spot_img
spot_img

ಕನ್ನಡದ ಹೆಮ್ಮೆಯ ಕಾದಂಬರಿಕಾರ ಎಸ್ ಎಲ್ ಭೈರಪ್ಪ

Must Read

- Advertisement -

ಈ ದಿನ ನಮ್ಮ ಕನ್ನಡ ಸಾಹಿತ್ಯ ಲೋಕದ ಹಿರಿಯ ಕಾದಂಬರಿಕಾರರಾದ ಡಾ.ಎಸ್.ಎಲ್.ಭೈರಪ್ಪನವರ ಜನುಮ ದಿನ.

ನಮ್ಮ ಕಾಲದ ಮಹಾನ್ ಕಾದಂಬರಿಕಾರರಾದ ‘ಡಾ.ಎಸ್.ಎಲ್. ಭೈರಪ್ಪ’ನವರು ಜನಿಸಿದ್ದು ಆಗಸ್ಟ್ 20, 1931ರಲ್ಲಿ. ಭೈರಪ್ಪನವರು ಜನಪ್ರಿಯತೆ ಮತ್ತು ಚಿಂತನಶೀಲತೆ ಇವೆರಡನ್ನೂ ಕಾಯ್ದುಕೊಂಡ ಅಪೂರ್ವ ಬರಹಗಾರರು. 1961ರಲ್ಲಿ ಜನಪ್ರಿಯವಾದ ಅವರ ‘ಧರ್ಮಶ್ರೀ’ ಕಾದಂಬರಿಯಿಂದ ಮೊದಲ್ಗೊಂಡಂತೆ ಇತ್ತೀಚಿನ ವರ್ಷಗಳಲ್ಲಿ ಮೂಡಿಬಂದ ‘ಉತ್ತರಕಾಂಡ’ದವರೆಗೆ ಅವರ ಕಾದಂಬರಿಗಳು ಅಪಾರ ಸಂಖ್ಯೆಯ ಓದುಗರನ್ನು ಪಡೆದಿದ್ದು, ಜೀವನದ ವಿವಿಧ ಸ್ಥರಗಳ ಬಗೆಗೆ ಚಿಂತನೆ ಮಾಡುವಂತಹ ಬೃಹತ್ ಕಥಾನಕಗಳನ್ನು ಕನ್ನಡಿಗರಿಗೆ ನೀಡಿವೆ. ಅವರ ಪ್ರತಿ ಕಾದಂಬರಿಯೂ ಪುನರ್ ಮುದ್ರಣಗಳನ್ನು ಕಾಣುತ್ತಲೇ ಇರುವುದು ಅವರ ಜನಪ್ರಿಯತೆಗೆ ಅಷ್ಟೇ ಅಲ್ಲ, ಅವರ ಬರಹಗಳಲ್ಲಿನ ಸತ್ವದ ಸಾರ್ವಕಾಲಿಕತೆಯ ಪ್ರತೀಕವೂ ಆಗಿದೆ. ಭೈರಪ್ಪನವರ ಬರಹಗಳಲ್ಲಿ ಒಬ್ಬ ಶ್ರೇಷ್ಠ ಸಂಶೋಧನಕಾರನ ಸತ್ಯಾನ್ವೇಷಣೆ, ಇತಿಹಾಸದ ಬಗೆಗಿನ ಸುದೀರ್ಘ ಅಧ್ಯಯನ, ಭಾರತೀಯ ಸಂಸ್ಕೃತಿಯ ಆಳವಾದ ಪ್ರಜ್ಞೆಗಳು ವಿಶಿಷ್ಟವಾಗಿ ಕಂಗೊಳಿಸುತ್ತಿದ್ದು, ಸಾಮಾನ್ಯ ಓದುಗನಿಗೆ ಅದರ ಅನುಭಾವದ ಸಿಂಚನ ನೀಡುವುದರ ಜೊತೆಗೆ ವಿದ್ವಾಂಸರ ಮನಮೆಚ್ಚುಗೆಯನ್ನೂ ಪಡೆದಿವೆ.

