿಯರಾದ ಪಂಚಪ್ಪ ಬಸಲಿಂಗಪ್ಪ ವಾಲಿಯವರು ತಮ್ಮ ಕಲೆಯನ್ನು ಜೀವಂತ ಉಳಿಸಿಕೊಂಡು ಮಕ್ಕಳಿಗೂ ಕಲಿಸುತ್ತಿರುವುದು ಅಭಿನಂದನಾರ್ಹ. ಇಂತಹ ಕಲಾವಿದರು ಸಮಾಜದ ಮುನ್ನಲೆಗೆ ಬರುವಂತಾಗಬೇಕು. ಅವರ ಈ ಹಿರಿಯರ ಮೂಲಕ ಬಂದ ಬಾಸಿಂಗ ಕಟ್ಟುವ ಕಲೆ ಮುಂದಿನ ಪೀಳಿಗೆಗೂ ಉಳಿದುಕೊಂಡು ಬರುವಂತಾಗಲಿ ಎಂದು ಆಶಿಸುವೆ.


ವೈ.ಬಿ.ಕಡಕೋಳ
ಶಿಕ್ಷಕ ಸಂಪನ್ಮೂಲ ವ್ಯಕ್ತಿಗಳು
ಮಾರುತಿ ಬಡಾವಣೆ ಸಿಂದೋಗಿ ಕ್ರಾಸ್
ಮುನವಳ್ಳಿ ೫೯೧೧೧೭
ಸವದತ್ತಿ ತಾಲೂಕು ಬೆಳಗಾವಿ ಜಿಲ್ಲೆ

- Advertisement -
- Advertisement -

Latest News

ದಿನಕ್ಕೊಬ್ಬ ಶರಣ ಮಾಲಿಕೆ

ಕಿನ್ನರಿ ಬ್ರಹ್ಮಯ್ಯ ........................................... 12ನೇ ಶತಮಾನದ ಬಸವಾದಿ ಶಿವಶರಣರ ಕೀರ್ತಿವಾರ್ತೆಯನ್ನು ಕೇಳಿ ಪ್ರಭಾವಿತರಾಗಿ ನಾಡು ಹೊರನಾಡಿನಿಂದ ಅನೇಕ ಜನ ಶರಣರು ಕಲ್ಯಾಣಕ್ಕೆ ಬರಹತ್ತಿದರು. ಬಸವಣ್ಣನವರ ಸಮಕಾಲೀನರಾಗಿದ್ದ ಶರಣರಾದ ಗುಜರಾತದಿಂದ...
- Advertisement -

More Articles Like This

- Advertisement -
close
error: Content is protected !!
Join WhatsApp Group