ಮೆಲುಕು
ಬೆಳ್ಳಂ ಬೆಳ್ಗೆ ಅವ್ವನ ಕೂಗು
ಕೇಳಿದ್ರೂ ಕೇಳದಂತೆ ಮಲ್ಗೋದು
ಇತ್ತ ನಾನುನೂ ಕಿರುಚಿದೆ
ಅವ್ವ ಕರಿತೈತೆ ಎದ್ದೇಳಣ್ಣಯ್ಯ
ಜಳಕಾ ಮಾಡಿ ಮಡಿಉಟ್ಕೊ
ರಾಕಿ ಕಟ್ಟಸ್ಕೊ ಹಬ್ಬಾ ಐತಿ
ಸೋಂಬೇರಿ ಸೋಮಾರಿ ನೀ
ಹೊರ್ಗ ಹೋಗಬ್ಯಾಡಾ ಅಣ್ಣಯ್ಯ
ಮತ್ತದೇ ಜಗಳಾ ಜಡೆ ಎಳೆದು
ರಿಬ್ಬನ್ ಜಗ್ಗಿ ನೂಕಿ ಓಡೋದು
ಅವ್ವನ ದನಿಗೆ ಮುದುಡಿಕೊಳ್ಳುವ
ಮುದ್ದು ಪೆದ್ದು ಅಣ್ಣಯ್ಯ
ರಾಕಿ ಕಟ್ಟಿ ಸಕ್ಕರೆ ಬದಲು
ಉಪ್ಪು ತಿನಿಸಿ ಗೋಳಾಡಿಸಿ
ತಲೆಗೂದಲ ಜಗ್ಗಿ ತಿವಿದು
ಓಡಿದ ನೆನಪು ಮಾಸಿಲ್ಲ ಅಣ್ಣಯ್ಯ
ಅಪ್ಪಂಗೆ ಚಾಡಿ ಹೇಳಿ
ಅವ್ವಂಗೆ ಮೋಡಿ ಮಾಡಿ
ಅಜ್ಜ ಅಮ್ಮಂಗೆ ಅತ್ತು ಕೇಳಿ
ರೊಕ್ಕ ಇಸ್ಕೊಂಡದ್ದು ಎಷ್ಟ್ ಚಂದ ಅಣ್ಣಯ್ಯ
ದಿನಕ್ಕ ನಾಕಸಲಾ ಜಗಳಾಮಾಡೋದು
ವಾರಕ್ಕ ಎರಡ ಸಲಾ ಮಾತ ಬಿಡೋದು
ಆದ್ರೂ ಎನ್ ಮಜವಾಗಿತ್ತು
ಬಾಲ್ಯದ ಜೀವನ ಅಣ್ಣಯ್ಯ
ಸೂಟಿ ಇದ್ರ ಹೊಲದ ಸುತ್ತ
ನಮ್ಮ ಚಿತ್ತ
ಮಾವಿನಕಾಯಿ ಉಪ್ಪು ಖಾರಾ
ಸೇರಿಸಿ ದವಡೆ ಜುಮ್ ಅಂದ್ರೂ
ತಿಂದ ನೆನಪು ಕಾಡತೈತಿ ಅಣ್ಣಯ್ಯ
ಸಂಜೀ ಮುಂದ ಕಾಕಾನ ಚಕ್ಕಡಿ
ಬರೋದಾರಿಲಿ ನಿಂತ ನಾ ಮುಂದ ನೀ ಮುಂದಂತಾ ಬಿದ್ದಕೊಂಡ ಬೈಸ್ಕೊಂಡ ಕಿಸಿಕಿಸಿ
ನಗೋದಂದ್ರ ಹಬ್ಬಾ ಅಲ್ವೇನಣ್ಣಯ್ಯ
ಕೆಲಸಾ ಹೇಳಿದರ ಸಾಕು
ಓದದ ಬರಿಯೋದ ನೆಪಾ
ನೀ ಹೋಗ ನಾ ಹೋಗ
ಅನ್ನೋದ್ರಾಗ ಬೆಳಕ ಹರಿಯೋದ ಮರ್ತಿಲ್ಲ ಅಣ್ಣಯ್ಯ
ದಿನಾ ಕಳದಂಗ ದೊಡ್ಡವರಾದದ್ ಮರತ್ವಿ
ಮದ್ವಿ ಮಕ್ಕಳು ಅಂತಾ ನಮ್ಮ ಬಾಳೆಕ ನಾವ್ ಹತ್ತಿದ್ವಿ
ಆದ್ರೂ ಅಣ್ಣಾ ತಂಗಿ ಸಂಬಂಧ ಅಂದ್ರ ಬೆಲೆ ಕಟ್ಟಾಕ್ಕಾಗದ್ದೈತಿ ಹೌದ ಅಲ್ಲ್ವೇನಣ್ಣಯ್ಯ
ಶ್ರೀಮತಿ ಜ್ಯೋತಿ ಕೋಟಗಿ ಬೈಲಹೊಂಗಲ
ಬಿ.ಆರ್.ಪಿ ಚನ್ನಮ್ಮನ ಕಿತ್ತೂರು