spot_img
spot_img

ಸ. ರಾ. ಸುಳಕೂಡೆ ಅವರ ಸಾಹಿತ್ಯದ “ಸತ್ಯಾನ್ವೇಷಣೆ”

Must Read

- Advertisement -

ರಾಷ್ಟ್ರಪಿತ ಮಹಾತ್ಮ ಗಾಂಧೀಜಿಯವರ ‘ಸತ್ಯಾನ್ವೇಷಣೆ’ ಕೃತಿಯನ್ನು ಸಾಮಾನ್ಯವಾಗಿ ಎಲ್ಲರೂ ಓದಿರುತ್ತಾರೆ. ಆ ಕೃತಿಯು ಗಾಂಧೀಜಿಯವರ ಇಡೀ ಜೀವನದ ಮೇಲೆ ಬೆಳಕನ್ನು ಚೆಲ್ಲುತ್ತದೆ ಏಕೆಂದರೆ ಅದು ಅವರ ಆತ್ಮ ಚರಿತ್ರೆ. ಇಲ್ಲಿಯ ‘ಸತ್ಯಾನ್ವೇಷಣೆ’ ಕನ್ನಡ ನಾಡು ನುಡಿಗೆ ಅಪಾರವಾದ ಸಾಹಿತ್ಯ ಕೊಡುಗೆ ನೀಡಿದ ಬೆಳಗಾವಿಯ ಹಿರಿಯ ಸಾಹಿತಿಗಳು ಶ್ರೀ ಸ. ರಾ. ಸುಳಕೂಡೆ ಅವರ 25 ಕೃತಿಗಳ ಅವಲೋಕನ ಮಾಡಿ ಬೆಳಕನ್ನು ಚೆಲ್ಲಿದ ಪ್ರೊ. ಯು.ಎನ್. ಸಂಗನಾಳಮಠ ಅವರ ಕೃತಿ. ಇದರಲ್ಲಿ 25 ಲೇಖನಗಳಿದ್ದು ಸ. ರಾ. ಸುಳಕೂಡೆ ಅವರ 25 ಕೃತಿಗಳ ಕುರಿತು ಅವಲೋಕನ ಮಾಡಲಾಗಿದೆ.

“ನಿಟ್ಟುಸಿರ ತಾಯಿ ಬಿಡುತಾಳ
ಕಷ್ಟದಿ ಕಾಲ ಕಳದಾಳ
ಕಿತ್ತೂರ ಕನಸ ಕಂಡಾಳ
ಕೆರಳುತ ಬಾಡಿ ಬೆಂದಾಳು!!”

“ಕಿತ್ತೂರು ಸಂಸ್ಥಾನ” ಎಂಬ ಸಂಕಲನದಲ್ಲಿ ಎಸ್. ಡಿ. ಇಂಚಲ ಅವರು ತಮ್ಮ ಲಾವಣಿಯಲ್ಲಿ ಹೀಗೆ ಕಿತ್ತೂರು ರಾಣಿ ಚೆನ್ನಮ್ಮ ಕುರಿತು ಬಣ್ಣಿಸುತ್ತಾರೆ. ಇಂತಹ ಶ್ರೇಷ್ಠ ಕೃತಿಯನ್ನು ಸುಳಕೂಡೆಯವರು ಸಂಪಾದಿಸಿದಿರುವ ಕಿತ್ತೂರು ನಾಡಿನ ಹಿರಿಮೆಯನ್ನು ಹೆಚ್ಚಿಸಿರುವುದು ನಮ್ಮ ಉತ್ತರ ಕರ್ನಾಟಕಕ್ಕೆ ಒಂದು ಹೆಮ್ಮೆಯ ವಿಷಯವಾಗಿದೆ. ಸಂಗನಾಳಮಠ ಅವರು  ಸ. ರಾ. ಸುಳಕೂಡೆ ಅವರ ಕೃತಿಗಳನ್ನು ಅವಲೋಕಿಸಿ ಅದನ್ನು ಒಂದು ಕೃತಿಯನ್ನಾಗಿಸಿ ಈ ನಾಡಿಗೆ ಪರಿಚಯಿಸಿರುವುದು ಸಾಹಿತ್ಯ ಜಗತ್ತಿನಲ್ಲಿ ಹೊಸ ಅಧ್ಯಾಯವಾಗಿದೆ. ಏಕೆಂದರೆ 25 ಕೃತಿಗಳ ವಿಮರ್ಶೆಗಳನ್ನು ಒಂದೇ ಕೃತಿಯಲ್ಲಿ ಪ್ರಕಟಿಸಿ ಓದುಗರ ಗಮನಕ್ಕೆ ತಂದಿರುವುದು ಸಂತಸದ ವಿಷಯವಾಗಿದೆ. ಇವತ್ತು ಸಾಹಿತ್ಯವನ್ನು ಓದುವರ ಸಂಖ್ಯೆ ಕ್ಷೀಣಿಸುತ್ತಾ ಹೋಗುತ್ತಿರುವುದು ಅತ್ಯಂತ ಶೋಚನೀಯ ಸಂಗತಿಯಾಗಿದೆ. ಇಂತಹ ಒಂದು ಜಟಿಲ ಪರಿಸ್ಥಿತಿಯಲ್ಲಿ ಸಾಮಾಜಿಕ ಜಾಲತಾಣಗಳಿಂದ ಹೊರಬಂದು ಪುಸ್ತಕಗಳನ್ನು ಓದುವ ಹವ್ಯಾಸವನ್ನು ಮುಂದುವರಿಸುವುದು ಬಹಳ ಕಷ್ಟಕರವಾಗಿದೆ. ಆದರೂ ಇಂತಹ ಅಪರೂಪದ ಕೃತಿಗಳು ಹೊರ ಬಂದಾಗ ಸಾಹಿತ್ಯ ಜಗತ್ತಿನಲ್ಲಿ ಹೊಸ ಕಿರಣ ಮೂಡುತ್ತದೆ.

