ಈ ಹಾವನ್ನು ಈ ರೀತಿ ಕರೆಯಲು ಹಲವು ಕಾರಣಗಳುಂಟು. ಈ ಹಾವು ರಾತ್ರಿ ವೇಳೆಯಲ್ಲಿಯೇ ಹೆಚ್ಚು ಓಡಾಟ ಮಾಡುವುದು (ನಿಶಾಚರಿ). ಮತ್ತೆ ಈ ಹಾವು ಮನುಷ್ಯರಿಗೆ ಕಚ್ಚಿದಾಗ ಬೇರೆ ವಿಷಕಾರಿ ಹಾವುಗಳು ಕಚ್ಚಿದಾಗ ಬರುವ ಹಾಗೆ ಕಚ್ಚಿದ ಭಾಗದಲ್ಲಿ ವಿಪರೀತ ಉರಿತ ಬರುವುದಿಲ್ಲ. ( ಹೆಚ್ಚಿನ ವಿಷಕಾರಿ ಹಾವುಗಳ ಕಡಿತ ಗೊತ್ತಾಗುವುದು ಕಚ್ಚಿದ ಭಾಗದಲ್ಲಿ ಬರುವ ವಿಪರೀತ ಉರಿತದಿಂದಲೇ ). ಈ ಕಾರಣದಿಂದ ಈ ಹಾವು ಕಚ್ಚಿದಾಗ ಹಲವು ಬಾರಿ ಕಡಿತಕ್ಕೊಳಗಾದ ವ್ಯಕ್ತಿಯ ಗಮನಕ್ಕೆ ಬರುವುದೆ ಇಲ್ಲ. ನಾಗರಹಾವಿನ ವಿಷಕ್ಕಿಂತಲೂ ಈ ಹಾವಿನ ವಿಷ ಹೆಚ್ಚು ಅಪಾಯಕಾರಿ.
ಇಷ್ಟೆಲ್ಲಾ ಕಾರಣಗಳಿಂದ ‘Silent killer’ ಎಂದು ಕರೆಸಿಕೊಳ್ಳುವ ಈ ಹಾವು ಯಾವುದೆನ್ನುವಿರಾ ? ಅದೇ ಕಟ್ಟಾವು. ( Common krait ) ಕಟ್ಟಾವಿನ ಬಗ್ಗೆ ಹೆಚ್ಚಿನ ಜನರಿಗೆ ತಿಳಿವಳಿಕೆ ಕಡಿಮೆ. ಹಲವರು ತೋಳದ ಹಾವು ( Wolf snake ) ಗಳನ್ನೆ ಕಟ್ಟಾವು ಎಂದು ತಿಳಿಯುತ್ತಾರೆ. ಕೆಲವು ಉರಗ ತಜ್ಞರು ಕೂಡ ವಿಷಕಾರಿಯಾದ ಕಟ್ಟಾವನ್ನು, ವಿಷರಹಿತವಾದ ತೋಳದ ಹಾವೆಂದು ಪರಿಭಾವಿಸಿ ಸುಲಭವಾಗಿ ಹಿಡಿಯಲು ಹೋಗಿ ಕಚ್ಚಿಸಿಕೊಂಡು, ಸಾವು ಬದುಕಿನ ಹಂತಕ್ಕೆ ಹೋಗುವಂತ ಅಪಾಯಕ್ಕೆ ಸಿಲುಕಿದ್ದಾರೆ. ನಾನು ಅಪರೂಪದ, ವನ್ಯಜೀವಿ ಕಾಯ್ದೆಯ Schedule 1 ರಲ್ಲಿ ಬರುವ ( ಸಂರಕ್ಷಣೆಯ ದೃಷ್ಟಿಯಿಂದ ಹೆಚ್ಚಿನ ಮಹತ್ವದ ) ಹೆಬ್ಬಾವನ್ನೆ ನಾಲ್ಕೈದು ಬಾರಿ ನೋಡಿದ್ದೇನೆ. ಆದರೆ ಈ ಕಟ್ಟಾವನ್ನು ಇದುವರೆಗೆ ಒಮ್ಮೆ ಮಾತ್ರ ನೋಡಿದ್ದೇನೆ ( ಅದೂ ರಾತ್ರಿ ವೇಳೆಯಲ್ಲಿ ). ಇವು ಪಕ್ಕಾ ನಿಶಾಚರಿಯಾಗಿರುವುದು ಕೂಡ ಇವು ಜನರ ಕಣ್ಣಿಗೆ ಹೆಚ್ಚು ಬೀಳದಿರಲು ಕಾರಣ ಇರಬಹುದು.
ಕಟ್ಟಾವು ಭಾರತದ ‘Big Four Venomous Snake’ ಗಳಲ್ಲಿ ಒಂದು. ಇನ್ನ ಮೂರು ಹಾವುಗಳೆಂದರೆ ನಾಗರಹಾವು / ಕಾಳಿಂಗ ಸರ್ಪ, ಕೊಳಕು ಮಂಡಲ, ಗರಗಸ ಮಂಡಲ. ಭಾರತದಲ್ಲಿ ಹಾವು ಕಡಿತದಿಂದ ಸಾವನ್ನಪ್ಪುವ 90% ಅಧಿಕ ಜನ ಈ ನಾಲ್ಕು ಹಾವುಗಳ ಕಡಿತದಿಂದಲೇ ಸಾವನ್ನಪ್ಪುತ್ತಾರೆ. ಈ ಕಾರಣದಿಂದ ಈ ಹಾವುಗಳ ಬಗ್ಗೆ ಎಚ್ಚರಿಕೆ ವಹಿಸಬೇಕು. ಎಚ್ಚರಿಕೆ ಎಂದರೆ ಆದಷ್ಟು ರಾತ್ರಿ ಹೊರಗಡೆ ಹೋದಾಗ ಟಾರ್ಚ್ ಬಳಸಬೇಕು. ಸಾಧ್ಯವಾದರೆ long shoe ಹಾಕಿಕೊಳ್ಳಬೇಕು. ಮನೆ ಸುತ್ತ ಆದಷ್ಟು ಸ್ವಚ್ಚವಾಗಿಟ್ಟುಕೊಳ್ಳಬೇಕು. ಈ ಬಗ್ಗೆ ಅತೀ ಎಚ್ಚರಿಕೆ ವಹಿಸಬೇಕು.
ಹಾವುಗಳು ಸೇರಿ ಪ್ರತಿ ಜೀವಿಗಳು ಜೀವವೈವಿಧ್ಯತೆಯ ರಕ್ಷಣೆಯಲ್ಲಿ ಪ್ರಮುಖ ಪಾತ್ರ ವಹಿಸುತ್ತವೆ. ಈ ಹಿನ್ನೆಲೆಯಲ್ಲಿ ನಾವು ಎಲ್ಲವನ್ನು ರಕ್ಷಿಸಿಕೊಂಡು ಅವುಗಳೊಂದಿಗೆ ಸಹಬಾಳ್ವೆ ಮಾಡುವುದನ್ನು ಕಲಿಯಬೇಕಾಗುತ್ತದೆ.
ಹೇಮಂತ ಚಿನ್ನು
ಕರ್ನಾಟಕ ಶಿಕ್ಷಕರ ಬಳಗ
ಪರಿಸರ ಪರಿವಾರ.
PC : ಸಂಜಯ್ ಹೊಯ್ಸಳ