spot_img
spot_img

Ram Manohar Lohiya Information in Kannada- ರಾಮ ಮನೋಹರ ಲೋಹಿಯಾ

Must Read

- Advertisement -

1930ರಲ್ಲಿ  ಜಿನೀವಾ ನಗರದಲ್ಲಿ ‘ಲೀಗ್‌ ಆಫ್‌ ನೇಷನ್ಸ್‌’ ಪ್ರೇಕ್ಷಕರ ಗ್ಯಾಲರಿಯಿಂದ ಒಂದು ದೊಡ್ಡ ಶಿಳ್ಳು ಕೇಳಿಬಂದಿತು.

ಸಮಿತಿಯ ಅಧ್ಯಕ್ಷರೂ, ಸದಸ್ಯರೆಲ್ಲರೂ ಚಕಿತರಾಗಿ ಶಿಳ್ಳು ಹೊಡೆದ ವ್ಯಕ್ತಿಯತ್ತ ತಿರುಗಿದರು. ಭಾರತೀಯ ಪ್ರತಿನಿಧಿ ಬಿಕನೀರ್ ಮಹಾರಾಜ ತಾನು ಕೊಡುತ್ತಿದ್ದ ಭಾಷಣವನ್ನು ನಿಲ್ಲಿಸಿ ನಿಬ್ಬೆರಗಾಗಿ ಪ್ರೇಕ್ಷಕರ ಗ್ಯಾಲರಿ ಕಡೆ ನೋಡಿದರು. ಆತ ಭಾರತ ದೇಶದಲ್ಲಿನ ಬ್ರಿಟಿಷರ ಆಡಳಿತದ ಶ್ರೇಷ್ಠತೆಯನ್ನು ಕುರಿತು ಭಾಷಣ ಕೊಡುತ್ತಿದ್ದರು.

ಬಿಕನೀರ್ ಮಹಾರಾಜ ಲೀಗ್ ಆಫ್ ನೇಷನ್ಸ್ ಒಕ್ಕೂಟದದಲ್ಲಿ ನೀಡುತ್ತಿದ್ದ ಈ ಬುರುಡೆ ಭಾಷಣಕ್ಕೆ ವಿರೋಧ ಸೂಚಕವಾಗಿ ಶಿಳ್ಳು ಹೊಡೆದವರು ರಾಮಮನೋಹರ ಲೋಹಿಯಾ. ಅನಂತರ ಅವರನ್ನು ಬಲವಂತವಾಗಿ ಹೊರದಬ್ಬಲಾಯಿತು.

- Advertisement -

ಲೋಹಿಯಾ ಹುಟ್ಟಿದ್ದು 1910ರ ಮಾರ್ಚ್ 23ರಂದು.  ಅವರ ತಂದೆ ಹೀರಾಲಾಲರು ಉತ್ತರ ಪ್ರದೇಶದ ಫೈಜಾಬಾದಿನ ವ್ಯಾಪಾರಿ. ರಾಮ ಮನೋಹರನಿಗೆ ಎರಡೂವರೆ ವರ್ಷವಾಗಿದ್ದಾಗ ತಾಯಿ ತೀರಿಕೊಂಡಳು. ಹುಡುಗನ ಅಜ್ಜಿ ಅವನನ್ನು ಸಾಕಿದಳು.

ತಂದೆಗೆ ಮಹಾತ್ಮ ಗಾಂಧೀಜಿಯಲ್ಲಿ ಬಹಳ ಭಕ್ತಿ, ನಿಷ್ಠೆ. ತಮ್ಮ ಮಗ ಒಂಬತ್ತು ವರ್ಷದ ಬಾಲಕನಿದ್ದಾಗಲೇ ಗಾಂಧೀಜಿಯವರ ದರ್ಶನ ಮಾಡಿಸಿದರು. 1923ರಲ್ಲಿ ಬಿಹಾರದ ಗಯಾದಲ್ಲಿ ಭಾರತ ರಾಷ್ಟ್ರೀಯ ಕಾಂಗ್ರೆಸಿನ ಮಹಾಧಿವೇಶನ ನಡೆಯಿತು. ಆಗ ಎಳೆಯ ಲೋಹಿಯಾ ಕಾಂಗ್ರೆಸ್‌ ಸ್ವಯಂಸೇವಕ. 1926ರಲ್ಲಿ ನಡೆದ ಗೌಹಾತಿ ಅಧಿವೇಶನಕ್ಕೂ ಹೋಗಿದ್ದರು.

ಲೋಹಿಯಾ ಕಲಿತದ್ದು ಮುಂಬಯಿ, ಕಾಶಿ ಹಾಗೂ ಕಲ್ಕತ್ತಾಗಳಲ್ಲಿ. 1925ರಲ್ಲಿ ಮೆಟ್ರಿಕ್ಯುಲೇಷನ್‌ ಪರೀಕ್ಷೆಯಲ್ಲಿ ಮೊದಲನೇ ದರ್ಜೆಯಲ್ಲಿ ತೇರ್ಗಡೆಯಾದರು. ಕಾಶಿ ವಿಶ್ವವಿದ್ಯಾನಿಲಯದಲ್ಲಿ ಎರಡು ವರ್ಷ ಅಭ್ಯಾಸ ಮಾಡಿ, ಅನಂತರ ಕಲ್ಕತ್ತಾದ ವಿದ್ಯಾಸಾಗರ ಕಾಲೇಜನ್ನು ಸೇರಿ 1929ರಲ್ಲಿ ಇಂಗ್ಲೀಷ್‌ ಭಾಷೆಯ ಆನರ್ಸ್‌ ಪರೀಕ್ಷೆಯಲ್ಲಿ ಉತ್ತೀರ್ಣರಾದರು.

