ಮೂಡಲಗಿ – ವಚನ ಎಂದರೆ ಮಾತು, ಭಾಷೆ,ನುಡಿ ಎಂಬ ಅರ್ಥವನ್ನು ಹೊಂದಿದ್ದು ಅದರ ವಿಶ್ಲೇಷಣೆ ಮಾಡುವದು ವಚನಕಾರರ ದೃಷ್ಟಿಯಿಂದ ನೋಡಿದರೆ ತುಂಬಾ ವಿಶಾಲಾರ್ಥವನ್ನು ಹೊಂದಿದೆ.ಬೆಡಗಿನ ವಚನಗಳನ್ನು ರಚಿಸಿದ ಅಲ್ಲಮಪ್ರಭು, ಬಸವಣ್ಣನವರು ಅಕ್ಕಮಹಾದೇವಿ, ಚೆನ್ನಬಸವಣ್ಣ ಮೊದಲಾದ ವಚನಕಾರರ ಒಂದೊಂದು ವಚನಗಳು ದಿನಪೂರ್ತಿ ಮಾತನಾಡುವಷ್ಟು ಸುದೀರ್ಘ ವ್ಯಾಖ್ಯಾನವನ್ನು ಬಯಸುತ್ತವೆ. ವಿಶ್ವ ನಾಯಕರಾದ ಬಸವಣ್ಣನವರ ವಚನವಾದ ಮನೆ ನೋಡಾ ಬಡವರು ಮನ ನೋಡಾ ಘನ ಎಂಬ ವಚನದ ವಿಶ್ಲೇಷಣೆ ಮಾಡುತ್ತಾ ಕೂಡಲ ಸಂಗನ ಶರಣರು ಸ್ವತಂತ್ರ ಧೀರರಾಗಿದ್ದಾರೆ. ಅವರಿಗೆ ಅವರೇ ಸರಿಸಾಟಿ ಅಂತವರ ವಚನಗಳ ಅನುಭಾವದ ಅವಶ್ಯಕತೆ ಇದೆ ಅದನ್ನು ಪಾಲಿಸೋಣ ಎಂದು ಹೇಳಿದರು.
ಅವರು ಸ್ಥಳೀಯ ಕನ್ನಡ ಸಾಹಿತ್ಯ ಪರಿಷತ್ ಹಾಗೂ ಜ್ಞಾನ ದೀಪ್ತಿ ಪೌಂಡೇಶನ್ ಮೂಡಲಗಿ ಇವುಗಳ ಸಹಯೋಗದಲ್ಲಿ ನಾಡಿನ ಶ್ರೇಷ್ಠ ಮಾಸವಾದ ಶ್ರಾವಣಮಾಸದ ನಿಮಿತ್ತ ಹಮ್ಮಿಕೊಂಡಿದ್ದ ‘ಮನೆಮನೆಯಲ್ಲಿ ವಚನ ಶ್ರಾವಣ’ ಎಂಬ ಕಾರ್ಯಕ್ರಮದಲ್ಲಿ ಮೂಡಲಗಿಯ ಸರಕಾರಿ ಪದವಿ ಕಾಲೇಜಿನ ಕನ್ನಡ ಅಧ್ಯಾಪಕರಾದ ಶಿವಕುಮಾರ ಕೋಡಿಹಾಳ ಅವರ ಮನೆಯಲ್ಲಿ ಹಮ್ಮಿಕೊಂಡಿದ್ದ ವಚನ ಶ್ರಾವಣ ಕಾರ್ಯಕ್ರಮದಲ್ಲಿ ವಚನ ನಿರ್ವಚನ ಅನುಭಾವ ಮಾಡುತ್ತಾ ಮಾತನಾಡಿದರು.
ಶರಣರ ವಚನಗಳ ಒಂದೊಂದು ಮಾತುಗಳು ಅತ್ಯಂತ ತೂಕ ಬದ್ಧವಾಗಿದ್ದು ವೀರ ಮತ್ತು ಧೀರ ಪದಗಳಿರುವ ವ್ಯತ್ಯಾಸ, ವ್ಯಭಿಚಾರಕ್ಕೆ ಸಂಬಂಧಿಸಿದಂತೆ ನಾವೆಲ್ಲ ಒಂದಲ್ಲ ಒಂದು ರೀತಿಯಲ್ಲಿ ವ್ಯಭಿಚಾರಿಗಳಾಗಿದ್ದೇವೆ. ನುಡಿದಂತೆ ನಡೆಯುವ ಧೀರತನ ನಮ್ಮ ಶರಣರಿಗೆ ಇರುವಷ್ಟು ಮತ್ತೊಬ್ಬರಿಗಿಲ್ಲ. ಮೋಳಿಗೆ ಮಾರಯ್ಯನ ಮನೆಗೆ ಹೋದಾಗ ಆದ ಅನುಭವವನ್ನು ಬಸವಣ್ಣನವರ
ಮನೆ ನೋಡಾ ಬಡವರು ಮನ ನೋಡಾ ಘನ ಎಂಬ ವಚನದ ಅರ್ಥವನ್ನು ನಾವೆಲ್ಲರೂ ಅರ್ಥೈಸಿಕೊಂಡು ಬದುಕಬೇಕು ಎಂದರು.
