ಸಿಂದಗಿ – ಸದ್ಗುರುವನ್ನ ಸ್ಮರಿಸುವುದು ಭಾರತೀಯ ಸಂಸ್ಕೃತಿಯ ಸಂಕೇತ. ಜಗತ್ತಿನಲ್ಲಿ ಗುರುವಿಗೆ ಇದ್ದಷ್ಟು ಹೆಚ್ಚು ಮಹತ್ವ ಬೇರೆ ಯಾರಿಗೂ ಸಿಗುವುದಿಲ್ಲ ಎಂದು ಸಿಂದಗಿಯ ಭೀಮಾಶಂಕರ ಮಠದ ಪೂಜ್ಯಶ್ರೀ ದತ್ತಪ್ಪಯ್ಯ ಸ್ವಾಮಿಗಳು ಹೇಳಿದರು.
ಅವರು ಪಟ್ಟಣದ ಊರಿನ ಹಿರಿಯ ಮಠದ ಲಿಂಗೈಕ್ಯ ಮ. ಘ. ಚ. ಶ್ರೀ ಶಾಂತವೀರ ಪಟ್ಟಾಧ್ಯಕ್ಷರ 45ನೆಯ ಪುಣ್ಯ ಸ್ಮರಣೋತ್ಸವ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಸಿಂದಗಿಯ ಶ್ರೀ ಶಾಂತವೀರ ಪಟ್ಟಾಧ್ಯಕ್ಷರ ಬದುಕು ಒಂದು ಇತಿಹಾಸ. ನಾಡಿನ ಮೂಲೆ ಮೂಲೆಯಲ್ಲಿ ಶ್ರೀ ಕುಮಾರೇಶ್ವರ ಪೂಜ್ಯರ ಹೆಸರಿನ ಮೇಲೆ ಅನೇಕ ಸಾಂಸ್ಕೃತಿಕ ಪಾಠಶಾಲೆಗಳನ್ನು ಪ್ರಾರಂಭಿಸಿ ಸಮಾಜಕ್ಕೆ ಮಾದರಿಯಾದಂತವರು. ಸನಾತನ ಸಂಸ್ಕೃತಿಯನ್ನು ಉಳಿಸಿ ಬೆಳೆಸಿದಂತ ಸಾಧಕರಲ್ಲಿ ಸಿಂದಗಿಯ ಶ್ರೀಗಳು ಒಬ್ಬರು. ಬಿದ್ದಿದ್ದು ತಪ್ಪಲ್ಲ ಬಿದ್ದಲ್ಲೇ ಬೀಳುವದು ತಪ್ಪು ಎಂಬ ಅವರ ದಿವ್ಯ ವಾಣಿ ಬದುಕನ್ನ ಕಟ್ಟಿಕೊಡುತ್ತದೆ ಎಂದರು.
ಈ ವೇಳೆ ಅಧ್ಯಕ್ಷತೆ ವಹಿಸಿದ ಶ್ರೀಮಠದ ಪೀಠಾಧ್ಯಕ್ಷರಾದ ಪೂಜ್ಯಶ್ರೀ ಶಿವಾನಂದ ಶಿವಾಚಾರ್ಯರು ಮಾತನಾಡಿ, ಮನುಷ್ಯನ ಬದುಕು ಧರ್ಮದಿಂದ ಕೂಡಿರಬೇಕು. ಲಿಂಗೈಕ್ಯ ಶ್ರೀಗಳನ್ನ ಸದಾ ಸ್ಮರಿಸುವುದು ಮತ್ತು ಅವರ ಸಂದೇಶಗಳನ್ನ ಬದುಕಿನಲ್ಲಿ ಅಳವಡಿಸಿಕೊಳ್ಳುವುದು ನಮ್ಮಯ ಕರ್ತವ್ಯವಾಗಬೇಕು ಎಂದ ಅವರು ಮಾರ್ಚ್ 2ರಿಂದ ಮಾರ್ಚ್ 8ರವರೆಗೆ ನಡೆಯುವ ಈ ಕಾರ್ಯಕ್ರಮದಲ್ಲಿ ಸದ್ಭಕ್ತರು ಭಾಗವಹಿಸಬೇಕು ಎಂದು ವಿನಂತಿಸಿದರು.
ವೇದಿಕೆಯ ಮೇಲೆ ಪ್ರವಚನಕಾರರಾದ ಗದುಗಿನ ವೀರೇಶ್ವರ ಪುಣ್ಯಾಶ್ರಮದ ಶ್ರೀ ಪಂಚಾಕ್ಷರಿ ಶಾಸ್ತ್ರಿಗಳು ಇದ್ದರು.
ಕಾರ್ಯಕ್ರಮದಲ್ಲಿ ಶಿವಪ್ಪ ಗವಸಾನಿ, ಶಿವಪ್ಪ ಕುಂಬಾರ, ನಿಂಗಯ್ಯ ಚಿಕ್ಕಯ್ಯನಮಠ, ಬಸಯ್ಯ ಗೋಲಗೇರಿಮಠ, ರಾಜಶೇಖರ್ ಜೋಗುರ, ಅಶೋಕ ಕುಲಕರ್ಣಿ, ನೀಲಪ್ಪ ಬಳಗಾನೂರ,ಸಿದ್ದಲಿಂಗ ಪತ್ತಾರ, ಗದಗಯ್ಯ ನಂದಿಮಠ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.