- Advertisement -

ಭಾರತವನ್ನು ಆಳುತ್ತಿದ್ದ ಬ್ರಿಟಿಷರ ಇಂಗ್ಲೆಂಡಿನಲ್ಲಿ ಓದುವುದು ಬೇಡವೆನಿಸಿ ಜರ್ಮನಿಗೆ ಹೋದರು.  ಲೋಹಿಯಾ ಅವರಿಗೆ ಇಂಗ್ಲಿಷ್ ಭಾಷೆಯಲ್ಲಿ ಅಪಾರವಾದ ಪಾಂಡಿತ್ಯವಿತ್ತು. 

ಆದರೆ ಬರ್ಲಿನ್ ವಿಶ್ವವಿದ್ಯಾಲಯದಲ್ಲಿ ಅವರ ಪ್ರೊಫೆಸರ್ ಪೂರ್ಣವಾಗಿ ಜರ್ಮನ್ ಭಾಷೆಯಲ್ಲಿ ಸಂಭಾಷಿಸುತ್ತಿದ್ದರು.  ಮೂರು ತಿಂಗಳ ನಂತರ ಪುನಃ ಬಂದು ತಮ್ಮ ಬಳಿ ಕಲಿಯುತ್ತೇನೆಂದು ವಾಗ್ಧನ ಮಾಡಿ ಹೋದ ಲೋಹಿಯಾ ಜರ್ಮನ್ ಭಾಷೆಯಲ್ಲಿ ಅಪ್ರತಿಮ ಪರಿಣತಿ ಸಾಧಿಸಿ ತಮ್ಮ ಪ್ರೋಫೆಸರಿಗೆ ಅಚ್ಚರಿ ಹುಟ್ಟಿಸಿದರು. 

ಅಲ್ಲಿ ಆಗ ಹಿಟ್ಲರ್ ಮೇಲುಗೈಯಲ್ಲಿದ್ದ. ಬರ್ಲಿನ್‌ ವಿಶ್ವವಿದ್ಯಾನಿಲಯದಲ್ಲಿ ಡಾಕ್ಟರೇಟ್‌ ಪದವಿಗೆ ಪ್ರಬಂಧ ಬರೆದರು. ವಿಷಯ: ಭಾರತದಲ್ಲಿ ನಡೆದಿದ್ದ ‘ಉಪ್ಪಿನ ಸತ್ಯಾಗ್ರಹ’. ರಾಜ್ಯಶಾಸ್ತ್ರ ಹಾಗೂ ಅರ್ಥಶಾಸ್ತ್ರ ಎರಡರಲ್ಲೂ ಅವರಿಗೆ ಡಾಕ್ಟರೇಟ್‌ ಪದವಿ ದೊರೆಯಿತು. 1932ರಲ್ಲಿ ಭಾರತಕ್ಕೆ ಮರಳಿದರು.

ಆಗ ದೇಶದಾದ್ಯಂತ ಗಾಂಧೀಜಿ ಹೂಡಿದ ಸತ್ಯಾಗ್ರಹ ಹಬ್ಬಿತು. ಲೋಹಿಯಾ ಅದರಲ್ಲಿ ಸೇರಿದರು. ಸೆರೆಮನೆ ವಾಸ ಅವರಿಗೆ ಸಿಕ್ಕ ಬಹುಮಾನ. ಆಗ ಕಾಂಗ್ರೆಸಿನಲ್ಲಿದ್ದ ಹರೆಯದ ಹುಡುಗರು ಒಂದು ಆಲೋಚನೆ ಮಾಡಿದರು. ಹಿರಿಯರ ವೇಗ ಅವರಿಗೆ ಸಾಲದೆನಿಸಿತು. ಬೇಗಬೇಗ ಮುನ್ನುಗ್ಗುವ ತವಕ. ನಾಸಿಕ್‌ ರೋಡ್‌ ಸೆರೆಮನೆಯಲ್ಲಿ ಇಂಥ ಹಲವು ತರುಣರು ಒಟ್ಟಿಗೆ ಇದ್ದರು.

ಅವರಿಗೆಲ್ಲ ಬಡವರಲ್ಲಿ, ರೈತರಲ್ಲಿ, ಕಾರ್ಮಿಕರಲ್ಲಿ ಬಹಳ ಅನುಕಂಪ. ಅವರ ಏಳಿಗೆಗಾಗಿ ದುಡಿಯುವ ಸಂಕಲ್ಪದಿಂದಾಗಿ ಕಾಂಗ್ರೆಸ್ಸಿನೊಳಗೆ ತರುಣರ ಒಂದು ಗುಂಪು ಕಟ್ಟಿದರು. ಇದರ ಮೂಲಪುರುಷರಲ್ಲಿ ಜಯಪ್ರಕಾಶ ನಾರಾಯಣ, ರಾಮ ಮನೋಹರ ಲೋಹಿಯಾ, ಯುಸುಫ್‌ ಮೆಹರಲ್ಲೀ, ಅಚ್ಯುತ ಪಟವರ್ಧನ, ಅಶೋಕ ಮೆಹತಾ, ಕಮಲಾ ಬಾಯಿ ಚಟ್ಟೋಪಾಧ್ಯಾಯ, ಆಚಾರ್ಯ ನರೇಂದ್ರ ದೇವ ಮುಂತಾದವರೆಲ್ಲ ಸೇರಿದ್ದರು. ಶ್ರಮಜೀವಿಗಳ ರಾಜ್ಯವನ್ನು ಸ್ಥಾಪಿಸುವ ಕನಸು ಕಂಡರು. ಅದಕ್ಕಾಗಿಯೇ ಬ್ರಿಟಿಷರ ಆಡಳಿತವನ್ನು ಕೊನೆಗಾಣಿಸಬೇಕೆಂದು ಪಟ್ಟು ಹಿಡಿದರು. ‘ಕಾಂಗ್ರೆಸ್‌ ಸೋಷಿಯಲಿಸ್ಟ್‌’ ಎಂಬ ಪತ್ರಿಕೆಗೆ ಲೋಹಿಯಾ ಸಂಪಾದಕರಾದರು.

