spot_img
spot_img

ಯುವಜನರಿಗೆ ಮಾದರಿ ಪುನೀತ ರಾಜಕುಮಾರ್

Must Read

- Advertisement -

ಕಬೀರದಾಸ ಒಂದು ಕಡೆ ತುಂಬ ಸುಂದರವಾದ ಮಾತೊಂದನ್ನು ಹೇಳುತ್ತಾನೆ- ‘ಮನುಷ್ಯನೇ ನೀನು ಹುಟ್ಟುವಾಗ ಜಗತ್ತೆಲ್ಲ ನಗುತ್ತಿರಲಿ, ನೀನು ಅಳುತ್ತಿರಲಿ. ನೀನು ಸತ್ತು ಪರಲೋಕ ಪಯಣ ಮಾಡುತ್ತಿರುವಾಗ ಜಗತ್ತೆಲ್ಲ ಅಳುತ್ತಿರಲಿ, ನೀನು ನಗುತ ಹೋಗು’ ಇದು ನಿಜವಾದ ಜೀವನದ ಲಕ್ಷಣ ಎಂದು ಕಬೀರ ಹೇಳುತ್ತಾನೆ. ಈ ಮಾತುಗಳಿಗೆ ಅಕ್ಷರಶಃ ನಿದರ್ಶನವಾಗಿ ಬದುಕಿದವರು ಪುನೀತ ರಾಜಕುಮಾರ್.

ಇಂದು ಪುನೀತ ನಮ್ಮ ಮಧ್ಯದಲ್ಲಿ ಇಲ್ಲ. ಆದರೆ ಲಕ್ಷಾಂತರ ಯುವಕರ ಹೃದಯದಲ್ಲಿ ವಿರಾಜಮಾನರಾಗಿದ್ದಾರೆ. ಯುವ ಜನರು ಅವರನ್ನು ತಮ್ಮ ಆದರ್ಶದ ಒಂದು ಪಥವೆಂದೇ ಭಾವಿಸಿದ್ದಾರೆ. ವ್ಯಕ್ತಿ ಇದ್ದಾಗ ಇರುವ ಗೌರವಗಳಿಗಿಂತ, ಇಲ್ಲದಾಗ ಜನರು ನೀಡುವ ಗೌರವ ತುಂಬ ಮಹತ್ವದ್ದು. ಪುನೀತ ತಮ್ಮ ತಂದೆ ಡಾ. ರಾಜಕುಮಾರ ಅವರ ಆದರ್ಶ ವ್ಯಕ್ತಿತ್ವವನ್ನು ಸಮೀಪದಿಂದ ನೋಡುತ್ತ ಬೆಳೆದವರು.

ತಂದೆಯ ಗುಣ ಮೌಲ್ಯಗಳನ್ನು ತಮ್ಮ ಬದುಕಿನಲ್ಲಿ ಅಳವಡಿಸಿಕೊಂಡವರು. ನಯ-ವಿನಯ-ಶಿಸ್ತು ಸೌಜನ್ಯಗಳನ್ನು ಅರಿತು ಬಾಳಿದವರು. ಚಲನಚಿತ್ರರಂಗ ಒಂದು ಬಗೆಯ ಚದುರಂಗದಾಟ. ಒಮ್ಮೊಮ್ಮೆ ಗೆಲುವು-ಒಮ್ಮೊಮ್ಮೆ ಸೋಲು ಎಲ್ಲವನ್ನೂ ಸಮಚಿತ್ತದಿಂದ ನೋಡುವ ಒಂದು ಉತ್ತಮ ಗುಣವನ್ನು ರಾಜಕುಮಾರ ತಮ್ಮ ಮಗನಿಗೆ ತಿಳಿಸಿಕೊಟ್ಟಿದ್ದರು. 

- Advertisement -

೧೯೭೫ ಮಾರ್ಚ ೧೭ರಂದು ಜನಿಸಿದ ಪುನೀತ, ಒಂದು ವರ್ಷದ ಮಗುವಾಗಿದ್ದಾಗಲೇ ರಾಜಕುಮಾರ ನಟಿಸುತ್ತಿದ್ದ ‘ಪ್ರೇಮದ ಕಾಣಿಕೆ’ ಚಲನಚಿತ್ರದಲ್ಲಿ ಕಾಣಿಸಿಕೊಂಡರು. ಡಾ. ರಾಜಕುಮಾರ ಅವರೊಂದಿಗೆ ಭಕ್ತಪ್ರಲ್ಹಾದ ಚಲನಚಿತ್ರದಲ್ಲಿ ಬಾಲನಟನಾಗಿ ಪುನೀತ ಅಭಿನಯಿಸಿ ಕನ್ನಡಿಗರ ಮನಸ್ಸನ್ನು ಗೆದ್ದುಕೊಂಡರು.

