ನಿಪ್ಪಾಣಿ – ಕರ್ನಾಟಕ ಮಹಾರಾಷ್ಟ್ರ ಗಡಿ ಪಟ್ಟಣವಾದ ನಿಪ್ಪಾಣಿಯಲ್ಲಿ ಹುಡುಕುತ್ತ ಹೋದರೂ ಕನ್ನಡ ಭಾಷೆ ಇರುವ ನಾಮ ಫಲಕಗಳು ಸಿಗುವುದು ತುಂಬ ಅಪರೂಪ. ಒಂದು ವೇಳೆ ಸಿಕ್ಕರೂ ಫಲಕದಲ್ಲಿನ ಕನ್ನಡ ವಿರೂಪಗೊಂಡಿರುತ್ತದೆ.
ಇದಕ್ಕೆ ಉದಾಹರಣೆ ಎಂದರೆ ನಿಪ್ಪಾಣಿಯ ಮಹಾತ್ಮಾ ಗಾಂಧಿ ಚೌಕದಲ್ಲಿರುವ ಪಡಿತರ ಅಂಗಡಿಯೊಂದರ ನಾಮ ಫಲಕದಲ್ಲಿರುವ ಕನ್ನಡ ಶಬ್ದಗಳು.
ಇದೊಂದು ಸರ್ಕಾರಿ ಪಡಿತರ ಅಂಗಡಿಯ ನಾಮ ಫಲಕ. ಈ ಫಲಕದಲ್ಲಿ ಇರುವ ಆಂಗ್ಲ ಅಕ್ಷರಗಳು ಸರಿಯಾಗಿಯೇ ಇವೆ ಆದರೆ ಕನ್ನಡದ ನೆಲದಲ್ಲಿ ಸರಿಯಾಗಿರಬೇಕಾದ ಕನ್ನಡ ಪದಗಳು ತಪ್ಪಾಗಿವೆ. ಒಂದೇ ಸಾಲಿನಲ್ಲಿ ಮೂರ್ನಾಲ್ಕು ತಪ್ಪುಗಳು ! ಸರ್ಕಾರಿ ಯೋಗ್ಯ ದರದ ಕಾಳಿನ ಅಂಗಡಿ ಅಂತ ಆಗಿರಬೇಕಾದಲ್ಲಿ ಸರಕಾರ, ದಾನ್ಯ ( ಧಾನ್ಯ), ಯೊಗ್ಯ (ಯೋಗ್ಯ ) ಡರದ ( ದರದ ) ಆಗಿದೆ, ಅಂಗಡಿ ಪದವೇ ಕಣ್ಮರೆಯಾಗಿದೆ ! ಕನ್ನಡ ಭಾಷೆಯನ್ನು ಕಾಯಬೇಕಾದ ಸರ್ಕಾರದ ನಾಮಫಲಕದಲ್ಲಿಯೇ ಕನ್ನಡದ ಕಗ್ಗೊಲೆಯಾಗಿದೆ.
ಒಂದು ಕಡೆ ಎಮ್ ಇ ಎಸ್ ಎಂಬ ಮರಾಠಿ ಪುಂಡರ ಗುಂಪು ಬೆಳಗಾವಿ ವಿಷಯದಲ್ಲಿ ಕಾಲು ಕೆರೆದು ಜಗಳಕ್ಕೆ ಬರುತ್ತಿದ್ದರೆ ಗಡಿ ಪಟ್ಟಣವಾದ ನಿಪ್ಪಾಣಿಯಲ್ಲಿ ಕನ್ನಡದ ಅಸ್ಮಿತೆಯನ್ನು ಕಾಪಾಡುವ ರಾಜ್ಯ ಸರ್ಕಾರ ಹಾಗೂ ಎಲ್ಲಾ ಕನ್ನಡ ಸಂಘಟನೆಗಳ ಜವಾಬ್ದಾರಿಯಾಗಿದೆ.
ನಿಪ್ಪಾಣಿಯಲ್ಲಿ ಕನ್ನಡ ನಾಮಫಲಕಗಳನ್ನು ಹುಡುಕುತ್ತ ಹೋಗಬೇಕಾದ ಪರಿಸ್ಥಿತಿ ಇದೆ. ಇದು ಸಂಪೂರ್ಣ ಅಲ್ಲದಿದ್ದರೂ ಶೇಕಡಾ ೮೦ ರಷ್ಟಾದರೂ ಕನ್ನಡಮಯವಾಗುವ ದಿನ ಎಂದು ಬರುವುದೋ ಕಾದು ನೋಡಬೇಕಾಗಿದೆ.