spot_img
spot_img

ಹೊಸಪುಸ್ತಕ ಓದು: ಕಾಲಿದಾಸ ಶಾಕುಂತಲ

Must Read

- Advertisement -

ವಿಶ್ವಮಾನ್ಯ ಕೃತಿಯ ಕನ್ನಡ ಅವತರಣಿಕೆ; ಕಾಲಿದಾಸ ಶಾಕುಂತಲ

  • ಪುಸ್ತಕದ ಹೆಸರು : ಕಾಲಿದಾಸ ಶಾಕುಂತಲ
  • ಲೇಖಕರು: ಸಿದ್ಧಲಿಂಗ ಪಟ್ಟಣಶೆಟ್ಟಿ
  • ಪ್ರಕಾಶಕರು: ಅನನ್ಯ ಪ್ರಕಾಶನ, ಧಾರವಾಡ, ೨೦೨೩
  • ಪುಟ: ೧೬೪ ಬೆಲೆ : ರೂ. ೧೮೦
  • ಲೇಖಕರ ಸಂಪರ್ಕವಾಣಿ : ೯೪೪೮೬ ೩೦೬೩೭

ಸಿದ್ಧಲಿಂಗ ಪಟ್ಟಣಶೆಟ್ಟಿ ಅವರ ‘ಕಾಲಿದಾಸ ಶಾಕುಂತಲ’ ನಾಟಕ ಕನ್ನಡ ರಂಗಭೂಮಿಗೆ ಹೊಸ ಅವತರಣಿಕೆಯಾಗಿ ಮೂಡಿ ಬಂದ ಒಂದು ಅತ್ಯುತ್ಕೃಷ್ಟ ರಂಗಪಠ್ಯ. ಕನ್ನಡದಲ್ಲಿ ೧೮೬೯ರಲ್ಲಿಯೇ ಚುರಮರಿ ಶೇಷಗಿರಿರಾಯರು ಕಾಳಿದಾಸ ಕವಿಯ ಶಾಕುಂತಲವನ್ನು ಕನ್ನಡಕ್ಕೆ ತಂದಿದ್ದರು. ತದನಂತರ ಮೈಸೂರು ಆಸ್ಥಾನ ವಿದ್ವಾನ್‌ರಾಗಿದ್ದ ಪ್ರಕಾಂಡ ಪಂಡಿತ ಸಂಸ್ಕೃತ-ಕನ್ನಡ ಉಭಯ ಭಾಷಾಪ್ರ‍ವೀಣ ಬಸವಪ್ಪ ಶಾಸ್ತ್ರಿಗಳು ೧೮೮೨ರಲ್ಲಿ ಶಾಕುಂತಲ ಮೂಲಪಠ್ಯವನ್ನು ಕನ್ನಡದಲ್ಲಿ ಅತ್ಯಂತ ಸಮರ್ಥವಾಗಿ ಅನುವಾದಿಸಿದ್ದರು. ತದನಂತರ ಬಿ. ಕೃಷ್ಣಪ್ಪ, ಎಸ್. ವಿ. ಪರಮೇಶ್ವರ ಭಟ್ಟ ಅವರ ಕೃತಿಗಳು ಕನ್ನಡದಲ್ಲಿ ಬಂದವು. ಹೀಗೆ ಹತ್ತಾರು ಜನ ಕಾಳಿದಾಸನ ಅಭಿಜ್ಞಾನ ಶಾಕುಂತಲ ನಾಟಕವನ್ನು ಭಾಷಾಂತರ, ರೂಪಾಂತರ, ಕಥಾಂತರ ರೂಪದಲ್ಲಿ ಕನ್ನಡದಲ್ಲಿ ಅನುವಾದಿಸುತ್ತಲೇ ಬಂದಿದ್ದಾರೆ. ಕಾಲಮಾನಕ್ಕೆ ತಕ್ಕಂತೆ ಭಾಷೆ-ಶೈಲಿಗಳು ಬದಲಾಗುತ್ತಲೇ ಬಂದಿವೆ. ಈಗ ಸಿದ್ಧಲಿಂಗ ಪಟ್ಟಣಶೆಟ್ಟಿ ಅವರ ಪ್ರಸ್ತುತ ಶಾಕುಂತಲ ನಾಟಕ ವರ್ತಮಾನದ ಸಂದರ್ಭದಲ್ಲಿ ತನ್ನ ನವನವೋನ್ಮೇಷಶಾಲಿತ್ವದಿಂದ, ಹೃದಯಸ್ಪರ್ಶಿಯಾಗಿ ಮೂಡಿ ಬಂದಿದೆ. 

