ಬಾ ಮಗು ಮರಳಿ ಶಾಲೆಗೆ
ಬಾ ಮಗು ಶಾಲೆಗೆ
ಮರಳಿ ಬಾ ಜ್ಞಾನ ದೇಗುಲಕೆ
ಭರವಸೆಯ ಹೊತ್ತು
ಮಾಡಿಕೋ ತಿಳಿವ ಬಯಕೆ ಸ್ವತ್ತು.
ಅರಿವಿನ ಅರಮನೆಗೆ
ಅಕ್ಷರದ ಸಿರಿಯ ಮುಡಿಗೆ
ಹೊಸತನದ ಹುಡುಕಾಟಕೆ
ಭವಿಷ್ಯದ ಉಜ್ವಲಕೆ.
ಭಾಷಾಭಿಮಾನ ಪಸರಿಸಲು
ಜ್ಞಾನ ದೀವಿಗೆ ಹೊತ್ತಿಸಲು
ಪರಿಸರವ ಉಳಿಸೋ ತವಕದಿ
ಕೂಡಿ ಕಳೆವ ಲೆಕ್ಕಾಚಾರದಿ.
ನಗುವಿನ ಕಲರವವು
ಅನ್ವೇಷಣೆಯ ಆಲಿಂಗನವು
ಸೃಷ್ಟಿ ದೃಷ್ಟಿಯ ಕೌತುಕ
ಸಾಮ್ಯತೆ ಭಿನ್ನತೆ ರೋಚಕ .
ಮನೆ ಮನವ ಬೆಳಗು
ಸಮಾಜದ ಮೆರಗು
ಓದಿ ಬರೆದು ಜಾಣನಾಗಲು
ಮೌಢ್ಯತೆಯಿಂದ ದೂರವಾಗಲು.
ಬೇಕೇ ಬೇಕು ಶಿಕ್ಷಣ
ಇಲ್ಲದಿರೆ ಜೀವನ ವಿಲಕ್ಷಣ
ಒಂದೆಂಬ ಭಾವ ಮೂಡಲು
ದೇಶದ ಅಭಿವೃದ್ಧಿಯ ಸ್ತರವಾಗಲು.
ಕುಂದು ಕೊರತೆ ನೀಗಲು
ಭದ್ರತೆಯ ಜೊತೆಗೆ ಸಾಗಲು
ಶಿಕ್ಷಣ ಒಂದು ಶಕ್ತಿ
ತಿಳಿದು ಬದುಕಿದರೆ ಮುಕ್ತಿ.
ನಗುತ ಬಾ ಶಾಲೆಗೆ
ನಲಿವ ಬಾ ಜೊತೆಗೆ
ಆಟ ಪಾಠ ಕಲಿಯಲು
ಹೊಸದು ಜೀವನ ಕಟ್ಟಿ ಕೊಳ್ಳಲು
ರೇಷ್ಮಾ ಕಂದಕೂರ, ಶಿಕ್ಷಕಿ
ಸಿಂಧನೂರು