spot_img
spot_img

ಹೊಸ ಪುಸ್ತಕ ಓದು: ಆತ್ಮಶಕ್ತಿಯ ದೀಪ್ತಿ ಕುವೆಂಪು ರಾಮಾಯಣ

Must Read

- Advertisement -

ಆತ್ಮಶಕ್ತಿಯ ದೀಪ್ತಿ ಕುವೆಂಪು ರಾಮಾಯಣ

ಲೇಖಕರು: ಡಾ. ಪ್ರದೀಪ್ ಕುಮಾರ ಹೆಬ್ರಿ

ಪ್ರಕಾಶಕರು: ಅಮೃತ ಪ್ರಕಾಶನ, ಮೈಸೂರು, ೨೦೨೨

ಮೊ: ೯೮೪೪೦೧೮೪೫೭

- Advertisement -

ಡಾ. ಪ್ರದೀಪ್ ಕುಮಾರ ಹೆಬ್ರಿ ಅವರು ನಮ್ಮ ದಿನಮಾನದ ಒಬ್ಬ ಶ್ರೇಷ್ಠ ವಿದ್ವಾಂಸರು. ಆಧುನಿಕ ಕನ್ನಡ ಸಾಹಿತ್ಯ ಲೋಕದಲ್ಲಿ ಅವರಷ್ಟು ಕೃಷಿ ಮಾಡಿದ ಮತ್ತೊಬ್ಬರು ಸಿಗುವುದು ಕಷ್ಟ. ಕ್ಲುಪ್ತ ಅವಧಿಯಲ್ಲಿ ಮಹಾಕಾವ್ಯಗಳನ್ನು ರಚಿಸುವ ಒಂದು ಸಾಮರ್ಥ್ಯ ಅವರಲ್ಲಿದೆ. ಜಾತಿ ಮತ ಪಂಥಗಳನ್ನು ಮೀರಿದ ಎಲ್ಲ ಮಹಾನುಭಾವರ ಮಹಾತ್ಮರ ಕುರಿತು ಅವರು ಮಹಾಕಾವ್ಯಗಳನ್ನು ರಚಿಸಿದ್ದಾರೆ.

ಒಂದೇ ಮಾತಿನಲ್ಲಿ ಹೇಳಬೇಕೆಂದರೆ- ಇಂದು ಡಾ. ಪ್ರದೀಪ್ ಕುಮಾರ ಹೆಬ್ರಿ ಅವರಿಗೆ ಯಾರು ಸಾಟಿ ಎಂದರೆ? ಅವರೇ ಸಾಟಿ ಎಂದು ಹೇಳಬೇಕು. ಪ್ರಾಯಶಃ ನನ್ನ ದೃಷ್ಟಿಯಲ್ಲಿ ವರ್ತಮಾನ ಕಾಲದಲ್ಲಿ ಸಾಹಿತ್ಯದ ಬಹುತೇಕ ಪ್ರಕಾರಗಳಲ್ಲಿ ೪೫೦ಕ್ಕೂ ಹೆಚ್ಚು ಕೃತಿಗಳನ್ನು ರಚಿಸಿದ ಕೀರ್ತಿ ಮತ್ತು ಶ್ರೇಯಸ್ಸು ಡಾ. ಪ್ರದೀಪ್ ಕುಮಾರ ಅವರಿಗೆ ಸಲ್ಲುತ್ತದೆ. ಇಂತ ಬಹುಶ್ರುತ ವಿದ್ವಾಂಸರು ನಮ್ಮ ನಾಡಿಗೆ ಭೂಷಣಪ್ರಾಯರಾಗಿದ್ದಾರೆ.

ಇತ್ತೀಚೆಗೆ ಅವರು ರಚಿಸಿದ ‘ಆತ್ಮಶಕ್ತಿಯ ದೀಪ್ತಿ ಕುವೆಂಪು ರಾಮಾಯಣ’ ಹತ್ತು ಹಲವು ದೃಷ್ಟಿಯಿಂದ ಒಂದು ಅಪರೂಪದ ಕೃತಿಯಾಗಿದೆ. ಕುವೆಂಪು ಅವರ ಶ್ರೀರಾಮಾಯಣ ದರ್ಶನಂ ಕುರಿತು ಕನ್ನಡದಲ್ಲಿ ಈಗಾಗಲೇ ನೂರಾರು ಕೃತಿಗಳು ರಚನೆಗೊಂಡಿವೆ.

- Advertisement -

ದೇಜಗೌ, ಎಸ್.ವಿ. ಪರಮೇಶ್ವರಭಟ್, ತಿಪ್ಪೇರುದ್ರಸ್ವಾಮಿ, ಸಿ.ಪಿ.ಕೆ. ಮೊದಲು ಮಾಡಿಕೊಂಡು ಬಹುತೇಕ ವಿದ್ವಾಂಸರು ಕುವೆಂಪು ಅವರ ಮಹಾಕಾವ್ಯವನ್ನು ಕುರಿತು ಕೃತಿಗಳನ್ನು ರಚಿಸಿದ್ದಾರೆ. ಈಗ ಇವೆಲ್ಲವುಗಳಿಗೆ ತುರಾಯಿ ಎನ್ನುವಂತೆ ಡಾ. ಹೆಬ್ರಿ ಅವರು ‘ಆತ್ಮಶಕ್ತಿಯ ದೀಪ್ತಿ ಕುವೆಂಪು ರಾಮಾಯಣ’ ಎಂಬ ಕೃತಿಯನ್ನು ರಚಿಸಿದ್ದಾರೆ. ಕೆಲವು ದಿನಗಳ ಹಿಂದೆ ಕುವೆಂಪು ರಾಮಾಯಣದ ಅತ್ಯಂತ ಸಂಕ್ಷಿಪ್ತ ಆವೃತ್ತಿಯೊಂದನ್ನು ಪ್ರಕಟಿಸಿ ಕನ್ನಡ ಸಾರಸ್ವತ ಲೋಕದ ಗಮನ ಸೆಳೆದಿದ್ದರು. ಈಗ ಪ್ರಸ್ತುತ ಕೃತಿಯ ಅಂತಃಸತ್ವವನ್ನು ನಾಡವರಿಗೆ ತಿಳಿಸುವ ಪ್ರಯತ್ನ ಮಾಡಿದ್ದಾರೆ. 

ರಸಋಷಿ ಕುವೆಂಪು ಅವರ ‘ರಾಮಾಯಣಂ ದರ್ಶನಂ’ ಈ ಯುಗದ ಒಂದು ಮಹಾಕಾವ್ಯ. ಪರಾತ್ಪರ ಪುರುಷೋತ್ತಮನ ಲೋಕಲೀಲಾ ದರ್ಶನವನ್ನು ಪ್ರತಿಮಿಸುವ ಅಲೌಕಿಕ ನಿತ್ಯಸತ್ಯದ ಕಥೆ. ಕನ್ನಡಕ್ಕೆ ಮೊದಲ ಜ್ಞಾನಪೀಠ ಪ್ರಶಸ್ತಿ ತಂದುಕೊಟ್ಟ ಮೊಟ್ಟಮೊದಲ ಕೃತಿ. ಕುವೆಂಪು ಅವರ ಹನ್ನೆರಡು ವರ್ಷಗಳ ತಪಸ್ಸಿನ ಫಲ. ಈ ಕೃತಿ ಪ್ರಕಟವಾದ ನಂತರ ಒಂದು ವರ್ಗದ ಜನ ಉದ್ದೇಶಪೂರ್ವಕವಾಗಿಯೇ ನಿರ್ಲಕ್ಷಿಸಿ ವಿಮರ್ಶಿಸ ತೊಡಗಿದರು.

‘ನಡೆದು ಬಂದ ದಾರಿ’ ಎಂಬ ಬೃಹತ್ ವಿಮರ್ಶಾ ಸಂಪುಟ ಪ್ರಕಟಿಸುವ ಮೂಲಕ ಕನ್ನಡ ಸಾಹಿತ್ಯ ಸಮೀಕ್ಷೆ ನಡೆಸಿದ ಈ ವಿಮರ್ಶಕರಿಗೆ ಕುವೆಂಪು ಅವರ ಮಹಾಕಾವ್ಯದ ಎತ್ತರ ಬಿತ್ತರಗಳು ಕಾಣಲಿಲ್ಲ. ಆ ಕೃತಿಯ ಕುರಿತು ವಸ್ತುನಿಷ್ಠ ವಿಮರ್ಶೆಯಾಗಲಿ- ವಿಶ್ಲೇಷಣೆಯಾಗಲಿ ನಡೆಯಲೇ ಇಲ್ಲ. ಬೇಂದ್ರೆ ಸಾಹಿತ್ಯಲೋಕದ ನಕ್ಷತ್ರದಂತೆ ಕಂಡರೆ ಕುವೆಂಪು ಅವರ ಸಾಧನೆ ಏನೂ ಅಲ್ಲ ಎನ್ನುವಂತೆ ಚಿತ್ರಿಸಿದ್ದರು. ಇಂಥ ವಿಷಾದನೀಯ ಪರಿಸ್ಥಿತಿಯಲ್ಲಿ ಕೆಲವು ಬೆರಳಣಿಕೆಯ ವಿಮರ್ಶಾಕೃತಿಗಳು ಪ್ರಕಟಗೊಂಡವು.

