ಸಿಂದಗಿ: ಲೊಯೋಲ ಶಾಲೆಯು ಸಿಂದಗಿಯ ಪ್ರತಿಷ್ಠಿತ ಶಿಕ್ಷಣ ಸಂಸ್ಥೆಯಾಗಿದೆ. ಗ್ರಾಮೀಣ ಭಾಗದ ಜನರಿಗೆ ಅತ್ಯಂತ ಕಡಿಮೆ ಶುಲ್ಕದಲ್ಲಿ ಶಿಕ್ಷಣ ನೀಡುವುದರೊಂದಿಗೆ ಸಮಾಜ ಸೇವೆಯಂತಹ ಉದಾತ್ತ ಕಾರ್ಯ ಸಂಸ್ಥೆಯಿಂದ ನಡೆಯುತ್ತಿದೆ ಎಂದು ಶಾಸಕ ಅಶೋಕ ಮನಗೂಳಿ ಹೇಳಿದರು.
ಪಟ್ಟಣದ ಲೊಯೋಲ ಶಾಲೆಯಲ್ಲಿ ಶಾಲಾ ಸಂಸ್ಥಾಪಕರ ದಿನಾಚರಣೆ ಹಾಗೂ ನೂತನ ಶಾಸಕರಿಗೆ ಸನ್ಮಾನ ಸಮಾರಂಭವನ್ನು ಹಮ್ಮಿಕೊಳ್ಳಲಾಗಿತ್ತು. ಸನ್ಮಾನವನ್ನು ಸ್ವೀಕರಿಸಿ ಮಾತನಾಡಿದ ಅವರು, ನಮ್ಮ ತಂದೆಯವರು ಗ್ರಾಮ ಸೇವಕರಾಗಿದ್ದ ಅವಧಿಯಲ್ಲಿ ಗ್ರಾಮೀಣ ಭಾಗದ ಜನರ ತೊಂದರೆಯನ್ನು ಮನಗಂಡು ಅವರಿಗೆ ಶಿಕ್ಷಣ ನೀಡುವ ಸಲುವಾಗಿ ತಾಲೂಕಾ ಶಿಕ್ಷಣ ಪ್ರಸಾರಕ ಮಂಡಳಿಯನ್ನು ಸ್ಥಾಪಿಸಿ ಗ್ರಾಮೀಣ ಭಾಗದ ಜನರಿಗೆ ಶಿಕ್ಷಣವನ್ನು ನೀಡುವಲ್ಲಿ ಯಶಸ್ವಿಯಾದರು. ಅವರು ಸಚಿವರಾಗಿದ್ದಾಗ ಸಿಂದಗಿಗೆ ನೀರಿನ ಸೌಲಭ್ಯವನ್ನು ಒದಗಿಸಿಕೊಡುವುದಲ್ಲದೆ, ಸಮಗ್ರ ಅಭಿವೃದ್ಧಿಗಾಗಿ ಕ್ರಮ ಕೈಗೊಂಡರು. ಅವರ ಮತ್ತು ಜನತೆಯ ಆಶೀರ್ವಾದದಿಂದ ಈ ಬಾರಿ ಶಾಸಕನಾಗಿ ಆಯ್ಕೆಯಾಗಿರುವ ನಾನು ಸಿಂದಗಿ ತಾಲೂಕಿನ ಎಲ್ಲ ಜನರ ಸಮಸ್ಯೆಗಳಿಗೆ ಸ್ಪಂದಿಸುವುದರ ಜೊತೆಗೆ ಸಿಂದಗಿಯನ್ನು ಮತ್ತಷ್ಟು ಅಭಿವೃದ್ಧಿಗೊಳಿಸುವ ಗುರಿಯನ್ನು ಹೊಂದಿದ್ದೇನೆ ಎಂದು ಹೇಳಿದರು.
ಶಾಲಾ ಪ್ರಾಚಾರ್ಯರಾದ ಪಾಧರ್ ಲ್ಯಾನ್ಸಿ ಫನಾರ್ಂಡಿಸ್ ಅವರು ಮಾತನಾಡಿ, ಸಿಂದಗಿಯ ನೂತನ ಶಾಸಕರಾದ ಅಶೋಕ ಮನಗೂಳಿ ಅವರು ಸಹಕಾರ ಮೂರ್ತಿಗಳು, ಅಭಿವೃದ್ಧಿಯ ಹರಿಕಾರರು. ಅವರು ಪ್ರಗತಿಪರ ಚಟುವಟಿಕೆಗಳ ಮೂಲಕ ಸಿಂದಗಿಯ ಶಾಶ್ವತ ಶಾಸಕರಾಗಿ ಉಳಿಯುತ್ತಾರೆ ಎಂಬ ಭರವಸೆ ನನ್ನದು ಎಂದು ಹೇಳಿದರು.
ಸಮಾರಂಭದಲ್ಲಿ ಅತ್ಯುತ್ತಮ ಜಿಲ್ಲಾ ವರದಿಗಾರರು ಎಂಬ ಪ್ರಶಸ್ತಿಯನ್ನು ಪಡೆದುಕೊಂಡ ರಮೇಶ ಪೂಜಾರಿಯವರನ್ನು, ಪೋಷಕ ಶಿಕ್ಷಕರ ಸಭೆಯ ಅಧ್ಯಕ್ಷ ಮೊಹಮ್ಮದ್ ಪಟೇಲ್ ಬಿರಾದಾರ ಹಾಗೂ ಉಪಾಧ್ಯಕ್ಷ ನಾಗೇಶ ರೆಡ್ಡಿ ಅವರನ್ನು ಸನ್ಮಾನಿಸಿದರು.
ವೇದಿಕೆಯ ಮೇಲೆ ಫಾದರ್ ಸಂತೋಷ ಹಾಗೂ ಫಾದರ್ ರೊನಾಲ್ಡ್ ಉಪಸ್ಥಿತರಿದ್ದರು.
ವಿದ್ಯಾರ್ಥಿನಿಯರಾದ ಮೇಘಾ ಹಾಗೂ ಉಜಮಾ ಕಾರ್ಯಕ್ರಮ ನಿರೂಪಿಸಿದರು. ಶಿಕ್ಷಕರಾದ ಸಿದ್ದಪ್ಪ ಪ್ರಾಸ್ತಾವಿಕ ನುಡಿಗಳನ್ನು ಹೇಳುವುದರೊಂದಿಗೆ ಸನ್ಮಾನ ಕಾರ್ಯವನ್ನು ನಡೆಸಿಕೊಟ್ಟರು. ವಿದ್ಯಾರ್ಥಿ ಇಶಾನ್ ಸ್ವಾಗತಿಸಿದನು. ವಿದ್ಯಾರ್ಥಿನಿ ಜೋಶ್ನಾ ವಂದಿಸಿದಳು. ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು.