ಸಿಂದಗಿ: ನಮಗೆ ಸಂವಿಧಾನ ರಚನೆ ಆಗಿ 70 ವರ್ಷ ಕಳೆದರೂ ಪಿತೃ ಪ್ರಧಾನ ವ್ಯವಸ್ಥೆಯಲ್ಲಿ ಹೆಣ್ಣಿಗೆ ಸಮಾನವಾದ ಹಕ್ಕು ಸಿಕ್ಕಿಲ್ಲ. ಇವತ್ತಿಗೂ ಕೂಡಾ ಮಹಿಳೆಯರ ಮೇಲೆ ನಡೆಯುತ್ತಿರುವ ಅನೇಕ ದೌರ್ಜನ್ಯ, ಅತ್ಯಾಚಾರ ನಿಂತಿಲ್ಲ.
ಇದು ಅಲ್ಲದೆ ಜಾತಿ ಹಾಗೂ ಧರ್ಮದ ಹೆಸರಲ್ಲಿ ನಮ್ಮ ಮೇಲೆ ದೌರ್ಜನ್ಯ ಅಗುತ್ತಿದೆ. ಇದರಿಂದ ಪ್ರತಿಯೊಬ್ಬರು ಮಾನಸಿಕ ಹಿಂಸೆ, ದೈಹಿಕ ನೋವುವನ್ನು ಅನುಭವಿಸುತಿದ್ದಾರೆ ಎಂದು ಮಾನವ ಹಕ್ಕುಗಳ ಹೋರಾಟಗಾರರು ಕರ್ನಾಟಕ ಮಹಿಳಾ ಹಕ್ಕುಗಳ ಕಾರ್ಯಕರ್ತೆ ಶ್ರೀಮತಿ ಮಮತಾ ಯಜಮಾನ ಹೇಳಿದರು.
ತಾಲೂಕ ಸ್ಪೂರ್ತಿ ಮಹಿಳಾ ಸ್ವ ಸಹಾಯ ಸಂಘಗಳ ಒಕ್ಕೂಟ ಹಾಗೂ ಸಂಗಮ ಸಮಗ್ರ ಗ್ರಾಮೀಣ ಅಭಿವೃದ್ಧಿ ಕೇಂದ್ರದ ವತಿಯಿಂದ ವಿಶ್ವ ಮಹಿಳಾ ದಿನಾಚರಣೆಯಲ್ಲಿ ಮಹಿಳಾ ಸಾಧಕಿಯರ ಭಾವಚಿತ್ರಗಳನ್ನು ಅನಾವರಣಗೊಳಿಸುವುದರ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ, ಇದು ಯಾಕೆ ಎಂದರೆ ಎಲ್ಲಿಯವರೆಗೆ ನಾವು ಇನ್ನೊಬ್ಬರ ಮೇಲೆ ನಡೆಯುವ ಅತ್ಯಾಚಾರ, ದೌರ್ಜನ್ಯ ಖಂಡಿಸಿ ಧ್ವನಿ ಎತ್ತುವುದಿಲ್ಲವೊ ಅಲ್ಲಿವರೆಗೆ ಈ ವ್ಯವಸ್ಥೆ ನಿಲ್ಲುವುದಿಲ್ಲ. ಪ್ರತಿಯೊಂದು ಮಹಿಳೆಗೆ ಸಂವಿಧಾನದಲ್ಲಿರುವ ಮಹಿಳಾ ಹಕ್ಕುಗಳ ಕುರಿತು ಜಾಗೃತಿಯನ್ನು ಮೂಡಿಸುವ ಕಾರ್ಯ ನಮ್ಮ ಸರ್ಕಾರ ಮಾಡಬೇಕು ಮತ್ತು ಲಿಂಗ ಸಮಾನತೆಗಾಗಿ ನಾವು ಹೋರಾಡಬೇಕು ಎಂದರು.
