ಸಿಂದಗಿ: ಇತ್ತಿಚೀನ ದಿನಗಳಲ್ಲಿ ಮಕ್ಕಳ ಮೇಲೆ ದೌರ್ಜನ್ಯಗಳು ಹೆಚ್ಚಾಗುತ್ತಿವೆ. ಅದರಲ್ಲೂ ಲೈಂಗಿಕ ದೌರ್ಜನ್ಯ ಪ್ರಕರಣಗಳು ಅಲ್ಲಿಲ್ಲಿ ಸಂಭವಿಸುತ್ತಲೇ ಇವೆ. ಮಕ್ಕಳ ಮೇಲಾಗುವ ಲೈಂಗಿಕ ದೌರ್ಜನ್ಯಗಳನ್ನು ತಡೆಗಟ್ಟಲು ಸರ್ಕಾರ ಪೋಕ್ಸೋಕಾಯ್ದೆ ಜಾರಿಗೆ ತಂದಿದೆ ಆದರೆ ಇದು ಪರಿಣಾಮಕಾರಿಯಾಗಿ ಜಾರಿಯಾಗ ಬೇಕು ಎಂದು ನ್ಯಾಯವಾದಿ ಬಿ.ಜಿ.ಮಾನ್ವಿ ಹೇಳಿದರು.
ಅವರು ಪಟ್ಟಣದ ತಾಲೂಕಾ ಶಿಕ್ಷಣ ಪ್ರಸಾರಕ ಮಂಡಳಿಯ ಎಚ್.ಜಿ.ಪದವಿ ಪೂರ್ವ ಕಾಲೇಜದಲ್ಲಿ ಹಮ್ಮಿಕೊಂಡಿರುವ ವ್ಯಸನ ಮುಕ್ತ ದಿನಾಚರಣೆ ಮತ್ತು ಪೋಕ್ಸೋಕಾಯ್ದೆ ಕಾನೂನು ಅರಿವು ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ, ಶಾಲಾ ಕಾಲೇಜುಗಳಲ್ಲಿ ಮಕ್ಕಳ ಭದ್ರತೆಗಾಗಿ ಕ್ಯಾಮರಾ ಅಳವಡಿಸಬೇಕು. ಮಕ್ಕಳ ಸುರಕ್ಷತೆಯ ವಿಷಯದಲ್ಲಿ ಇಂದು ಶಿಕ್ಷಣ ಸಂಸ್ಥೆಗಳು ಮತ್ತು ಪೋಷಕರು ಹೆಚ್ಚು ಬುದ್ದಿವಂತರಾಗಬೇಕಿದೆ . ಶಾಲಾ ಪಠ್ಯಕ್ರಮದಲ್ಲಿ ಪೋಕ್ಸೋ ಕಾಯ್ದೆಯ ಕುರಿತಾಗಿ ಮಕ್ಕಳಿಗೆ ವಿಷಯ ಸಿಗುವಂತಾಗಬೇಕು ಎಂದರು.
ಈ ಸಂದರ್ಭದಲ್ಲಿ ಮಹಾವಿದ್ಯಾಲಯದ ಪ್ರಾಚಾರ್ಯ ಎ.ಆರ್.ಹೆಗ್ಗಣದೊಡ್ಡಿ ಅವರು ಅಧ್ಯಕ್ಷತೆ ವಹಿಸಿ ಮಾತನಾಡಿ, ಶಾಲಾ ಕಾಲೇಜಗಳಲ್ಲಿ ಈ ಕಾಯ್ಸೆಯ ಕುರಿತಾಗಿ ಅರಿವು ಮೂಡಿಸುವುದು ಅನಿವಾರ್ಯವಾಗಿದೆ. ವಿಜ್ಞಾನ ವೇಗವಾಗಿ ಬೆಳೆಯುತ್ತಿದೆ ಆದರೆ ಸಮಾಜದಲ್ಲಿ ಉತ್ತಮ ಸಂಸ್ಕೃತಿ, ಆಚಾರ ವಿಚಾರಗಳಂತಹ ಮಾನವೀಯ ಮೌಲ್ಯಗಳು ಮರೆಯಾಗುತ್ತಿವೆ ಇದರಿಂದ ಸಮಾಜದಲ್ಲಿ ದೌರ್ಜನ್ಯ ಪ್ರಕರಣಗಳು ಹೆಚ್ಚಾಗುತ್ತಿವೆ. ಇಂಥವುಗಳಿಗೆ ಕಡಿವಾಣ ಹಾಕಲು ಸರ್ಕಾರ ದಿಟ್ಟ ಹೆಜ್ಜೆ ಇಡಲೇಬೇಕುಎಂದರು.
ವೇದಿಕೆ ಮೇಲೆ ಉಪನ್ಯಾಸಕ ಎಸ್.ಎ.ಪಾಟೀಲ, ಆರ್.ಬಿ.ಹೊಸಮನಿ ಇದ್ದರು. ಕಾರ್ಯಕ್ರವನ್ನು ಉಪನ್ಯಾಸಕ ಸಿದ್ದಲಿಂಗ ಕಿಣಗಿ ನಿರೂಪಿಸಿದರು, ವಿದ್ಯಾರ್ಥಿ ಸೃಷ್ಟಿ ಸಿಂಗೆ ಪ್ರಾರ್ಥಿಸಿದರು, ಉಪನ್ಯಾಸಕಿ ಮುಕ್ಯಾಯಕ್ಕ ಕತ್ತಿ ವಂದಿಸಿದರು. ಕಾರ್ಯಕ್ರಮದಲ್ಲಿ ಕಾಲೇಜಿನ ಉಪನ್ಯಾಸಕರು ಮತ್ತು ವಿದ್ಯಾರ್ಥಿ ಬಳಗ ಹಾಜರಿದ್ದರು.