ಮೂಡಲಗಿ- ಗ್ರಾಮೀಣ ಭಾಗದ ಶಾಲೆಗಳಿಗೆ ದೃಶ್ಯ ಮಾಧ್ಯಮಗಳನ್ನು ಬಳಕೆ ಮಾಡಿ ಅಳವಡಿಸಿದ ಪಾಠಗಳಿಗೆ ಅನುಕೂಲತೆಗಳನ್ನು ಕಲ್ಪಿಸುವಲ್ಲಿ ಸ್ಮಾರ್ಟ್ ಕ್ಲಾಸ್ ಮಹತ್ತರ ಪಾತ್ರ ವಹಿಸುತ್ತವೆ ಎಂದು ಶಾಸಕ ಹಾಗೂ ಜಿಲ್ಲಾ ಹಾಲು ಉತ್ಪಾದಕರ ಸಂಘಗಳ ಒಕ್ಕೂಟದ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ಅವರು ತಿಳಿಸಿದರು.
ಇತ್ತೀಚೆಗೆ ತಾಲೂಕಿನ ಸಂಗನಕೇರಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಅಳವಡಿಸಿದ ಸ್ಮಾರ್ಟ್ ಕ್ಲಾಸ್ ಕೊಠಡಿಯನ್ನು ಉದ್ಘಾಟಿಸಿ ಮಾತನಾಡಿದ ಅವರು, ಇಂದಿನ ತಂತ್ರಜ್ಞಾನದ ಯುಗದಲ್ಲಿ ಸ್ಮಾರ್ಟ್ ಕ್ಲಾಸ್ ವಿದ್ಯಾರ್ಥಿಗಳಿಗೆ ಬಹು ಉಪಯುಕ್ತವಾಗಿದೆ ಎಂದು ಹೇಳಿದರು.
ಶಿಕ್ಷಣದಲ್ಲಿ ಗುಣಮಟ್ಟದ ಮತ್ತು ಪರಿಣಾಮಕಾರಿಯಾದ ಶಿಕ್ಷಣವನ್ನು ನೀಡಲು ಡಿಜಿಟಲ್ ತರಗತಿಗಳು ಮಾಧ್ಯಮಿಕ ಹಂತದ ವಿದ್ಯಾರ್ಥಿಗಳಿಗೆ ಪೂರಕವಾಗಿದೆ. ಶಿಕ್ಷಕರು ವಿದ್ಯಾರ್ಥಿಗಳೊಂದಿಗೆ ಸಂವಹನ ನಡೆಸಲು ಹೆಚ್ಚಿನ ಸಮಯ ಬೇಕಾಗುತ್ತದೆ. ಡಿಜಿಟಲ್ ತರಗತಿಗಳಿಂದ ಅರಿವಿನ ಕಲಿಕೆಯ ಪ್ರಕ್ರಿಯೆಯನ್ನು ಪಡೆಯುವದರಿಂದ ಅದನ್ನು ಅರ್ಥ ಮಾಡಿಕೊಳ್ಳಲು ಸುಗಮವಾಗುತ್ತದೆ. ಕಲಿಕೆಗೆ ಉತ್ತಮ ವಾತಾವರಣ ಕಲ್ಪಿಸಿಕೊಡುವಲ್ಲಿಯೂ ಇಂತಹ ಶಿಕ್ಷಣ ಉಪಯುಕ್ತವಾಗಿದೆ ಎಂದು ಹೇಳಿದರು.
ವಿದ್ಯಾರ್ಥಿಗಳಿಗೆ ತಂತ್ರಜ್ಞಾನದ ಮಹತ್ವ ಸಾರಲು ರಮೇಶ ಫೌಂಡೇಷನ್ ವತಿಯಿಂದ 3.50 ಲಕ್ಷ ರೂ ವೆಚ್ಚದಲ್ಲಿ 7 ನೇ ತರಗತಿ ವಿದ್ಯಾರ್ಥಿಗಳಿಗೆ ಸ್ಮಾರ್ಟ್ ಕ್ಲಾಸ್ ಕೊಠಡಿಯನ್ನು ಶಾಸಕ ಬಾಲಚಂದ್ರ ಜಾರಕಿಹೊಳಿ ಅವರು ಉದ್ಘಾಟಿಸಿದರು.
ಎರಡು ಶಾಲೆಗಳ ಉನ್ನತೀಕರಣ. ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಸಂಗನಕೇರಿ ಮತ್ತು ಅಡಿಬಟ್ಟಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗಳನ್ನು 7 ನೇ ತರಗತಿಯಿಂದ 8 ನೇ ತರಗತಿವರೆಗೆ ಉನ್ನತೀಕರಣಗೊಳಿಸಲಾಗಿದೆ ಎಂದು ಬಾಲಚಂದ್ರ ಜಾರಕಿಹೊಳಿಯವರು ಹೇಳಿದರು.
ಈ ಸಂದರ್ಭದಲ್ಲಿ ಮೂಡಲಗಿ ಬಿಇಓ ಎ.ಸಿ.ಮನ್ನಿಕೇರಿ, ಮುಖಂಡರಾದ ಅರ್ಜುನ ಚಿಕ್ಕೋಡಿ, ಬಸವರಾಜ ಮಾಳೇದವರ, ವಿಠ್ಠಲ ಸಿಂಗೋಟಿ, ಕುಮಾರ ಮಾಳೇದವರ, ಮಲಗೌಡ ಮಾಳ್ಯಾಗೋಳ, ಎಸ್ಡಿಎಂಸಿ ಅಧ್ಯಕ್ಷ ಸಾತಪ್ಪ ಚಿಕ್ಕೋಡಿ, ರಫೀಕ ಮುಲ್ಲಾ, ಸುರೇಶ ಕಪರಟ್ಟಿ, ಹಣಮಂತ ಚಿಪ್ಪಲಕಟ್ಟಿ, ಇಬ್ರಾಹಿಂ ಮುಲ್ಲಾ, ಅರಭಾವಿ ಸಿಆರ್ಪಿ ಪೌಲ ಕಳ್ಳಿಮನಿ, ಶಾಲೆಯ ಪ್ರಧಾನ ಶಿಕ್ಷಕ ಹಣಮಂತಗೋಳ, ಪ.ಪಂ. ಸದಸ್ಯರು, ಎಸ್ಡಿಎಂಸಿ ಸದಸ್ಯರು, ಪ್ರಮುಖರು
ಸೇರಿದಂತೆ ಅನೇಕರು ಉಪಸ್ಥಿತರಿದ್ದರು.