ಮೈಸೂರು -ನಗರದ ಸರಸ್ವತಿಪುರಂನಲ್ಲಿರುವ ಜೆಎಸ್‌ಎಸ್ ಮಹಿಳಾ ಕಾಲೇಜಿನ ಆವರಣದಲ್ಲಿಂದು ಜೆಎಸ್‌ಎಸ್ಕಾರ್ಯಕ್ರಮದವತಿಯಿಂದ ರಂಗೋತ್ಸವ ೨೦೨೪ ಸಮಾರೋಪ ಸಮಾರಂಭ ಜರುಗಿತು.
ಕಾರ್ಯಕ್ರಮದಲ್ಲಿ ಸಮಾರೋಪ ಭಾಷಣ ಮಾಡಿದ ಹಿರಿಯ ರಂಗಕರ್ಮಿ ಪ್ರಸಾದ್ ಕುಂದೂರ್ ಮಾತನಾಡಿ, ಇಂದಿನ ಮಕ್ಕಳಲ್ಲಿ ರಂಗಭೂಮಿ ಬಗ್ಗೆ ಆಸಕ್ತಿ ಬೆಳೆಸುವಂತದ್ದು ನಮ್ಮೆ ಲ್ಲರ ಜವಾಬ್ದಾರಿ. ಏಕೆಂದರೆ, ಪಠ್ಯ ಪುಸ್ತಕದ ಜೊತೆ ಜೊತೆಗೆ ಪಠ್ಯದ ಭಾಗವಾಗಿ ರಂಗಭೂಮಿಯ ಬಗ್ಗೆ ಮಕ್ಕಳಲ್ಲಿ ಅರಿವನ್ನು ಮೂಡಿಸಿದಾಗ ರಂಗಭೂಮಿಯ ಬಗ್ಗೆ ಹೆಚ್ಚು ಒಲವು ಮಕ್ಕಳಲ್ಲಿ ಮೂಡಿ, ರಂಗಪ್ರವೇಶ ಪಡೆಯಲು ಅನುಕೂಲವಾಗುತ್ತದೆಂದು ಅಭಿಪ್ರಾಯಿಸಿದರು.
ಸಮಾಜದಲ್ಲಿ ಸಮಾನತೆ ಮತ್ತು ಸಾಮರಸ್ಯದ ಸಂಕೇತ ರಂಗಭೂಮಿ. ಜಾತಿ, ಭೇದ, ವರ್ಗ, ವರ್ಣ ಎಲ್ಲವನ್ನೂ ಮೀರಿ ನಾವೆಲ್ಲರೂ ಒಂದೇ ಎಂಬ ಭಾವನೆಯನ್ನು ಮೂಡಿಸುವುದೇ ಈ ರಂಗಕಲೆಗಳು. ರಂಗಕಲೆಗಳನ್ನು ಜೀವಂತವಾಗಿಸಲು ಇಂದಿನ ಯುವ ಜನಾಂಗ ಮುಂದಾಗಬೇಕೆಂದು ತಿಳಿಸಿದರು.
ಶಿಕ್ಷಣದ ಜೊತೆಗೆ ಶಕ್ತಿಶಾಲಿ ಮಾಧ್ಯಮವಾಗಿ ರಂಗಭೂಮಿಯನ್ನೂ ಕಾಣಬೇಕಿದೆ. ವಿಜ್ಞಾನದ ವಿಷಯಗಳನ್ನು ರಂಗ ಕಲೆಗಳ ಮೂಲಕ ಅರ್ಥೈಸುತ್ತಾ ಹೋದಾಗ ಬಹಳ ಬೇಗ ವಿದ್ಯಾರ್ಥಿಗಳ ಮನಸ್ಸಿಗೆ ನಾಟುತ್ತದೆಂದು ಅಭಿಪ್ರಾಯಿಸಿದರು.
ಮುಖ್ಯ ಅತಿಥಿಯಾಗಿ ಮಾತನಾಡಿದ ವನ್ಯಜೀವಿ ಛಾಯಾಗ್ರಾಹಕ ಲೋಕೇಶ್ ಮೊಸಳೆಯವರು ಮಾತನಾಡಿ, ಕರ್ನಾಟಕದಲ್ಲಿ ಹುಟ್ಟಿ ಕನ್ನಡ ಭಾಷೆಯ ಬೆಳವಣಿಗೆಗಾಗಿ ನಿರಂತರವಾಗಿ ಸೇವೆ ಸಲ್ಲಿಸಿ ಕನ್ನಡಕ್ಕಾಗಿಯೇ ಬದುಕುತ್ತಿರುವವರು ಇಂದು ರಾಜ್ಯೋತ್ಸವ ಪ್ರಶಸ್ತಿಗೆ ಅರ್ಜಿ ಹಾಕುವುದು ದೌರ್ಭಾಗ್ಯದ ಸಂಗತಿ ಎಂದು ಬೇಸರ ವ್ಯಕ್ತಪಡಿಸಿದರು. ಕನ್ನಡಾಂಬೆಯ ಸೇವೆಗೈದ ಮಹನೀಯರನ್ನು ಸರ್ಕಾರವೇ ಗುರುತಿಸಿ, ಪುರಸ್ಕಾರವನ್ನು ನೀಡಿ, ಪ್ರೋತ್ಸಾಹಿಸಬೇಕಿದೆ ಎಂದರು. ರಂಗಭೂಮಿಯಲ್ಲಿ ದುಡಿಯುವವರು ಮನುಷ್ಯತ್ವವನ್ನು ಬೆಳೆಸಿಕೊಂಡಿರುತ್ತಾರೆ. ನಾಟಕ ನಮಗೆ ಭಾಷೆಯಲ್ಲಿನ ಉಚ್ಛಾರಣೆ ಹಾಗೂ ಸಂಸ್ಕಾರವನ್ನು ಬೆಳೆಸುತ್ತದೆ. ಜೊತೆ ಜೊತೆಗೆ ಸಾಹಸಿ ಮನೋಭಾವ, ನಾಯಕತ್ವ ಗುಣ ಬೆಳೆಯಲು ಇದು ಸಹಕಾರಿಯಾಗುತ್ತದೆಂದರು. ಜೆಎಸ್‌ಎಸ್ ನವಜ್ಯೋತಿ ಸಭಾಂಗಣ ರಂಗಭೂಮಿ ಹಾಗೂ ಸಿನಿಮಾಗೆ ಇತಿಹಾಸ ನಿರ್ಮಿಸಿದ ಸ್ಥಳವಾಗಿದೆ. ೧೯೪೦ರಲ್ಲಿ ನಿರ್ಮಾಣಗೊಂಡಿದ್ದ ಸತಿ ಸುಲೋಚನ, ಕೃಷ್ಣಲೀಲಾ ಸಿನಿಮಾಗಳು ನವಜ್ಯೋತಿ ಸ್ಟುಡಿಯೋದಲ್ಲೆ ನಿರ್ಮಾಣಗೊಂಡವು ಎಂಬುದಕ್ಕೆ ಈ ಸಭಾಂಗಣವೇ ಸಾಕ್ಷಿ ಎಂದು ತಿಳಿಸಿದರು. ವ್ಯಕ್ತಿಯಲ್ಲಿನ ವ್ಯಕ್ತಿತ್ವ ಹಾಗೂ ಪ್ರತಿಭೆಯನ್ನು ಗುರುತಿಸಿ, ಅವರನ್ನು ಮುಖ್ಯವಾಹಿನಿಗೆ ತಂದುಕೊಟ್ಟ ಕೀರ್ತಿ ಜೆಎಸ್‌ಎಸ್ ಮಹಾವಿದ್ಯಾಪೀಠಕ್ಕೆ ಸಲ್ಲುತ್ತದೆಂದು ಪ್ರಶಂಸಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರಾದ ವೃತ್ತಿ ರಂಗ ಕಲಾವಿದೆ ಶ್ರೀಮತಿ ಸರಸ್ವತಿ ಜುಲೇಖಾ ಬೇಗಂ ಮಾತನಾಡಿ, ರಂಗಭೂಮಿ ನಮಗೆ ಜಗತ್ತು ಏನೆಂಬುದನ್ನು ಕಲಿಸುತ್ತದೆ. ಮನೆಗೊಬ್ಬ ಕಲಾವಿದನಿದ್ದರೆ ಉತ್ತಮ ಸಮಾಜ ನಿರ್ಮಾಣವಾಗುತ್ತದೆ. ರಂಗಭೂಮಿಯನ್ನು ನೆಚ್ಚಿ ಬಂದರೆ ಅವರನ್ನು ಎಂದಿಗೂ ಕೈಬಿಡದೇ ಮುನ್ನಡೆಸುವ ಸಾಂಸ್ಕೃತಿಕ ಕಲೆ ರಂಗಭೂಮಿ ಎಂದರು.
ವೇದಿಕೆಯಲ್ಲಿ ಜೆಎಸ್‌ಎಸ್ ಮಹಾವಿದ್ಯಾಪೀಠದ ಕಾರ್ಯದರ್ಶಿ ಶಿವಕುಮಾರಸ್ವಾಮಿ, ಕಲಾವಿದರಾದ ಚಂದ್ರಶೇಖರ ಆಚಾರ್, ಕೃಷ್ಣಚೈತನ್ಯ ಹಾಗೂ ರಂಗ ಕಲಾವಿದರು ಉಪಸ್ಥಿತರಿದ್ದರು. ನಂತರ ಜಂಗಮದಡೆಗೆ ನಾಟಕವನ್ನು ಗುಂಡ್ಲುಪೇಟೆ ಮಹಿಳಾ ಪದವಿ ಕಾಲೇಜಿನ ವಿದ್ಯಾರ್ಥಿಗಳು ನಡೆಸಿಕೊಟ್ಟರು.