ಕಾಳಿದಾಸ ಭಾರತದ ಒಟ್ಟು ಸಾಹಿತ್ಯ ಚರಿತ್ರೆಯಲ್ಲಿಯೇ ಒಬ್ಬ ಸರ್ವಶ್ರೇಷ್ಠ ಕವಿ-ನಾಟಕಕಾರ. ಕಾಳಿದಾಸನಂತಹ ಕವಿ ಹಿಂದೆ ಹುಟ್ಟಿಲ್ಲ; ಮುಂದೆ ಹುಟ್ಟುವ ಸಂಭವವೂ ಇಲ್ಲವೆನ್ನುವಷ್ಟರ ಮಟ್ಟಿಗೆ ಆತನ ಸಾಹಿತ್ಯದ ಸಾಮರ್ಥ್ಯ ಜಗತ್ತಿನ ಗಮನ ಸೆಳೆದಿದೆ. ಪ್ರಾಯಶಃ ಸೃಜನಶೀಲ ಕೃತಿಯೊಂದು ನೂರಾರು ಭಾಷೆಗಳಲ್ಲಿ ದೇಶ-ವಿದೇಶಗಳಲ್ಲಿ ಖ್ಯಾತಿ ಪಡೆದ ಏಕೈಕ ಕೃತಿಯೆಂದರೆ ‘ಅಭಿಜ್ಞಾನ ಶಾಕುಂತಲ’ ಎಂದು ಹೇಳಿದರೆ ಅತಿಶಯೋಕ್ತಿಯಾಗಲಾರದು. ಕಾಳಿದಾಸ ‘ಮಾಲವಿಕಾಗ್ನಿಮಿತ್ರ’ ಮತ್ತು ‘ವಿಕ್ರಮೋರ್ವಶೀಯ’ ಎಂಬ ನಾಟಕಗಳನ್ನು ಬರೆದ ತರುವಾಯ ಈ ಅಭಿಜ್ಞಾನ ಶಾಕುಂತಲವನ್ನು ರಚಿಸಿದ. ಹೀಗಿದ್ದೂ ಆತನ ಎಲ್ಲ ಕೃತಿಗಳಲ್ಲಿ ‘ಕಾಲಿದಾಸಸ್ಯ ಸರ್ವಸ್ವಮಭಿಜ್ಞಾನಶಾಕುಂತಲಂ’ ಎನ್ನುವಷ್ಟರ ಮಟ್ಟಿಗೆ ಈ ನಾಟಕ ಸರ್ವೋತ್ಕೃಷ್ಟವಾಗಿದೆ. 

ಈ ನಾಟಕದ ಕಥಾವಸ್ತುವಂತೂ ಲೋಕಪ್ರಸಿದ್ಧವಾಗಿದೆ. ಮಹಾಭಾರತದ ‘ಶಾಕುಂತಲೋಪಾಖ್ಯಾನ’ದಲ್ಲಿ ಶಾಕುಂತಲೆ ಮೂಲ ಕಥೆ ಮೂಡಿ ಬಂದಿದೆ. ಈ ಕಥೆಯನ್ನು ಮೂಲವಾಗಿಟ್ಟುಕೊಂಡು ಕಾಳಿದಾಸ ನಾಟಕದ ಮೂಲಕ ಅದಕ್ಕೊಂದು ಹೊಸ ದಿಕ್ಕನ್ನು ತೋರಿಸಿದ್ದಾನೆ. ಕಣ್ವರ ಸಾಕು ಮಗಳಾದ ಶಾಕುಂತಲೆ ದುಷ್ಯಂತನೊಂದಿಗೆ ಗಾಂಧರ್ವವಿವಾಹ ಮಾಡಿಕೊಳ್ಳುತ್ತಾಳೆ. ದುಷ್ಯಂತ ತಮ್ಮ ಮದುವೆಯ ‘ಅಭಿಜ್ಞಾನ’ಕ್ಕಾಗಿ ಉಂಗುರವೊಂದನ್ನು ಕೊಟ್ಟಿರುತ್ತಾನೆ. ಆದರೆ ದುರ್ವಾಸಮುನಿಗಳ ಶಾಪ ಕಾರಣವಾಗಿ, ದುಷ್ಯಂತ ಕೊಟ್ಟ ಉಂಗುರವನ್ನು ಕಳೆದುಕೊಂಡ ಶಾಕುಂತಲೆ ರಾಜನ ಹತ್ತಿರ ಹೋದಾಗ, ಆತನಿಗೆ ‘ಅಭಿಜ್ಞಾನ’ವಾಗುವುದೇ ಇಲ್ಲ. ಆತ ಕೊಟ್ಟ ಉಂಗುರ ಆಕಸ್ಮಿಕವಾಗಿ ನೀರಿನಲ್ಲಿ ಕಳೆದು ಹೋಗುತ್ತದೆ. ಆಗ ರಾಜ ಕಠೋರನಾಗಿ ಶಾಕುಂತಲೆಯನ್ನು ತಿರಸ್ಕರಿಸುತ್ತಾನೆ. ಕಾಲಾನಂತರ ಮೀನುಗಾರನೊಬ್ಬ ಉಂಗುರವೊಂದನ್ನು ರಾಜನಿಗೆ ತಂದುಕೊಟ್ಟಾಗ, ದುಷ್ಯಂತನಿಗೆ ಶಾಕುಂತಲೆಯ ‘ಅಭಿಜ್ಞಾನ’ವಾಗುತ್ತದೆ. ಈ ಕಥಾಹಂದರ ಎಲ್ಲರಿಗೂ ಗೊತ್ತಿರುವುದೆ. ಆದರೆ ಅದನ್ನು ರಂಗಪಠ್ಯದಲ್ಲಿ ರಚಿಸುವಾಗ ಕಾಳಿದಾಸ ಮೆರೆದ ಅದ್ಭುತ ಪ್ರತಿಭೆ ಲೋಕಮಾನ್ಯವಾಗಿದೆ.