‘ರಾಮಾಯಣದರ್ಶನಂ’ ಕೃತಿಗೆ ಮೂಲ ವಾಲ್ಮೀಕಿಯ ರಾಮಾಯಣವೇ ಆದರೂ ಕನ್ನಡದ ಮಟ್ಟಿಗೆ ಇದೊಂದು ವಿನೂತನ ಕೃತಿಯಾಗಿದೆ. ಡಾ. ಪ್ರದೀಪ್ ಕುಮಾರ ಹೆಬ್ರಿ ಅವರು ಇಪ್ಪತ್ತೆರಡು ಸಾವಿರ ಇನ್ನೂರ ತೊಂಬತ್ತು ಮೂರು ಪಂಕ್ತಿಗಳ ಈ ಮಹಾಕಾವ್ಯವನ್ನು ಆಮೂಲಾಗ್ರವಾಗಿ ಪರಿಶೀಲಿಸಿರುವುದು ಒಂದು ಸಾಹಸದ ಕೆಲಸವೇ ಸರಿ. ರಾಮನ ಅವತಾರ, ಧರ್ಮ-ಅಧರ್ಮದ ಪ್ರಶ್ನೆ ಎಂಬ ವಿವೇಚನೆಗಳಿಂದ ಮೊದಲಾಗಿ ಮುಖ್ಯವಾಗಿ ಅವತರಿಸುವ ಪಾತ್ರಗಳ ಸೂಕ್ಷ್ಮವಾದ ಅವಲೋಕನವನ್ನೊಳಗೊಂಡು ಸಮೀಕ್ಷೆ ಮುಂದುವರೆಯುತ್ತದೆ.

ಕೃತಿಯುದ್ದಕ್ಕೂ ಕಾವ್ಯದ ಅವತಾರ, ದರ್ಶನ, ಪಾತ್ರ, ಉದ್ದೇಶ, ಸಾಧನೆ, ಸೌಂದರ್ಯಗಳೆಲ್ಲವನ್ನೂ ಎತ್ತಿ ತೋರಿಸಿದ್ದಾರೆ. ಒಂದು ಕಾವ್ಯದ ವಿಚಾರವಾಗಿ ಇಷ್ಟು ಸೂಕ್ಷ್ಮವಾಗಿ, ವಿವರವಾಗಿ, ವಿಶ್ಲೇಷಣಾತ್ಮಕವಾಗಿ ಮೂಡಿಬಂದ ಪರಿಚಯಾತ್ಮಕ ಕನ್ನಡ ವಿಮರ್ಶೆ ಬೇರೊಂದಿಲ್ಲ. 

ರಾಮಾಯಣಂ ದರ್ಶನದಲ್ಲಿ ಮುಖ್ಯಪಾತ್ರಗಳಿಗೆ ಎಷ್ಟು ಮಹತ್ವವಿದೆಯೋ ಅಮುಖ್ಯ ಪಾತ್ರಗಳ ವ್ಯಕ್ತಿತ್ವಕ್ಕೂ ಅಷ್ಟೇ ಮಹತ್ವ ಇದೆ. ‘ಆಜ್ಞಾಧಾರಕ ಲಕ್ಷ್ಮಣ’, ‘ತನ್ನತನವನ್ನಿಲ್ಲಗೈದ ಊರ್ಮಿಳೆ’, ‘ದಯಾಲಕ್ಷ್ಮಿ ಮಂಥರಾದೇವಿ’, ‘ಶಬರಜ್ಜಿ’, ‘ಮಹಾಮಹಿಮ ಹನುಮದೇವ’, ‘ಸಾಧಕ ರಾವಣ’, ‘ಮಹಾಸತಿ ಮಂಡೋದರಿ’ ಮೊದಲಾದವರ ಪಾತ್ರಗಳ ಹಿರಿಮೆ ಗರಿಮೆಗಳನ್ನು ಡಾ. ಹೆಬ್ರಿ ಅವರು ತುಂಬ ವಸ್ತುನಿಷ್ಠವಾಗಿ ಗುರುತಿಸಿದ್ದಾರೆ. 

