- ಪುಸ್ತಕದ ಹೆಸರು : ಸಾರಸ್ವತ ಕೂಜನ
- ಲೇಖಕರು : ಡಾ. ಗುರುಪಾದ ಮರಿಗುದ್ದಿ
- ಪ್ರಕಾಶಕರು : ಮಣಿ ಪ್ರಕಾಶನ, ಮೈಸೂರು, ೨೦೨೩
- ಪುಟ : ೨೨೦ ಬೆಲೆ : ರೂ. ೨೩೦
- ಲೇಖಕರ ಸಂಪರ್ಕವಾಣಿ : ೯೪೪೯೪೬೫೬೧೭
ಡಾ. ಗುರುಪಾದ ಮರಿಗುದ್ದಿ ಬೆಳಗಾವಿ ಜಿಲ್ಲೆಯ ಸಾಹಿತ್ಯ ಲೋಕದ ಒಬ್ಬ ಗಟ್ಟಿ ವಿದ್ವಾಂಸರು. ಸದ್ದುಗದ್ದಲವಿಲ್ಲದೆ ತಮ್ಮ ಪಾಡಿಗೆ ತಾವು ಸಾಹಿತ್ಯ ರಚನೆ ಮಾಡುತ್ತ ಆದರ್ಶವೂ ಅನುಕರಣೀಯವೂ ಆದ ಮಾರ್ಗದಲ್ಲಿ ನಡೆಯುತ್ತಿರುವ ಡಾ. ಗುರುಪಾದ ಮರಿಗುದ್ದಿ ಅವರು ನಮ್ಮ ನಡುವಿನ ಒಬ್ಬ ಶ್ರೇಷ್ಠ ವಿಮರ್ಶಕರು. ಡಾ. ಮರಿಗುದ್ದಿ ಅವರು ಕುವೆಂಪು ಅವರ ಗಾಢವಾದ ಪ್ರಭಾವಕ್ಕೆ ಒಳಗಾದವರು. ಉತ್ತರ ಕರ್ನಾಟಕದಲ್ಲಿ ಕುವೆಂಪು ಅವರ ಸಾಹಿತ್ಯವನ್ನು ಕುರಿತು ಅತಿ ಹೆಚ್ಚು ಕೃತಿಗಳನ್ನು ರಚಿಸಿದವರು. ಕನ್ನಡ ವಿಮರ್ಶಾ ಕ್ಷೇತ್ರಕ್ಕೆ ನೀಡಿದ ಅವರ ಕೊಡುಗೆ ಗಮನಾರ್ಹ. ‘ನೆತ್ತಿಯ ಗುರಿ ಅಂತರಿಕ್ಷ’ ‘ಅಭಿವ್ಯಕ್ತಿ ಮತ್ತು ಅರ್ಥವಿನ್ಯಾಸ’ ‘ನಡುಗನ್ನಡ ಸಾಹಿತ್ಯ ಪರಿವೇಷ’ ಮತ್ತು ‘ಬೆಂಕಿ ಮಲ್ಲಿಗೆಯ ಪರಿಮಳ’ ಮೊದಲಾದ ೧೨ ವಿಮರ್ಶಾ ಕೃತಿಗಳನ್ನು ಪ್ರಕಟಿಸಿದ್ದಾರೆ. ಡಾ. ಗಿರಡ್ಡಿ, ಡಾ. ಜಿ.ಎಸ್. ಆಮೂರ ಅವರ ಮಾದರಿಯಲ್ಲಿ ಅತ್ಯಂತ ಸಂಯಮ ಸಂವೇದನೆಯಿಂದ ಸಾಹಿತ್ಯವನ್ನು ವಿಮರ್ಶಿಸುವ ಅವರ ದೃಷ್ಟಿ ಅನನ್ಯವಾದುದು. ಆವೇಶವಿಲ್ಲದ, ಟೀಕೆ-ನಿಂದನೆಗಳಿಲ್ಲದ ಅವರ ನಿರುದ್ವೇಗ ನಿರೂಪಣೆ ಮಾದರಿಯಾಗಿದೆ. ಅಂತೆಯೇ ಬೆಳಗಾವಿ ಜಿಲ್ಲೆಯ ಶ್ರೇಷ್ಠ ವಿಮರ್ಶಕರಲ್ಲಿ ಅವರು ಅಗ್ರಗಣ್ಯರು ಎಂದರೆ ಅತಿಶಯೋಕ್ತಿಯಾಗಲಾರದು.