ಚನ್ನರಾಯಪಟ್ಟಣದ ಬಳಿಯ ಸಂತೆ ಶಿವರದಲ್ಲಿ ಜನಿಸಿದ ಸಂತೆ ಶಿವರದ ಭೈರಪ್ಪನವರು, ಕಿತ್ತು ತಿನ್ನುವ ಬಡತನ, ಬೇಜವಾಬ್ದಾರಿ ತಂದೆ, ಪ್ಲೇಗ್ ಮಾರಿಯಿಂದ ತತ್ತರಗೊಂಡ ಪರಿಸರ ಈ ಎಲ್ಲಾ ಪ್ರತೀಕೂಲ ಸಂದರ್ಭಗಳ ನಡುವೆಯೂ ಸಣ್ಣವಯಸ್ಸಿನಿಂದಲೇ, ಅವರ ‘ಗೃಹಭಂಗ’ ಕಾದಂಬರಿಯಲ್ಲಿ ನಂಜಮ್ಮನ ಪಾತ್ರದಲ್ಲಿ ಕಾಣಬಹುದಾದ, ತಮ್ಮ ತಾಯಿಯಲ್ಲಿದ್ದ ಧೀಮಂತತೆಯನ್ನು ಮೈಗೂಡಿಸಿಕೊಂಡರು. ವಯಸ್ಸು 5ರ ಆಸು ಪಾಸಿನಲ್ಲಿ ಅವರ ತಾಯಿಯೂ ಬಡತನ – ಪ್ಲೇಗ್ ಗಳಿಗೆ ಜೀವವನ್ನು ಬಿಟ್ಟುಕೊಟ್ಟಾಗ, ಬದುಕಿನ ವಿಶ್ವ ವಿಶಾಲತೆಯ ಈ ರಂಗದಲ್ಲಿ ತಮ್ಮ ಸಾಹಸಮಯವಾದ ಬದುಕನ್ನು ತಾವೇ ನಿರ್ಮಿಸಿಕೊಳ್ಳತೊಡಗಿದರು. ಅವರ ಗೃಹಭಂಗ, ಅನ್ವೇಷಣ ಕಾದಂಬರಿಗಳು ಮತ್ತು ಭಿತ್ತಿ ಎಂಬ ಅವರ ಆತ್ಮಚರಿತ್ರೆಯಲ್ಲಿನ ಅವರ ಬದುಕಿನ ಈ ಭಾಗಗಳನ್ನು ಓದುವುದೇ ಒಂದು ರೋಮಾಂಚನಕಾರಿ ಅನುಭವ. ಒಬ್ಬ ವ್ಯಕ್ತಿ ತನ್ನ ಜೀವನದಲ್ಲಿ ಬರುವ ಕಷ್ಟಗಳನ್ನು ಅನುಭವಗಳನ್ನಾಗಿ ಪರಿವರ್ತಿಸಿಕೊಂಡು, ಇಡೀ ವ್ಯವಸ್ಥೆಯಲ್ಲಿ ಹೇಗೆ ಪರಿಣಾಮಕಾರಿಯಾಗಿ ಬದುಕಬಹುದು ಎಂಬುದಕ್ಕೆ ಭೈರಪ್ಪನವರ ಸಾಧನೆಗಳು ಒಂದು ಮಹಾನ್ ನಿದರ್ಶನವಾಗಬಲ್ಲವು.

- Advertisement -

ತಮ್ಮ ಪ್ರಾಥಮಿಕ ವಿದ್ಯಾಭ್ಯಾಸವನ್ನು ತಾವು ಹುಟ್ಟಿದ ಹಳ್ಳಿಯಲ್ಲಿ ಹಾಗೂ ಅದರ ಸುತ್ತಮುತ್ತ ಪ್ರದೇಶಗಳಲ್ಲಿ ಭೈರಪ್ಪನವರು ಸಾಗಿಸಿದರು. ಶುದ್ಧಮೌಲ್ಯಗಳ ದೃಷ್ಟಿಯಿಂದ ಗಾಂಧೀಜಿ ಒಬ್ಬರನ್ನೇ ಮಹೋನ್ನತ ನಾಯಕರೆಂದು ಪರಿಗಣಿಸುವ ಭೈರಪ್ಪನವರು ಕೇವಲ ತಮ್ಮ ಹದಿಮೂರನೆಯ ವಯಸ್ಸಿನಲ್ಲೇ ಸ್ವಾತಂತ್ರ ಚಳವಳಿಯಲ್ಲಿ ಸಕ್ರಿಯವಾಗಿ ಭಾಗವಹಿಸಿ ಹೆಂಡದ ಲಾರಿಗಳನ್ನು ತಡೆದು ಪೋಲೀಸ್ ಸ್ಟೇಷನ್ನಿಗೆ ಹೋದವರೂ, ಭಾಷಣಗಳನ್ನು ಮಾಡಿದವರೂ ಆಗಿದ್ದಾರೆ.