- Advertisement -

“ಜೀವ ಸಂರಕ್ಷಣೆಯ ರಸ ಬಳ್ಳಿಯಾಗು
ಜನನಿ ಜನತೆಯ ಕಿವಿಮಾತು ಮಾನ್ಯ ಮಾಡು
ಅರಿವೇ ಗುರುವಾಗಿ ಉನ್ನತಿಯ ಸಗ್ಗವಾಗು
ಮನವೆ ಎದ್ದೇಳು ಪುಟಿದೇಳು ಸಚೇತನದೆ ಸೂರ್ಯವಾಗು”
“ಸಚೇತನ” ಎಂಬ ಅವರ ಕೃತಿಯಲ್ಲಿ ಅವರ ಈ ಸಾಲುಗಳು ಭಾವನೆಗಳಿಂದ ಪ್ರಕುಲತವಾಗಿವೆ. ಕವಿತೆಯ ಸಾಲುಗಳು ಶಬ್ದಗಳಿಂದ ಮಾತ್ರ ಜೋಡಣೆ ಆಗಿರಬಾರದು ಆ ಸಾಲುಗಳಲ್ಲಿಯೇ ಭಾವನೆ ತುಂಬಿರಬೇಕು ಎಂಬುದೇ ಈ ಕೃತಿಯ ಆಶಯವಾಗಿದೆ. ಇಡೀ ಪುಸ್ತಕದ ಆಶಯವನ್ನು ಕಂಡುಕೊಂಡ ಲೇಖಕರು ಅವರ ಲೇಖನದಲ್ಲಿ ಲೇಖಕರಿಗೆ ನ್ಯಾಯವನ್ನು ಒದಗಿಸಿದ್ದಾರೆ. ಇಂತಹ ಕೃತಿಗಳು ಮಾನವ ಬದುಕನ್ನು ಪರಿವರ್ತನೆ ಮಾಡುವಲ್ಲಿ ಯಶಸ್ವಿಯಾಗುತ್ತವೆ.

ಸ. ರಾ. ಸುಳಕೂಡೆ ಅವರನ್ನು ಬಹಳಷ್ಟು ಹತ್ತಿರದಿಂದ ಕಾಣುವ ಸೌಭಾಗ್ಯ ನಮಗೆ ದೊರಕಿದೆ, ಹಿರಿಯ ಜೀವಿಗಳು ಹಿರಿಯ ಸಾಹಿತಿಗಳು ಹಿರಿಯ ಮಾರ್ಗದರ್ಶಕರು ಹಿರಿತನದ ಎಲ್ಲಾ ಗುಣಲಕ್ಷಣಗಳು ಅವರಲ್ಲಿ ಕಾಣಬಹುದು. ಸರಿ ಸಮಾನತೆ ಪರಿಪಾಲನಿಗೆ ಸದಾ ವಿನಯದ ಅವಶ್ಯಕತೆ ಇರುತ್ತದೆ ಅಂತ ಸಮಾನತೆಯ ಭಾವವನ್ನು ಅವರಲ್ಲಿ ನೋಡಬಹುದು. ಅವರು ಸರಳ ಬದುಕು ಉನ್ನತ ವಿಚಾರಗಳನ್ನು ತಮ್ಮ ಜೀವನದಲ್ಲಿ ಅಳವಡಿಸಿ ಈ ಮನುಕುಲಕ್ಕೆ ಮಾದರಿಯಾಗಿದ್ದಾರೆ.