ಬೆಳಗಾವಿ ಜಿಲ್ಲೆ ಅನೇಕ ವಿದ್ವಜ್ಜನರ ಆಡುಂಬೋಲ. ಈ ಜಿಲ್ಲೆಯಲ್ಲಿ ಜನಿಸಿದ ವಿದ್ವಾಂಸರ ದೊಡ್ಡ ಪಟ್ಟಿಯೇ ಇದೆ. ಆ.ನೇ.ಉಪಾಧ್ಯೆ, ಕುಂದಣಗಾರ, ಶಿ.ಚೆ.ನಂದೀಮಠ, ಶಂಬಾ ಜೋಶಿ, ಬೆಟಗೇರಿ ಕೃಷ್ಣಶರ್ಮ, ಮಿರ್ಜಿ ಅಣ್ಣಾರಾಯ, ಬಸವರಾಜ ಕಟ್ಟೀಮನಿ, ಚಂದ್ರಶೇಖರ ಕಂಬಾರ ಮೊದಲಾದ ವಿದ್ವತ್ಲೋಕದ ಘಟಾನುಘಟಿಗಳು ಜನ್ಮತಳೆದ ಜಿಲ್ಲೆಯಿದು. ಈ ವಾರಸುದಾರಿಕೆಯ ಪರಂಪರೆಯನ್ನು ಅತ್ಯಂತ ಸಮರ್ಥವಾಗಿ ಮುನ್ನಡೆಸುತ್ತಿರುವ ಡಾ. ಗುರುಪಾದ ಮರಿಗುದ್ದಿ ಅವರ ಮತ್ತೊಂದು ವಿಶೇಷ ವಿಮರ್ಶಾ ಸಂಕಲನ ‘ಸಾರಸ್ವತ ಕೂಜನ’.
ನಿವೃತ್ತಿ ನಂತರವೂ ವಿದ್ವತ್ತಿನ ಅನುಸಂಧಾನ ನಿರತ ಡಾ. ಗುರುಪಾದ ಮರಿಗುದ್ದಿ ಅವರು ತಮ್ಮ ಸಾಹಿತ್ಯಿಕ ಚಟುವಟಿಕೆಗಳ ಮೂಲಕ ಇಂದಿಗೂ ಬೆಳಗಾವಿ ಜಿಲ್ಲೆಯಲ್ಲಿ ಅತ್ಯಂತ ಕ್ರಿಯಾಶೀಲ ಬರಹಗಾರರಾಗಿ ಯುವಕರಿಗೆ ಮಾಗದರ್ಶಿಯಾಗಿದ್ದಾರೆ.
ಸಾರಸ್ವತ ಕೂಜನ ಕೃತಿಯಲ್ಲಿ ಎರಡು ಭಾಗಗಳಲ್ಲಿ ಒಟ್ಟು ೨೧ ಲೇಖನಗಳಿವೆ. ಮೊದಲ ಭಾಗದಲ್ಲಿ ವಿಮರ್ಶಾತ್ಮಕ ಲೇಖನಗಳು, ಎರಡನೆಯ ಭಾಗದಲ್ಲಿ ವ್ಯಕ್ತಿಪರಿಚಯಾತ್ಮಕ ಲೇಖನಗಳಿವೆ. ಆಶ್ಚರ್ಯದ ಸಂಗತಿಯೆಂದರೆ ತಮ್ಮ ಸಾಹಿತ್ಯಿಕ ಯಾತ್ರೆಯಲ್ಲಿ ಮೊಟ್ಟ ಮೊದಲು ಬರೆದ ಲೇಖನವೊಂದನ್ನು ಈ ಸಂಕಲನದಲ್ಲಿ ಸೇರಿಸಿದ್ದಾರೆ. ಬೆಳಗಾವಿಯ ಹಿರಿಯ ನಾಟಕಕಾರರಾಗಿದ್ದ ರಾ.ಕೃ.ನಾಯಿಕ ಅವರು ರಚಿಸಿದ ‘ಓಡೀಸಿ’ ನಾಟಕದ ಹಸ್ತಪ್ರತಿಯನ್ನು ಅವಲೋಕಿಸಿ ಒಂದು ವಿಮರ್ಶಾತ್ಮಕ ಲೇಖನವನ್ನು ಡಾ. ಮರಿಗುದ್ದಿ ಅವರು ರಚಿಸಿದ್ದರು. ಅದು ೧೯೮೭ರ ಕರ್ನಾಟಕ ಭಾರತಿ ಪತ್ರಿಕೆಯಲ್ಲಿ ಪ್ರಕಟವಾದ ಅವರ ಮೊದಲ ವಿಮರ್ಶಾ ಲೇಖನ. ನಾಟಕದ ಹಸ್ತಪ್ರತಿ ಆಧರಿಸಿ ಬರೆದ ಈ ಲೇಖನ ಅವರೊಬ್ಬ ಶ್ರೇಷ್ಠ ವಿಮರ್ಶಕರಾಗಬಲ್ಲರು ಎಂಬುದಕ್ಕೆ ಸಾಕ್ಷಿಯನ್ನು ಒದಗಿಸುತ್ತದೆ.
ಈ ಸಂಕಲನದಲ್ಲಿಯ ಎಲ್ಲ ಲೇಖನಗಳು ಏಕಮುಖವಾಗಿ ಬರೆದುದಲ್ಲ. ಆಗಾಗ ಸಂದರ್ಭಕ್ಕೆ ಅನುಗುಣವಾಗಿ ಅಭಿನಂದನ ಗ್ರಂಥಗಳಿಗೆ, ಭಾಷಣಗಳಿಗೆ ಸಿದ್ಧ ಮಾಡಿದ ಲೇಖನಗಳ ಸಂಚಯ ಇಲ್ಲಿವೆ. ಹೀಗಾಗಿ ಬಹುಮುಖಿ ಆಯಾಮ ಇಲ್ಲಿಯ ಲೇಖನಗಳಿಗೆ ಪ್ರಾಪ್ತವಾಗಿದೆ. ‘ಸಾರ್ಥಕ ಬದುಕಿಗಾಗಿ ಬುದ್ಧನ ಉಪದೇಶಗಳು’ ಲೇಖನದಲ್ಲಿ ಬುದ್ಧನ ಸಾರ್ವಕಾಲಿಕ ಚಿಂತನೆಗಳ ಅನನ್ಯತೆಯ ನೆಲೆಗಳನ್ನು ಮರು ಪರಿಶೀಲಿಸಿ ವರ್ತಮಾನಕ್ಕೆ ಬೆಳಕಾಗುವ ಸಾಮರ್ಥ್ಯವನ್ನು ಹೊಂದಿದ ಈ ಉಪದೇಶಗಳ ಮಾರ್ಗದಲ್ಲಿ ಸಾಗುವ ಭರವಸೆಯಿರಲಿ ಎಂಬ ಆಶಾವಾದವನ್ನು ವ್ಯಕ್ತಪಡಿಸಿದ್ದಾರೆ.
ಇಂದು ಗಾಂಧೀಜಿ ಅವರನ್ನು ಟೀಕಿಸುವ ನಿಂದಿಸುವ ಒಂದು ದೊಡ್ಡ ಪಡೆಯೇ ನಿರ್ಮಾಣವಾಗಿದೆ. ಇಂತಹ ಸಂದರ್ಭದಲ್ಲಿ ‘ಗಾಂಧೀಜಿ ಹೋರಾಟಗಳ ಗ್ರಹಿಕೆ’ ಲೇಖನ ನಮ್ಮ ಕಣ್ಣು ತೆರೆಸುತ್ತದೆ. ಗಾಂಧೀಜಿಯವರ ಹೋರಾಟದ ಹಿಂದಿನ ಆಂತರ್ಯವನ್ನು ಭಾರತೀಯರಿಗಿಂತ ವಿದೇಶಿಯವರು ಹೆಚ್ಚು ಅರ್ಥಪೂರ್ಣವಾಗಿ ಗ್ರಹಿಸಿದ್ದಾರೆ ಎನ್ನುವುದಕ್ಕೆ ರೋನಾಲ್ಡ್ ಡಂಕನ್ ಅವರ ‘ಗಾಂಧೀಜಿ ಇಂದು ಮಾತ್ರವಲ್ಲ, ಎಂದೆಂದಿಗೂ ಜಗತ್ತಿನ ಮೇಲೆ ಪ್ರಭಾವ ಹೊಂದಿರುತ್ತಾರೆ’ ಎಂಬ ಹೇಳಿಕೆಯನ್ನು ಆಧರಿಸಿ ಡಾ. ಮರಿಗುದ್ದಿ ಅವರು ಹೋರಾಟವನ್ನು, ಪ್ರತಿಭಟನೆಯನ್ನು ಹೇಗೆ ಮಾಡಬೇಕು ಎಂಬುದನ್ನು ಜಗತ್ತು ಗಾಂಧೀಜಿ ಅವರಿಂದ ಕಲಿಯಿತು, ನಿಜ. ಆದರೆ ಅದನ್ನು ಪೂರ್ಣವಾಗಿ ಕಲಿಸಲು ಸಾಧ್ಯವಾಗಲಿಲ್ಲ ಎಂದು ಹೇಳುತ್ತಾರೆ.