ಶಿವಶರಣರು ನಿಕೃಷ್ಟ ಮನೆಯಲ್ಲಿ ಹುಲ್ಲುಗುಡಿಸಿಲನಲ್ಲಿ ವಾಸಮಾಡುತ್ತಿರಬಹುದು-ಆ ದೃಷ್ಟಿಯಿಂದ ನಿರ್ಧನಿಕರಂತೆ ಕಂಡರೂ ಅವರು ಅಷ್ಟೈಶ್ವರ್ಯ ಸಂಪನ್ನರು: ತಮಗೆ ಸಂಪತ್ತಾಗಬೇಕೆಂದು ಎಂದಿಗೂ ಯಾರನ್ನೂ ಆಶ್ರಯಿಸುವುದಿಲ್ಲ, ಅವರ ಮನಸ್ಸು ಮೃದು-ಪ್ರೀತಿಯಿಂದ ಮುಟ್ಟಿದರೆ ಪುಳಕಗೊಳ್ಳುವರು-ಅದರೆ ತಮ್ಮ ಅಭಿಮಾನಕ್ಕೆ ಚ್ಯುತಿ ಬಂತೆಂದರೆ ಅದರ ವಿರುದ್ಧ ನಿರ್ಭೀತಿಯಿಂದ ಹೋರಾಡುವರು ಎಂದು ಹೇಳಿದರು
ಕಾರ್ಯಕ್ರಮದಲ್ಲಿ ಜೋಕಾನಟ್ಟಿ ಶಾಲೆಯ ಸಂಗೀತ ಶಿಕ್ಷಕರಾದ ಅರ್ಜುನ ಕಾಂಬಳೆ ಅವರು ವಚನದಲ್ಲಿ ನಾಮಾಮೃತ ತುಂಬಿ ಹಾಗೂ ಉಳ್ಳವರು ಶಿವಾಲಯವ ಮಾಡುವರು ಎಂಬ ವಚನಗಳನ್ನು ರಾಗಸಂಯೋಜನೆ ಮಾಡಿ ಹಾರ್ಮೋನಿಯಂ ವಾದ್ಯದೊಂದಿಗೆ ವಚನಸುಧೆಯನ್ನು ನೆರೆದ ಎಲ್ಲಾ ಶರಣಗಣಕ್ಕೆ ಉಣಬಡಿಸಿದರು.
ಇದೇ ಸಂದರ್ಭದಲ್ಲಿ ಇತ್ತೀಚೆಗೆ ವಯೋನಿವೃತ್ತಿ ಹೊಂದಿದ ಪಶುವೈದ್ಯ ಇಲಾಖೆಯ ನೌಕರರಾಗಿದ್ದ ಲಕ್ಷ್ಮಣ ಕಂಕಣವಾಡಿಯವರನ್ನು ಸತ್ಕರಿಸಿ ನಿವೃತ್ತಿ ಜೀವನಕ್ಕೆ ಶುಭಹಾರೈಸಲಾಯಿತು.
ಈ ವಚನ ಶ್ರಾವಣ ಕಾರ್ಯಕ್ರಮದಲ್ಲಿ ಕನ್ನಡ ಸಾಹಿತ್ಯ ಪರಿಷತ್ ಹಾಗೂ ಜ್ಞಾನ ದೀಪ್ತಿ ಪೌಂಡೇಶನ್ ಅಧ್ಯಕ್ಷರಾದ ಸಂಜಯ ಸಿಂಧಿಹಟ್ಟಿ, ಪರಿಷತ್ ನ ಗೌರವ ಕಾರ್ಯದರ್ಶಿಗಳಾದ ಎ.ಎಚ್. ಒಂಟಗೋಡಿಯವರು, ಬಿ.ಆರ್ ತರಕಾರ, ಕೋಶಾಧ್ಯಕ್ಷರಾದ ಬಿ.ವಾಯ್.ಶಿವಾಪೂರ, ಉಮೇಶ ಬೆಳಕೂಡ, ದೇವೇಂದ್ರ ಅರ್ಜುಣಗಿ, ನಿಂಗಪ್ಪ ಸಂಗ್ರೇಜಿಕೊಪ್ಪ, ಯಲ್ಲಪ್ಪ ಗದಾಡಿ, ಸುಭಾಸ್ ಕುರಣೆ, ನಾಗರಾಜ ಗುಂಡಗಡಗಿ, ನಂದಿ ಗುರುಗಳು, ಸಹೋದರಿಯರಾದ ಗೀತಾ ಹಿರೇಮಠ, ಶಶಿರೇಖಾ ಬೆಳ್ಳಕ್ಕಿ, ಭಾಗೀರಥಿಯವರು ಮತ್ತಿತರರು ಹಾಜರಿದ್ದರು.