ಮೈಸೂರಿನ ಹಲವು ಹಾಸ್ಟೆಲುಗಳು ಮತ್ತು ಅಂದಿನ ಕೆಲವೊಂದು ಸಜ್ಜನರ ಕೃಪೆಗಳಲ್ಲಿ ಬದುಕು ಸಾಗಿಸಿದ ಎಸ್. ಎಲ್. ಭೈರಪ್ಪನವರು ಮೈಸೂರಿನ ಶಾರದ ವಿಲಾಸ ಪ್ರೌಢಶಾಲೆಯಲ್ಲಿ ಓದಿದ ಮೇಲೆ ಮಹಾರಾಜಾ ಕಾಲೇಜಿನ ವಿದ್ಯಾರ್ಥಿಯಾಗಿ 1957ರಲ್ಲಿ ಬಿ.ಎ. ಆನರ್ಸ್ ಪದವಿ ಗಳಿಸಿದರು. 1958ರಲ್ಲಿ ಮೈಸೂರು ವಿಶ್ವವಿದ್ಯಾನಿಲಯದಿಂದ ಎಂ.ಎ ಪದವಿಯಲ್ಲಿ ಪ್ರಥಮ ಶ್ರೇಣಿಯ ಸಾಧನೆ ಮಾಡಿ ಚಿನ್ನದ ಪದಕಗಳನ್ನು ತಮ್ಮದಾಗಿಸಿಕೊಂಡರು. ಬರೋಡಾದ ಮಹಾರಾಜ ಸಯ್ಯಾಜಿರಾವ್ ವಿಶ್ವವಿದ್ಯಾನಿಲಯದಿಂದ ‘ಸತ್ಯ ಮತ್ತು ಸೌಂದರ್ಯ’ ಎಂಬ ಇಂಗ್ಲಿಷಿನಲ್ಲಿ ರಚಿಸಿದ ಪ್ರಬಂಧಕ್ಕಾಗಿ ಡಾಕ್ಟರೇಟ್ ಪದವಿಗಳಿಸಿದರು. ಎಂ. ಎ. ವಿದ್ಯಾಭ್ಯಾಸದ ನಂತರ ಹುಬ್ಬಳ್ಳಿಯ ಕಾಡಸಿದ್ಧೇಶ್ವರ ಕಾಲೇಜಿನಲ್ಲಿ ತರ್ಕಶಾಸ್ತ್ರ ಮತ್ತು ಮನಃಶಾಸ್ತ್ರದ ಅಧ್ಯಾಪಕರಾಗಿ, ಅನಂತರ 1960ರಿಂದ 1966ರವರೆಗೆ ಗುಜರಾತಿನ ಸರ್ದಾರ್ ಪಟೇಲ್ ವಿಶ್ವವಿದ್ಯಾನಿಲಯದಲ್ಲಿ ತತ್ವಶಾಸ್ತ್ರದ ಉಪನ್ಯಾಸಕರಾಗಿ ಸೇವೆ ಸಲ್ಲಿಸಿದರು. 1967ರಿಂದ 1971ರ ವರೆಗೆ ದೆಹಲಿಯ ರಾಷ್ಟ್ರೀಯ ಶಿಕ್ಷಣ ಮತ್ತು ತರಬೇತಿ ಸಂಸ್ಥೆಯಲ್ಲಿ ಶಿಕ್ಷಣ ಮೀಮಾಂಸಾ ವಿಷಯದಲ್ಲಿ ಉಪಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸಿದ ನಂತರ ಮೈಸೂರಿನಲ್ಲಿರುವ ಪ್ರಾದೇಶಿಕ ಶಿಕ್ಷಣ ಕಾಲೇಜಿಗೆ ವರ್ಗವಾಗಿ ತತ್ವಶಾಸ್ತ್ರ ಮತ್ತು ಶಿಕ್ಷಣಶಾಸ್ತ್ರದ ಪ್ರಾಧ್ಯಾಪಕರಾಗಿ ಕಾರ್ಯ ನಿರ್ವಹಿಸಿ 1991ರಲ್ಲಿ ನಿವೃತ್ತರಾದರು.

ಕನ್ನಡ ಸಾಹಿತ್ಯ ಕ್ಷೇತ್ರದಲ್ಲಿ, ನಾಡಿನಲ್ಲಿ ಸಾಮಾಜಿಕ ಕಾದಂಬರಿಕಾರರೆಂದೇ ಪ್ರಸಿದ್ಧರಾಗಿರುವ ಡಾ. ಎಸ್. ಎಲ್. ಭೈರಪ್ಪನವರ ಹೆಚ್ಚಿನ ಆಸಕ್ತಿ ಕ್ಷೇತ್ರವೆಂದರೆ ಹಿಂದೂಸ್ತಾನಿ ಶಾಸ್ತ್ರೀಯ ಸಂಗೀತ. ಅವರ ‘ಮಂದ್ರ’ ಕಾದಂಬರಿಯಲ್ಲಿ ಸಂಗೀತದ ಕುರಿತಾದ ಆಸಕ್ತಿಗಳ ಸುದೀರ್ಘ ವಿಸ್ತಾರವನ್ನೇ ಕಾಣಬಹುದು. ಅವರು ‘ಗಂಗೂಬಾಯ್ ಹಾನಗಲ್’ ಎಂಬ ಗ್ರಂಥದ ಸಂಪಾದನೆಯನ್ನು ಮಾಡಿದ್ದಾರೆ ಎಂಬುದನ್ನು ಕೂಡಾ ಇಲ್ಲಿ ಸ್ಮರಿಸಬಹುದಾಗಿದೆ.