ಡಾ. ಮರಿಗುದ್ದಿ ಅವರು ಸಹಜವಾಗಿಯೇ ಸಂಕೇಶ್ವರದಂತಹ ಗಡಿಭಾಗದಲ್ಲಿರುವ ಕಾರಣ, ಕನ್ನಡ-ಮರಾಠಿ ಸಾಂಸ್ಕೃತಿಕ ವಿನಿಮಯ ಕುರಿತು ಅವರು ಸದಾಕಾಲ ಅಧ್ಯಯನ ಮಾಡುತ್ತ ಬಂದಿದ್ದಾರೆ. ಭಾರತದ ಗಡಿಪ್ರದೇಶಗಳು ದ್ವಿಭಾಷಿಕತೆಯಿಂದ, ಬಹುಭಾಷಿಕತೆಯಿಂದ ಕೂಡಿವೆ. ಇದು ದೇಶದ ಅನನ್ಯವಾದ ಬಹುಭಾಷಿಕತೆಯ, ಬಹುಸಂಸ್ಕೃತಿಯ ಲಕ್ಷಣವಾಗಿದೆ. ಇಂತಹ ಸಂಸ್ಕೃತಿ ಒಳಗೆ ಪ್ರೀತಿ, ವಿಶ್ವಾಸ, ಸಹಬಾಳ್ವೆಗೆ ಯಾವತ್ತು ವಿಪುಲ ಅವಕಾಶಗಳಿರುವುದರಿಂದ ನಾವು ಅದೇ ದಿಕ್ಕಿನತ್ತ ಹೆಜ್ಜೆ ಹಾಕಬೇಕು ಎನ್ನುವ ಅವರ ಕಳಕಳಿಯ ಮಾತುಗಳು ಎರಡು ರಾಜ್ಯಗಳ ಭಾಷಿಕ ಸಮಸ್ಯೆಗೆ ಪರಿಹಾರವನ್ನು ನೀಡುತ್ತವೆ.
‘ತಂತ್ರಜ್ಞಾನ ಮತ್ತು ಅನುಷ್ಠಾನ ಯೋಗ್ಯ ಶಿಕ್ಷಣ’ ಎಂಬ ಲೇಖನ ಡಾ. ಮರಿಗುದ್ದಿ ಅವರು ಮಾಡಿದ ಒಂದು ಭಾಷಣ. ವರ್ತಮಾನದ ವಿವೇಕಕ್ಕೆ ಸಲ್ಲುವ, ಯುವಪೀಳಿಗೆಗೆ ಮಾರ್ಗದರ್ಶಿಯಾಗಬಲ್ಲ ಚೇತೋಹಾರಿ ಚಿಂತನೆಗಳು ಇಲ್ಲಿವೆ. ‘ಅಕ್ಕನ ಭಾವಗೀತಾತ್ಮಕ ವಚನಗಳು’ ಎಂಬ ಲೇಖನ ಅನುಭಾವಿಯಾದ ಅಕ್ಕ ಲೌಕಿಕ ಮತ್ತು ಅಧ್ಯಾತ್ಮ ಲೋಕದ ಅನುಸಂಧಾನವನ್ನು ಮಾಡಿದ ಪರಿಯನ್ನು ವಿವರಿಸುತ್ತದೆ.