ವಿದೇಶ ವ್ಯಾಸಂಗ ಮಾಡಿ ಬಂದಿದ್ದ ರಾಮ ಮನೋಹರರಿಗೆ ಅಂತರರಾಷ್ಟ್ರೀಯ ವಿಷಯಗಳು ತುಂಬ ಚೆನ್ನಾಗಿ ತಿಳಿದಿದ್ದವು. ಕಾಂಗ್ರೆಸ್‌, ವಿದೇಶಾಂಗ ಶಾಖೆಯೊಂದನ್ನು ಸ್ಥಾಪಿಸಿತು. ಅದರ ಮೇಲ್ವಿಚಾರಣೆ ಇವರ ಕೈಗೆ ಬಂತು. ಜಗತ್ತಿನ ಬೇರೆಬೇರೆ ದೇಶಗಳ ಪ್ರಗತಿಪರರೊಡನೆ ಕಾಂಗ್ರೆಸ್ಸಿನ ಸಂಬಂಧ ಕಲ್ಪಿಸಿದರು. ವಿದೇಶಗಳಲ್ಲಿರುವ ಭಾರತೀಯರ ಹಿತರಕ್ಷಣೆಗೆ ಪ್ರತ್ಯೇಕ ಶಾಖೆ ರಚಿಸಿದರು.

ಲೋಹಿಯಾ ಅಖಿಲ ಭಾರತ ಕಾಂಗ್ರೆಸ್‌ ಸಮಿತಿಯ ಸದಸ್ಯರಾಗಿ ಆಯ್ಕೆ ಹೊಂದಿದರು. ದೇಶದಾದ್ಯಂತ ಸಂಚರಿಸಿದರು. ಯುವಜನರನ್ನು ಸ್ವಾತಂತ್ಯ್ರ ಚಳುವಳಿಗೆ ಸೆಳೆದರು. 1938ರಲ್ಲಿ ರಾಜ ದ್ರೋಹದ ಆಪಾದನೆಗೆ ಗುರಿಪಡಿಸಿ ಬ್ರಿಟಿಷರು ಕಲ್ಕತ್ತೆಯಲ್ಲಿ ಇವರನ್ನು ಬಂಧಿಸಿದರು. ಎರಡನೆಯ ಮಹಾಯುದ್ಧಕ್ಕೆ ಭಾರತವನ್ನು ಬಲಾತ್ಕಾರವಾಗಿ ಬ್ರಿಟಿಷರು ಸೆಳೆದಿದ್ದರು. ಡಾ. ಲೋಹಿಯಾ ಯುದ್ಧ ವಿರೋಧಿಯಾಗಿದ್ದರು. ಅವರು ಮಾಡಿದ ಯುದ್ಧ ವಿರೋಧಿ ಭಾಷಣಗಳಿಗಾಗಿ 1940ರಲ್ಲಿ ಅವರನ್ನು ಬ್ರಿಟಿಷ್‌ ಸರ್ಕಾರ ಮತ್ತೆ ಸೆರೆಮನೆಗೆ ದೂಡಿತು.

1942 ಮಹಾತ್ಮಗಾಂಧೀಜಿ ‘ಬ್ರಿಟಿಷರೇ.ಭಾರತ ಬಿಟ್ಟು ತೊಲಗಿ’ ಸತ್ಯಾಗ್ರಹ ಪ್ರಾರಂಭಿಸಿದರು. ಆ ವರ್ಷ ಆಗಸ್ಟ್‌ ಏಳು-ಎಂಟರಂದು ಮುಂಬಯಿಯಲ್ಲಿ ಅಖಿಲ ಭಾರತ ಕಾಂಗ್ರೆಸ್‌ ಸಮಿತಿ ಸಭೆ ಸೇರಿತು. ಅಲ್ಲಿ ‘ಚಲೇ ಜಾವ್‌’ ನಿರ್ಣಯ ಅಂಗೀಕಾರವಾಯಿತು.

ಆಗಸ್ಟ್‌ 9 ರಂದು ಬೆಳಗಿನ ಜಾವ ಬ್ರಿಟಿಷ್‌ ಸರ್ಕಾರ ಗಾಂಧೀಜಿ ಮತ್ತು ಇತರ ಎಲ್ಲ ರಾಷ್ಟ್ರನಾಯಕರನ್ನು ಸೆರೆಮನೆಗೆ ಒಯ್ದಿತು. ದೇಶಕ್ಕೆ ಬಾಪೂ ಒಂದು ಮಂತ್ರ ಕೊಟ್ಟರು ‘ಮಾಡು ಇಲ್ಲ ಮಡಿ’. ಈ ಮಂತ್ರವನ್ನು ಕೇಳಿ ಇಡೀ ರಾಷ್ಟ್ರಕ್ಕೆ ರಾಷ್ಟ್ರವೇ ಪ್ರಚಂಡವಾಗಿ ಎದ್ದು ನಿಂತಿತು. ಎಷ್ಟೋ ಮಂದಿ ರಾಷ್ಟ್ರನಾಯಕರು ಸರ್ಕಾರದ ಕಣ್ಣು ತಪ್ಪಿಸಿ ತಲೆಮರೆಸಿಕೊಂಡು ಚಳುವಳಿಯನ್ನು ಸಂಘಟಿಸಿದರು. ಅವರಲ್ಲಿ ಲೋಹಿಯಾ ಅಗ್ರಗಣ್ಯರು. ಗುಪ್ತ ಆಕಾಶವಾಣಿ ಕೇಂದ್ರವೊಂದನ್ನು ಅವರು ನಡೆಸಿದರು. ಜಯಪ್ರಕಾಶ ನಾರಾಯಣರೊಡಗೂಡಿ ಭೂಗತ ಚಳುವಳಿಯನ್ನು ಸಂಘಟಿಸಿದರು.