- Advertisement -

ಭೈರಪ್ಪನವರ ಕಾದಂಬರಿಗಳಲ್ಲಿ ಕಾಣುವ ಬದುಕಿನ ಪಾತ್ರಗಳು ಎಲ್ಲೆಲ್ಲೂ ನಮ್ಮ ಕಣ್ಣ ಮುಂದೆ ಕಾಣುತ್ತಿರುವ ವ್ಯಕ್ತಿಗಳ ಹಾಗೇ ಇರುತ್ತವೆ. ಇದು ಅವರ ಮಹಾಭಾರತವನ್ನು ಇಂದಿನ ಕಾಲಕ್ಕೆ ಹೊಂದಿಸಿ ನೋಡುವಂತಹ ‘ಪರ್ವ’ ಕಾದಂಬರಿಯಂತಹ ಪಾತ್ರಗಳಲ್ಲೂ ಕಾಣಬರುತ್ತವೆ. ಅವರ ಕಾದಂಬರಿಗಳ ಭಾಷೆಯಲ್ಲಿರುವ ಗ್ರಾಮೀಣ, ನಗರ ಮತ್ತು ಇತ್ತೀಚಿನ ಆಧುನಿಕತೆಯವರೆಗಿನ ವರಸೆಯ ಸೊಗಡುಗಳಂತೂ ನಮ್ಮನ್ನು ಅಪೂರ್ವ ರೀತಿಯಲ್ಲಿ ಹಿಡಿದಿಟ್ಟುಕೊಂಡುಕೊಂಡು ಬಿಡುತ್ತವೆ. ಅವರ ಪ್ರತಿಯೊಂದು ಕಾದಂಬರಿಯೂ ನಾವು ಅದನ್ನು ತೆರೆದಾಗಿನಿಂದ ಅದನ್ನು ಓದು ಮುಗಿಸುವ ತನಕ ಕೆಳಗಿರಿಸಲು ಬಿಡುವುದೇ ಇಲ್ಲ. ಅಂತಹ ಭಾಷೆಯ ಸೊಗಸು, ಪಾತ್ರ ವ್ಯವಸ್ಥೆ ಮತ್ತು ಅಪೂರ್ವ ಕಥಾನಕಗುಣ ಅವರ ಬರಹಗಳಲ್ಲಿದೆ. ಇಷ್ಟು ತೀವ್ರವಾಗಿ ಓದುಗರನ್ನು ಆವರಿಸುವ ಕಥಾ ಶೈಲಿ, ಓದುಗರನ್ನು ಯಾವುದೋ ಭಾವುಕತೆ, ತಲ್ಲೀನತೆ, ಚಿಂತನೆಗೆ ಒಡ್ಡುವ ಮನೋಜ್ಞತೆ, ಸಾಹಿತ್ಯ ಲೋಕದಲ್ಲಿಯೇ ಅಪರೂಪವಾಗಿದ್ದು, ಈ ವಿಷಯಗಳಲ್ಲಿ ಭೈರಪ್ಪನವರಿಗೆ ಭೈರಪ್ಪನವರೇ ಸಾಟಿ.

ಅಧ್ಯಾತ್ಮ, ಮನಃ ಶಾಸ್ತ್ರ, ಮತ್ತು ತರ್ಕ ಶಾಸ್ತ್ರ, ಸಮಾಜ ಶಾಸ್ತ್ರ, ನ್ಯಾಯಮೀಮಾಂಸೆ, ಸೌಂದರ್ಯ ಮೀಮಾಂಸೆ, ಇತಿಹಾಸ, ವಿಜ್ಞಾನ, ರಾಜಕೀಯ ಘಟನೆಗಳು, ವೇದ ಪುರಾಣಗಳು ಇವು ನಮ್ಮ ಚಿಂತನೆಗಳಲ್ಲಿ ಹುಟ್ಟಿಸುವ ತಾದ್ಯಾತ್ಮಗಳು ಮತ್ತು ಅವುಗಳು ವಿವಿಧ ಮನಸ್ಸುಗಳ ನಡುವೆ ತರುವ ಸಂಘರ್ಷಗಳನ್ನು ಓದುಗನ ಅನುಭಾವಕ್ಕೆ ತರುವ ಎಸ್. ಎಲ್. ಭೈರಪ್ಪನವರ ಮೋಡಿಗೆ ಸಿಗದ ಓದುಗ ಮನಸ್ಸುಗಳೇ ಇಲ್ಲವೆನ್ನಬೇಕು. ಕನ್ನಡವಲ್ಲದೆ ಗುಜರಾತಿ, ಹಿಂದಿ, ಸಂಸ್ಕೃತ, ಮಲಯಾಳ, ತಮಿಳು, ತೆಲುಗು, ಇಂಗ್ಲೀಷ್ ಭಾಷೆಗಳಿಗೂ ತರ್ಜುಮೆಗೊಂಡ ಅವರ ಕೃತಿಗಳ ಸಾಲು ಸಾಲುಗಳು ಅವು ಹೇಗೆ ಭಾಷೆಯ ಗಡಿಯನ್ನೂ ದಾಟಬಲ್ಲವು ಎಂಬುದಕ್ಕೆ ಸಾಕ್ಷಿ.

