spot_img
spot_img

ದೇವರ ದರ್ಶನದಿಂದ ಶಾಂತಿ, ಅಂತಃಶಕ್ತಿ ಸಾಧಕರ ದರ್ಶನದಿಂದ ಸ್ಫೂರ್ತಿ, ಬಾಳಿಗೆ ದೀಪ್ತಿ…

Must Read

- Advertisement -

ಹೀಗೆ ಅನ್ನಿಸಲು ಕಾರಣವಾಗಿದ್ದು ಬೀದರಿನ ಸಮಾಜಮುಖಿ ಚೇತನ ಬಸವಕುಮಾರ್ ಪಾಟೀಲರು. ಕಳೆದ 4-5 ವರ್ಷಗಳಿಂದ ವಾಟ್ಸಾಪ್ ಬಳಗಗಳಿಂದ ಪರಿಚಿತರಾಗಿ, ಆತ್ಮೀಯರಾಗಿರುವ ಪಾಟೀಲರ ವ್ಯಕ್ತಿತ್ವದ ವಿರಾಟ್ ದರ್ಶನವಾಗಿದ್ದು ಕಳೆದ ವರ್ಷ ಮಾರ್ಚನಲ್ಲಿ. ಡಾ.ಎಂ.ಜಿ.ದೇಶಪಾಂಡೆಯವರ ಪ್ರತಿಷ್ಠಾನದ ಪ್ರಶಸ್ತಿ ಸ್ವೀಕರಿಸಲು ಬೀದರಿಗೆ ಹೋದಾಗ.

ಅಂದು ಬಸವಕುಮಾರ್ ಪಾಟೀಲರು ನೀಡಿದ ಆತಿಥ್ಯ, ತೋರಿದ ಅಕ್ಕರೆ-ಕಕ್ಕುಲತೆ ಸ್ನೇಹಬಂಧವನ್ನು ಮತ್ತಷ್ಟು ಸದೃಢಗೊಳಿಸಿತು. ಅಲ್ಲಿ ಅವರ ಸಮಾಜಮುಖಿ ಕೆಲಸಗಳು, ಜೀವನೋತ್ಸಾಹ, ಸೇವಾ ನಿಸ್ಪೃಹತೆ ಮತ್ತು ಕಾರ್ಯ ತತ್ಪರತೆಯ ವಿಸ್ತಾರವನ್ನು ಕಣ್ಣಾರೆಕಂಡಾಗ ಅವರ ಮೇಲಿನ ಅಭಿಮಾನ ನೂರ್ಮಡಿಯಾಯಿತು. ’ಮಕ್ಕಳ ಮಹಾಮನೆ’ಯನ್ನು ಕಟ್ಟಿ, ಅದರ ಮೂಲಕ 60 ಕ್ಕೂ ಹೆಚ್ಚು ಪ್ರತಿಭಾವಂತ ಹೆಣ್ಣುಮಕ್ಕಳಿಗೆ ಊಟ, ವಸತಿಯೊಂದಿಗೆ ಪದವಿಪೂರ್ವ ವಿದ್ಯಾಭ್ಯಾಸಕ್ಕೆ ನೆರವಾಗುತ್ತ, ಅವರಿಗೆ ವೈದ್ಯಕೀಯ ಮತ್ತು ತಾಂತ್ರಿಕ ಶಿಕ್ಷಣಕ್ಕೆ ಸಹಾಯ ಮಾಡುತ್ತಿರುವುದು ಅಭಿನಂದನೀಯ. ಜೊತೆಗೆ ಜಿಲ್ಲೆಯಾದ್ಯಂತ ಸಂಚರಿಸುತ್ತ, ಫ್ರೌಡಶಾಲಾ ಮಕ್ಕಳೊಂದಿಗೆ ಕಾರ್ಯಾಗಾರಗಳ ಮೂಲಕ ಅವರ ಶೈಕ್ಷಣಿಕ ಪ್ರಗತಿಗೆ ಸಹಕರಿಸುತ್ತಿರುವುದು ಶ್ಲಾಘನೀಯ. ಅವರ ಈ ಕಾರ್ಯಕ್ಷಮತೆಯಿಂದ ಕಡೆಯ ಸ್ಥಾನದಲ್ಲಿದ್ದ ಬೀದರ್ ಜಿಲ್ಲೆ, ಫಲಿತಾಂಶದಲ್ಲಿ 10-12 ಸ್ಥಾನ ಮೇಲೇರಿದೆ.