‘ನವೋದಯ ಸಾಹಿತ್ಯದಲ್ಲಿ ಗುರು’ ಲೇಖನ ಇಂದಿನ ಯುವಕರಿಗೆ ಆದರ್ಶವಾಗಬಲ್ಲದು. ಆಧುನಿಕ ಕನ್ನಡ ಸಾಹಿತ್ಯವು ನವೋದಯ ಪರಂಪರೆಯಿಂದ ಪ್ರಾರಂಭವಾಯಿತು. ನವೋದಯ ಕಾಲಘಟ್ಟದ ಕುವೆಂಪು, ಮಧುರಚೆನ್ನ, ಬೇಂದ್ರೆ ಮೊದಲಾದವರ ಕವನಗಳಲ್ಲಿ ಅಭಿವ್ಯಕ್ತವಾದ ಗುರುತತ್ವ ವಿವೇಚನೆ ಗುರುಗಳ ಘನತೆ ಔನ್ನತ್ಯವನ್ನು ವಿವರಿಸುತ್ತದೆ.
ರಾಷ್ಟ್ರಧರ್ಮ ದ್ರಷ್ಟಾರ ಎನಿಸಿದ್ದ ಹರ್ಡೇಕರ ಮಂಜಪ್ಪನವರು ಕನ್ನಡದಲ್ಲಿ ರಾಷ್ಟ್ರಿಯ ಸಾಹಿತ್ಯವನ್ನು ದೊಡ್ಡ ಪ್ರಮಾಣದಲ್ಲಿ ರಚಿಸಿದಂತೆ, ಮಕ್ಕಳ ಸಾಹಿತ್ಯವನ್ನು ಅಗಾಧ ಪ್ರಮಾಣದಲ್ಲಿ ರಚಿಸಿದ್ದಾರೆ. ಮಂಜಪ್ಪನವರ ಮಕ್ಕಳ ಸಾಹಿತ್ಯದ ನೆಲೆ ಬೆಲೆಗಳನ್ನು ‘ಮಂಜಪ್ಪನವರ ಮಕ್ಕಳ ಸಾಹಿತ್ಯ’ ಲೇಖನದಲ್ಲಿ ವಿಸ್ತೃತವಾಗಿ ಚರ್ಚಿಸಿದ್ದಾರೆ.
‘ಗುಣ ಬಿಡದ ಸುವರ್ಣ’ ಎಂಬ ಲೇಖನದಲ್ಲಿ ಪಂಡಿತ ಎಸ್. ಬಸಪ್ಪ, ಎಸ್.ಎಂ. ಹುಣಶ್ಯಾಳ, ಮತ್ತು ವೆಂಕಣ್ಣಯ್ಯವರ ಗ್ರಂಥಸಂಪಾದನೆಯ ಸಾಧನೆಗಳನ್ನು ವಿವರಿಸುವ ಒಂದು ಆಪ್ತವಾದ ಚಿಂತನೆ ಇದೆ. ಇದೇ ಮಾದರಿಯ ಮತ್ತೊಂದು ಲೇಖನ ‘ಭೀಮರಾವ ಚಿಟಗುಪ್ಪಿ ಅವರ ಸಾಹಿತ್ಯ’ ಎಂಬ ಲೇಖನ.
ಪರಮೇಶ್ವರ ಭಟ್ಟರ ‘ಉಂಬರ’ ಲೇಖನ, ಎಸ್. ವಿ. ಪರಮೇಶ್ವರ ಭಟ್ಟರ ಆಧುನಿಕ ವಚನ ಸಂಕಲನದ ವಿಮರ್ಶೆ ಒಳಗೊಂಡಿದೆ. ಆಧುನಿಕ ವಚನ ಸಾಹಿತ್ಯಕ್ಕೆ ಭಟ್ಟರ ಕಾಣಿಕೆಯೂ ಅಪಾರ. ಹೀಗಿದ್ದೂ ‘ಉಂಬರ’ ವಚನ ಸಂಕಲನದ ಇತಿಮಿತಿಗಳನ್ನೂ ವಿಮರ್ಶಾತ್ಮಕ ದೃಷ್ಟಿಕೋನದಿಂದ ಪರಿಶೀಲಿಸಿ, ಕೃತಿಯ ಕೊರತೆಗಳನ್ನೂ ಪ್ರಾಂಜಲ ಮನಸ್ಸಿನಿಂದ ನಿವೇದಿಸಿದ್ದಾರೆ.