1944ರಲ್ಲಿ ಸರ್ಕಾರ ಲೋಹಿಯಾ ಅವರನ್ನು ಬಂಧಿಸಿತು. ಸೆರೆಮನೆಯಲ್ಲಿ ಬಗೆಬಗೆಯ ಚಿತ್ರಹಿಂಸೆಗೆ ಗುರಿಪಡಿಸಿತು. ಒಂದೊಂದು ದಿನ ಒಂದೊಂದು ತೂಕದ ಅಳತೆಯ ಕೈಕೋಳಗಳನ್ನು ತೊಡಿಸುವುದು, ಅವರನ್ನು ಅಧಿಕಾರಿಯ ಕೊಠಡಿಯಲ್ಲಿ ಕೂಡಿಸಿ ಒಂದೇ ಶಬ್ದವನ್ನು ಗಂಟೆಗಟ್ಟಲೆ ಅವರ ಮುಂದೆ ಉಚ್ಚರಿಸುವುದು, ಇಡೀ ರಾತ್ರಿ ಅವರು ಕಣ್ಣನ್ನು ಮುಚ್ಚದಂತೆ ನಿರ್ಬಂಧಿಸುವುದು, ಅವರು ಕಣ್ಣು ಮುಚ್ಚಿದರೆ ತಲೆ ಹಿಡಿದು ಸುತ್ತಿಸುವುದು ಇಲ್ಲವೆ ಕೈಕೋಳಗಳನ್ನು ಜಗ್ಗುವುದು, ನಾಲ್ಕೈದು ರಾತ್ರಿ ಅವರು ನಿದ್ರೆ ಮಾಡದಂತೆ ಪಕ್ಕದಲ್ಲೆ ಲೋಹದ ತುಂಡಿನಿಂದ ಮೇಜನ್ನು ಕುಟ್ಟುವುದು, ಅವರ ಎದುರಿಗೆ ರಾಷ್ಟ್ರೀಯ ನಾಯಕರನ್ನು ಬಾಯಿಗೆ ಬಂದಂತೆ ಬೈಯ್ಯುವುದು-ಹೀಗೆ ವಿಧವಿಧವಾಗಿ ಅವರಿಗೆ ಹಿಂಸೆ. ಆಯಾಸಗೊಂಡಿದ್ದ ನಿಶ್ಯಕ್ತರಾಗಿದ್ದ ಲೋಹಿಯಾ, ಗಾಂಧೀಜಿಯನ್ನು ಬೈಯುತ್ತಿದ್ದ ಅಧಿಕಾರಿಗೆ ‘ಮುಚ್ಚು ಬಾಯಿ’ ಎಂದು ಗುಡುಗಿದರು. ಪೊಲೀಸಿನವನು ಎಗರಾಡಿದ. ಆದರೆ ಮತ್ತೆ ಹಾಗೆ ಮಾಡಲಿಲ್ಲ. ಕಡೆಗೆ 1946ರಲ್ಲಿ ಅವರ ಬಿಡುಗಡೆ ಆಯಿತು.

ಆ ವೇಳೆಗಾಗಲೇ ಭಾರತದ ಸ್ವಾತಂತ್ಯ್ರ ಹತ್ತಿರ ಬಂದಿತ್ತು. ಬ್ರಿಟಿಷರ ಗುಲಾಮಗಿರಿ ತಪ್ಪಿದರೂ ಪೋರ್ಚುಗೀಸರ ಗುಲಾಮಗಿರಿ ತಪ್ಪುವಂತಿರಲಿಲ್ಲ. ಗೋವೆ, ದೀವ್‌, ದಮನ್‌ ಈ ಭಾಗಗಳನ್ನು ನಾನೂರೈವತ್ತು ವರ್ಷಗಳಿಂದ ಪೋರ್ಚುಗೀಸ್‌ ಸಾಮ್ರಾಜ್ಯ ಶಾಹಿಗಳು ಆಳುತ್ತಿದ್ದರು. ಬ್ರಿಟಿಷರಿಗಿಂತ ಅವರ ಆಳ್ವಿಗೆ ಘೋರವಾಗಿತ್ತು. 1946ರಲ್ಲಿ ಸೆರೆಮನೆಯಿಂದ ಹೊರಬಂದ ಕೂಡಲೇ ಲೋಹಿಯಾ ಅವರ ಗಮನ ಗೋವೆಯ ಕಡೆ ತಿರುಗಿತು. ಕರ್ನಾಟಕದ ಬೆಳಗಾವಿ ನಗರಕ್ಕೆ ಬಂದರು. ಗೋವೆಯಲ್ಲಿ ಚಳುವಳಿ ನಡೆಸಲು ಸಂಘಟನೆಗೆ ತೊಡಗಿದರು. ಗೋವೆಯನ್ನು ಪ್ರವೇಶಿಸಿದರು. ಪೋರ್ಚುಗೀಸ್‌ ಸರ್ಕಾರ ಅವರನ್ನು ಬಂಧಿಸಿ ಹೊರದೂಡಿತು. ಹೀಗೆ ಗೋವೆಯ ವಿಮೋಚನೆಗೆ ಲೋಹಿಯಾ ತಳಹದಿ ಹಾಕಿದರು.

ಅತ್ತ ಉತ್ತರದ ಹಿಮಾಲಯದ ತಪ್ಪಲಲ್ಲಿ ಇರುವ ನೇಪಾಳ; ಅಲ್ಲಿ ರಾಣಾ ಮನೆತನದ ದಬ್ಬಾಳಿಕೆ. ನೇಪಾಳದ ತರುಣರು ಕಾಶಿಯಲ್ಲಿ ಕಲಿತವರು. ಅವರಿಗೆಲ್ಲ ಲೋಹಿಯಾ ರಾಜಕೀಯ ಗುರು. ನೇಪಾಳದಲ್ಲಿ ರಾಣಾಶಾಹಿಯ ಅಂತ್ಯಕ್ಕಾಗಿ ನಡೆದ ಚಳುವಳಿಗೆ ಇವರದೇ ಸ್ಫೂರ್ತಿ.