- Advertisement -

ಶಾಕುಂತಲ ನಾಟಕದಲ್ಲಿ ಬರುವ ಚತುರತೆ, ಸ್ವಭಾವಚಿತ್ರಣ, ರಸಪರಿಪೋಷಣ, ಭಾಷಾಸೌಷ್ಠವ ಮೊದಲಾದ ಗುಣಗಳಿಂದ ಶಾಕುಂತಲ ನಾಟಕ ಗಮನ ಸೆಳೆಯುತ್ತದೆ. ೧೭೮೯ರಲ್ಲಿಯೇ ಈ ನಾಟಕವನ್ನು ಸರ್ ವಿಲಿಯಮ್ ಜೋನ್ಸ್ ಎಂಬ ವಿದ್ವಾಂಸನು ಇಂಗ್ಲಿಷ್ ಭಾಷೆಗೆ ತರ್ಜುಮೆಗೊಳಿಸಿದನೆಂದು ತಿಳಿದು ಬರುತ್ತದೆ. ಜರ್ಮನಿಯ ಗಯಟೆ ಎಂಬ ಜಗತ್ಪ್ರಸಿದ್ಧ ಕವಿಯಂತೂ ಈ ನಾಟಕದ ಕಾವ್ಯಸೌಂದರ್ಯಕ್ಕೆ ಮಾರುಹೋಗಿ ಪ್ರಶಂಸೆ ಮಾಡಿದ್ದಾನೆ. ಈ ನಾಟಕದ ವರ್ಣನೆಗಳನ್ನು ಓದಿದ ಫ್ರೇಂಚ್ ದೇಶದ ಘನವಿದ್ವಾಂಸ ಶೇಝಿ ಕುಣಿದಾಡಿದನೆಂಬ  ಘಟನೆ ದಾಖಲಾಗಿದೆ. ಹೀಗೆ ಜಗತ್ತಿನ ವಿದ್ವಜ್ಜನರ ಗಮನ ಸೆಳೆದ ಈ ನಾಟಕವನ್ನು ಸಿದ್ಧಲಿಂಗ ಪಟ್ಟಣಶೆಟ್ಟಿ ಅವರು ಅತ್ಯಂತ ಸುಲಲಿತವಾದ ಭಾಷೆಯಲ್ಲಿ, ವಿಶಿಷ್ಟವಾದ ಶೈಲಿಯಲ್ಲಿ ಕಾಳಿದಾಸನ ಮೂಲ ಪಠ್ಯಕ್ಕೆ ಎಲ್ಲಿಯೂ ಚ್ಯುತಿಬರದಂತೆ ಕನ್ನಡಕ್ಕೆ ಅನುವಾದಿಸಿರುವುದು ಗಮನೀಯವಾಗಿದೆ. ಹಿಂದಿ ಸಾಹಿತ್ಯದಲ್ಲಿ ಅಗಣಿತ ಕೃಷಿ ಮಾಡಿರುವ ಪಟ್ಟಣಶೆಟ್ಟಿ ಅವರು ಈ ಹಿಂದೆ ಕಾಲಿದಾಸನ ‘ಮಾಲವಿಕಾಗ್ನಿ ಮಿತ್ರಮ್’ ನಾಟಕವನ್ನು ‘ವಿದಿಶಾ ಪ್ರಹಸನ’ ಎಂಬ ಹೆಸರಿನಿಂದ ಉತ್ತರ ಕರ್ನಾಟಕದ ದೊಡ್ಡಾಟದ ಶೈಲಿಯಲ್ಲಿ ಅನುವಾದಿಸಿದ್ದಾರೆ. ಈಗ ಶಾಕುಂತಲವನ್ನು ಅನುವಾದಿಸುವ ಮೂಲಕ ಕಾಲಿದಾಸ ಕವಿಯನ್ನು ಪ್ರಸ್ತುತ ಸಂದರ್ಭದಲ್ಲಿ ಮತ್ತೆ ಪರಿಚಯಿಸುವ ಕಾರ್ಯ ಮಾಡಿದ್ದಾರೆ. 