‘ಬಿ.ಕೆ.ಹಿರೇಮಠರ ಹಸ್ತಪ್ರತಿ ಅಧ್ಯಯನ’ ಎಂಬ ಲೇಖನದಲ್ಲಿ- ಬಾಗಲಕೋಟೆಯ ಕ್ರಿಯಾಶೀಲ ವಿದ್ವಾಂಸ ಬಿ. ಕೆ. ಹಿರೇಮಠ ಅವರ ಪಿಎಚ್.ಡಿ. ಮಹಾಪ್ರಬಂಧ ‘ಕನ್ನಡ ಹಸ್ತಪ್ರತಿಗಳು : ಒಂದು ಅಧ್ಯಯನ’ ಕೃತಿಯನ್ನು ತಲಸ್ಪರ್ಶಿಯಾಗಿ ಅಧ್ಯಯನ ಮಾಡಿ, ಹಿರೇಮಠರು ಹಸ್ತಪ್ರತಿ ಅಧ್ಯಯನಕ್ಕೆ ಕೊಟ್ಟ ಕೊಡುಗೆಯನ್ನು ಆಪ್ತವಾಗಿ ವಿವರಿಸಿದ್ದಾರೆ.
ಮಾಚಕನೂರರ ಸಾಹಿತ್ಯ ಪರಿಚಯ’ ಎಂಬ ಲೇಖನ ವೆಂಕಟೇಶ ಮಾಚಕನೂರ ಅವರ ಸಮಗ್ರ ಸಾಹಿತ್ಯವನ್ನು ಪರಿಶೀಲಿಸಿದ ಬರಹ. ಮಾಚಕನೂರ ಅವರು ಮುಖ್ಯವಾಗಿ ಪ್ರವಾಸ ಸಾಹಿತ್ಯ ಮತ್ತು ಪ್ರಬಂಧ ಕ್ಷೇತ್ರದಲ್ಲಿ ಸಾಹಿತ್ಯ ರಚನೆ ಮಾಡಿ ನಾಡವರ ಗಮನ ಸೆಳೆದಿದ್ದಾರೆ. ಅವರ ಒಟ್ಟು ಕೃತಿಗಳನ್ನು ಆದ್ಯಂತವಾಗಿ ಅಧ್ಯಯನ ಮಾಡಿ, ಮಾಚಕನೂರ ಅವರ ಸಾಹಿತ್ಯದ ಸತ್ವ ಸಾಮರ್ಥ್ಯವನ್ನು ಸಮರ್ಥವಾಗಿ ನಿರೂಪಿಸಿದ್ದಾರೆ.
‘ಬೆಳಗಾವಿ ಜಿಲ್ಲೆಯ ಪತ್ರಿಕೆಗಳು’ ಒಂದು ಸುದೀರ್ಘವಾದ ಸಂಶೋಧನಾತ್ಮಕ ಲೇಖನವಾಗಿದೆ. ಬೆಳಗಾವಿ ಜಿಲ್ಲೆಯಲ್ಲಿ ಸ್ವಾತಂತ್ರ್ಯ ಪೂರ್ವದಿಂದಲೂ ಪ್ರಕಟವಾಗುತ್ತಿದ್ದ ಅನೇಕ ಮಹತ್ವದ ಜನಮನದಿಂದ ಕಣ್ಮರೆಯಾಗಿ ಹೋಗಿದ್ದ ಪತ್ರಿಕೆಗಳ ಮೂಲ ಚೂಲಗಳನ್ನು ಶೋಧಿಸಿ, ಅವುಗಳ ಸಾಧನಾ ವಿವರಗಳನ್ನು ಗುರುತಿಸಿದ್ದು ಅವರ ಸಂಶೋಧನಾ ದೃಷ್ಟಿಗೆ ಸಾಕ್ಷಿಯಾಗಿದೆ.