1947ರಲ್ಲಿ ದೇಶ ವಿಭಜನೆಯಾದ ದುರಂತ ಕಂಡು ಲೋಹಿಯಾ ಕಸಿವಿಸಿಗೊಂಡರು. 1948 ಜನವರಿ 30ರಂದು ಗಾಂಧೀಜಿಯ ಕೊಲೆ ಆಯಿತು. ದೇಶದಾದ್ಯಂತ ಕೋಮುವಾರು ವಿಷಜ್ವಾಲೆ ಆವರಿಸಿತು. ಈ ಸಂದರ್ಭದಲ್ಲಿ ಕಾಂಗ್ರೆಸಿನ ಹಿರಿಯ ನಾಯಕರು ಅನುಸರಿಸಿದ ನೀತಿ ಕಾಂಗ್ರೆಸ್‌ ಸಮಾಜವಾದೀ ಪಕ್ಷಕ್ಕೆ ಸರಿತೋರಲಿಲ್ಲ. ರೈತರು, ಕಾರ್ಮಿಕರು ಹಾಗೂ ಮಧ್ಯಮ ವರ್ಗದ ಶ್ರಮಜೀವಿಗಳ ಸಂಘಟನೆಗೆ ಸಮಾಜ ವಾದಿಗಳು ಸಂಕಲ್ಪ ತಳೆದರು. ಆ ವರ್ಷ ಏಪ್ರಿಲ್‌ 15ರಂದು ಕಾಂಗ್ರೆಸ್ಸನ್ನು ತೊರೆದು ಸಮಾಜವಾದಿಗಳೆಲ್ಲ ಹೊರಬಂದರು. ತಮ್ಮದೇ ಆದ ಪ್ರತ್ಯೇಕ ಪಕ್ಷ ರಚಿಸಿದರು. ಅವರ ಅಗ್ರ ನಾಯಕರಲ್ಲಿ ಲೋಹಿಯಾ ಒಬ್ಬರಾದರು.

ಅನಂತರ ದೇಶದಾದ್ಯಂತ ಲೋಹಿಯಾ ಸಂಚಾರ ಕೈಗೊಂಡರು. ಜವಾಹರಲಾಲ್‌ ನೆಹರೂ ಅವರ ಸರ್ಕಾರ ಅನುಸರಿಸುತ್ತಿದ್ದ ಧೋರಣೆಗಳನ್ನು ಉಗ್ರವಾಗಿ ಟೀಕಿಸಿದರು. ತಮ್ಮದೇ ಆದ ರೀತಿಯಲ್ಲಿ ಸಮಾಜವಾದೀ ಪಕ್ಷದ ನೀತಿ ನಿಲುವುಗಳನ್ನು ಪ್ರತಿಪಾದಿಸಿದರು. ದೇಶದ ಯುವಜನರ ಮನಸ್ಸನ್ನು ಸೂರೆಗೊಂಡರು.

ಕರ್ನಾಟಕಕ್ಕೂ ರಾಮ ಮನೋಹರ ಲೋಹಿಯಾ ಅವರಿಗೂ ಆತ್ಮೀಯ ಸಂಬಂಧ ಏರ್ಪಟ್ಟ ಒಂದು ಮಹತ್ವದ ಪ್ರಸಂಗ, ಸಾಗರ ತಾಲ್ಲೂಕಿನ. ಸಣ್ಣ ಹಳ್ಳಿ ಕಾಗೋಡು ಎಂಬಲ್ಲಾಯಿತು.  

ಆ ಊರಿನಲ್ಲಿ ಒಬ್ಬರೇ ಒಬ್ಬರು ಜಮೀನುದಾರರು. ಉಳಿದವರೆಲ್ಲ ಗೇಣಿಕಾರರು, ಒಕ್ಕಲುಗಳು. ಅವರ ಆರ್ಥಿಕ, ಸಾಮಾಜಿಕ ಸ್ಥಿತಿ ತುಂಬ ಶೋಚನೀಯವಾಗಿತ್ತು. ರೈತರು ಭೂ ಒಡೆಯರ ಎದುರು ನೆಟ್ಟಗೆ ನಿಲ್ಲಲೂ ಅಂಜುತ್ತಿದ್ದರು. ಮೊಣಕಾಲಿನಿಂದ ಮೇಲಕ್ಕೆ ಧೋತರ ಉಡಬೇಕು. ಹೆಂಗಸರು ಸೀರೆಯನ್ನು ಕಾಲಿನತನಕ ಉಡುವಂತಿಲ್ಲ. ಒಡೆಯರ ಮನೆಯಲ್ಲಿ ಬಿಟ್ಟಿ ದುಡಿತ, ವಿದ್ಯೆಯ ಗಂಧವೇ ಇಲ್ಲ. ಇವೆಲ್ಲ ವಿಧಿ ವಿಲಾಸ ಎಂದು ನಂಬಿದ್ದ ಮೂಕ ಜನ.

ಸ್ವಾತಂತ್ಯ್ರದ ಬಳಿಕ ಹೊಸ ಗಾಳಿ ಮಲೆನಾಡಿಗೆ ಬೀಸಿತು. ರೈತರು ಎಚ್ಚರಗೊಂಡರು. ತಾವೂ ಮನುಷ್ಯರು ಎಂಬುದನ್ನು ಕಂಡುಕೊಂಡರು. ಸಂಘ ಕಟ್ಟಿದರು. ಇದು ಭೂ ಒಡೆಯರಿಗೆ ಹಿಡಿಸಲಿಲ್ಲ. ಬಹು ಕಾಲದಿಂದ ತುಳಿದಿಟ್ಟಿದ್ದ ಜನ ತಿರುಗಿಬಿದ್ದರೆ ಹೇಗೆ? ಒಡೆಯರನ್ನು ಭಯ ಆವರಿಸಿತು. ಗೇಣಿದಾರರನ್ನು ಕಾಗೋಡಿನ ಜಮೀನುದಾರರು ಭೂಮಿಯಿಂದ ಬಿಡಿಸಿದರು. 1951ರಲ್ಲಿ ರೈತರು ಕೂಡಿ ಯೋಚಿಸಿದರು. ಅನ್ಯಾಯವನ್ನು ಎದುರಿಸಲೇಬೇಕೆಂದು ನಿಶ್ಚಯಿಸಿದರು.

