spot_img
spot_img

Swami Vivekananda Full Information in Kannada- ಬೆಳಗಾವಿಯಲ್ಲಿ ಸ್ವಾಮಿ ವಿವೇಕಾನಂದರು

Must Read

- Advertisement -

ಇಂದು ಸ್ವಾಮಿ ವಿವೇಕಾನಂದರ ಜಯಂತಿ.ಈ ದಿನ ವಿವೇಕಾನಂದರ ಬದುಕಿನ ಘಟ್ಟಗಳನ್ನು ಪರಿಚಯಿಸುವ ಅವರ ಆದರ್ಶಗಳ ಕುರಿತು ಅನೇಕ ಕಾರ್ಯಕ್ರಮಗಳು ಜರುಗುತ್ತವೆ.

ವಿವೇಕಾನಂದರು ಕರ್ನಾಟಕದಲ್ಲಿಯೂ ಕೂಡ ಹಲವು ಸ್ಥಳಗಳಿಗೆ ಭೇಟಿ ನೀಡಿರುವರು.ಅವರ ಭೇಟಿಯ ಸ್ಥಳಗಳಲ್ಲಿ ಬೆಳಗಾವಿಯೂ ಒಂದು.ಅವರು ಬೆಳಗಾವಿಗೆ ಬಂದಾಗಿನ ವಿವರವನ್ನು ಒಂದು ಕ್ಷಣ ಹಿನ್ನೋಟದೊಂದಿಗೆ ಸ್ಮರಿಸೋಣ

ಉತ್ತರ ಕರ್ನಾಟಕದ ಗಂಡು ಮೆಟ್ಟಿನ ನೆಲವೆಂದೇ ಖ್ಯಾತಿ ಪಡೆದ ಬೆಳಗಾವಿಯು ಕೂಡ ಸ್ವಾಮಿ ವಿವೇಕಾನಂದರ ಪಾದಸ್ಪರ್ಶದಿಂದ ಪಾವನ ಭೂಮಿ,.ಬೆಳಗಾವಿಯ ಬಸ್ ನಿಲ್ದಾಣದಿಂದ ಸಮೀಪದ ಸ್ಥಳ ಕೋಟೆ. ಈ ಕೋಟೆ ಆವರಣದಲ್ಲಿ ರಾಮಕೃಷ್ಣ ಆಶ್ರಮದ ಕಟ್ಟಡವಿದೆ. ಬೆಳಗಾವಿಗೆ ಬಂದರೆ ತಾವಿದನ್ನು ನೋಡಲೇಬೇಕು.ಅಂಥ ಪಾವನ ಸ್ಥಳದಲ್ಲಿ ಒಂದು ಕೊಠಡಿಯಿದೆ ಇದುವೇ ಸ್ವಾಮಿ ವಿವೇಕಾನಂದರು ಬೆಳಗಾವಿಯಲ್ಲಿ ಬಂದಿದ್ದಾಗ ಇದ್ದ ಸ್ಥಳ.

- Advertisement -

ಸ್ವಾಮೀಜಿಯವರು ಗುಜರಾತ್,ರಾಜಸ್ಥಾನ,ಮಹಾರಾಷ್ಟ್ರ ಪ್ರದೇಶಗಳ ಭೇಟಿಯ ನಂತರ ೧೮೯೨ರ ಅಕ್ಟೋಬರ್ ೧೫ ರಂದು ಕರ್ನಾಟಕದ ಬೆಳಗಾವಿಗೆ ಪಾದಾರ್ಪಣೆ ಮಾಡಿದರು ಎಂಬ ವಿವರಗಳನ್ನು ಸ್ವಾಮಿ ಪುರುಷೋತ್ತಮಾನಂದರು ತಮ್ಮ ಕೃತಿ “ಕನ್ನಡ ನೆಲದಲ್ಲಿ ಸ್ವಾಮಿ ವಿವೇಕಾನಂದರು” ಎಂಬ ಪುಸ್ತಕದಲ್ಲಿ ಸವಿವರವಾಗಿ ತಿಳಿಸಿರುವರು. ವಿವೇಕ ಹಂಸ ಪತ್ರಿಕೆಯ ದಶಮಾನೋತ್ಸವ ವಿಶೇಷ ಸಂಚಿಕೆಯಲ್ಲಿ ಕೂಡ ವಿಶೇಷ ಬರಹಗಳು ಪ್ರಕಟಗೊಂಡಿದ್ದು ಬೆಳಗಾವಿಯಲ್ಲಿ ವಿವೇಕಾನಂದರು ತಂಗಿದ್ದ ದಿನಗಳ ಕುರಿತ ಸವಿವರ ಮಾಹಿತಿಯಿದೆ.ಅದರಲ್ಲಿ ಕೆಲವನ್ನು ಇಲ್ಲಿ ಉಲ್ಲೇಖಿಸಿರುವೆ.