ಭಾಗ ೨ ರಲ್ಲಿ ಕೆಲವು ವ್ಯಕ್ತಿಚಿತ್ರಗಳಿವೆ. ಕನ್ನಡ ಕಾದಂಬರಿ ಪ್ರಪಂಚಕ್ಕೆ ಅನುಪಮ ಕೊಡುಗೆ ನೀಡಿದ ‘ಅ.ನ.ಕೃಷ್ಣರಾಯರು’ ಎಂಬ ಲೇಖನ ಹೊರತು ಪಡಿಸಿ, ಉಳಿದ ಆರು ಲೇಖನಗಳು ಡಾ. ಗುರುಪಾದ ಮರಿಗುದ್ದಿ ಅವರಿಗೆ ಸಾಹಿತ್ಯ ಕ್ಷೇತ್ರದಲ್ಲಿ ಮಾದರಿಯಾದ ಮೂವರು ಹಿರಿಯ ವಿದ್ವಾಂಸರು, ಮೂರು ಜನ ಗೆಳೆಯರ ಒಡನಾಟದ ಆಪ್ತ ಕ್ಷಣಗಳನ್ನು ಅತ್ಯಂತ ರಸಾರ್ದ್ರವಾಗಿ ವಿವರಿಸಿದ್ದಾರೆ. ‘ಆತ್ಮ ವಿಶ್ವಾಸ ತುಂಬಿದ ಹಿರಿಯರು’ ಲೇಖನದಲ್ಲಿ ಡಾ. ದೇ. ಜವರೇಗೌಡರೊಂದಿಗೆ ತಾವು ಮೊದಲ ಸಲ ಭೇಟಿಯಾದ ಪ್ರಸಂಗವನ್ನು ಉಲ್ಲೇಖಿಸಿ, ಅವರು ತಮ್ಮ ಸಂಶೋಧನೆಗೆ ನೀಡಿದ ಸಹಾಯ ಸಹಕಾರವನ್ನು ಮುಕ್ತಮನದಿಂದ ನೆನಪಿಸಿಕೊಂಡಿದ್ದಾರೆ. ‘ಸಹೃದಯತೆ ವಿದ್ವತ್ತುಗಳ ಸಾಕಾರರೂಪ’ ಲೇಖನದಲ್ಲಿ ಹಿರಿಯ ವಿದ್ವಾಂಸರಾದ ಡಾ. ಎಚ್. ತಿಪ್ಪೇರುದ್ರಸ್ವಾಮಿ ಅವರೊಂದಿಗಿನ ಒಡನಾಟದ ಕ್ಷಣಗಳನ್ನು ಹಂಚಿಕೊಂಡಿದ್ದಾರೆ. ಸಂಕೇಶ್ವರ ಸಮೀಪ ‘ಗವನಾಳ’ ಗ್ರಾಮಕ್ಕೆ ಅವರು ಆಯುರ್ವೇದ ಔಷಧಿ ಪಡೆಯಲು ಬಂದಾಗಿನ ಸಂದರ್ಭವಂತೂ ಹೃದಯಕ್ಕೆ ತಾಗುತ್ತದೆ. ತಿಪ್ಪೇರುದ್ರಸ್ವಾಮಿ ಅವರಿಂದ ತಮ್ಮ ಕಾಲೇಜಿನಲ್ಲಿ ಮೂರು ವಿಶೇಷ ಉಪನ್ಯಾಸಗಳನ್ನು ಮಾಡಿಸಬೇಕೆಂಬ ಅವರ ಆಸೆ ಕನಸಾಗಿಯೇ ಉಳಿಯುತ್ತದೆ ಎಂದು ಹೇಳುವಾಗಿನ ಬರಹ ಓದಿದಾಗ ಹೃದಯ ತುಂಬಿ ಬರುತ್ತದೆ.
