spot_img
spot_img

ಹೊಸ ಪುಸ್ತಕ ಓದು : ಅಪರೂಪದ ಆಕರ ಗ್ರಂಥ

Must Read

- Advertisement -

ಅಪರೂಪದ ಆಕರ ಗ್ರಂಥ

ಬಹುಮುಖಿ: ಡಾ. ಎಚ್. ಎಸ್. ಗೋಪಾಲರಾವ್ ಅಭಿನಂದನಾ ಗ್ರಂಥ

ಪ್ರಧಾನ ಸಂಪಾದಕರು: ಡಾ. ಡಿ. ವಿ. ಪರಮಶಿವಮೂರ್ತಿ

ಪ್ರಕಾಶಕರು: ಡಾ. ಎಚ್. ಎಸ್. ಗೋಪಾಲರಾವ್ ಅಭಿನಂದನ ಸಮಿತಿ, ಅರಸಿನಕುಂಟೆ ಬೆಂಗಳೂರು ಗ್ರಾಮಾಂತರ ಜಿಲ್ಲೆ ೨೦೨೨

- Advertisement -

ಸಂಪರ್ಕವಾಣಿ: ೯೪೪೮೨೬೧೮೬೦


[ನಿನ್ನೆ ಹಂಪಿ ಕನ್ನಡ ವಿಶ್ವವಿದ್ಯಾಲಯದ ನೂತನ ಕುಲಪತಿಗಳಾಗಿ ಆಯ್ಕೆಯಾದ ಡಾ. ಡಿ.ವಿ.ಪರಮಶಿವಮೂರ್ತಿ ಅವರಿಗೆ ಹಾರ್ದಿಕ ಅಭಿನಂದನೆಗಳನ್ನು ಸಲ್ಲಿಸುತ್ತ, ಅವರು ಇತ್ತೀಚೆಗ ಸಂಪಾದಿಸಿದ ಮಹತ್ವದ ಕೃತಿಯೊಂದರ ಕಿರುಪರಿಚಯ ನೀಡಿರುವೆ]

ಕರ್ನಾಟಕ ಏಕೀಕರಣ ಹೋರಾಟದ ಇತಿಹಾಸವನ್ನು ಸಮಗ್ರವಾಗಿ ಕಟ್ಟಿಕೊಟ್ಟ ಕೀರ್ತಿ ಡಾ. ಎಚ್. ಎಸ್. ಗೋಪಾಲರಾವ್ ಅವರಿಗೆ ಸಲ್ಲುತ್ತದೆ. ಸೃಜನಶೀಲ ಸಾಹಿತ್ಯ ಮಾತ್ರವಲ್ಲದೆ, ಕನ್ನಡ-ಕನ್ನಡಿಗ-ಕರ್ನಾಟಕ, ಜನಪದ, ಇತಿಹಾಸ, ಶಾಸನ, ವಿಜ್ಞಾನ, ಮನೋವಿಜ್ಞಾನ, ಪ್ರಾಗಿತಿಹಾಸ, ಪುರಾತತ್ತ್ವ, ಪಾಳೆಯಗಾರರ ಇತಿಹಾಸ, ಶಾಸ್ತ್ರ, ವಿಷಯ ನಿಷ್ಕರ್ಷೆ, ಸಂಸ್ಕೃತಿ, ಹಸ್ತಪ್ರತಿ, ಶಿಲ್ಪ-ವಾಸ್ತುಶಿಲ್ಪ ಮೊದಲಾದ ಪ್ರಕಾರಗಳಲ್ಲಿ ನೂರಾರು ಲೇಖನ ಕೃತಿಗಳನ್ನು ರಚಿಸಿ, ಇತಿಹಾಸ ಸಂಶೋಧಕರ ಸಾಲಿನಲ್ಲಿ ಬೆಳಗುತ್ತಿರುವ ಡಾ. ಗೋಪಾಲರಾವ್ ಅವರ ಅಭಿನಂದನ ಗ್ರಂಥವನ್ನು ಡಾ. ಪರಮಶಿವಮೂರ್ತಿ ಅವರು ತುಂಬ ಶ್ರಮ-ಶ್ರದ್ಧೆಗಳಿಂದ ಸಂಪಾದಿಸಿದ್ದಾರೆ. ಕನ್ನಡ ಭಾಷೆ-ಸಂಸ್ಕೃತಿ-ಇತಿಹಾಸಗಳನ್ನು ಅಧ್ಯಯನ ಮಾಡುವವರಿಗೆ ಇದೊಂದು ಮಹತ್ವದ ಆಕರ ಗ್ರಂಥವಾಗಿ ಮೂಡಿ ಬಂದಿದೆ. 