ಸಂಗಮ ಸಂಸ್ಥೆಯ ನಿರ್ದೇಶಕ ಫಾದರ್ ಆಲ್ವಿನ್ ಡಿಸೋಜ ಮಾತನಾಡಿ, ಮಹಿಳಾ ಸಂಘಗಳು ರಚನೆ ಮಾಡಬೇಕಾದರೆ ಕೇವಲ ಹಣಕ್ಕಾಗಿ ಸಂಘ ರಚನೆ ಮಾಡಬೇಡಿ ಬದಲಾಗಿ ಎಲ್ಲಿ ಮಹಿಳೆಯರ ಮೇಲೆ ಅತ್ಯಾಚಾರ ಹಾಗೂ ಮಹಿಳೆ ಸಮಸ್ಯೆಯ ಸುಳಿಯಲ್ಲಿ ಸಿಲುಕಿರುತ್ತಾಳೆ ಅಲ್ಲಿ ನೀವೆಲ್ಲರು ಧ್ವನಿಗೂಡಿಸುವವರಿದ್ದರೆ ಮಾತ್ರ ಸ್ವ ಸಹಾಯ ಸಂಘ ಮಾಡಿ ಎಂದು ತಿಳಿಸಿದರು.
ಮಹಿಳಾ ಸಾಂತ್ವನ ಕೇಂದ್ರದ ಮುಖ್ಯಸ್ಥೆ ಸುಜಾತಾ ಕಲಬುರ್ಗಿ ಪ್ರತಿಯೊಬ್ಬ ಮಹಿಳೆಯು ತನ್ನದೇ ಆದ ಒಂದು ಕೆಲಸದಲ್ಲಿ ತೊಡಗಿಸಿಕೊಂಡಿದ್ದಾರೆ. ರೊಟ್ಟಿ ವ್ಯಾಪಾರ, ಅಗರಬತ್ತಿ ತಯಾರಿಕೆ, ಸಣ್ಣ ಅಂಗಡಿ ಹೀಗೆ ಅನೇಕ ಸ್ವಯಂ ಉದ್ಯೋಗ ಮಾಡುತ್ತಿದ್ದಾಳೆ. ಅದೇ ರೀತಿ ನೀವು ಕೂಡಾ ಸ್ವಯಂ ಉದ್ಯೋಗಿಗಳಾಗಿ ಮುಂದೆ ಬನ್ನಿ ಎಂದು ಕರೆ ನೀಡಿದರು.
ಶ್ರೀಮತಿ ಲಲಿತಾ ರಮೇಶ ಭೂಸನೂರ, ತಾಲೂಕ ಪಂಚಾಯಿತಿ ಎನ್.ಎಲ್.ಆರ್.ಎಂ ಕಾರ್ಯಕ್ರಮದ ಮೆಲ್ವಿಚಾರಕಿ ಲಕ್ಷ್ಮೀ ಪೋಲಿಸ್ ಪಾಟೀಲ ಮಾತನಾಡಿದರು.
ಕಾರ್ಯಕ್ರಮದಲ್ಲಿ ಶ್ರೀಮತಿ ನಾಗರತ್ನ ಅಶೋಕ ಮನಗೂಳಿ ಮಾಜಿ ಅಧ್ಯಕ್ಷರು ಇನ್ನರ್ ವ್ಹೀಲ್ ಕ್ಲಬ್ ಸಿಂದಗಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಮೇಲ್ವಿಚಾರಕರು, ಕುಮಾರಿ ಸುನಿತಾ ಕಪ್ಪೆನ್ನವರ ಹಾಗೂ ಸಿ. ಸಿಂತಿಯಾ ಡಿಮೆಲ್ಲೊ ವೇದಿಕೆ ಮೇಲಿದ್ದರು.
ನೀಲಮ್ಮ ಬಡಿಗೇರ ನಿರೂಪಿಸಿದರು, ಸಿಂದಗಿ ತಾಲೂಕ ಮಹಿಳಾ ಸ್ವ ಸಹಾಯ ಸಂಘಗಳ ಒಕ್ಕೂಟದ ಅಧ್ಯಕ್ಷೆ ರೇವತಿ ಮೇತ್ರಿಯವರು ಸ್ವಾಗತಿಸಿದರು. ವಿದ್ಯಾ ಮಣಸುಣಗಿರವರು ವಂದಿಸಿದರು.
ಸ್ನೇಹಲತಾ ಗುಂಡಾಪೂರ ಸಂವಿಧಾನದ ಪ್ರಸ್ತಾವನೆ ಓದಿದರು. ಸಂಪಾವತಿಯವರು ವಾರ್ಷಿಕ ವರದಿಯನ್ನು ಮಂಡಿಸಿದರು. ವಿವಿಧ ಹಳ್ಳಿಗಳಿಂದ ಸಾವಿರಾರು ಮಹಿಳೆಯರು ಕಾರ್ಯಕ್ರಮದಲ್ಲಿ ಭಾಗವಹಿಸಿದರು.