ಮುಗ್ಧ ಭಕ್ತನೊಬ್ಬನ ಪಾತ್ರದಲ್ಲಿ ಆ ಎಳೆ ವಯಸ್ಸಿನಲ್ಲಿ ಅವರು ಮಾಡಿದ ಅಭಿನಯ ಅಮೋಘವಾಗಿತ್ತು. ನಂತರ ಭಾಗ್ಯವಂತ, ವಸಂತ ಗೀತ, ಚಲಿಸುವ ಮೋಡಗಳು, ಎರಡು ನಕ್ಷತ್ರಗಳು, ಯಾರಿವನು, ಬೆಟ್ಟದ ಹೂವು, ಶಿವ ಮೆಚ್ಚಿದ ಕಣ್ಣಪ್ಪ, ಪರಶುರಾಮ ಮೊದಲಾದ ಚಿತ್ರಗಳಲ್ಲಿ ಬಾಲನಟನಾಗಿ ಪುನೀತ ಕನ್ನಡಿಗರ ಮನಸ್ಸು ಗೆದ್ದರು. ಪ್ರಲ್ಹಾದ ಚಿತ್ರದಲ್ಲಿ ತಂದೆ ಹಿರಣ್ಯಕಶ್ಯಪನೊಂದಿಗೆ ನಡೆಯುವ ಸಂವಾದ ಭಾಗವಂತೂ ಇಂದಿಗೂ ಜನರ ನಾಲಿಗೆ ಮೇಲೆ ನರ್ತನ ಮಾಡುತ್ತಿದೆ.

ಅಂತಹ ಹುಟ್ಟು ಬಾಲ ಪ್ರತಿಭೆ ಪುನೀತ ನಾಯಕ ನಟನಾಗಿ ೨೦೦೨ರಲ್ಲಿ ‘ಅಪ್ಪು ಚಿತ್ರ’ದ ಮೂಲಕ ತೆರೆಯ ಮೇಲೆ ಮಿಂಚಿದರು. ‘ಯುವರತ್ನ’ ‘ಪವರ್ ಸ್ಟಾರ್’, ‘ಪೃಥ್ವಿ’ ‘ಸನ್ ಆಫ್ ಬಂಗಾರದ ಮನುಷ್ಯ’ ಮೊದಲಾದ ಚಿತ್ರಗಳು ಪುನೀತ ಅವರ ಘನವ್ಯಕ್ತಿತ್ವವನ್ನು ಲೋಕಕ್ಕೆ ತಿಳಿಸಿಕೊಟ್ಟವು.

- Advertisement -

ಎಷ್ಟೋ ಜನ ನುಡಿದಂತೆ, ನಡೆಯಲ್ಲ. ಆದರೆ ನುಡಿದಂತೆ ನಡೆ ಇದೇ ಜನ್ಮ ಕಡೆ ಎಂಬ ದಾಸವಾಣಿಯಂತೆ, ಪುನೀತ ಅವರು ಚಲನಚಿತ್ರದಲ್ಲಿ ಯಾವೆಲ್ಲ ಆದರ್ಶದ ಪಾತ್ರಗಳನ್ನು ಮಾಡಿದ್ದರೋ, ಆ ಪಾತ್ರಗಳಿಗೆ ತಕ್ಕಂತೆ ತಮ್ಮ ಬದುಕನ್ನು ಬದಲಾಯಿಸಿಕೊಂಡರು. ಬಡವರ-ದೀನರ ಬಗ್ಗೆ ಅಂತಃಕರಣೆಯುಳ್ಳವರಾಗಿದ್ದರು. ಅದರಲ್ಲೂ ಬಡ ಹೆಣ್ಣುಮಕ್ಕಳ ಬಗ್ಗೆ ವಿಶೇಷ ಕಾಳಜಿ ಕಳಕಳಿಯುಳ್ಳವರಾಗಿದ್ದರು.