ನಮ್ಮ ಈ ವರೆಗಿನ ಉಪಲಬ್ಧ ಆಧಾರಗಳ ಮೇಲೆ ಕರ್ನಾಟಕದ ಚರಿತ್ರೆಯನ್ನು ಕಟ್ಟುತ್ತ ಬರಲಾಗಿದೆ. ಹೊಸ ಹೊಸ ಶಾಸನಗಳು, ಹಸ್ತಪ್ರತಿಗಳು, ಕೈಫಿಯತ್ತುಗಳು ದೊರೆಯುವ ಮೂಲಕ ಕನ್ನಡ ನಾಡಿನ ಚರಿತ್ರೆಯು ವಿಸ್ತಾರೋನ್ನತವಾಗಿ ಬೆಳೆಯುತ್ತ ಸಾಗಿದೆ. ಈ ಸಾಧನೆಯ ಹಾದಿಯಲ್ಲಿ ಹೆಜ್ಜೆ ಗುರುತುಗಳನ್ನು ಮೂಡಿಸಿದ ಶಾಸನತಜ್ಞರ ಸಾಲಿನಲ್ಲಿ ಅವಶ್ಯವಾಗಿ ಸೇರ್ಪಡೆಯಾಗುವ ಒಂದು ಪ್ರಮುಖ ಹೆಸರು ಡಾ. ಗೋಪಾಲರಾವ್ ಅವರದು.

- Advertisement -

ಪ್ರಾರಂಭದಲ್ಲಿ ಕವನ-ಕಾದಂಬರಿ ರಚನೆಯ ಮೂಲಕ ಸೃಜನಶೀಲ ಸಾಹಿತಿಯಾಗಿದ್ದ ಅವರು ಸಂಶೋಧನೆಯಡೆಗೆ ಸಾಗಿ ಕನ್ನಡ ಸಂಸ್ಕೃತಿಯ ವಿಶ್ವವಿಕಾಸದ ಮಹೋನ್ನತ ಘಟ್ಟವನ್ನು ಜಗದ ಜನಕ್ಕೆ ತೋರಿಸಿಕೊಟ್ಟಿದ್ದಾರೆ. ಕರ್ನಾಟಕದ ಇತಿಹಾಸವನ್ನು ಕುರಿತು ಅವರು ರಚಿಸಿದ ಕೃತಿಗಳು ಸಾರ್ವಕಾಲಿಕ ಆಕರ ಮೌಲ್ಯಗಳಾಗಿವೆ. ಅವರು ಬರೆದ ‘ನಮ್ಮ ನಾಡು ಕರ್ನಾಟಕ’ ಕೃತಿ ಈವರೆಗೆ ಹತ್ತು ಮುದ್ರಣಗಳನ್ನು ಕಂಡಿದೆ. ಕರ್ನಾಟಕ ಏಕೀಕರಣ ಇತಿಹಾಸ ಎಂಬ ಬೃಹತ್ ಕೃತಿಯೂ ಏಳು ಮುದ್ರಣಗಳನ್ನು ಕಂಡು ದಾಖಲೆ ನಿರ್ಮಿಸಿದೆ. ಸಾಮಾನ್ಯವಾಗಿ ಸಂಶೋಧನಾ ಕೃತಿಗಳ ಮೊದಲ ಆವೃತ್ತಿಯ ಕೃತಿಗಳೇ ಮಾರಾಟವಾಗುವುದು ದುಸ್ತರವಾಗಿರುವ ಸಂದರ್ಭದಲ್ಲಿ ಇವರ ಕೃತಿಗಳು ಹತ್ತಾರು ಮುದ್ರಣ ಕಂಡಿರುವುದು ಸಮಸ್ತ ಕನ್ನಡಿಗರು ಅಭಿಮಾನ ಮತ್ತು ಹೆಮ್ಮೆ ಪಡುವ ಸಂಗತಿಯಾಗಿದೆ. 

‘ಶಾಸನಗಳ ಹಿನ್ನೆಲೆಯಲ್ಲಿ ಕಲ್ಯಾಣ ಚಾಲುಕ್ಯ ದೇವಾಲಯಗಳು: ಒಂದು ಸಾಂಸ್ಕೃತಿಕ ಅಧ್ಯಯನ’ ಅವರ ಪಿಎಚ್.ಡಿ. ಮಹಾಪ್ರಬಂಧ. ಡಾ. ಚಿದಾನಂದಮೂರ್ತಿಯವರ ‘ಕನ್ನಡ ಶಾಸನಗಳ ಸಾಂಸ್ಕೃತಿಕ ಅಧ್ಯಯನ’ ಕೃತಿಯ ಸರಿಸಮಾನವಾಗಿ ನಿಲ್ಲಬಲ್ಲ ಏಕಮೇವ ಕೃತಿಯಾಗಿ ಇದು ಮೂಡಿ ಬಂದಿರುವುದು ಗಮನಾರ್ಹವಾದ ವಿಷಯ. 

ಕರ್ನಾಟಕದ ಇತಿಹಾಸ ಕುರಿತು ಅಧಿಕೃತ ಮಾಹಿತಿ ನೀಡುವ ಅದ್ಭುತ ಕೃತಿಗಳನ್ನು ರಚಿಸಿದ ಡಾ. ಗೋಪಾಲರಾವ್ ಅವರಿಗೆ ಅರ್ಪಿಸಿದ ಪ್ರಸ್ತುತ ‘ಬಹುಮುಖಿ’ ಅಭಿನಂದನ ಗ್ರಂಥವು ಐದು ಭಾಗಗಳಲ್ಲಿ ವಿಸ್ತಾರಗೊಂಡಿದೆ. ಐದು ವಿಭಾಗಗಳನ್ನು ಐದು ಹೆಜ್ಜೆಗಳೆಂದು ಕರೆದಿದ್ದಾರೆ. ಮೊದಲ ಹೆಜ್ಜೆಯಲ್ಲಿ ಡಾ. ಗೋಪಾಲರಾವ್ ಅವರ ಮಹತ್ವದ ಭಾವಚಿತ್ರಗಳ ಜೊತೆಗೆ ಅವರ ಜೀವನ ಪರಿಚಯ, ಅವರ ಕೃತಿಸೂಚಿ, ಲೇಖನ ಸೂಚಿಯನ್ನು ಕೊಟ್ಟಿದ್ದಾರೆ. ಎರಡನೆಯ ಹೆಜ್ಜೆಯಲ್ಲಿ- ನಮ್ಮ ನಾಡಿನ ಹಿರಿಯ  ವಿದ್ವಜ್ಜನರಾದ ಎಸ್. ಎಲ್. ಭೈರಪ್ಪ, ಹಂಪ ನಾಗರಾಜಯ್ಯ, ಎಚ್. ಎಸ್. ವೆಂಕಟೇಶಮೂರ್ತಿ ಅವರ ಹಿರಿಯರ ನುಡಿಗಳಿವೆ. ಮೂರನೆಯ ಹೆಜ್ಜೆಯಲ್ಲಿ- ಡಾ. ಗೋಪಾಲರಾವ್ ಅವರ ಸಂಕ್ಷಿಪ್ತ ಆತ್ಮಾವಲೋಕನವಿದೆ. ನಾಲ್ಕನೆಯ ಹೆಜ್ಜೆಯಲ್ಲಿ- ಡಾ. ಗೋಪಾಲರಾವ್ ಅವರ ಒಡನಾಡಿಗಳು, ಆತ್ಮೀಯರು, ಅಭಿಮಾನಿಗಳು, ಶಿಷ್ಯರು, ಕುಟುಂಬ ವರ್ಗದವರು ಬರೆದ ಆಪ್ತತೆಯ ಹೃದಯಸ್ಪರ್ಶಿ ಬರಹಗಳಿವೆ. 