ರಾಮಾಯಣ ದರ್ಶನ ಬೆಳಕು ಕಾಣದ ಮನುಷ್ಯನಿಗೆ ಜೀವನದಲ್ಲಿ ದಿವ್ಯ ಚೇತನದ ಜ್ಯೋತಿಯನ್ನು ತೋರಿಸುತ್ತದೆ. ‘ರಾಮನು ಆದರ್ಶ ಮಾನವ…ಅವನು ದೊರೆತನ ಮಾಡಿದ್ದು.ಪ್ರಜಾಸೇವೆಗಾಗಿ ಪ್ರಜೆಗಳ ಧರ್ಮದರ್ಶಿಯಾಗಿ,’ ಅಡವಿಗೆ ಹೋಗುವಾಗ ಚದುರಂಗ ಸೇನೆಯನ್ನು ಸಂಗಡ ಕಳುಹಿಸಲು ಸಿದ್ಧನಾದ ತಂದೆಗೆ ಈ ಶ್ರೇಷ್ಠ ಸಾಧಕನು ಹೇಳಿದ ಮಾತಿದು: ‘ತಪದ ಸಂಪದಕಾಗಿ ವಿಪಿನಕೈದುತಿರೆ ಸೇನೆಯ ಸೇವೆ ತಾನೇಕೆ?’ ಇದು ರಾಮನ ತ್ಯಾಗ ವೃತ್ತಿ. ರಾಮನು ಅವತಾರೀ ಪುರುಷನೆಂದು ಸಾಮಾನ್ಯ ಕಲ್ಪನೆ.

ಆದರೆ ರಾಮನು ಇಂಥ ಅತಿಮಾನವ ಪುರುಷನಾಗಿದ್ದರೆ  ಮರೆಯಲ್ಲಿ ನಿಂತು ಬಾಣಪ್ರಹಾರದಿಂದ ವಾಲಿಯನ್ನು ಕೊಂದುದು ಧರ್ಮ ಸಮ್ಮತವೇ? ಇದೇ ರೀತಿ ನೇಗಿಲದ ಗೆರೆಯಲ್ಲಿ ಸಜೀವ ಕೂಸು-ಸೀತೆ ದೊರೆಯುವುದು ಸಂಭವವೇ? ಇತ್ಯಾದಿ ಮೂಲಭೂತ ಸಂದೇಹಗಳನ್ನು ಭಾವುಕನಿಗೂ, ವಿಜ್ಞಾನಿಗೂ ಸಮಾಧಾನವಾಗುವಂತೆ ಚರ್ಚಿಸಿದ್ದಾರೆ.

ಇದರ ಜೊತೆಗೆ ಕವಿಯ ದಾರ್ಶನಿಕ ಸತ್ಯವನ್ನು ಸ್ಪಷ್ಟಪಡಿಸಲು ಸೀತೆಯೇ ತನ್ನ ತಂಗಿಗೆ ನುಡಿದ ಆತ್ಮವೃತ್ತಾಂತವನ್ನು ಉದ್ಧರಿಸಿದ್ದಾರೆ: ‘ನಾನೆ ಕಡಲೊಡತಿಯಪ್ಪಂತೆ, ಪೃಥ್ವಿಯೆ ಕರಗಿ, ಪೆಣ್ ಪಸುಳೆಯಾಗುತೆನ್ನಯ ತೊಟ್ಟಿಲೊಳ್ ನಲಿವಂತೆ…’ ಹುಟ್ಟು, ರೋಗ, ಮುಪ್ಪು ಮತ್ತು ಸಾವು, ಜೀವನದ ಅನಿವಾರ್ಯ ಘಟನೆಗಳು. ಸಾವಿಗೆ ತುತ್ತಾಗುವ ದಶರಥ, ಮಂಥರೆ, ಮರೀಚಿ, ಜಟಾಯು, ಶಬರಿ, ವಾಲಿ-ಇವರಿಗಾಗಿ ಅವರ ಬಂಧು ಬಳಗದವರು ಅತ್ತರೂ, ಅವರೆಲ್ಲ ಸಾವಿನಲ್ಲಿ ಸಾಕ್ಷಾತ್ಕಾರವನ್ನು, ಚಿರಂತನ ಶಾಂತಿಯನ್ನೂ ಕಾಣುತ್ತಾರೆ. ರಾಮಾಯಣ ದರ್ಶನಂ ಒಟ್ಟು ಸಾರವನ್ನು ಹೀಗೆ ಡಾ.ಹೆಬ್ರಿ ಅವರು ಕರಿಯ ಕನ್ನಡಿಯೊಳಡಗಿದಂತೆ ಹಿಡಿದಿಟ್ಟಿದ್ದಾರೆ.