ಅಂತೆಯೆ ಮೈಸೂರಿನ ಶಕ್ತಿಧಾಮ ಕೇಂದ್ರದಲ್ಲಿರುವ ನೂರಾರು ಹೆಣ್ಣುಮಕ್ಕಳ ಭವಿಷ್ಯದ ಬದುಕಿಗೆ ಪುನೀತ ಬೆಳಕಾದರು. ೧೮೦೦ ಹೆಣ್ಣುಮಕ್ಕಳ ಯೋಗಕ್ಷೇಮವನ್ನು ಅವರು ತಮ್ಮ ಸ್ವಂತ ದುಡಿಮೆಯಿಂದ ಮಾಡುತ್ತಿದ್ದರು ಎಂಬುದು ಸೋಜಿಗದ ಸಂಗತಿ. 

ಯಾವ ಮನುಷ್ಯ ತಾನು ಗಳಿಸಿದ್ದನ್ನು ಸಮಾಜಕ್ಕೆ ಮರಳಿ ನೀಡುತ್ತಾನೋ ಅಂತಹ ತ್ಯಾಗ ಜೀವಿಯನ್ನು ಸಮಾಜ ನಿರಂತರ ಸ್ಮರಿಸುತ್ತದೆ ಎಂಬುದಕ್ಕೆ ಪುನೀತ ಒಬ್ಬ ಉಜ್ವಲ ಉದಾಹರಣೆ. ತಂದೆ ರಾಜಕುಮಾರ ಅವರು ೧೯೮೦ರ ದಶಕದಲ್ಲಿ ಕನ್ನಡ ನಾಡಿನಲ್ಲಿ ನಡೆದ ಗೋಕಾಕ ಚಳುವಳಿಯಲ್ಲಿ ನೇರವಾಗಿ ಭಾಗವಹಿಸಿ, ನಾಡು ನುಡಿಗಳಿಗೆ ಧಕ್ಕೆ ಬಂದಾಗಲೆಲ್ಲ ತಮ್ಮ ಸಿಂಹಗರ್ಜನೆಯಿAದ ಜನರನ್ನು ಬಡೆದೆಬ್ಬಿಸಿದ್ದರು.

ತಂದೆಯ ಆದರ್ಶದ ದಾರಿಯಲ್ಲಿ ಸಾಗಿ ಬಂದ ಪುನೀತ ಕೂಡ ಕನ್ನಡ ನಾಡು ನುಡಿ ಸಂಸ್ಕೃತಿಗಳ ವಿಷಯದಲ್ಲಿ ಅಪಾರ ಪ್ರೀತಿ ಅಭಿಮಾನ ಗೌರವಗಳನ್ನು ಹೊಂದಿದ್ದರು. ಅವುಗಳಿಗೆ ಧಕ್ಕೆ ಬಂದಾಗಲ್ಲೆಲ್ಲ ಪ್ರತಿಭಟಿಸುವ ಒಂದು ಔದಾರ್ಯದ ಗುಣ ಅವರಲ್ಲಿತ್ತು.

ಚಲನಚಿತ್ರರಂಗ ಕರೋನ ಸಂದರ್ಭದಲ್ಲಿ ಅನುಭವಿಸಿದ ನೋವು ಯಾತನೆಗಳನ್ನು ಗಮನಿಸಿದ ಪುನೀತ ಅವರು ಮಾಡಿದ ಸಹಾಯ, ಸರಕಾರಕ್ಕೆ ಮಾಡಿಕೊಂಡ ಮನವಿಗಳು ಅವರಲ್ಲಿದ್ದ ಮಾನವೀಯ ಗುಣಗಳಿಗೆ ಸಾಕ್ಷಿಯಾಗಿದ್ದವು. 

ಕರ್ನಾಟಕ ಸರಕಾರದ ಬಹುಮಹತ್ವಾಕಾಂಕ್ಷಿ ಯೋಜನೆ ನಂದಿನಿ ಹಾಲಿನ ಉತ್ಪನ್ನಗಳ ಜಾಹೀರಾತು ಮಾಡಿದ ಸಂದರ್ಭದಲ್ಲಿ, ಅದರಿಂದ ಬಂದ ದುಡ್ಡನ್ನು ಅವರು ಸಾರ್ವಜನಿಕ ಸೇವಾಕಾರ್ಯಗಳಿಗೆ ಕೊಡಮಾಡಿದ್ದರು. 