ಸಿದ್ಧಲಿಂಗ ಪಟ್ಟಣಶೆಟ್ಟಿ ಅವರ ಈ ಶಾಕುಂತಲ ಕೃತಿಯನ್ನು ಈಗಾಗಲೇ ಕನ್ನಡದಲ್ಲಿ ಪ್ರಕಟವಾಗಿರುವ ಮೂರು ಶಾಕುಂತಲ ಕೃತಿಗಳೊಂದಿಗೆ ಒಂದು ಘಟನೆಯನ್ನು ತುಲನಾತ್ಮಕವಾಗಿ ಗಮನಿಸಿದಾಗ, ಪಟ್ಟಣಶೆಟ್ಟಿ ಅವರ ಅನುವಾದವು ವರ್ತಮಾನ ಕಾಲಕ್ಕೆ ಹೇಗೆ ಉತ್ಕೃಷ್ಟವಾಗಿದೆ ಎಂಬುದರ ಅರಿವು ನಮಗಾಗುತ್ತದೆ. 

ಶಾಕುಂತಲೆಯು ತನ್ನ ಪತಿಯ ಅರಮನೆಗೆ ಹೋಗುವ ಸಂದರ್ಭದಲ್ಲಿ ತನ್ನ ಸಾಕುತಂದೆಯಾದ ಕಣ್ವರನ್ನು ಬಿಟ್ಟು ಹೋಗುವ ವಿಯೋಗ ದುಃಖ ಅವಳನ್ನು ಬಹಳ ಕಾಡುತ್ತದೆ. ಆ ಸಂದರ್ಭದಲ್ಲಿ ಕಣ್ವರು ಅವಳನ್ನು ಸಂತೈಸುವ ಒಂದು ಪ್ರಸಂಗ ಇಲ್ಲಿದೆ. ಮೂಲ ಕಾಳಿದಾಸನ ಪಠ್ಯ ಹೀಗಿದೆ:

- Advertisement -

ಅಭಿಜನವತೋ ಭರ್ತುಃಶ್ಲಾಘ್ಯೇ ಸ್ಥಿತಾ ಗೃಹಿಣೀಪದೇ 

ವಿಭವಗುರುಭಿಃ ಕೃತ್ಯೈಸ್ತಸ್ಯ ಪ್ರಶಿಕ್ಷಣಮಾಕುಲಾ|| 

ತನಯಮಚಿರಾತ್ಪ್ರಾಚೀವಾರ್ಕಂ ಪ್ರಸೂಯ ಚ ಪಾವನಂ 

ಮಮವಿರಹಜಾಂ ನತ್ವಂ ವತ್ಸೇ ಶುಚಂ ಗಣಯಿಷ್ಯಸಿ ||

ಈ ಪದ್ಯವನ್ನು ಬಸಪ್ಪ ಶಾಸ್ತ್ರಿಗಳು ಅನುವಾದಿಸಿದ ರೀತಿ ಹೀಗಿದೆ:

ಕುವರಿ ಕುಲೀನನಾದ ಪತಿಗೊಪ್ಪುವ ಪಟ್ಟದ ರಾಣಿಯಾಗಿ ವೈ

ಭವಗಳಿನೇಳ್ಗೆವೆತ್ತಿನನ ಕೃತ್ಯದೊಳಾಕುಲೆಯಾಗುತ್ತಾವಗಂ || 

ರವಿಯನಮರ್ತ್ಯನಾಥದಿಶೆ ತಾಂ ಪಡವಂತೆ ಸಗಾತ್ರ ಪುತ್ರನಂ 

ತವಕದೆ ಪೆತ್ತು ನೀನೆಣಿಸದಿರ್ಪ ಮದೀಯ ವಿಯೋಗದುಃಖವಂ ||

ಬಿ. ಕೃಷ್ಣಪ್ಪನವರು ಇದನ್ನೇ ಹೀಗೆ ಭಾಷಾಂತರಿಸಿದ್ದಾರೆ:

“ಕುಲೀನನಾದ ಪತಿಯಿಂದ ಶ್ಲಾಘ್ಯವಾದ ಗೃಹಿಣೀ ಪದವನ್ನು ಪಡೆದವಳಾಗಿ ಆತನ ವಿಭವೋಪೇತವಾದ ಮಹಾಕಾರ್ಯಗಳಲ್ಲಿ ಪ್ರತಿಕ್ಷಣವೂ ನಿರತಳಾಗಿರುತ್ತಾ ಪ್ರಾಚೀನವನಿತೆಯು ಆದಿತ್ಯನನ್ನು ಪ್ರಸವಿಸುವಂತೆ ನೀನು ಸ್ವಲ್ಪ ಕಾಲದಲ್ಲಿಯೇ ತನಯನನ್ನು ಪಡೆಯುವದರಿಂದ ನನ್ನ ವಿಯೋಗ ದುಃಖವನ್ನು ನೀನು ಅನುಭವಿಸದಂತಾಗುವದು.”