‘ಕುವೆಂಪು ರಚಿತ ಶ್ರೀ ರಾಮಾಯಣ ದರ್ಶನಂ ಕೃತಿಯಲ್ಲಿ ಆತ್ಮಶಕ್ತಿ ಉದ್ದೀಪನಗೊಳಿಸುವ ಶಕ್ತಿ ಇದೆ. ಈ ಕೃತಿಯ ಪ್ರತಿಯೊಂದು ವಿಚಾರ, ಘಟನೆ ಮತ್ತು ಪಾತ್ರವೂ ಸಂದೇಶವಾಗಿದೆ. ಆ ಮೂಲಕ ಧರ್ಮ, ನೀತಿ, ಆದರ್ಶಗಳ ಪರಿಚಯ ಸಿಗುತ್ತದೆ. ಇದು ನಮ್ಮ ಬದುಕನ್ನು ಉನ್ನತೀಕರಿಸಲೂ ಮಾರ್ಗದರ್ಶಕವಾಗಿದೆ. ಕಥೆಯನ್ನು ಆಲಿಸುವ, ಓದುವ ಪರಂಪರೆಗೆ  ಈ ಕೃತಿ  ಹೊಸ ಆಯಾಮ ನೀಡಿ ಮರು ಚಾಲನೆಗೆ ಇಂಬಾದರೆ ಬದುಕು ಭವ್ಯ, ಸುಂದರ’ ಎಂದು ಡಾ. ಹೆಬ್ರಿ ಅವರು ವಿನಮ್ರವಾಗಿ ನಿವೇದಿಸುತ್ತಾರೆ. ಕುವೆಂಪು ಅವರ ಭಾಷಾ ಸೊಗಡನ್ನು ಡಾ. ಹೆಬ್ರಿ ಇನ್ನೂ ಸರಳವಾಗಿ ಅರ್ಥಪೂರ್ಣವಾಗಿ ಕನ್ನಡಕ್ಕೆ ತಂದಿದ್ದಾರೆ. ಈ ಹಿಂದೆ ದೇಜಗೌ ಅವರ ‘ವಚನ ಚಂದ್ರಿಕೆ’ ಪ್ರಕಟವಾಗಿತ್ತು. ದೇಜಗೌ ಅವರ ಭಾಷೆ ಸಂಸ್ಕೃತಭೂಯಿಷ್ಠವಾಗಿತ್ತು. ಆದರೆ ಡಾ. ಹೆಬ್ರಿ ಅವರ ಈ ಕೃತಿ ಸರಳಗನ್ನಡದಲ್ಲಿ ಚಿಕ್ಕ ಮಕ್ಕಳಿಗೂ ತಿಳಿಯುವ ಸುಲಲಿತ ಶೈಲಿಯನ್ನು ಹೊಂದಿರುವುದು ಕೃತಿಯ ಹೆಚ್ಚುಗಾರಿಕೆ ಎಂದೇ ಹೇಳಬೇಕು. 

ಕೃತಿಯ ಕೊನೆಯಲ್ಲಿ ವಾಲ್ಮೀಕಿ ಮಹಾಕವಿಯ ಪರಿಚಯ, ರಾಮಾಯಣ ಪರಿಚಯ, ಕುವೆಂಪು ಪರಿಚಯ, ಶ್ರೀರಾಮಾಯಣ ದರ್ಶನಂ ಪರಿಚಯಗಳನ್ನು ನೀಡಿರುವುದು ಓದುಗರಿಗೆ ಹೆಚ್ಚು ಆಪ್ಯಾಯಮಾನವಾಗಿದೆ. 