‘ರೈತ ಸಂಘ’ ಮತ್ತು ಕರ್ನಾಟಕದ ‘ಸಮಾಜವಾದೀ ಪಕ್ಷ’ ಈ ಅನ್ಯಾಯದ ವಿರುದ್ಧ ಸತ್ಯಾಗ್ರಹ ಹೂಡಿದವು. ಅನೇಕ ದಿನ ರೈತರು ಗುಂಪುಗುಂಪಾಗಿ ಗದ್ದೆಗೆ ಇಳಿದು ತಮ್ಮ ಹಕ್ಕಿನ ಸ್ಥಾಪನೆಗಾಗಿ ಹೋರಾಟ ಹೂಡಿದರು. ಸರ್ಕಾರ ಭೂ ಒಡೆಯರ ಪಕ್ಷ ವಹಿಸಿತು. ರೈತರು ಸಮಾಜವಾದಿಗಳ ನೇತೃತ್ವದಲ್ಲಿ ನೂರುಗಟ್ಟಲೆ ಸಂಖ್ಯೆಯಲ್ಲಿ ಸಾಗರ ಮತ್ತು ಶಿವಮೊಗ್ಗೆಗಳ ಸೆರೆಮನೆಗಳನ್ನು ತುಂಬಿದರು.

1951ರ ಜುಲೈ ತಿಂಗಳಲ್ಲಿ ಡಾ. ಲೋಹಿಯಾ ಅವರಿಗೆ ಈ ಸುದ್ಧಿ ತಿಳಿಯಿತು. ಕನ್ನಡ ನಾಡಿಗೆ ಅವರು ಧಾವಿಸಿ ಬಂದರು. ಬೆಂಗಳೂರಿನಿಂದ ನೆಟ್ಟಗೆ ಇಲ್ಲಿನ ನಾಯಕರೊಂದಿಗೆ ಸಾಗರಕ್ಕೆ ತೆರಳಿದರು; ಅಲ್ಲಿಂದ ಕಾಗೋಡು ಗ್ರಾಮಕ್ಕೆ. ಒಳ್ಳೆಯ ಮಳೆಗಾಲ; ಒಂದೇ ಸಮನೆ ಮಳೆ ಬೀಳುತ್ತಿತ್ತು.

ಜುಲೈ 12ರ ಮಧ್ಯಾಹ್ನ. ಸ್ವಲ್ಪ ಹೊಳವಾಗಿತ್ತು. ಕಾಗೋಡಿನ ರೈತರ ನೇತೃತ್ವ ವಹಿಸಿ ಗದ್ದೆಗೆ ಇಳಿದು ಸಮಾಜವಾದೀ ಪಕ್ಷದ ಧ್ವಜ ಹಿಡಿದು ಲೋಹಿಯಾ ಸತ್ಯಾಗ್ರಹ ನಡೆಸಿದರು. ಆ ಊರಿನಲ್ಲಿ ಮೆರವಣಿಗೆ ನಡೆದಾಗ ಅತ್ಯಂತ ಸ್ತಬ್ಧ ವಾತಾವರಣ. ಸತ್ಯಾಗ್ರಹ ಮುಗಿಸಿ ಸಾಗರದ ರೈಲ್ವೆ ನಿಲ್ದಾಣದ ವಿಶ್ರಾಂತಿ ಗೃಹಕ್ಕೆ ಲೋಹಿಯಾ ಬಂದರು. ಅಂದು ರಾತ್ರಿ ಸುಮಾರು ಹನ್ನೆರಡು ಗಂಟೆಯ ಸಮಯ. ಜಿಲ್ಲೆಯ ಹಿರಿಯ ಪೊಲೀಸ್‌ ಅಧಿಕಾರಿಗಳು ಲೋಹಿಯಾ ಅವರನ್ನು ಬಂಧಿಸಿದರು.

ಸಾಗರದ ಪೊಲೀಸ್‌ ಲಾಕಪ್‌ನಲ್ಲಿ ಅಂದು ಇಡೀ ರಾತ್ರ ಇತರ ಬಂಧಿಗಳೊಡನೆ ಕುಳಿತೇ ಸಮಯ ಕಳೆದರು ಲೋಹಿಯಾ. ಮರುದಿನ ಶಿವಮೊಗ್ಗೆ ಜೈಲಿಗೆ ಅವರನ್ನೂ ಇತರ ನಾಯಕರನ್ನೂ ಒಯ್ದರು. ಅಲ್ಲಿ ಸಾಕಷ್ಟು ಮಂದಿ ಸತ್ಯಾಗ್ರಹಿಗಳು ತುಂಬಿದ್ದರು.

ಅಂದು ಸಂಜೆಯೇ ಲೋಹಿಯಾ ಒಬ್ಬರನ್ನೇ ಬೆಂಗಳೂರಿಗೆ ಕರೆದುಕೊಂಡು ಹೋಗಿ ಸರ್ಕಾರಿ ಅತಿಥಿ ಗೃಹದಲ್ಲಿ ಬಂಧನದಲ್ಲಿಟ್ಟರು. ಅನಂತರ ಹೈಕೋರ್ಟಿನಲ್ಲಿ ಅರ್ಜಿ ಸಲ್ಲಿಸಿದಾಗ ಲೋಹಿಯಾ ಅವರ ಬಿಡುಗಡೆ ಆಯಿತು.