ಚುರಮರಿ ಶೇಷಗಿರಿರಾಯರು ಮಾಡಿದ ಅನುವಾದ ಹೀಗಿದೆ:

ಆಗಲಿ ಪೋಗುವುದಕ್ಕೆ ದುಃಖವ್ಯಾಕೆ ಮಗುವೆ ನಿನ್ನಯ ಪತಿಯು ಜಗದೊಡೆಯನಮ್ಮಾ | 

ಅತಿ ಕುಲೀನವ ನಿನ್ನ ಪತಿಯವನ ಮನೆಯೊಳಗೆ ಸತಿಯಾಗಿ ಬಾಳ್ಳುದೆ ಶ್ಲಾಘ ನಿನಗೆ || 

ಮತಿಯೆಲ್ಲ ಮುಳುಗಿ ಸಂತತ ನಿನ್ನ ಮನೆಯ ಬಹು ಕೃತಿಗಳೊಳು ತವರ್ಮನೆಯ ಸ್ಮೃತಿಯಾಗದಮ್ಮಾ ಪಲ್ಲ 

ಇವನು ಪ್ರಾಚಿಯೊಳುದಯವನ ಗೈದ ತೆರನಂತೆ | 

ತನಯ ನಿನ್ನೊಳು ಪುಟ್ಟ ಲಂಕದೊಳು || 

ಅನುದಿನದೊಳಿಟ್ಟು ಮೋಹದಿ ಮುದ್ದಿಸಲು ಬಂಧು

ಜನವಿರಹದಿಂದಾದ ಕಷ್ಟವೆಲ್ಲಿಹುದು

ಪರಿಪರಿಯ ವಿಭವದೊಳು ಪತಿಯೊಡನೆ ಹರುಷದೊಳು 

ಸರಸ ಸವಿಮಾತುಗಳ ಸೌಖ್ಯ ಬಹಳು ||

ಮರಿಸಿಬಿಡುವದು ನಮ್ಮ ನರಗಳಿಗೆಯೊಳು ನೀ ತ- 

ವರ ಮನೆಯ ನೆನಿಸುವದು ಬಹು ದಿನದ ಕನಸು

ಈ ಪದ್ಯವನ್ನೇ ಸಿದ್ಧಲಿಂಗ ಪಟ್ಟಣಶೆಟ್ಟಿ ಅವರು ಅನುವಾದಿಸಿದ ಬಗೆ ಹೀಗಿದೆ:

ಕಳವಳ ಪಡಬೇಡ ಮಗಳೆ

ಸತ್ಕುಲಜ ಪತಿಯೊಡನೆ ಪೂಜ್ಯ ಗೃಹಿಣಿಯ ಪದದಿ ಆಸೀನಳಾಗು

ಪೂರ್ವ-ಗರ್ಭದಲಿ ಉದಯಿಸುವ ಸೂರ್ಯನ ಹಾಗೆ

ಕಲ್ಯಾಣಕಾರಕ ಪಾವನ ಪುತ್ರನನು ಪಡೆದು,

ಆ ವೈಭವಪೂರ್ಣ ಆಲಯದಿ

ಯಾವಾಗಲೂ ಉನ್ನತಿಯ ಕಾರ್ಯದಲಿ ತೊಡಗಿರುತ್ತೀ,

ನನ್ನನ್ನು ಅಗಲಿರುವ ದುಃಖ ನಿನ್ನನ್ನು ನೋಯಿಸದು ಮಗಳೆ.