ಇಪ್ಪತ್ತನೆಯ ಶತಮಾನದ ಕನ್ನಡ ಸಾಹಿತ್ಯದಲ್ಲಿ ಮಹಾಕಾವ್ಯದ ಪರಂಪರೆಯನ್ನು ಪುನರ್ನಿರ್ಮಿಸಿದ ಶ್ರೇಯಸ್ಸು ಕುವೆಂಪು ಅವರ ಮೇರುಕೃತಿ ಶ್ರೀರಾಮಾಯಣ ದರ್ಶನಂ ಕೃತಿಗೆ ಸಲ್ಲುತ್ತದೆ; ಮಹಾಕಾವ್ಯದ ಯುಗ ಎಂದೋ ಮುಗಿದು ಹೋಗಿದೆ ಎನ್ನುವ ಅಭಿಪ್ರಾಯ ಸಾಹಿತ್ಯ ಪ್ರಕಾರಗಳ ಸಂದರ್ಭದಲ್ಲಿ ನಿರ್ಣಯಾತ್ಮಕ ಸ್ವರೂಪ ಹೊಂದುತ್ತಿರುವಾಗಲೇ ಕುವೆಂಪು ಅವರು ಶ್ರೀ ರಾಮಾಯಣದರ್ಶನಂ, ವಿ.ಕೃ.ಗೋಕಾಕರ ಭಾರತ ಸಿಂಧು, ಸಂ.ಶಿ.ಭೂಸನೂರಮಠರ ಭವ್ಯ ಮಾನವಗಳಂಥ ಮಹಾಕಾವ್ಯಗಳು ಕನ್ನಡದಲ್ಲಿಯೇ ಹುಟ್ಟಿ ಬಂದುದು ಆಶ್ಚರ್ಯಕರವಾಗಿದೆ.

ಈ ಪರಂಪರೆ ಅಲ್ಲಿಗೆಯೆ ನಿಂತಿಲ್ಲ. ವೀರಪ್ಪ ಮೊಯಿಲಿ, ಲತಾ ರಾಜಶೇಖರ, ಪ್ರದೀಪಕುಮಾರ ಹೆಬ್ರಿಯಂಥವರು ಇದನ್ನು ಮುಂದುವರಿಸಿದ್ದಲ್ಲದೆ ವೈವಿಧ್ಯವನ್ನೂ ತಂದುಕೊಟ್ಟಿದ್ದಾರೆ.

 ಇಂತಹ ಒಂದು ಮೌಲಿಕ ಕೃತಿಯನ್ನು ಕನ್ನಡ ಸಾರಸ್ವತ ಪ್ರಪಂಚಕ್ಕೆ ನೀಡಿದ ಡಾ. ಪ್ರದೀಪಕುಮಾರ ಹೆಬ್ರಿ ಅವರಿಗೆ ಹೃದಯತುಂಬಿದ ಅಭಿನಂದನೆಗಳನ್ನು ಸಲ್ಲಿಸುವೆ.


ಪ್ರಕಾಶ ಗಿರಿಮಲ್ಲನವರ

- Advertisement -
- Advertisement -

Latest News

ದಿನಕ್ಕೊಬ್ಬ ಶರಣ ಮಾಲಿಕೆ

ಕಿನ್ನರಿ ಬ್ರಹ್ಮಯ್ಯ ........................................... 12ನೇ ಶತಮಾನದ ಬಸವಾದಿ ಶಿವಶರಣರ ಕೀರ್ತಿವಾರ್ತೆಯನ್ನು ಕೇಳಿ ಪ್ರಭಾವಿತರಾಗಿ ನಾಡು ಹೊರನಾಡಿನಿಂದ ಅನೇಕ ಜನ ಶರಣರು ಕಲ್ಯಾಣಕ್ಕೆ ಬರಹತ್ತಿದರು. ಬಸವಣ್ಣನವರ ಸಮಕಾಲೀನರಾಗಿದ್ದ ಶರಣರಾದ ಗುಜರಾತದಿಂದ...
- Advertisement -

More Articles Like This

- Advertisement -
close
error: Content is protected !!
Join WhatsApp Group