ಭಾರತದಂತಹ ಹಲವು ಧರ್ಮಗಳ ಪರಂಪರೆಯ, ಮಾರ್ಕ್ಸ್, ಕಮ್ಯುನಿಸ್ಟ್, ಸಮಾಜವಾದ, ಪ್ರಜಾಪ್ರಭುತ್ವ, ಬಂಡವಾಳಶಾಹಿ, ಬಹು ರಾಜಕೀಯ ವ್ಯವಸ್ಥೆ, ಅಂತರರಾಷ್ಟ್ರೀಯ ಮಾರುಕಟ್ಟೆ ಪರಿಣಾಮ ಇತ್ಯಾದಿ ಹತ್ತು ಹಲವು ಚಿಂತನೆಗಳ ಬದುಕಿನ ರೀತಿ ಮತ್ತು ವೈರುಧ್ಯಗಳ ಸಮಾಜದಲ್ಲಿ, ಭೈರಪ್ಪನವರು ಎಲ್ಲ ರೀತಿಯ ವಿಚಾರಗಳನ್ನು ಮುಕ್ತತೆ, ಸತ್ಯದ ಆಧಾರತೆ ಮತ್ತು ನಿಷ್ಠುರತೆಗಳೊಂದಿಗೆ ಮಂಡಿಸುವುದರೊಂದಿಗೆ ಹಲವು ರೀತಿಯ ಟೀಕಾಕಾರರಿಗೆ ಯಾವುದೇ ರೀತಿಯ ಸೊಪ್ಪು ಹಾಕದೆ ಸ್ಪಷ್ಟ ಉತ್ತರಗಳನ್ನೂ ನೀಡುತ್ತಾ ಸಾಗಿದ್ದಾರೆ.

ಭೈರಪ್ಪನವರ ಸಾಹಿತ್ಯಸೃಷ್ಟಿಯ ಕಾರ್ಯ ಅವರು ಹೈಸ್ಕೂಲಿನಲ್ಲಿದ್ದಾಗ ಹಾಸ್ಟೆಲ್ ಮ್ಯಾಗಜೈನಿಗೆ ಕೆಲವು ಕಥೆಗಳನ್ನು ಬರೆಯುವುದರಿಂದ ಪ್ರಾರಂಭವಾಯಿತು. ಇಂಟರ್ ಮೀಡಿಯಟ್ ಓದುತ್ತಿದ್ದಾಗಲೇ ‘ಗತಜನ್ಮ’ ಎಂಬ ನೀಳ್ಗತೆ, ‘ಭೀಮಕಾಯ’ ಮತ್ತು ‘ಬೆಳಕು ಮೂಡಿತು’ ಎಂಬ ಎರಡು ಕಾದಂಬರಿಗಳನ್ನು ಅವರು ಬರೆದಿದ್ದರು. ಈ ಕೃತಿಗಳು ಅಪಕ್ವವಾಗಿದ್ದವು, ಅಲ್ಲದೆ ಅನಕೃ ಅವರ ಪ್ರಭಾವವಿತ್ತು ಎಂದು ಸ್ವತಃ ಅಭಿಪ್ರಾಯ ಪಡುವ ಭೈರಪ್ಪನವರು, ಅವರ ಬರಹದ ಲೋಕವನ್ನು 1961ರಲ್ಲಿ ಪ್ರಕಟವಾದ ‘ಧರ್ಮಶ್ರೀ’ಯಿಂದ ಪರಿಗಣಿಸುತ್ತಾರೆ.