ಶಿವಮೊಗ್ಗೆ ಜೈಲಿನಲ್ಲಿ ಸತ್ಯಾಗ್ರಹಿಗಳಿಗೆ ಸಾಕಷ್ಟು ಊಟ ಕೊಡುತ್ತಿರಲಿಲ್ಲ. ಸರ್ಕಾರ ಕೊಡುತ್ತಿದ್ದ ಆಹಾರ ಪದಾರ್ಥ ಒಂದು ಹೊತ್ತಿಗೆ ಮಾತ್ರ ಸಾಲುತ್ತಿತ್ತು. ಇನ್ನೊಂದು ಹೊತ್ತು ಹೊರಗಿನಿಂದ ಹಿತೈಷಿಗಳು ಕಳಿಸಿದ ತಿಂಡಿ ತೀರ್ಥಗಳಿಂದ ಸತ್ಯಾಗ್ರಹಿಗಳು ತೃಪ್ತರಾಗುತ್ತಿದ್ದರು. ಲೋಹಿಯಾ ಅವರಿಗೆ ಈ ಸ್ಥಿತಿ ಕಂಡು ಬಹು ಮರುಕವಾಯಿತು. ಆದರೆ ಅವರ ಬಳಿ ಹಣ ಇರಲಿಲ್ಲ. ಅವರ ಕಿಸೆಯಲ್ಲಿದ್ದ ಹಣದ ಚೀಲದಲ್ಲಿ ಮೂವತ್ತೆರಡು ರೂಪಾಯಿಗಳಿದ್ದವು. ತಮ್ಮನ್ನು ಬೆಂಗಳೂರಿಗೆ ಒಯ್ಯಲು ಪೊಲೀಸ್‌ ಅಧಿಕಾರಿಗಳು ಬಂದಾಗ ಆ ಹಣದ ಚೀಲವನ್ನೇ ತಮ್ಮೊಡನೆ ಸೆರೆಯಲ್ಲಿದ್ದವರ ಕೈಯಲ್ಲಿ ಇಟ್ಟರು. ‘ಇದರಿಂದ ಎಷ್ಟು ತಿಂಡಿ ಬರುತ್ತದೋ ಅದನ್ನೆಲ್ಲ ತರಿಸಿ ಎಲ್ಲರಿಗೂ ಕೊಡು’ ಎಂದು ಹೇಳಿದರು. ಅವರ ಗೆಳೆಯರು ಬೇಡವೆಂದರೂ ಅವರು ಕೇಳಲೇ ಇಲ್ಲ.

ಕರ್ನಾಟಕದ ರೈತರ ಹೋರಾಟದಲ್ಲಿ ಮಾತ್ರವೇ ಲೋಹಿಯಾ ಭಾಗವಹಿಸಿದರೆಂದಲ್ಲ. ದೇಶದ ಎಲ್ಲ ಕಡೆಯ ದೀನದಲಿತರ ಹೋರಾಟಗಳಲ್ಲೆಲ್ಲ ಅವರು ಭಾಗವಹಿಸಿದರು. ಅನ್ಯಾಯದ ವಿರುದ್ಧ ಶ್ರಮಜೀವಿಗಳ ಎಲ್ಲ ಚಳವಳಿಗಳಲ್ಲೂ ಮುಂದಾಳಾಗಿ ನಿಲ್ಲುತ್ತಿದ್ದರು. ಶ್ರೀಸಾಮಾನ್ಯರ ವಿಷಯದಲ್ಲಿ ಮರುಕವಷ್ಟೇ ಅಲ್ಲ, ಅಪಾರ ಗೌರವ.

ಒಮ್ಮೆ ಸಾಗರದಿಂದ ಶಿವಮೊಗ್ಗೆಗೆ ರೈಲಿನಲ್ಲಿ ಮೂರನೆಯ ದರ್ಜೆಯ ಗಾಡಿಯಲ್ಲಿ ಪಯಣ. ಅವರೊಡನೆ ಹಲವರು ಸಮಾಜವಾದೀ ಪಕ್ಷದ ಕಾರ್ಯಕರ್ತರು ಇದ್ದರು. ಅವರಲ್ಲಿ ಕೆಲವರು ಕಾಲು ನೀಡಿ ಎದುರಿದ್ದವರನ್ನೂ ಗಮನಿಸದೆ ಕುಳಿತಿದ್ದರು. ಲೋಹಿಯಾ ಅವರಿಗೆ ಅದು ಸಹಿಸಲಿಲ್ಲ. ಏಕೆಂದರೆ ಎದುರಿನ ಸಾಲಿನಲ್ಲಿ ಅನೇಕ ರೈತರು ಕುಳಿತಿದ್ದರು.

‘ಇದು ಸಮಾಜವಾದಿಗಳಿಗೆ ಸಲ್ಲದ ನಡೆ, ನಿನ್ನ ಗೆಳೆಯರಿಗೆ ತಿಳಿಸಿ ಹೇಳು’ – ಎಂದು ತಮ್ಮ ಗೆಳೆಯರಿಗೆ ತಿಳಿಸಿದರು. ಹೀಗೆ ಸಣ್ಣ ವಿಷಯಗಳಲ್ಲಿಯೂ ಅವರು ಬಹಳ ಎಚ್ಚರದಿಂದ ಇರುತ್ತಿದ್ದರು.