“ನುಡಿದರೆ ಮುತ್ತಿನ ಹಾರದಂತಿರಬೇಕು.
ನುಡಿದರೆ ಮಾಣಿಕ್ಯದ ದೀಪ್ತಿಯಂತಿರಬೇಕು.
ನುಡಿದರೆ ಸ್ಫಟಿಕದ ಸಲಾಕೆಯಂತಿರಬೇಕು.
ನುಡಿದರೆ ಲಿಂಗ ಮೆಚ್ಚಿ ʼಅಹುದಹುದೆʼನಬೇಕು.
ನುಡಿಯೊಳಗಾಗಿ ನಡೆಯದಿದ್ದರೆ,
ಕೂಡಲಸಂಗಮದೇವನೆಂತೊಲಿವನಯ್ಯಾ?”

- Advertisement -

ಮಾತು ಬೆಳ್ಳಿ ಮೌನ ಬಂಗಾರ, ಮೌನಗಳ ಮಾತು ಮಧುರ ಎಂಬಂತೆ ಸ. ರಾ. ಸುಳಕೂಡೆ ಅವರು ಮಿತ ಭಾಷೆಕರು, ಮೌನವೇ ಅವರಿಗೆ ಬಂಗಾರ ಅವರ ಅಲಂಕಾರ. ನಿಜವಾಗಿಯೂ ಮಾತಿಗಿಂತ ಅವರ ಕೃತಿಗಳೇ ಜಾಸ್ತಿ. ಅವರು ತಮ್ಮ ನಡೆ ನುಡಿಯಲ್ಲಿ ಯಾವತ್ತೂ ಸಾಹಿತ್ಯದ ಕುರಿತು ಯೋಚಿಸಿದವರು, ನಮ್ಮ ನಡೆ ನುಡಿ ಉನ್ನತವಾಗಿರಬೇಕು ನಮ್ಮ ಸಾಹಿತ್ಯವು ಯಾವತ್ತೂ ಬೆಳೆಯುತ್ತಿರಬೇಕು.

ಶರಣ ಸಾಹಿತ್ಯವನ್ನು ತಮ್ಮ ಪುಸಿರಾಗಿಸಿಕೊಂಡು ಬದುಕುತ್ತಿರುವ ಸ.ರಾ. ಸುಳಕೂಡೆ ಅವರನ ಈ “ಸತ್ಯಾಾನ್ವೇಷಣೆ” ಕೃತಿಯಿಂದ ಕನ್ನಡ ನಾಡು ನುಡಿಗೆ ಅವರು ನೀಡಿದ ಕೊಡುಗೆ ಅಪಾರವಾದದ್ದು ಎಂಬುದನ್ನು ಬಿಂಬಿಸುತ್ತಿರುವ ಪ್ರೊ. ಯು. ಎನ್. ಸಂಗನಾಳಮಠ ಅವರು ಕೂಡ ಒಬ್ಬ ಶ್ರೇಷ್ಠ ಸಾಹಿತಿಗಳು ಎಂಬುದು ಅರಿವಿಗೆ ಬರುವುದು. ಶರಣರ ವಚನ ಸಾಹಿತ್ಯವು ನಮ್ಮ ಮನುಜ ಜೀವನಕ್ಕೆ ದಾರಿ ದೀಪವಾಗಿದೆ, ಅವರು ವಚನಗಳನ್ನು ನಿರ್ವಚನ ಮಾಡಿದ ರೀತಿ ನಾವು ಅವರ ವಚನ ಸನ್ನಿವೇಶದಲ್ಲಿ ಕಾಣಬಹುದು. ಸಮಕಾಲೀನ ಬದುಕಿನ ಒಳನೋಟದ ತಿರುಳುಗಳನ್ನು ಅರ್ಥೈಸಿಕೊಂಡು ಬದುಕಲು ಅವರ ಕೃತಿಗಳು ದಾರಿ ದೀಪವಾಗಿವೆ.
“ನನ್ನ ಜೀವಮಾನದ ಕೊನೆಯುಸಿರು
ಇದುವವರೆಗೂ ಕನ್ನಡಕ್ಕಾಗಿಯೇ
ದುಡಿಯುವೆ ಕನ್ನಡಕ್ಕಾಗಿಯೇ
ಬದುಕುವೆ.”
ಎಂಬುದು ಗಡಿನಾಡಿನ ವೀರ ಕನ್ನಡತಿ ಜಯದೇವಿ ತಾಯಿ ಲಿಗಾಡೆ ಅವರ ಮಾತು ನೆನಪಾಗುತ್ತದೆ. ಕನ್ನಡ ನಾಡು ನುಡಿ ನಮ್ಮ ಉಸಿರು, ನಮ್ಮ ಬದುಕು.

ಮನುಷ್ಯನ ಪ್ರಾಣ ನೀರು ಮೇಲಿನ ಗುಳ್ಳೆ ಇದ್ದಹಾಗೆ, ನಮ್ಮೆಲ್ಲರ ಅಂತಿಮ ಸತ್ಯವೂ ನಾವು ತಿಳಿದಿರುತ್ತೇವೆ ಆದರೂ ಕೂಡ ಅನೇಕ ಸಲ ನಾವು ಮಾನವೀಯತೆಯನ್ನು ಮರೆತು ರಕ್ಕಸರಂತೆ ವರ್ತಿಸುತ್ತೇವೆ. ವಯಸ್ಸು ಎಲ್ಲರಿಗೆ ಆಗುವುದು ವರ್ಧರು ಎಲ್ಲರೂ ಆಗುವವರು ಆಸರೆ ಎಲ್ಲರಿಗೆ ಬೇಕಾಗುವುದು ಆದರೆ ಯೌವನಾವಸ್ಥೆಯಲ್ಲಿ ಇವತ್ತಿನ ಸಮಾಜದಲ್ಲಿ ಇವತ್ತಿನ ಕೌಟುಂಬಿಕ ವ್ಯವಸ್ಥೆಯಲ್ಲಿ ವಯಸ್ಸಾದ ತಂದೆ ತಾಯಿಗಳು ಎಂದರೆ ತೊಂದರೆ ಎಂದು ಭಾವಿಸುವವರು ಸಂಖ್ಯೆ ಹೆಚ್ಚಾಗಿದೆ.
“ನನ್ನ ಕಣ್ಣಿನ ಬೆಳಕು ಮಂದವಾಗುವ ಮೊದಲು
ಅಂತರಂಗದ ಬೆಳಗು ಪ್ರಜ್ವಲಿಸಲಿ
ನನ್ನ ಕಿವಿಯ ಶಬ್ದ ಕಿವುಡಾಗುವ ಮೊದಲು
ಅಂತರಂಗದ ಶಬ್ದ ಸ್ಪುಟಿಸಲಿ
ನನ್ನ ಬಾಯರುಚಿ ಕೆಡುವ ಮೊದಲು
ಅಂತರಂಗದ ಸ್ವಾದ ರುಚಿಸಲಿ
ನನ್ನ ತ್ವಚೆ ಸುಕ್ಕುಗಟ್ಟುವ ಮೊದಲು
ಅಂತರಂಗದಾಧ್ಯಾತ್ಮ ಕಾಂತಿ ಹೊಮ್ಮಲಿ
ನನ್ನ ಕಾಲು ಶಕ್ತಿ ಗುಂದಿ ನಡೆಯಲು ಬಾರದ ಮುನ್ನ
ಜೀವನಯಾತ್ರೆ ನಿನ್ನಡೆಗೆ ಪಯಣಿಸಲಿ”
ಎಂದು ನೀಲಗಂಗಾ ಚರಂತಿಮಠ ಅವರು ಸುಳಕೂಡೆ ಅವರು ಸಂಪಾದಿಸಿದ “ವೃದ್ಧರ ಹಿತ ರಕ್ಷಣೆ ಯಾರ ಹೊಣೆ?” ಎಂಬ ಕೃತಿಯಲ್ಲಿ ತಮ್ಮ ಅಳಲನ್ನು ತೋಡಿಕೊಳ್ಳುತ್ತಾರೆ. ಇದು ಅವರ ಅಳಲು ಮಾತ್ರವಲ್ಲ ಇದು ಇವತ್ತಿನ ಸಮಾಜದ ವಿಡಂಬನೆಯಾಗಿದೆ. ಏಕೆಂದರೆ ಇವತ್ತಿನ ಸಾಮಾಜಿಕ ವ್ಯವಸ್ಥೆ ವಿಘಟಿತ ಕುಟುಂಬಗಳ ಒಂದು ಗುಂಪಾಗಿದೆ. ತಂದೆ ತಾಯಿ ಅಥವಾ ಮಗ ಮಗಳು ಎಂದರೆ ಒಂದು ಕುಟುಂಬ ಎಂದುಕೊಂಡು ಬದುಕುತ್ತಿರುವ ಇವತ್ತಿನ ಕುಟುಂಬ ವ್ಯವಸ್ಥೆ ರಕ್ತ ಸಂಬಂಧಗಳನ್ನು ಕಡೆಗಣಿಸಿದ್ದಾರೆ. ಆದರೆ ಇದರ ಪ್ರಾಯಶ್ಚಿತ ಅವರ ಮುಪ್ಪಿನ ಕಾಲದಲ್ಲಿ ಆಗುವುದು ನಿಶ್ಚಿತ.