ಐದನೆಯ ಹೆಜ್ಜೆಯಲ್ಲಿ- ೭೧ ಕನ್ನಡ ವಿದ್ವತ್ಪೂರ್ಣ ಲೇಖನಗಳಿವೆ. ೪ ಇಂಗ್ಲಿಷ್ ಲೇಖನಗಳಿವೆ. ಈ ಎಲ್ಲ ಲೇಖನಗಳು ಸಂಶೋಧನಾತ್ಮಕವೂ ವಿಮರ್ಶಾತ್ಮಕವೂ ಆಗಿರುವುದರಿಂದ ಕನ್ನಡ ನಾಡು ನುಡಿ ಸಂಸ್ಕೃತಿಗಳನ್ನು ಅಧ್ಯಯನ ಮಾಡುವ ಯಾರೇ ಆಗಲಿ ಈ ಕೃತಿಯನ್ನು ಅವಶ್ಯವಾಗಿ ಗಮನಿಸಲೇಬೇಕು.

ಅಷ್ಟರಮಟ್ಟಿಗೆ ಸಂಶೋಧನಾತ್ಮಕ ಲೇಖನಗಳನ್ನು ಈ ಅಭಿನಂದನ ಸಂಪುಟ ಒಳಗೊಂಡಿದೆ. ಕರ್ನಾಟಕದ ಪ್ರಮುಖ ಅರಸು ಮನೆತನಗಳು, ಪ್ರಮುಖ ಶಾಸನಗಳು, ಸಂಸ್ಥಾನಗಳು ಮೊದಲಾದ ವಿಷಯ ಕುರಿತು ಮಹತ್ವದ ಲೇಖನಗಳಿವೆ. ರಾಜರ ಕಾಲದ ಧಾರ್ಮಿಕ ಸ್ಥಿತಿ, ಸಾಮಾಜಿಕ ಪರಿಸರ, ಭೂವೈಜ್ಞಾನಿಕ ನೆಲೆ, ನೀರಾವರಿ ವ್ಯವಸ್ಥೆ ಮೊದಲಾದವುಗಳ ಕುರಿತು ಹೊಸ ದೃಷ್ಟಿಕೋನದ ಲೇಖನಗಳು ಇಲ್ಲಿವೆ. 