1952ರಲ್ಲಿ ಮೊಟ್ಟಮೊದಲ ಬಾರಿಗೆ ದೇಶದಾದ್ಯಂತ ಮಹಾಚುನಾವಣೆ ನಡೆಯಿತು. ಎಲ್ಲ ಕಡೆಯೂ ಸಮಾಜವಾದೀ ಪಕ್ಷ ತನ್ನ ಹುರಿಯಾಳುಗಳನ್ನು ನಿಲ್ಲಿಸಿತ್ತು. ಡಾ. ಲೋಹಿಯಾ ಸ್ವತಃ ಸ್ಪರ್ಧಿಸಲಿಲ್ಲ. ಎಲ್ಲ ರಾಜ್ಯಗಳಲ್ಲೂ ಸಂಚರಿಸಿ ಪಕ್ಷದ ಪ್ರಜಾರ ಕಾರ್ಯದಲ್ಲಿ ತೊಡಗಿದರು. ಆಗ ಮೈಸೂರು ರಾಜ್ಯಕ್ಕೂ ಬಂದಿದ್ದರು. ಅನೇಕ ಸಭೆಗಳನ್ನು ಕುರಿತು ಭಾಷಣ ಮಾಡಿದರು. ಆ ಚುನಾವಣೆಯಲ್ಲಿ ಸಮಾಜವಾದಿಗಳಿಗೆ ಅಷ್ಟಾಗಿ ಗೆಲುವು ದೊರೆಯಲಿಲ್ಲ.

ಅನಂತರ ಒಂದು ವರ್ಷದೊಳಗಾಗಿ ಸಮಾಜವಾದೀ ಪಕ್ಷ ಹಾಗೂ ಆಚಾರ್ಯ ಕೃಪಲಾನಿಯವರು ಸ್ಥಾಪಿಸಿದ್ದ ಕಿಸಾನ್‌ ಮಜದೂರ್ ಪ್ರಜಾಪಕ್ಷಗಳೆರಡೂ ವಿಲೀನಗೊಂಡವು. ಹೊಸ ಪಕ್ಷಕ್ಕೆ ಪ್ರಜಾ ಸಮಾಜವಾದೀ ಪಕ್ಷ ಎಂದು ಹೆಸರಿಸಲಾಯಿತು. ಅದಕ್ಕೆ ಆಚಾರ್ಯ ಕೃಪಲಾನಿಯವರು ಅಧ್ಯಕ್ಷರಾದರು.

ಡಾ. ರಾಮ ಮನೋಹರ ಲೋಹಿಯಾ ಪ್ರಧಾನ ಕಾರ್ಯದರ್ಶಿ ಆದರು. ಹಿಂದೆ ಆಚಾರ್ಯ ಕೃಪಲಾನಿ ಅವರು ಅಖಿಲ ಭಾರತ ಕಾಂಗ್ರೆಸ್‌ ಸಮಿತಿಯ ಪ್ರಧಾನ ಕಾರ್ಯದರ್ಶಿ ಆಗಿದ್ದಾಗ ಲೋಹಿಯಾ ಕಾಂಗ್ರೆಸ್ಸಿನ ವಿದೇಶಾಂಗ ವಿಭಾಗದ ಮುಖ್ಯಸ್ಥರಾಗಿದ್ದರು. ಆಗ ಅವರು ಕೃಪಲಾನಿಯವರ ಕುಟುಂಬದ ಒಬ್ಬ ಸದಸ್ಯರೇ ಆಗಿದ್ದರು. ಅವರೊಂದಿಗೇ ವಾಸ. ಹೀಗಾಗಿ ಕೃಪಲಾನಿಯವರಿಗೆ ಲೋಹಿಯಾ ಅವರ ಬಗೆಗೆ ಅಪಾರ ವಾತ್ಸಲ್ಯ.

ಮ್ಯಾನ್ ಕೈಂಡ್ (ಇಂಗ್ಲೀಷ್), ಚೌಕಂಭಾ (ಹಿಂದಿ) ಲೋಹಿಯಾ ಆವರು ಸಂಪಾದಕೀಯ ನಡೆಸಿದ ಪತ್ರಿಕೆಗಳು. 

The Cast system, Marks Gandhi and Socialism, Guilty men of India’s partision, Interval during Politics, Language, Rupees 25,000/-, A Day, Note and Comments ಲೋಹಿಯಾ ಅವರು ಇಂಗ್ಲಿಷಿನಲ್ಲಿ ಬರೆದ ಕೃತಿಗಳು.

ಸಮಜವಾದಿ ಅಂದೊಳನ್ ಕ ಇತಿಹಾಸ್, ಹಿಂದು ಮುಸಲ್ಮಾನ್, ಅನ್ನ ಸಮಸ್ಯ, ಆಝಾದ್ ಹಿಂದೂಸ್ಥಾನ್ ಕ ನಯೀ ರುಜುಹಾನ್ ಮುಂತಾದವು ಲೋಹಿಯಾರ ಹಿಂದೀ ಭಾಷೆಯ ಕೃತಿಗಳು.

ರಾಮ ಮನೋಹರ ಲೋಹಿಯಾರವರು, ಅವಿವಾಹಿತರಾಗಿದ್ದರು. 1967 ರ ಅಕ್ಟೋಬರ್ 12 ರಂದು ಕಾಲವಶರಾದರು.

- Advertisement -
- Advertisement -

Latest News

ಉಂಡು ಮಲಗಿದ ಮೇಲೂ ಗಂಡ ಹೆಂಡಿರ ಜಗಳ

ಸಂಸಾರದ ಬಂಡಿ ಸರಾಗವಾಗಿ ಸಾಗಬೇಕಾದರೆ ಗಂಡ ಹೆಂಡತಿ ಎನ್ನುವ ಎರಡು ಗಾಲಿಗಳು ಸಮಸಮವಾಗಿ ಚಲಿಸಬೇಕು. ಎರಡೂ ಗಾಲಿಗಳಿಗೆ ಪ್ರಾಧಾನ್ಯತೆಯಿದೆ. ಒಂದು ಹೆಚ್ಚು ಒಂದು ಕಡಿಮೆ ಇಲ್ಲ....
- Advertisement -

More Articles Like This

- Advertisement -
close
error: Content is protected !!
Join WhatsApp Group