ಹೊಸದೆಹಲಿ – ಭಾರತದ ವಿವಿಧ ಪ್ರದೇಶಗಳ ಜನರನ್ನು ವಿವಿಧ ದೇಶಗಳ ಜನರಿಗೆ ಹೋಲಿಕೆ ಮಾಡಿದ್ದ ಕಾಂಗ್ರೆಸ್ ನ ಸಾಗರೋತ್ತರ ಅಧ್ಯಕ್ಷ ಸ್ಯಾಮ್ ಪಿತ್ರೊಡಾ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ.
ತಮ್ಮ ವಿವಾದಾತ್ಮಕ ಹೇಳಿಕೆಯೊಂದರ ಪ್ರತೀಕವಾಗಿ ಅವರು ರಾಜೀನಾಮೆ ನೀಡಿದ್ದು, ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ರಾಜೀನಾಮೆಯನ್ನು ಸ್ವೀಕರಿಸಿದ್ದಾರೆ.
ಸಂದರ್ಶನವೊಂದರಲ್ಲಿ ಪಿತ್ರೊಡಾ ಮಾತನಾಡುತ್ತ, ೭೫ ವರ್ಷಗಳಿಂದ ಕೆಲವೇ ಜಗಳಗಳನ್ನು ಹೊರತುಪಡಿಸಿದರೆ ನಾವು ದೇಶದಲ್ಲಿ ಶಾಂತಿಯಿಂದ ಬದುತ್ತಿದ್ದೇವೆ. ಭಾರತ ವಿವಿಧತೆಯಲ್ಲಿ ಏಕತೆ ಹೊಂದಿದೆ. ಹೇಗೆಂದರೆ, ಪೂರ್ವ ಭಾರತದ ಜನರು ಚೀನಾದವರಂತೆ, ಪಶ್ಚಿಮದವರು ಅರಬ್ಬರಂತೆ, ಉತ್ತರದವರು ಬಿಳಿಯರಂತೆ ಹಾಗೆಯೇ ದಕ್ಷಿಣದವರು ಆಫ್ರಿಕಾದವರಂತೆ ಕಾಣುತ್ತಾರೆ. ಅದೇನೂ ದೊಡ್ಡ ವಿಷಯವಲ್ಲ. ನಾವೆಲ್ಲ ಸಹೋದರ ಸಹೋದರಿಯರಂತೆ. ನಾವು ವಿವಿಧ ಭಾಷೆ, ಸಂಸ್ಕೃತಿ, ಧರ್ಮ ಹಾಗೂ ಆಹಾರ ಪದ್ಧತಿಗಳನ್ನು ಗೌರವಿಸುತ್ತೇವೆ ಎಂದು ಹೇಳಿದ್ದರು.
ಆದರೆ ಪಿತ್ರೊಡಾ ಅವರ ಈ ಹೇಳಿಕೆ ವಿವಾದಕ್ಕೆ ಈಡಾಗುತ್ತಿದ್ದಂತೆಯೇ ಕಾಂಗ್ರೆಸ್ ಅಂತರ ಕಾಯ್ದುಕೊಂಡಿದೆ. ಈ ಬಗ್ಗೆ ಎಕ್ಸ್ ನಲ್ಲಿ ಬರೆದುಕೊಂಡ ಕಾಂಗ್ರೆಸ್ ಮುಖಂಡ ಜೈರಾಮ್ ರಮೇಶ ಅವರು, ಪಿತ್ರೊಡಾ ಅವರ ಈ ಹೇಳಿಕೆಗೂ ಕಾಂಗ್ರೆಸ್ ಗೂ ಯಾವುದೇ ಸಂಬಂಧವಿಲ್ಲ ಎಂದಿದ್ದರು.
ಮೋದಿ ಕೋಪ
ಪಿತ್ರೊಡಾ ಅವರ ಈ ವಿವಾದಾತ್ಮಕ ಹೇಳಿಕೆಯ ಬಗ್ಗೆ ಪ್ರಧಾನ ಮಂತ್ರಿ ಮೋದಿ ತೀಕ್ಷ್ಣವಾಗಿ ಪ್ರತಿಕ್ರಿಯಿಸಿದ್ದಾರೆ.
ಯಾರಾದರೂ ನನ್ನ ನಿಂದಿಸಿದರೆ ನಾನು ಸಹಿಸುತ್ತೇನೆ ಆದರೆ ಕಾಂಗ್ರೆಸ್ ಯುವರಾಜನ ಸೇವಕ ಇಂದು ಯಾವ ಹೇಳಿಕೆ ನೀಡಿದ್ದಾರೆ. ಯಾವುದೆ ದೇಶದ ಜನರನ್ನು ಚರ್ಮದ ಬಣ್ಣದ ಆಧಾರದ ಮೇಲೆ ವಿಭಾಗ ಮಾಡಲಾಗುತ್ತದೆಯೇ. ಇದು ದೇಶದ ಅವಮಾನ, ಜನತೆಯ ಅವಮಾನ. ಇದನ್ನು ಮೋದಿ ಸಹಿಸುವುದಿಲ್ಲ. ಇದಕ್ಕೆ ಕಾಂಗ್ರೆಸ್ ನ ಯುವರಾಜ ಉತ್ತರ ನೀಡಬೇಕು ಎಂದು ಆಕ್ರೋಶ ವ್ಯಕ್ತಪಡಿಸಿದರು.
ಇತರ ಬಿಜೆಪಿ ನಾಯಕರಾದ ರಾಜೀವ ಚಂದ್ರಶೇಖರ, ಸುಧಾಂಶು ತ್ರಿವೇದಿ, ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಮುಂತಾದವರು ಕೂಡ ಪಿತ್ರೊಡಾ ಹೇಳಿಕೆಯನ್ನು ತೀವ್ರವಾಗಿ ಖಂಡಿಸಿದ್ದಾರೆ.
ಪಿತ್ರೊಡಾ ರಾಜೀನಾಮೆಯ ಬಗ್ಗೆ ಜೈರಾಮ್ ರಮೇಶ ತಮ್ಮ ಎಕ್ಸ್ ಬರಹದಲ್ಲಿ ಸ್ಪಷ್ಟಪಡಿಸಿದ್ದಾರೆ.