ದಿನಗೂಲಿ ಕಾರ್ಮಿಕರು
ಬಡತನದ ಶಾಪದಿ ನೊಂದಿಹೆವು ನಾವು,
ಕೈಲಿ ಕಾಸಿಲ್ಲ,ತಲೆ ಮೇಲೊಂದು ಸೂರು,
ಸ್ವಾವಲಂಬನೆಯ ಜೀವನ ಕನಸಾಗಿದೆ,
ಬದುಕು ಸಾಗಿಸಲು ಹುಟ್ಟೂರು ಮರೆತು,
ಸಾವಿರಾರು ಮೈಲು ಬಂದವರು
ನಾವು ನಿರ್ಭಾಗ್ಯ ಕಾರ್ಮಿಕರು…
ಯಾವುದೋ ಜೋಪಡಿಯಲಿ ನಿದ್ರೆ,
ಮಧ್ಯವರ್ತಿ ಕರೆದ ದಿನ ಕೆಲಸ,
ಆತ ಕೊಟ್ಟಷ್ಟೇ ವೇತನ,
ಮಾಲೀಕರಾರೋ ಗೊತ್ತಿಲ್ಲ,ನಾಳೆ ಏನೋ ಗೊತ್ತಲ್ಲ !!!
ಕಲ್ಲು ಒಡೆಯುವುದು,ಕಛೇರಿ-ಮನೆ ರಕ್ಷಣೆ,
ಮನೆ ನಿರ್ಮಾಣ,ಕೋಳಿ ಸಾಕಣಿಕೆ,ಮೀನು ಮಾರಾಟ..
ಅಂಗವಿಕಲರಿಗೆ ಬೀದಿ ಬದಿ ಬಿಕ್ಷಾಟನೆ…
ನಮ್ಮ ಕಸುಬಾಗಿ ಮಾಡಿಬಿಟ್ಟ ಮಧ್ಯವರ್ತಿ….
ಕಾರ್ಖಾನೆಗಳಲಿ ದುಡಿಯುವೆವು ಸಿಬ್ಬಂದಿಗಳಲ್ಲ,
ಕಲ್ಲುಕೋರೆಗಳಲಿ ದುಡಿಯುವೆವು ಮಾಲೀಕರಾರೋ ಗೊತ್ತಿಲ್ಲ,
ಹೋಟೆಲುಗಳಲಿ ದುಡಿಯುವೆವು,
ರಾತ್ರಿ ಸ್ಲಂನ ಜೋಪಡಿಗಳೇ ನಮಗೆ ಸ್ವರ್ಗ ಸಮಾನ !!!
ದಿನನಿತ್ಯದ ಬದುಕಿಗಾಗಿ,
ಊರಲ್ಲಿರುವ ಹೆಂಡತಿ-ಮಕ್ಕಳಿಗಾಗಿ
ದುಡಿದು-ದುಡಿದು ಜೀವಚ್ಛವವಾಗಿರುವೆವು..
ದುಡಿ-ಮಡಿ ಇದುವೇ ನಮ್ಮ ಮಂತ್ರ..
ಅನಾರೋಗ್ಯ,ಕುಡಿತ,ಧೂಮಪಾನಗಳೇ
ನಮ್ಮ ಹಿತ ಶತ್ರುಗಳು…
ಇದ್ದರೆ ನಾಳಿನ ಕೂಲಿ,
ಇಲ್ಲದಿದ್ದರೆ ಜಗತ್ತಿನಿಂದಲೇ ಖಾಲಿ !!
ನಮ್ಮ ಗೋಳು ಕೇಳೋರು ಯಾರು ?
ನಾವು ಕಾರ್ಮಿಕರು…ದಿನಗೂಲಿ ಕಾರ್ಮಿಕರು…
(ಕಾರ್ಮಿಕ ದಿನಾಚರಣೆಯಂದು ಕಾರ್ಮಿಕರ ಪರಿಸ್ಥಿತಿ ಕುರಿತ ಕವನ)
ಡಾ.ಭೇರ್ಯ ರಾಮಕುಮಾರ್,
ಸಾಹಿತಿಗಳು, ಪತ್ರಕರ್ತರು
ಮೊ:94496 80583
63631 72368