ಬದುಕು ಮತ್ತು ಅನುಭವಗಳ ಸಂಕೀರ್ಣತೆಯನ್ನು ಗ್ರಹಿಸಲು ಮತ್ತು ಸೃಜನಾತ್ಮಕವಾಗಿ ಅಭಿವ್ಯಕ್ತಪಡಿಸಲು ಸಾಹಿತ್ಯ ಪ್ರಕಾರಗಳಲ್ಲೆಲ್ಲಾ ಕಾದಂಬರಿ ಉಪಯುಕ್ತ ಮಾಧ್ಯಮ ಎಂದು ಭಾವಿಸುವ ಭೈರಪ್ಪನವರು ‘ಧರ್ಮಶ್ರೀ’ಯಿಂದ ಮೊದಲ್ಗೊಂಡು ‘ಉತ್ತರಕಾಂಡ’ದವರೆಗೆ ಇಪ್ಪತ್ಮೂರು ಮಹತ್ವಪೂರ್ಣ ಕಾದಂಬರಿಗಳನ್ನು ಬರೆದಿದ್ದಾರೆ. ‘ಧರ್ಮಶ್ರೀ’, ‘ದೂರ ಸರಿದರು’, ‘ಮತದಾನ’, ವಂಶವೃಕ್ಷ’, ‘ಜಲಪಾತ’, ‘ನಾಯಿ ನೆರಳು’, ‘ತಬ್ಬಲಿಯು ನೀನಾದೆ ಮಗನೆ’, ‘ಗೃಹಭಂಗ’, ‘ನಿರಾಕರಣ’, ‘ಗ್ರಹಣ’, ‘ದಾಟು’, ‘ಅನ್ವೇಷಣ’, ‘ಪರ್ವ’, ‘ನೆಲೆ’, ‘ಸಾಕ್ಷಿ’, ‘ಅಂಚು’, ‘ತಂತು’, ‘ಸಾರ್ಥ’, ‘ಮಂದ್ರ’, ‘ಆವರಣ’, ‘ಕವಲು’ , ‘ಯಾನ’, ‘ಉತ್ತರಕಾಂಡ’ ಇವು ಡಾ. ಎಸ್. ಎಲ್. ಭೈರಪ್ಪನವರ ಇದುವರೆಗಿನ ಪ್ರಕಟಿತ ಕಾದಂಬರಿಗಳು. ಭೈರಪ್ಪನವರ ಬಹುತೇಕ ಕೃತಿಗಳು ಇತರ ಭಾಷೆಗಳಿಗೆ ಅನುವಾದಗೊಂಡು ಎಲ್ಲೆಡೆ ಅಪಾರ ಮೆಚ್ಚುಗೆಗೆ ಪಾತ್ರವಾಗಿವೆ. ಮರಾಠಿಯಂತಹ ಹಲವು ಭಾಷಿಗರಂತೂ ಭೈರಪ್ಪನವರನ್ನು ತಮ್ಮ ಭಾಷೆಯ ಶ್ರೇಷ್ಠ ಕೃತಿಗಾರರಂತೆಯೇ ಅಭಿಮಾನಿಸುತ್ತಾರೆ.

ಭೈರಪ್ಪನವರ ಕಾದಂಬರಿಗಳಾದ ‘ವಂಶವೃಕ್ಷ’, ‘ತಬ್ಬಲಿಯು ನೀನಾದೆ ಮಗನೆ’, ‘ನಾಯಿನೆರಳು’, ‘ಮತದಾನ’ ಕೃತಿಗಳು ಚಲನಚಿತ್ರಗಳಾಗಿ ಸಹಾ ರಾಷ್ಟ್ರಮಟ್ಟದಲ್ಲಿ ಪ್ರಶಸ್ತಿಗಳಿಸಿ ಜನಪ್ರಿಯಗೊಂಡಿವೆ. ‘ಗೃಹಭಂಗ’ ದೂರದರ್ಶನದಲ್ಲಿ ಧಾರಾವಾಹಿಯಾಗಿ ಮೂಡಿಬಂದು ಎಲ್ಲಾ ಸಹೃದಯರ ಹೃದಯದಲ್ಲಿ ನೆಲೆಗಟ್ಟಿನಿಂತಿದೆ.

ಡಾ. ಎಸ್. ಎಲ್. ಭೈರಪ್ಪನವರ ಇತರ ಕನ್ನಡ ಗ್ರಂಥಗಳೆಂದರೆ ಸಾಹಿತ್ಯ ಮೀಮಾಂಸೆಗೆ ಸೇರಿದ ‘ಸಾಹಿತ್ಯ ಮತ್ತು ಪ್ರತೀಕ’, ‘ಕಥೆ ಮತ್ತು ಕಥಾವಸ್ತು’, ‘ನಾನೇಕೆ ಬರೆಯುತ್ತೇನೆ’ ಎಂಬ ಬೇರೆ ಬೇರೆ ಸಂದರ್ಭಗಳಲ್ಲಿ ಬರೆದ ಲೇಖನಗಳ ಸಂಗ್ರಹ; ಪ್ರೌಢ ಪ್ರಬಂಧವಾದ ಸೌಂದರ್ಯ ಮತ್ತು ಮೀಮಾಂಸೆಗೆ ಸಂಬಂಧಿಸಿದ ‘ಸತ್ಯ ಮತ್ತು ಸೌಂದರ್ಯ’ ಕೃತಿ ಮತ್ತು ಆತ್ಮವೃತ್ತಾಂತವಾದ ‘ಭಿತ್ತಿ’. ಬಹಳಷ್ಟು ಸಂಶೋಧನಾ ಲೇಖನಗಳನ್ನೂ ಭೈರಪ್ಪನವರು ಬರೆದಿರುವುದಲ್ಲದೆ ‘ವಿದ್ಯಾಭ್ಯಾಸದಲ್ಲಿ ಸಮಾನಾವಕಾಶ’, ‘ಭಾರತೀಯ ಶಿಕ್ಷಣದಲ್ಲಿ ಮೌಲ್ಯಗಳ ಸ್ಥಾನ ಮತ್ತು ವ್ಯಕ್ತಿತ್ವ’, ‘ಚಾರಿತ್ರಿಕ ವಿಕಾಸದಲ್ಲಿ ತತ್ವಶಾಸ್ತ್ರ’ ಎಂಬ ಗ್ರಂಥಗಳನ್ನೂ ರಚಿಸಿದ್ದಾರೆ. ಇತ್ತೀಚೆಗೆ ಕೆಲವು ಕಾಲ ಮೂಡಿಬಂದ ‘ಸಾಕ್ಷೀಭಾವ’ ಎಂಬ ಭೈರಪ್ಪನವರ ಅಂಕಣದಲ್ಲಿ ಮೂಡಿದ ನಮ್ಮ ಕಾಲದ ರಾಜಕೀಯ, ಆರ್ಥಿಕ, ಸಾಮಾಜಿಕ, ಚಾರಿತ್ರಿಕ ಚಿಂತನೆಗಳು ವಿವಿಧ ರೀತಿಯಲ್ಲಿ ಓದುಗರ ಗಮನ ಸೆಳೆದು ಜನಪ್ರಿಯಗೊಂಡಿವೆ.

