ಲೋಕಕ್ಕೆ ಲೋಕವೇ ಹರಿಸಿದೆ ಅವಳತ್ತ ಗಮನ. ನೀವ್ಯಾಕೆ ಇನ್ನೂ ಬರೆಯಲಿಲ್ಲ ಅವಳ ಮೇಲೆ ಕವನ !?
ಎಂದು ಕರೆ ಮಾಡಿ, ಮೆಸೇಜು ಮಾಡಿ ಕೇಳಿದವರಿಗೆಲ್ಲಾ ಅರ್ಪಣೆ ಈ ಸಪ್ತ ಹನಿಗಳು. ರಾತ್ರೋ ರಾತ್ರಿ ಜಗದಗಲ, ಮುಗಿಲಗಲ ವೈರಲ್ ಆದ ಬೆಡಗಿಯ ಚೆಲುವು-ನಿಲುವಿನ ಸುಪ್ತ ಖನಿಗಳು. ವಿಶ್ವವನ್ನೇ ಸೆಳೆದ ಸ್ನಿಗ್ಧ ಸೌಂದರ್ಯದ, ಮುಗ್ಧ ಮಾಧುರ್ಯದ ಕುಂಭಮೇಳದ ಚೆಲುವೆಯ ಕುರಿತಾದ ಕವಿಭಾವ-ಭಾಷ್ಯದ ಆಪ್ತ ದನಿಗಳು. ಒಪ್ಪಿಸಿಕೊಳ್ಳಿ..” – ಪ್ರೀತಿಯಿಂದ ಎ.ಎನ್.ರಮೇಶ್.ಗುಬ್ಬಿ.
1. ಮಿಂಚು
ರುದ್ರಾಕ್ಷಿಗಿಂತಲೂ
ಹೆಚ್ಚು ಮಿಂಚಿದ್ದು
ಅವಳ ನೀಲಾಕ್ಷಿ.!
***************
2. ಭ್ರಮೆ.!
ಸೆಲ್ಫಿ ತೆಗೆದುಕೊಂಡವರೆಲ್ಲ
ಖರೀದಿಸಿದ್ದರೆ ರುದ್ರಾಕ್ಷಿ
ನೀಲಾಕ್ಷಿಯಾಗುತ್ತಿದ್ದಳು..
ನಿಜ ಅಕ್ಷರಶಃ ಸೋನಾಕ್ಷಿ.!
******************
3. ಸಂಚಲನ.!
ಕುಂಭಮೇಳದ ಸ್ನಾನಕ್ಕಿಂತ
ಎಲ್ಲೆಲ್ಲು ಅವಳದೇ ಧ್ಯಾನ
ನೀಲಿಕಂಗಳದ್ದೇ ಗುಣಗಾನ.!
***********************
4. ಭಾವ ಭಾಗೀರತಿ.!
ಕೋಟಿ ಕೋಟಿ ಕವಿತೆಗಳಿಗೆ ಕಾರಣ
ರುದ್ರಾಕ್ಷಿ ಮಾರಲು ನಿಂತ ನೀಲಾಕ್ಷಿ
ಕೋಟಿ ಕೋಟಿ ಕವಿತೆಗಳ ಹೂರಣ
ಅವಳ ಮಿಂಚಿನ ನೀಲಿ ರಂಗಿನ ಅಕ್ಷಿ.!
*********************
5. ಮೊನಲಿಸ.!
ಕಂಗಳಲ್ಲಿ ಪುಟಿವ ಚಿರಜೀವನೋತ್ಸಾಹ ಉಲ್ಲಾಸ
ತುಟಿಗಳಲ್ಲಿ ಹೊಳೆವ ಮುಗ್ಧ-ಸ್ನಿಗ್ಧ ಮಂದಹಾಸ
ಮುಂಗುರುಳ ಲಾಸ್ಯಕೆ ಜಗವೆ ನರ್ತಿಸುವಂತೆ ಭಾಸ
ನೀಲ್ಗಣ್ಣ ಮೊನಲಿಸಾ ಸೃಷ್ಟಿಸಿಹಳು ನವಇತಿಹಾಸ.!
**********************
6. ನಯನ ಮನೋಹರ.!
ಅಪ್ಪಟ ನೈಸರ್ಗಿಕ ಚೆಲುವಿಗೆ ಸಾಕ್ಷಿ
ಕುಂಭಮೇಳದಿ ಸುಂದರಿ ನೀಲಾಕ್ಷಿ
ನೋಡಿ ಹುಬ್ಬೇರಿದೆ ಲೋಕದ ಅಕ್ಷಿ.!
************************
7. ವಿಪರ್ಯಾಸ.!
ಕಂಡು ರುದ್ರಾಕ್ಷಿ ಮಾರುವ
ಸುಂದರಿಯ ಕಂಗಳ ನೀಲಿ
ಬಂದವರೆಲ್ಲ ಅವಳ ಸುತ್ತಲು
ಹೋದರು ನಿತ್ಯ ತೇಲಿ ತೇಲಿ
ಕಡೆಗೆ ಬೇಸತ್ತ ಹುಡುಗಿಯೇ
ಮಾಡಿಹಳು ಜಾಗ ಖಾಲಿ.!
ಎ.ಎನ್.ರಮೇಶ್.ಗುಬ್ಬಿ.