ನೂರಾ ನಲ್ವತ್ತು ವರ್ಷಗಳ ಹಿಂದೆ ಬಸವಪ್ಪ ಶಾಸ್ತ್ರಿಗಳು ಅನುವಾದಿಸಿದ ಪದ್ಯ ಇಂದಿಗೂ ಚೇತೋಹಾರಿಯಾಗಿದೆ. ಆ ಕಾಲಘಟ್ಟದ ಭಾಷೆ ಶೈಲಿಯಲ್ಲಿ ರಚನೆಗೊಂಡಿದ್ದರೂ ಕನ್ನಡದ ಕಂಪನ್ನು ಸೂಸುತ್ತದೆ. ಅದೇ ಶೇಷಗಿರಿರಾಯರ ಅನುವಾದವು ದೀರ್ಘವಾಗಿರುವ ಕಾರಣ ಪೇಲವವಾಗಿದೆ. ಇಷ್ಟೆಲ್ಲ ಓದುವುದರೊಳಗೆ ಹಿಂದೆ ಓದಿದ ಘಟನೆಗಳನ್ನೇ ಓದುಗ ಮರೆಯಬಹುದಾದ ಸಾಧ್ಯತೆ ಇದೆ. ಹೀಗಾಗಿ ಚುರಮರಿ ಅವರಿಗಿಂತ ಬಸವಪ್ಪ ಶಾಸ್ತ್ರಿಗಳ ಅನುವಾದ ಶ್ರೇಷ್ಠವಾಗಿದೆ. ಅದರ ಮುಂದುವರಿದ ಭಾಗವೆಂಬಂತೆ, ನಮ್ಮ ದಿನಮಾನದ ಭಾಷೆ ಸಂಸ್ಕೃತಿಗೆ ಪೂರಕವಾಗಿ ಸಿದ್ಧಲಿಂಗ ಪಟ್ಟಣಶೆಟ್ಟರ ಅನುವಾದವು ಕಮನೀಯವಾಗಿದೆ. ರಂಗಪಠ್ಯವಾಗಿ ಓದುವರಿಗೂ, ಅಭಿನಯಿಸುವ ಕಲಾವಿದರಿಗೂ, ಕೇಳುಗರಿಗೂ ನೋಡುಗರಿಗೆ ಮನಾನಂದವನ್ನು ನೀಡುವ ದೃಷ್ಟಿ ಪಟ್ಟಣಶೆಟ್ಟರ ಅನುವಾದದಲ್ಲಿರುವುದನ್ನು ಯಾರಾದರೂ ಗುರುತಿಸಬಹುದು. 

ಕಾಳಿದಾಸ ದೊಡ್ಡ ಕವಿ-ನಾಟಕಕಾರನಾದರೂ ತನ್ನ ಕೃತಿಯ ಬಗ್ಗೆ ವಿದ್ವಜ್ಜನರು ಏನು ಹೇಳುವರೋ ಎಂಬ ಅಳಕು ಆತನನ್ನು ಕಾಡಿದಂತಿದೆ. ಅದಕ್ಕಾಗಿ ಆತ ನಾಂದಿಯಲ್ಲಿ ಹೇಳುವ ಮಾತು ಹೀಗಿದೆ:

ಆ ಪರಿತೋಷಾದ್ವಿದುಷಾಂ ನಸಾಧು ಮನ್ಯೇ ಪ್ರಯೋಗ ವಿಜ್ಞಾನಂ 

ಬಲವದಪಿ ಶಿಕ್ಷಿತಾನಾಂ ಆತ್ಮನ ಪ್ರತ್ಯಯಂ ಚೇತಃ || (ನಾಂದೀ)

ತಾನು ನಾಟಕ ರಚನೆಯಲ್ಲಿ ನಿಪುಣನಾಗಿದ್ದರೂ ತನ್ನ ಕೃತಿಯಿಂದ ವಿದ್ವಜ್ಜನರಿಗೆ ಸಂತೋಷವಾಗಿದೆಯೆಂದು ತಿಳಿಯುವವರೆಗೆ ತನಗೆ ಸಮಾಧಾನವಾಗದೆಂದು ಅತಿ ವಿನಯದಿಂದ ಕಾಳಿದಾಸ ಸೂತ್ರದಾರನಿಂದ ಹೇಳಿಸುತ್ತಾನೆ. ಈ ಸಂಸ್ಕೃತ ಪದ್ಯದ ಅನುವಾದವನ್ನು ಶೇಷಗಿರಿರಾಯರು ಮಾಡಿದ್ದು ಹೀಗೆ:

ಕಾಂತೆ ಕೇಳೊರೆಯಂತೆ ಗಂತಿನ ಗಂತದಂತನನಾಂತವರ್

ಕುಂತು ಕೇಳುತಲಂತರಂಗದಿ ಸಂತಸಂ ತಳೆದಿಂದು ಪ್ರ

ತ್ಯಂತರಂ ಬರುವಂತಿನಂ ತಲೆದೂಗುವಾ ಪರಿಯಂತರಂ

ನಾ ತಳೆರ್ದಿಹೆ ಶಂಕೆ ಸದ್ಗುಣವಂತನಾಂ ತದನಂತರಂ||

ಬಸವಪ್ಪ ಶಾಸ್ತ್ರಿಗಳ ಅನುವಾದ ಹೀಗಿದೆ: 