ಇತ್ತೀಚಿನ ವರ್ಷದಲ್ಲಿ ಸಂದಿರುವ ಪದ್ಮಶ್ರೀ ಪ್ರಶಸ್ತಿ, ಸಾಹಿತ್ಯಕ ಹಿರಿಯ ಪ್ರಶಸ್ತಿ ‘ಸರಸ್ವತಿ ಸಂಮಾನ್’ ಸೇರಿದಂತೆ ಹಲವು ರೀತಿಯ ಮನ್ನಣೆಗಳು, ಪ್ರಶಸ್ತಿಗಳು ಭೈರಪ್ಪನವರಿಗೆ ಬಂದಿವೆ. ಜ್ಞಾನಪೀಠ ಅವರಿಗೆ ಇನ್ನೂ ಸಂದಿಲ್ಲ ಎಂಬ ಬಗ್ಗೆ ಅವರ ಸಾಹಿತ್ಯ ಪ್ರೇಮಿಗಳಿಗೆ ಅಸಹನೆಯಿದೆ. ಪ್ರಶಸ್ತಿಗಳು ಕೇವಲ ಒಂದೆರಡು ದಿನದ ಉತ್ಸವಗಳಿಗಿಂತ ಮೇಲೆ ಮುಟ್ಟಲಾರವು. ಆದರೆ ಓದುಗರ ಹೃದಯಾಂತರಾಳವನ್ನು ಇಷ್ಟು ಅದಮ್ಯವಾಗಿ ಆಕ್ರಮಿಸಿಕೊಂಡಿರುವ ಮತ್ತೊಬ್ಬ ಬರಹಗಾರರಿಲ್ಲ ಎಂಬುದು ಮಾತ್ರ ಸಾರ್ವಕಾಲಿಕ ಸತ್ಯ.

ಭೈರಪ್ಪನವರು ತಮ್ಮ ಪ್ರತಿಯೊಂದೂ ಕಾದಂಬರಿ ಬರೆಯುವುದಕ್ಕೆ ಮಾಡುವ ಪೂರ್ವ ಭಾವಿ ತಯಾರಿ, ನಡೆಸುವ ಅಧ್ಯಯನ, ವ್ಯಾಪಕ ಸಂಚಾರ, ಕಂಡುಕೊಳ್ಳುವ ಅನುಭಾವ ಇದರ ಬಗ್ಗೆಯೇ ಹಲವಾರು ಗ್ರಂಥಗಳು ಮೂಡಬಹುದಾದಷ್ಟು ಸಾಹಿತ್ಯ ವಲಯದಲ್ಲಿ ವಿವಿಧ ಚಿಂತಕರ ಅಭಿಪ್ರಾಯಗಳು ಪ್ರಚಲಿತವಿದೆ.

ಭೈರಪ್ಪನವರ ಕಾದಂಬರಿಗಳನ್ನು ಅವಲೋಕಿಸಿದವರಿಗೆ, ಅವರು ಕನ್ನಡ ಕಾದಂಬರಿ ಲೋಕಕ್ಕೆ ವಿಶಿಷ್ಟ ಕಾಣಿಕೆಗಳನ್ನು ನೀಡಿ, ಕಾದಂಬರಿಯನ್ನು ಲಘು ಮನರಂಜನೆಯ ಮಟ್ಟದಿಂದ ಮಹಾಕಾವ್ಯದ ಮಟ್ಟಕ್ಕೆ ಕರೆದೊಯ್ದ ಬೆರಳೆಣಿಕೆಯಷ್ಟು ಮಹಾನ್ ಲೇಖಕರಲ್ಲಿ ಒಬ್ಬರಾಗಿದ್ದಾರೆ ಎನಿಸದಿರದು. ಕನ್ನಡದಲ್ಲಿ ಚದುರಂಗ, ಕುವೆಂಪು, ಗೋಕಾಕ್, ರಾವ್ ಬಹದ್ದೂರ್, ಅನಕೃ, ಕಟ್ಟೀಮನಿ, ದೇವುಡು, ಶ್ರೀರಂಗ, ಮೊದಲಾದವರು ತಮ್ಮ ಬಾಳಿನ ಒಂದೆರಡು ಉತ್ಕಟ ಕ್ಷಣಗಳ ಪರಿಣಾಮವಾಗಿ ಒಂದು ಅಥವಾ ಎರಡು ಮೇರು ಕೃತಿಗಳನ್ನು ಕನ್ನಡ ಕಾದಂಬರಿ ಲೋಕಕ್ಕೆ ನೀಡಿದ್ದರೆ, ಕಾರಂತರಂತೆ ಭೈರಪ್ಪನವರು ಹಲವಾರು ಬೃಹತ್ತಾದ, ಮಹತ್ತಾದ ಅತಿ ಶ್ರೇಷ್ಠ ಗದ್ಯ ಮಹಾಕಾವ್ಯಗಳನ್ನು ಅರ್ಥಾತ್ ಕಾದಂಬರಿಗಳನ್ನು ನೀಡಿದವರು.