ಕಂಠೀರವ ಸ್ಟುಡಿಯೋದಲ್ಲಿರುವ ಪುನೀತ ಸಮಾಧಿಗೆ ಪ್ರತಿನಿತ್ಯ ನೂರಾರು ಜನ ಭೇಟಿಕೊಡುತ್ತಾರೆ. ಕಂಠೀರವ ಸ್ಟುಡಿಯೋ ಎದುರು ಹತ್ತಾರು ಜನರು ಹೂ ಮಾಲೆ ಮಾರುವವರು, ಫೋಟೋ ಮಾರುವವರು, ಮೊಬೈಲ್ನ ಕವರ್ಗೆ ಪುನೀತ್ ಪೋಟೋ ಲ್ಯಾಮಿನಿಷೇನ್ ಮಾಡಿಕೊಡುವವರು ಇಂದು ಪುನೀತ್ ಅವರ ಹೆಸರಿನಲ್ಲಿ ನಮ್ಮ ಬದುಕು ಸಾಗುತ್ತಿದೆ ಎಂಬ ಆಶಾ ಭಾವನೆಯನ್ನು ವ್ಯಕ್ತಪಡಿಸುತ್ತಾರೆ. 

ಯುವ ಜನರು ಅವರ ಸಮಾಧಿ ದರ್ಶನ ಪಡೆದು, ಅವರಂತೆಯೇ ಸಮಾಜೋ-ಶೈಕ್ಷಣಿಕ ಸೇವಾ ಚಟುವಟಿಕೆಗಳಲ್ಲಿ ಪಾಲ್ಗೊಂಡರೆ, ಸಮೃದ್ಧ ಕರ್ನಾಟಕವು ನಿರ್ಮಾಣವಾಗುವುದರಲ್ಲಿ ಸಂದೇಹವಿಲ್ಲ.

ಇತ್ತೀಚೆಗೆ ಕರ್ನಾಟಕ ಸರಕಾರವು ಪುನೀತ ಅವರಿಗೆ ಮರಣೋತ್ತರ ಕರ್ನಾಟಕ ರತ್ನ ಪ್ರಶಸ್ತಿ ನೀಡಿ ಗೌರವಿಸಿದೆ. ತಂದೆ-ಮಗ ಇಬ್ಬರೂ ಕರ್ನಾಟಕ ರತ್ನ ಪದವಿಗೆ ಭಾಜನರಾದುದು ಯೋಗಾಯೋಗ.

ಇಂಥ ಆದರ್ಶ ಯುವ ನಟ ನೆನಪಿಗಾಗಿ ಕರ್ನಾಟಕದಲ್ಲಿ ಈಗ ‘ಯುವ ದಿನ’ ಎಂದು ಆಚರಿಸಲಾಗುತ್ತಿದೆ. ಯುವಜನಾಂಗ ಪುನೀತ್ ಅವರು ಬಿಟ್ಟು ಹೋದ ಆದರ್ಶಗಳನ್ನು ಪರಿಪಾಲಿಸುವುದರಲ್ಲಿ ಕರ್ನಾಟಕದ ಭವಿತವ್ಯ ಅಡಗಿದೆ ಎಂದರೆ ಅತಿಶಯೋಕ್ತಿಯಾಗಲಾರದು.


ಪ್ರಕಾಶ ಗಿರಿಮಲ್ಲನವರ

- Advertisement -
- Advertisement -

Latest News

ರೈತ ಆತ್ಮಹತ್ಯೆ ; ಶಾಸಕರ ಸಾಂತ್ವನ

ಸಿಂದಗಿ; ಸಾಲದ ಬಾಧೆಗೆ ಆತ್ಮಹತ್ಯೆ ಪರಿವಾರವಲ್ಲ. ಕಾಲದ ವೈಪರೀತ್ಯದಿಂದ ಮಳೆಯಾಗದೇ ಇಂತಹ ದುಸ್ತರ ಪರಿಸ್ಥಿತಿ ಬಂದೊದಗಿದ್ದು ರೈತರ ಕಷ್ಟಗಳಿಗೆ ಸರಕಾರ ಸ್ಪಂದಿಸುತ್ತದೆ ಅಲ್ಲದೆ ನಿಮ್ಮ ಕಷ್ಟಕ್ಕೆ...
- Advertisement -

More Articles Like This

- Advertisement -
close
error: Content is protected !!
Join WhatsApp Group