ಇಂತಹ ಅನೇಕ ಮೌಲ್ಯವುಳ್ಳ ಲೇಖನಗಳು ಈ ಸತ್ಯಾನ್ವೇಷಣೆಯಲ್ಲಿ ನಾವು ಅನ್ವೇಷಿಸಬಹುದು. ಸತ್ಯಾನ್ವೇಷಣೆ ಇದು ಮಾತ್ರ ಒಂದು ಕೃತಿಯಲ್ಲ ಇದು ಮಾನವ ಜೀವನದ ಸತ್ಯಾನ್ವೇಷಣೆ ಎಂಬುದನ್ನು ಮರೆಯಬಾರದು. ಮೂಲ ಎಲ್ಲಾ ಕೃತಿಗಳ ಲೇಖಕರು ಸಂಪಾದಕರು ಆದ ಸ. ರಾ. ಸುಳಕೂಡೆ ಅವರ ಎಲ್ಲಾ ಕೃತಿಗಳನ್ನು ಓದಿ ಸತ್ಯವನ್ನು ಹೊರಹಾಕಿದ ಪ್ರೊ. ಯು.ಎನ್. ಸಂಗನಾಳಮಠ ಅವರು ಈ ಕೃತಿಯನ್ನು ಹೊರ ತಂದು ಸಾಹಿತ್ಯ ಜಗತ್ತಿಗೆ ಹೊಸ ಮೆರಗನ್ನು ನೀಡಿ ಸಮಾಜಕ್ಕೆ ಹಿತವನ್ನು ಬಯಸಿದ ಪರಿ ವಿಭಿನ್ನವಾಗಿದೆ. ಸಾಹಿತ್ಯವು ಸಮಾಜಕ್ಕೆ ಹಿತಕಾರಿಯಾಗಿರಬೇಕು, ಈ ನಿಟ್ಟಿನಲ್ಲಿ ಇಂಥ ಕೃತಿಗಳು ಸಾರ್ಥಕವಾಗುತ್ತವೆ.

ಡಾ. ಸುನೀಲ ಪರೀಟ
ಭಾಷಾ ಶಿಕ್ಷಕರು ಹಾಗೂ ಸಾಹಿತಿಗಳು
ಕರ್ನಾಟಕ ರಾಜ್ಯ ಉತ್ತಮ ಶಿಕ್ಷಕ ಪ್ರಶಸ್ತಿ ಪುರಸ್ಕ್ರತರು
ಸಾಂಬರಾ, ಬೆಳಗಾವಿ ೯೪೮೦೦೦೬೮೫೮

- Advertisement -
- Advertisement -

Latest News

ವಿದ್ಯಾರ್ಥಿ ಜೀವನದ ನಿಜವಾದ ಕೌಶಲ ಆಲಿಸುವಿಕೆ – ನಟ ಮಾಸ್ಟರ್ ಮಂಜುನಾಥ ಅಭಿಮತ

ವಿದ್ಯಾರ್ಥಿ ಜೀವನದಲ್ಲಿ ಕೇಳುವಿಕೆ ಹಾಗೂ ಅರ್ಥಮಾಡಿಕೊಳ್ಳುವಿಕೆಯು ನಿಜವಾದ ಕೌಶಲ್ಯವಾಗಿದೆ ಎಂದು ಕನ್ನಡದ ಪ್ರಸಿದ್ಧ ನಟ ಮಾಸ್ಟರ್ ಮಂಜುನಾಥ ಅಭಿಪ್ರಾಯಪಟ್ಟರು. ಬೆಂಗಳೂರಿನ ಕ್ರಿಸ್ತು ಜಯಂತಿ ಕಾಲೇಜಿನ ಸಮಾಜ ವಿಜ್ಞಾನ...
- Advertisement -

More Articles Like This

- Advertisement -
close
error: Content is protected !!
Join WhatsApp Group