ಪ್ರಾದೇಶಿಕ ಭಾಷೆಯನ್ನು ವೈವಿಧ್ಯಮಯವನ್ನಾಗಿ, ಗ್ರಾಂಥಿಕ ಭಾಷೆಯನ್ನು ಚಿಂತನದ ಎಲ್ಲ ಹಂತಗಳನ್ನೂ ನಿರೂಪಿಸುವ ಹಾಗೆ ಬಳಸಿರುವುದು ಭೈರಪ್ಪನವರ ಕೃತಿಗಳ ವೈಶಿಷ್ಟ್ಯವಾಗಿವೆ. ಶ್ರೇಷ್ಠ ತತ್ವಶಾಸ್ತ್ರ ಗ್ರಂಥಗಳು ಕಾದಂಬರಿ ರೂಪದಲ್ಲಿ ಕಾಣಿಸಿಕೊಂಡಿವೆಯೇನೋ ಎಂಬಷ್ಟರಮಟ್ಟಿಗೆ ವೈಚಾರಿಕತೆ ದಟ್ಟವಾಗಿ, ವಿಪುಲವಾಗಿ ಭೈರಪ್ಪನವರ ಬರಹಗಳಲ್ಲಿ ಚಿತ್ರಿತವಾಗಿವೆ.

ಈ ಮಹಾನ್ ಕಾದಂಬರಿಕಾರರು ಕಳೆದ ಐದೂವರೆ ದಶಕಗಳಲ್ಲಿ ಕನ್ನಡದ ಓದುಗರ ಹೃದಯ ಸಿಂಹಾಸನವನ್ನು ಆಳುತ್ತಿರುವ ಪರಿ ಅನನ್ಯವಾದದ್ದು. ಈ ಬರಹಗಳು ಮುಂದೂ ನಿರಂತರವಾಗಿ ಮೂಡುತ್ತಿರಲಿ. ಭೈರಪ್ಪನವರು ನಮ್ಮೊಂದಿಗೆ ಸುಧೀರ್ಘ ಕಾಲ, ನಿತ್ಯ ಸಂತಸದಲ್ಲಿ ರಾರಾಜಿಸುತ್ತಿರಲಿ. ಈ ಮಹಾನ್ ಬರವಣಿಗೆಯ ಸರಸ್ವತೀ ಶಕ್ತಿಗೆ ಶಿರಬಾಗಿ ನಮನಗಳು. ಈ ಪುಣ್ಯ ನಮ್ಮೊಂದಿಗೆ ಬಹುಕಾಲದವರೆಗೆ ನೆಲೆ ನಿಂತಿರಲಿ ಎಂದು ಆಶಿಸುತ್ತಾ ಡಾ. ಎಸ್. ಎಲ್. ಭೈರಪ್ಪನವರಿಗೆ ಹುಟ್ಟು ಹಬ್ಬದ ಹಾರ್ದಿಕ ಶುಭ ಹಾರೈಕೆಗಳನ್ನು ಸಲ್ಲಿಸುತ್ತಿದ್ದೇವೆ.

ವಾಟ್ಸಪ್ ಕೃಪೆ

- Advertisement -
- Advertisement -

Latest News

ಕಲ್ಲು ಮಠದ ಶ್ರೀ ಪ್ರಭು ಸ್ವಾಮಿಗಳ ಲಿಂಗ ದೇವರ ಲೀಲಾ ವಿಳಾಸ ಚಾರಿತ್ರ

ಅಂತಾರಾಷ್ಟ್ರೀಯ ಬಸವ ತಿಳಿವಳಿಕೆ ಮತ್ತು ಸಂಶೋಧನಾ ಕೇಂದ್ರ ಪುಣೆ ವಚನ ಅಧ್ಯಯನ ವೇದಿಕೆ ಮತ್ತು ಅಕ್ಕನ ಅರಿವು ಬಳಗದ ಸಂಯುಕ್ತ ಆಶ್ರಯದಲ್ಲಿ ಕಲ್ಲು ಮಠದ ಶ್ರೀ...
- Advertisement -

More Articles Like This

- Advertisement -
close
error: Content is protected !!
Join WhatsApp Group