ರಸಿಕರ್ಕಳೊಪ್ಪುವನ್ನಂ

ರಸಾಭಿನಯ ಕೌಶಲಂಗಳೊಳ್ಳಿದು ವೆನುತಾ – 

ನುಸಿರಂ ವಲಮೋದಿದ ಮಾ 

ನಿಸರ್ಗಂ ತಮ್ಮೊಳಗೆ ತಮಗೆ ನಂಬುಗೆಯಿಲ್ಲಂ || 

‘ಶೇಷಗಿರಿರಾಯರ ಅನುವಾದವು ಮೂಲದಕಿಂತ ವಿಸ್ತಾರವಾಗಿದೆ. ಅತಿಯಾದ ಗಮಕಪ್ರಾಸವು ಅರ್ಥ ಸುಭಗತೆಗೆ ಅಡ್ಡಿಯಾಗಿದೆ. ‘ಕುಂತು’ ಎಂಬ ಗ್ರಾಮ ಪದವು ಇತರ ಪದಸರಣಿಯಲ್ಲಿ ಹೊಂದುವುದಿಲ್ಲ. ಬಸವಪ್ಪ ಶಾಸ್ತ್ರಿಗಳ ಅನುವಾದದಲ್ಲಿ ಅರ್ಥ ಸ್ಪಷ್ಟತೆ, ಪ್ರೌಢಿಮೆ ಮತ್ತು ಸಂಕ್ಷೇಪ – ಇವು ಎದ್ದು ಕಾಣುವಂತಿವೆ’ ಎಂದು ಶ್ರೀನಿವಾಸ ಹಾವನೂರ ಅವರು ಅಭಿಪ್ರಾಯ ಪಡುತ್ತಾರೆ. ಇದೇ ಪದ್ಯವನ್ನು ಸಿದ್ಧಲಿಂಗ ಪಟ್ಟಣಶೆಟ್ಟಿ ಅವರು ಅನುವಾದಿಸಿದ ರೀತಿ ಹೀಗಿದೆ:

ವಿದ್ವಾಂಸರಿಗೆ ಎಲ್ಲಿಯ ವರೆಗೆ ಸಂತೋಷ, ಸಮಾಧಾನ

ಲಭಿಸುವುದಿಲ್ಲವೋ

ಅಲ್ಲಿಯವರೆಗೆ ನಮ್ಮ ಪ್ರಯೋಗ-ಕೌಶಲ್ಯದ ಬಗ್ಗೆ ಏನೂ

ಹೇಳಲಾಗದು.

ಬಹಳಷ್ಟು ತಿಳಿದವರು ಕೂಡ ತಮ್ಮ ಬಗೆಗೆ

ತಮ್ಮ ಹೃದಯದಲ್ಲಿ ಎಂದೂ ನಿಶ್ಚಿಂತರಾಗಿರುವುದಿಲ್ಲ.

ಸಿದ್ಧಲಿಂಗ ಪಟ್ಟಣಶೆಟ್ಟಿ ಅವರ ಅನುವಾದ ಓದುಗರ ಹೃದಯಕ್ಕೆ ತಟ್ಟುತ್ತದೆ. ಇಂದಿನ ಕಾಲದಲ್ಲಿ ಬಸವಪ್ಪ ಶಾಸ್ತ್ರಿಗಳ ಕಂದಪದ್ಯಗಳನ್ನು ಓದಿ ಅರ್ಥೈಸಿಕೊಳ್ಳುವ ಸಾಮರ್ಥ್ಯ ನಮ್ಮ ಕನ್ನಡ ಓದುಗರಿಗೆ ಇಲ್ಲದಿರುವುದರಿಂದ, ಪಟ್ಟಣಶೆಟ್ಟಿ ಅವರ ಈ ನುಡಿಗಳು ಸರಳವಾಗಿ ಅರ್ಥವಾಗುವುದರಿಂದ ಈ ವರೆಗೆ ಬಂದ ಎಲ್ಲ ಶಾಕುಂತಲಗಳ ಅನುವಾದಕ್ಕಿಂತ ಪಟ್ಟಣಶೆಟ್ಟಿ ಅವರ ಅನುವಾದವು ಹೆಚ್ಚು ಅರ್ಥಗರ್ಭಿತವೂ ಕಾವ್ಯಾತ್ಮಕ ಸೌಂದರ್ಯದಿಂದಲೂ ಕೂಡಿದೆ. ‘ಕಾವ್ಯ ರಚನಾ ಚಾಪಲ್ಯದ ಕಾಲಿದಾಸ ಎಲ್ಲ ಬಗೆಯ ಪಾತ್ರಗಳನ್ನು, ತನ್ನ ಕಾವ್ಯಾಸಕ್ತಿ, ಪ್ರೇರಣೆಗೆ ತಕ್ಕಂತೆ, ರಸಿಕ ಕವಿಗಳನ್ನಾಗಿ, ತಜ್ಞ ಗಾಯಕರನ್ನಾಗಿ ರೂಪಿಸಿದ್ದಾನೆ; ಹೀಗಾಗಿ, ನಾನು ಅನಿವರ‍್ಯವಾಗಿ, ಮೂಲದ ತಲಬಂಧವನ್ನು ಬಿಟ್ಟುಕೊಡದೆ, ಹೊಸ ಶೈಲಿಯನ್ನು ಬಳಸಿಕೊಂಡಿದ್ದೇನೆ’ ಎಂದು ಪಟ್ಟಣಶೆಟ್ಟಿ ಅವರು ಹೇಳುತ್ತಾರೆ. ಛಂದೋಬದ್ಧವಾದ, ರಾಗ-ತಾಳ-ಲಯಬದ್ಧವಾದ ೧೯೫ ಹಾಡುಗಳನ್ನು ಮೂಲಕ್ಕೆ ವ್ಯತ್ಯಯವಾಗದ ರೀತಿಯಲ್ಲಿ ಆಕರ್ಷಕವಾಗಿ ಪಟ್ಟಣಶೆಟ್ಟಿ ಅವರು ಅನುವಾದಿಸಿದ್ದಾರೆ. ಹೀಗಾಗಿ ಮೂಲಕೃತಿಯ ಬಂಧ-ಕಥನದ ಸ್ವಾರಸ್ಯವನ್ನು ಇಲ್ಲಿಯೂ ಅನುಭವಿಸಬಹುದು. 