‘ಕರ್ನಾಟಕದ ಆದಿ ಇತಿಹಾಸ’, ಶ್ರವಣಬೆಳಗೊಳದ ಸಾಂಸ್ಕೃತಿಕ ಅಧ್ಯಯನ’, ಕರ್ನಾಟಕದಲ್ಲಿ ಅಪ್ಸರ ಶಿಲ್ಪಗಳ ಐತಿಹಾಸಿಕತೆ ಮತ್ತು ಪುರಾವೆ’, ‘ಕನ್ನಡ ಭಾಷೆಯಲ್ಲಿ ನೃತ್ಯಶಾಸ್ತç ಗ್ರಂಥಗಳು’ ‘ಕರ್ನಾಟಕದಲ್ಲಿ ಬಝೈರುಗಳ ಅಧ್ಯಯನ’, ‘ಶಂಬಾ ಮತ್ತು ಕರ್ನಾಟಕ ಸಂಸ್ಕೃತಿ’, ‘ವಿಗ್ರಹಾರಾಧನೆ ಮತ್ತು ದೇವಾಲಯ ಸಂಸ್ಕೃತಿ’, ‘ಶಾಸ್ತ್ರಕೃತಿಗಳಲ್ಲಿ ಕನ್ನಡ ನಾಡು-ನುಡಿ ಪ್ರಜ್ಞೆ’ ಮೊದಲಾದ ಲೇಖನಗಳು ಕರ್ನಾಟಕದ ಪುನರ್ ಇತಿಹಾಸ ನಿರ್ಮಾಣಕ್ಕೆ ಮಾರ್ಗದರ್ಶನ ಮಾಡಬಲ್ಲವುಗಳಾಗಿವೆ. ಹೀಗಾಗಿ ಈ ಅಭಿನಂದನ ಗ್ರಂಥ ಡಾ. ಗೋಪಾಲರಾವ್ ಅವರನ್ನು ನೆಪವಾಗಿಟ್ಟುಕೊಂಡು ಸಿದ್ಧಗೊಂಡಿದ್ದರೂ ಕರ್ನಾಟಕದ ಚರಿತ್ರೆಯ ಪುನರ್ ರಚನೆಗೆ ನಾಂದಿ ಹಾಡಿದೆ. 

ಇಂತಹ ಮಹತ್ವದ ಬೃಹತ್ ಅಭಿನಂದನ ಗ್ರಂಥದಲ್ಲಿ ನಾನು ಬರೆದ ‘ಬೆಳಗಾವಿ ಜಿಲ್ಲೆಯ ಶಕ್ತಿದೇವತೆಗಳ ಸಾಂಸ್ಕೃತಿಕ ಪಲ್ಲಟ’ ಎಂಬ ಲೇಖನವೂ ಸೇರ್ಪಡೆಯಾಗಿರುವುದು ನನ್ನ ಭಾಗ್ಯವೆನಿಸಿದೆ.

ಇಂಥ ಒಂದು ಮೌಲಿಕ ಗ್ರಂಥವನ್ನು ಅತ್ಯಂತ ಶ್ರಮ ಶ್ರದ್ಧೆಯಿಂದ ಸಂಪಾದಿಸಿ ನಾಡಿಗೆ ನೀಡಿದ ಡಾ. ಡಿ. ವಿ. ಪರಮಶಿವಮೂರ್ತಿ ಅವರಿಗೆ ವಂದನೆ-ಅಭಿನಂದನೆಗಳು.


ಪ್ರಕಾಶ ಗಿರಿಮಲ್ಲನವರ

- Advertisement -
- Advertisement -

Latest News

ಸಿಂದಗಿ ಮಂಡಲ ವತಿಯಿಂದ ರಸ್ತಾರೋಖೋ ಪ್ರತಿಭಟನೆ

ಸಿಂದಗಿ - ರಾಜ್ಯ ಸರ್ಕಾರ ಪೆಟ್ರೋಲ್ ಮತ್ತು ಡೀಸೆಲ್ ದರ ಏರಿಕೆ ಮಾಡಿದ್ದು, ರಾಜ್ಯದಲ್ಲಿನ ಕಾನೂನ ಸುವ್ಯವಸ್ಥೆ ಸಂಪೂರ್ಣ ಹದಗೆಟ್ಟಿದ್ದು ಹಾಗೂ ವಾಲ್ಮೀಕಿ ನಿಗಮದ ಹಗರಣದ...
- Advertisement -

More Articles Like This

- Advertisement -
close
error: Content is protected !!
Join WhatsApp Group