ಇಂತಿಪ್ಪ ನಮ್ಮ ಪಾಟೀಲರು ಕಳೆದ 3-4 ತಿಂಗಳಿಂದ ’ರಮೇಶ್ ಸಾರ್.. ನಿಮ ಉತ್ತರಕನ್ನಡ ಜಿಲ್ಲೆಯ ಪದ್ಮಶ್ರೀ ಪುರಸ್ಕೃತರನ್ನು ಭೇಟಿಯಾಗಿ, ಅವರ ಮನೆಯಲ್ಲೆ ಅವರನ್ನು ಸತ್ಕರಿಸಿ ಬರೋಣ’ ಎಂದು ಹೇಳುತ್ತಲೇ ಇದ್ದರು. ಆ ಧನ್ಯಮಿಲನಕ್ಕೆ ಕಳೆದವಾರ ಕಾಲ ಕೂಡಿ ಬಂತು. ಉಳವಿಗೆ ಶರಣ ಚಿಂತನ ಸಮಾವೇಶಕ್ಕೆ ಆಗಮಿಸಿದ್ದ ಪಾಟೀಲರನ್ನು, ಉಳವಿಯಿಂದ ಕೈಗಾದ ನನ್ನ ಗುಬ್ಬಿಗೂಡಿಗೆ ಕರೆದುಕೊಂಡು ಬಂದು ಅಭಿಮಾನದಿಂದ ಸನ್ಮಾನಿಸಿ, ಇಲ್ಲಿಂದ ರಾಷ್ಟ್ರಪ್ರಶಸ್ತಿ ವಿಜೇತ ಸಾಧಕಿಯರ ಮನೆಗೆ ತೆರಳಿ ಅವರನ್ನು ಸತ್ಕರಿಸಿ, ಸನ್ಮಾನಿಸಿ, ಅವರಿಂದ ಅವರ ಯಶೋಗಾಥೆಯ ವಿವರಗಳನ್ನು ಕೇಳಿ, ಕಣ್ತುಂಬಿಕೊಂಡು ಬಂದೆವು.

- Advertisement -

ಮೊದಲು ಅಂಕೋಲಾದ ಬಳಿ ಇರುವ ಶ್ರೀಮತಿ ಸುಕ್ರಿಬೊಮ್ಮಗೌಡ ಅವರ ಮನೆಗೆ ತೆರಳಿ 86 ವರ್ಷದ ಮಹಾನ್ ಚೇತನದ ಕಾಲಿಗೆರಗಿ ಸಂಪ್ರೀತರಾದೆವು. ಸಾವಿರ ಸಾವಿರ ಜಾನಪದ ಹಾಡುಗಳನ್ನು ಹಾಡುತ್ತಲೇ ಬದುಕಿಗೆ ಬೆರಗನ್ನೂ, ಹಾಲಕ್ಕಿ ಜನಾಂಗಕ್ಕೇ ಮಹಾ ಮೆರುಗನ್ನು ನೀಡಿದ ಅಪ್ರತಿಮ ಸಾಧಕಿ ಈ ಸುಕ್ರಜ್ಜಿ. ಅವರ ನೆನಪಿನ ಶಕ್ತಿ, ಜೀವನೋತ್ಸಾಹ ಅಗಾಧವಾದದ್ದು, ಅಮೋಘವಾದದ್ದು. 20 ವರ್ಷದ ಹಿಂದೆ ನಮ್ಮ ಕೈಗಾ ಸಹ್ಯಾದ್ರಿ ಸಂಘದ ಪ್ರತಿಷ್ಠಿತ ’ಅಡಿಗ ಪ್ರಶಸ್ತಿ’ ನೀಡಿ ಪುರಸ್ಕರಿಸಿದಾಗ ಅಜ್ಜಿಯನ್ನು ಕರೆತರಲು ನಾನೆ ಹೋಗಿದ್ದೆ. ಇಂದಿಗೂ ನನ್ನ ಮುಖವನ್ನು ನೆನಪಿನಲ್ಲಿಟ್ಟುಕೊಂಡಿರುವ ಸುಕ್ರಜ್ಜಿಯ ಸ್ಮರಣ ಶಕ್ತಿ ಅಸಾಮಾನ್ಯವಾದುದು. ಜಾನಪದ ಕ್ಷೇತ್ರದ ಅದ್ಭುತ ಸಾಧನೆಗಾಗಿ ಭಾರತ ಸರ್ಕಾರದ ’ಪದ್ಮಶ್ರೀ’ ಪಡೆದಿರುವ ಸುಕ್ರಜ್ಜಿಯ ಬದುಕೇ ಮೇರು ಸಾಧನೆಯ ಮಹಾ ನಿದರ್ಶನ. ಇಷ್ಟಾದರೂ ಅಜ್ಜಿಯ ಜೀವನಮಟ್ಟ ಸುಧಾರಿಸದಿರುವುದು ಖೇದನೀಯ. ಅಜ್ಜಿಗೆ ಮತ್ತಷ್ಟು ಸುಧಾರಿತ ಸುಭದ್ರ ಬದುಕು ಕಟ್ಟಿಕೊಡುವಲ್ಲಿ ಮತ್ತು ಅಜ್ಜಿಯ ಪ್ರಶಸ್ತಿ ಪುರಸ್ಕಾರಗಳನ್ನು ಸಂರಕ್ಷಿಸಿಡುವಲ್ಲಿ ಸಮಾಜ, ಸಂಘಸಂಸ್ಥೆಗಳು, ಜನಪ್ರತಿನಿಧಿಗಳು ಹಾಗೂ ಜಿಲ್ಲಾಡಳಿತ ಗಮನ ಹರಿಸಬೇಕಿದೆ. ಇದು ಸುಕ್ರಜ್ಜಿಯ ಸಮಸ್ತ ಅಭಿಮಾನಿಗಳ ವಿನಂತಿಯೂ ಹೌದು. ಒತ್ತಾಯವೂ ಹೌದು.