‘ನೆನಪಲ್ಲಿ ಜಂಗಮವಾಗುವ ಚೇತನ’ ಲೇಖನದಲ್ಲಿ ಡಾ. ಎಂ. ಎಂ. ಕಲಬುರ್ಗಿ ಅವರೊಂದಿಗಿನ ಮಧುರ ಸ್ಮೃತಿಗಳ ಬುತ್ತಿ ಬಿಚ್ಚಿಟ್ಟಿದ್ದಾರೆ. ‘ನಾನು ಕಂಡಂತೆ ಸ್ನೇಹಿತ’ ಲೇಖನದಲ್ಲಿ ಎಸ್. ಕೆ. ಕೊಪ್ಪ ಅವರು, ‘ಸ್ನೇಹ ಸುಧೆಯ ಶರಾವತಿ’ ಲೇಖನದಲ್ಲಿ ಶ್ರೀಪಾದ ಶೆಟ್ಟಿ ಅವರು, ‘ಉತ್ಸಾಹ ಕಾರ್ಯಶೀಲತೆಯ ಸ್ನೇಹಮೂರ್ತಿ’ ಲೇಖನದಲ್ಲಿ ವಿಜಯಕುಮಾರ ಕಟಗಿಹಳ್ಳಿಮಠ ಅವರು ತಮ್ಮ ಸ್ನೇಹಸಂಪರ್ಕ ವಲಯದಲ್ಲಿ ಬಂದ ಅಪರೂಪದ ಗೆಳೆಯರು. ತಮ್ಮ ಬದುಕಿನಲ್ಲಿ ಬಂದ ಈ ಮೂವರು ಗೆಳೆಯರ ಸಾಧನೆಗಳನ್ನು ವಿವರಿಸುತ್ತಲೇ ಅವರೊಂದಿಗಿನ ತಮ್ಮ ಆತ್ಮೀಯ ಒಡನಾಟದ ಕ್ಷಣಗಳನ್ನು ಅತ್ಯಂತ ಆಪ್ತವಾದ ಭಾಷೆಯಲ್ಲಿ ವಿವರಿಸಿದ್ದಾರೆ.
ಕೊನೆಯಲ್ಲಿ ಡಾ. ಗುರುಪಾದ ಮರಿಗುದ್ದಿ ಅವರ ಜೀವನ ಸಾಧನೆಯ ಸಮಗ್ರ ವಿವರಗಳನ್ನು ಕೊಟ್ಟಿರುವುದು ಅತ್ಯಂತ ಔಚಿತ್ಯಪೂರ್ಣವಾಗಿದೆ. ಅವರ ಒಟ್ಟು ಕೃತಿಗಳ ಪಟ್ಟಿ, ಲೇಖನಗಳ ವಿವರ ಒಂದೆಡೆ ದೊರೆಯುವುದರಿಂದ ಅವರನ್ನು ಕುರಿತು ಅಧ್ಯಯನ ಮಾಡುವವರಿಗೆ ಮಾರ್ಗದರ್ಶಿಯಾಗಿದೆ.
ಡಾ. ಮರಿಗುದ್ದಿ ಅವರ ಈ ಕೃತಿಯಲ್ಲಿ ಬಹುತೇಕ ಲೇಖನಗಳು ವೈಚಾರಿಕ ತಿಳಿವಳಿಕೆಯನ್ನು ಬೆಳಕಿನಲ್ಲಿ ರೂಪ ಪಡೆದ ಸ್ವೋಪಜ್ಞ ಬರಹಗಳಾಗಿವೆ. ಕನ್ನಡ ಅಸ್ಮಿತೆ, ಸಂಸ್ಕೃತಿಯ ಅರಿವು ಮೂಡಿಸುವಲ್ಲಿ ಈ ಲೇಖನಗಳು ಸಹಕಾರಿಯಾಗಿವೆ. ಗಂಭೀರ ಚಿಂತನೆಯ, ಹೊಸ ಹೊಳಹುಗಳನ್ನು ತುಳುಕಿಸುವ ಒಳನೋಟಗಳನ್ನು ಒಳಗೊಂಡ ಮಹತ್ವದ ಲೇಖನಗಳನ್ನು ಈ ಕೃತಿಯಲ್ಲಿ ಕಟ್ಟಿಕೊಡಲಾಗಿದೆ. ಇಂತಹ ಮಹತ್ವದ ಕೃತಿಯನ್ನು ಪ್ರೀತಿಯಿಂದ ಕಳಿಸಿಕೊಟ್ಟ ಡಾ. ಗುರುಪಾದ ಮರಿಗುದ್ದಿ ಅವರಿಗೆ ಅನಂತ ಶರಣುಗಳು.
ಪ್ರಕಾಶ ಗಿರಿಮಲ್ಲನವರ
ಬೆಳಗಾವಿ
ಮೊ: 9902130041