ಸಮಾನತೆಯ ಪಲ್ಲವಿ
ಭಾರತಾಂಬೆಗೆ ಹೊನ್ನ ಕಿರೀಟವಿದು
ಸರಳ ಸಂವಿಧಾನ
ನಮ್ಮ ಸಂವಿಧಾನ
ಪೀಠಿಕೆ ಪರಿಧಿಯಪಲ್ಲವಿ
ಸಾರ್ವಭೌಮತೆ, ಸಮಾಜವಾದಿ,
ಜಾತ್ಯತೀತತೆ, ಗಣತಂತ್ರ,ನ್ಯಾಯ,
ಸ್ವಾತಂತ್ರ್ಯ, ಸಮಾನತೆ, ಭ್ರಾತೃತ್ವದ
ದುಂಧುಭಿ ಜೀವದಾಯಿನಿ ಇದು
ಭಾರತದ ಪಾಲಿಗೆ
ಮುಕ್ತಿದಾಯಿನಿ ಇದು
ರಾಷ್ಟ್ರದ ಸಂಕೋಲೆಗೆ
ಸಂವಿಧಾನ ನಮಗೆ ಸುವಿಧಾನ…
ಲಿಖಿತವೂ,ದೀರ್ಘವೂ
ಭಾರತೀಯರಿಗಿದು ಮಾರ್ಗವು
ಮನದಲ್ಲಿ ಮಡುಗಟ್ಟಿದ
ಅಸಮಾನತೆಯ ಮೌನಕ್ಕೆ
ಅಂಬೇಡ್ಕರರ ನವ್ಯ ಚಿಂತನೆಗಳ
ಸಿರಿ ದೀಪವು
ಶತಶತಮಾನಗಳ ದಾಸ್ಯದ
ಕಾರ್ಗತ್ತಲೆಯ ಅಳಿಸಿ ದಿವ್ಯ ಚೇತನದ ಮಾನವೀಯತೆ ಎಲ್ಲೆಲ್ಲೂ ಬೆಳೆಸಿ
ಭವ್ಯ ಭಾರತಕ್ಕೆ ಭದ್ರಬುನಾದಿ
ಈ ಸಂವಿಧಾನ ನಮಗೆ ಸುವಿಧಾನ
ಪವಿತ್ರ ಪದಪುಟಗಳ ಸ್ವೀಕಾರ
1949 ರಂದು,ಜಾರಿಗೆ ಬಂತು
1950, ಜನವರಿ 26 ರಂದು
ಸುಂದರ ಕೈ ಬರಹದ
ನಕ್ಷತ್ರಗಳ ಗುಂಪು
ಹಿಂದಿ, ಆಂಗ್ಲ ,ಕಾನೂನು
ಪರಿಣಯದ ಪವಿತ್ರ ಕಂಪು
ಇದರ ಮುಖ ಪ್ರತಿಗಳು
ಹಿಲಿಯಂ ರಕ್ಷಾ ಕವಚದಲ್ಲಿ
ಇಂದಿಗೂ ಇದೆ ಇದು
ಸಂಸತ್ ಭವನದ ಗ್ರಂಥಾಲಯದಲ್ಲಿ
ಎರವಲು ಅಂಶಗಳ ಪವಿತ್ರ ಸಂಗಮವಿದು ಶ್ರೇಷ್ಠವಿದು
ಪರಮ ಶ್ರೇಷ್ಠವಿಹುದು
ನಮ್ಮ ಸಂವಿಧಾನ
ನಮಗೆ ಸುವಿಧಾನ
ದಾಸ್ಯದ ಸಂಕೋಲೆಯಲ್ಲಿ
ನೆಲೆ ಅರಸುತ್ತಿರುವಾಗ
ಮಿಂಚು ಹುಳುವಿನ
ಮಿಣುಕಿನ ಅಂಚುಗಳು
ಈ ವಿಧಿಗಳು, ಭಾಗಗಳು
ಅನುಚ್ಚೇದ ತಿದ್ದುಪಡಿಗಳು
ಮೂರು ಅಂಗಗಳ ಪರಿಮಿತಿ
ಪರಿಧಿಯಲ್ಲಿ ಹಕ್ಕು ಕರ್ತವ್ಯಗಳ
ಸಚೇತನ ವಿವರಣೆ
ಕೂದಲೆಳೆಯಷ್ಟು ಕೊಂಕಿಲ್ಲ ,
ಕೊಸರಿಲ್ಲ ಜವಾಬ್ದಾರಿಗಳ ವಿವರಣೆ
ನಮ್ಮ ಸಂವಿಧಾನ ನಮಗೆ ಸುವಿಧಾನ
ವಿಧಿಗಳ ವಿವರಣೆ
ಹೊಸ ಹೊಸ ಜೋಡಣೆ
ಸರ್ವರಿಗೂ ಸಮವೆನಿಪ
ಸುಧೀರ್ಘ ವಿವರಣೆ
ಅನಿರ್ವಾಹ ಬಂಧವಿದು
ದೇಶ ನಡೆಸುವ ದಾರಿಗೆ,
ಉಪಮ ಉತ್ಪ್ರೇಕ್ಷೆಗಳಿಲ್ಲ ಇಲ್ಲಿ…
ಹೂವ ಜೀವಂತಿಕೆಯಲ್ಲಿ
ಹರಿದಾಡುವ ದೇಶದ ದಿಕ್ಸೂಚಿ
ಈ ಸಂವಿಧಾನ, ನಮಗೆ ಸುವಿಧಾನ
ಬಹುವಿಧ ಅಧ್ಯಯನ
ಸುಜ್ಞಾನಿಗಳ ಅನುನಯನ
ಸಂವಿಧಾನ ಶಿಲ್ಪಿಗಳ ಆಶಯಗಳ ಹೂರಣ ಮಾನವೀಯತೆಯ
ಧ್ಯಾನದ ಬೆಳಕು
ಹೂವಂತ ಪುಟಗಳಲ್ಲಿ
ಜಗಮಗಿಸುತ್ತಿರುವುದು…
ಅಸಮಾನತೆಯ ಕಾರ್ಗತ್ತಲು
ಮೆಲ್ಲಗೆ ಮರೆಯಾಗಲು
ಸಮಾನತೆಯ ಬೆಳದಿಂಗಳು
ಪಲ್ಲವಿಸುತಿಹುದು
ಸಂವಿಧಾನವಿದು
ಮೂಲ ಮಂತ್ರ ಮೂಲಚೇತನ
ಭಾರತದ ಶ್ರೇಷ್ಠ ಆಡಳಿತಕ್ಕೆ..
ಸಂವಿಧಾನವಿದು
ಸಮಾನತೆಯ ಪಲ್ಲವಿ
ಸಂವಿಧಾನವಿದು
ಸಮಾನತೆಯ ಪಲ್ಲವಿ….
ಶ್ರೀಮತಿ ಮೀನಾಕ್ಷಿ ಸೂಡಿ
ಕವಯತ್ರಿ,ಲೇಖಕಿ
ಕಿತ್ತೂರು.