ನಂತರ ಯಲ್ಲಾಪುರದ ಬಳಿ ಇರುವ ಶ್ರೀಮತಿ ತುಳಸಿಗೌಡ ಅವರ ಸ್ವಗೃಹಕೆ ತೆರಳಿ, 84 ವರ್ಷದ ಆ ಮಹಾನ್ ವೃಕ್ಷಮಾತೆಯ ಚರಣಗಳಿಗೆ ನೊಸಲೊತ್ತಿ ಧನ್ಯರಾದೆವು. ಏನೊಂದೂ ಫಲಾಪೇಕ್ಷೆಯಿಲ್ಲದೆ, ಯಾರಿಂದಲೂ ಯಾವ ಹೊಗಳಿಕೆ, ಹೆಸರುಗಳ ನಿರೀಕ್ಷೆಗಳಿಲ್ಲದೆ ತಮ್ಮ ಇಡೀ ಜೀವಮಾನವನ್ನು ಮರ-ಗಿಡಗಳನು ಬೆಳೆಸುವುದಕ್ಕೇ ಮೀಸಲಿಟ್ಟ, ಲಕ್ಷಾಂತರ ವೃಕ್ಷಗಳಿಗೆ ಅಕ್ಷರಶಃ ಮಾತೆಯಾದ ಮಹಾ ಚೇತನ ಶ್ರೀಮತಿ ತುಳಸಿಗೌಡ ಅವರು. ಮನೆ-ಮಕ್ಕಳು ಎಲ್ಲ ಜವಾಬ್ಧಾರಿಗಳ ಜೊತೆಗೆ ವೃಕ್ಷ ಪೋಷಣೆ, ಸಂರಕ್ಷಣೆಯನ್ನು ಬದುಕಿನ ಅವಿಭಾಜ್ಯ ಅಂಗವಾಗಿಸಿಕೊಂಡ ಮಹಾತಾಯಿ. ಪರಿಸರ ಕ್ಷೇತ್ರದ ಈ ಅಪ್ರತಿಮ ಸೇವೆಗೆ ಭಾರತ ಸರ್ಕಾರದ ಅತ್ಯುನ್ನತ ಪ್ರಶಸ್ತಿಯಾದ ’ಪದ್ಮಶ್ರೀ’ಯನ್ನು ಮುಡಿಗೇರಿಸಿಕೊಂಡು, ಹುಟ್ಟೂರಿನ ಹೆಸರನ್ನು ಚಿರಸ್ಥಾಯಿಯಾಗಿಸಿ, ನಾಡಿಗೆ ಕೀರ್ತಿತಂದ ನಿಸ್ವಾರ್ಥ ಸಾಧಕಿ. ಇಂತಹ ತೆರೆಮರೆಯ ಸ್ವಾತಿಮುತ್ತುಗಳನ್ನು, ಎಲೆಮರೆ ಕಾಯಿಯಂತಹ ಉತ್ಕೃಷ್ಟ ಸಾಧಕಿಯರನ್ನು ಹೆಕ್ಕಿ ತೆಗೆದು, ಗುರುತಿಸಿ ಪುರಸ್ಕರಿಸಿ ಸನ್ಮಾನಿಸಿ ಕೃತಾರ್ಥವಾದ ಕೇಂದ್ರ ಸರ್ಕಾರಕ್ಕೆ ಸಮಸ್ತ ರಾಷ್ಟ್ರದ ಪರವಾಗಿ ಕೋಟಿ ಕೋಟಿ ವಂದನೆ.