ಸಿದ್ಧಲಿಂಗ ಪಟ್ಟಣಶೆಟ್ಟಿ ಅವರು ಕನ್ನಡದಲ್ಲಿ ಬಂದ ಎಲ್ಲ ಶಾಕುಂತಲಗಳನ್ನು ತಲಸ್ಪರ್ಶಿಯಾಗಿ ಅಧ್ಯಯನ ಮಾಡಿದ್ದಾರೆ, ಅಷ್ಟೇ ಅಲ್ಲ, ಹಿಂದಿ ಭಾಷೆಯಲ್ಲಿ ಬಂದ ಮೋಹನ್ ರಾಕೇಶ್ ಅವರ ಕೃತಿಗಳನ್ನು ಆಳವಾಗಿ ಅಧ್ಯಯನ ಮಾಡಿ, ಹೊಸತನದೊಂದಿಗೆ ಶಾಕುಂತಲವನ್ನು ಕನ್ನಡ ಸಾರಸ್ವತ ಪ್ರಪಂಚಕ್ಕೆ ಕೊಟ್ಟಿದ್ದಾರೆ.

ಈ ಇಳಿವಯಸ್ಸಿನಲ್ಲಿಯೂ ಸಿದ್ಧಲಿಂಗ ಪಟ್ಟಣಶೆಟ್ಟಿ ಅವರ ಕ್ರಿಯಾಶೀಲತೆ ಎಂತಹ ಯುವಕರನ್ನೂ ನಾಚಿಸುವಂತಿದೆ. ಅವರ ಸಾಹಿತ್ಯಾಧ್ಯಯನ ಆಸಕ್ತಿ, ಇಂದಿಗೂ ಬಿಡದೆ ಬರೆಯುವ ಹಂಬಲ ಲೋಕಸೋಜಿಗವೆನಿಸಿದೆ. ಅವರಂತಹ ಹಿರಿಯರು ಇನ್ನಷ್ಟು ಇಂತಹ ಉತ್ಕೃಷ್ಟ ಕೃತಿಗಳನ್ನು ಕನ್ನಡ ಸಾಹಿತ್ಯ ಲೋಕಕ್ಕೆ ನೀಡುವಂತಾಗಲಿ, ಆ ಮೂಲಕ ಕನ್ನಡ ಸಾರಸ್ವತ ಪ್ರಪಂಚ ಇನ್ನೂ ವಿಸ್ತಾರೋನ್ನತವಾಗಿ ಬೆಳೆಯುವಂತಾಗಲಿ ಎಂದು ಹೃದಯತುಂಬಿ ಆಶಿಸುತ್ತೇನೆ.


ಪ್ರಕಾಶ ಗಿರಿಮಲ್ಲನವರ

ಬೆಳಗಾವಿ

ಮೊ: ೯೯೦೨೧೩೦೦೪೧

- Advertisement -
- Advertisement -

Latest News

ಭತ್ತದ ನಾಡು ಕೆ.ಆರ್.ನಗರ ಕಾವೇರಿ ತೀರದ ಅರ್ಕೇಶ್ವರ

ನಾವು ಕಪ್ಪಡಿ ದರ್ಶನ ಮಾಡಿಕೊಂಡು ಕೆ.ಆರ್.ನಗರದ ಅರ್ಕೇಶ್ವರ ದೇವಸ್ಥಾನ ನೋಡಲು ಪ್ರಯಾಣ ಮುಂದುವರೆಸಿದೆವು. ಕೆ.ಆರ್.ನಗರದಿಂದ ಹಾಸನ ರಸ್ತೆಯಲ್ಲಿ ಮೂರ್ನಾಲ್ಕು ಕಿ.ಮೀ. ದೂರದಲ್ಲಿ ಕಾವೇರಿ ನದಿಯ ದಂಡೆಯಲ್ಲಿ...
- Advertisement -

More Articles Like This

- Advertisement -
close
error: Content is protected !!
Join WhatsApp Group