ಸಾಧಕರ ದರ್ಶನದಲ್ಲಿ ಜೊತೆಯಾಗಿ, ಇಡೀ ದಿನ ನಮ್ಮೊಂದಿಗೆ ಹೆಜ್ಜೆಗೆ ಹೆಜ್ಜೆಯಾಗಿ ನಿಂತ ನಮ್ಮ ನಿವೃತ್ತ ಸಹೋದ್ಯೋಗಿ ಮಿತ್ರರೂ, ಪರಮಾಪ್ತರೂ ಆದ  ನಾರಾಯಣ್ ನಾಯಕ್, ಅಂಕೋಲ. ಇವರಿಗೆ ನಾವು ಆಭಾರಿ. ಈ ಧನ್ಯ ಪಯಣದ ಸಹಪಯಣಿಗರಾದ ಬೀದರಿನ ಹುಡುಗ ಪ್ರದೀಪನಿಗೆ ಹಾರ್ದಿಕ ಧನ್ಯವಾದಗಳು. ಒಟ್ಟು ಬೆಳಗಿನಿಂದ ರಾತ್ರಿ ತನಕ 350 ಕ್ಕೂ ಹೆಚ್ಚು ಕಿ. ಮೀ. ದೂರ ಕಾರು ಚಲಾಯಿಸಿ, ದಣಿವಾದರೂ ಲವಲವಿಕೆಯಿಂದಲೇ ಅಡಿಗಡಿಗೂ ಅಕ್ಕರೆ ಹರಿಸಿದ ಜೀವದ ಗೆಳೆಯ ಮಿಲಿಂದ ಕಾಂಬ್ಳಿಗೆ ನಾನು ಚಿರಋಣಿ. ಜೀವಿತದ ಒಂದಿಡೀ ದಿನ ಹೀಗೆ ಸಾರ್ಥವಾಗಲು ಕಾರಣರಾದ ಬೀದರಿನ ಸಜ್ಜನ ಶರಣರಾದ  ಬಸವಕುಮಾರ ಪಾಟೀಲರಿಗೆ ಅಂತರಾಳದ ಅನಂತ ಪ್ರಣಾಮಗಳು. 

- Advertisement -

“ರಮೇಶ್ ಸಾರ್.. ಸಾಧಕರ ದರ್ಶನ, ದೈವ ದರ್ಶನದಷ್ಟೇ ಶ್ರೇಷ್ಟವಾದದ್ದು..” ಎಂಬ ಪಾಟೀಲರ ಅಂದಿನ ನುಡಿಗಳು ಈಗಲೂ ಕಿವಿಯಲ್ಲಿ ಮಾರ್ದನಿಸುತ್ತಲೇ ಇದೆ..

ಆತ್ಮೀಯ ಅಕ್ಷರಬಂಧುಗಳೇ ನಿಮ್ಮೊಂದಿಗೆ ಈ ಅವಿಸ್ಮರಣೀಯ ಕ್ಷಣಗಳನ್ನು ಹಂಚಿಕೊಳ್ಳಲು ಕಾರಣ.. ಅಕ್ಕರೆಯಿಂದ ಹಾರೈಸಿ ನಿತ್ಯ ಪ್ರೋತ್ಸಾಹಿಸುವ ನಿಮ್ಮಂತಹ ಸಹೃದಯಿಗಳೇ ಜಗದೆಲ್ಲ ಸಾಧಕರಿಗೆ ಪ್ರೇರಣ.


 ಪ್ರೀತಿಯಿಂದ ಎ.ಎನ್.ರಮೇಶ್, ಗುಬ್ಬಿ.

- Advertisement -
- Advertisement -

Latest News

ಭತ್ತದ ನಾಡು ಕೆ.ಆರ್.ನಗರ ಕಾವೇರಿ ತೀರದ ಅರ್ಕೇಶ್ವರ

ನಾವು ಕಪ್ಪಡಿ ದರ್ಶನ ಮಾಡಿಕೊಂಡು ಕೆ.ಆರ್.ನಗರದ ಅರ್ಕೇಶ್ವರ ದೇವಸ್ಥಾನ ನೋಡಲು ಪ್ರಯಾಣ ಮುಂದುವರೆಸಿದೆವು. ಕೆ.ಆರ್.ನಗರದಿಂದ ಹಾಸನ ರಸ್ತೆಯಲ್ಲಿ ಮೂರ್ನಾಲ್ಕು ಕಿ.ಮೀ. ದೂರದಲ್ಲಿ ಕಾವೇರಿ ನದಿಯ ದಂಡೆಯಲ್ಲಿ...
- Advertisement -

More Articles Like This

- Advertisement -
close
error: Content is protected !!
Join WhatsApp Group