ಸ್ವಾಮಿ ವಿವೇಕಾನಂದರು ಶ್ರೀಯುತ ಭಾಟೆ ಮತ್ತು ಶ್ರೀಯುತ ಹರಿಪದಮಿತ್ರರ ಮನೆಯಲ್ಲಿ ತಂಗುವ ಜೊತೆಗೆ ಅನೇಕ ಭಕ್ತರು ಅವರನ್ನು ಕಂಡು ಅವರ ವಿಚಾರಧಾರೆಗಳ ಸವಿಯನ್ನು ಪಡೆಯುವ ಮೂಲಕ ಬೆಳಗಾವಿಯ ನೆಲ ಕೂಡ ಅವರ ಪಾದ ಸ್ಪರ್ಶದಿಂದ ಪಾವನವಾಯಿತು. ಅದರಲ್ಲೂ ಹರಿಪದಮಿತ್ರರು ಸ್ವಾಮೀಜಿಯವರ ಜೊತೆಗೆ ನಡೆಸಿದ ಸಂವಾದ ನಿಜಕ್ಕೂ ಅದ್ಬುತ. ಅವರೊಬ್ಬ ಅರಣ್ಯ ಇಲಾಖೆಯಲ್ಲಿ ಸೇವೆ ಸಲ್ಲಿಸುತ್ತಿದ್ದ ಅಧಿಕಾರಿ. ಸ್ವಾಮೀಜಿಯವರ ಪ್ರಭಾವದಿಂದ ತಮ್ಮ ಪತ್ನಿ ಹಾಗೂ ತಾವು ಸ್ವಾಮೀಜಿಯವರಿಂದ ಮಂತ್ರದೀಕ್ಷೆ ಪಡೆದುಕೊಂಡಿದ್ದು ಶ್ಲಾಘನೀಯ.

- Advertisement -

ಹರಿಪದಬಾಬುವಿನ ಮನೆಯಲ್ಲಿ ದಿನವೂ ನಿರಂತರ ಚರ್ಚೆ,ಸಂಭಾಷಣೆ ಜರುಗುತ್ತಿದ್ದವು. ಒಂದು ದಿನ ಅವರು ಸ್ವಾಮೀಜಿಯವರನ್ನು “ನನ್ನ ನಂಬಿಕೆಯೇನೆಂದರೆ ಸತ್ಯವು(ದೇವರು)ಒಂದೇ,ಅದು ನಿರಪೇಕ್ಷವಾದದ್ದು ಎಂದು.ಆದರೆ ಆ ಸತ್ಯಕ್ಕೆ ದಾರಿಯೆಂದು ಹೇಳಲಾಗುವ ಹಲವಾರು ಧರ್ಮಗಳೆಲ್ಲವೂ ಏಕಕಾಲಕ್ಕೆ ನಿಜವಾಗಿರಲು ಹೇಗೆ ಸಾಧ್ಯ.?” ಎಂದು ಕೇಳಿದಾಗ. ಆಗ ಸ್ವಾಮೀಜಿಯವರು. “ನೋಡು,ಯಾವುದೇ ವಿಷಯದ ಬಗ್ಗೆ ನಮಗೆ ಈಗಿರುವ ಜ್ಞಾನವಾಗಲಿ, ಮುಂದೆ ನಾವು ತಿಳಿಯಬಹುದಾದದ್ದೇ ಆಗಲಿ-ಇವೆಲ್ಲ ಸಾಪೇಕ್ಷ ಸತ್ಯಗಳು. ನಮ್ಮ ಈ ಶಾಂತ ಬುದ್ದಿಶಕ್ತಿಗೆ ಅನಂತ ಸತ್ಯವನ್ನು ಗ್ರಹಿಸಲು ಸಾದ್ಯವಿಲ್ಲ.

ಆದ್ದರಿಂದ ಸತ್ಯವು ನಿರಪೇಕ್ಷವಾದದ್ದೇ ಆದರೂ ಬೇರೆಬೇರೆ ಮನಸ್ಸುಗಳಿಗೆ ಹಾಗೂ ಬುದ್ದಿಶಕ್ತಿಗಳಿಗೆ ಅದು ವಿಭಿನ್ನವಾಗಿ ತೋರುತ್ತದೆ. ಸತ್ಯದ ಈ ಎಲ್ಲ ಮುಖಗಳೂ ನಿರಪೇಕ್ಷ ಸತ್ಯದ ಪರಮಸತ್ಯದ ವರ್ಗಕ್ಕೇ ಸೇರಿದವುಗಳು. ಅದು ಹೇಗೆಂದರೆ ಒಬ್ಬನೇ ಸೂರ್ಯನ ಛಾಯಾಚಿತ್ರಗಳನ್ನು ಬೇರೆ ಬೇರೆ ಸಮಯಗಳಲ್ಲಿ,ಬೇರೆ ಬೇರೆ ದಿಕ್ಕುಗಳಲ್ಲಿ ತೆಗೆದರೆ, ಪ್ರತಿಯೊಂದು ಚಿತ್ರದಲ್ಲೂ ಆತ ವಿಭಿನ್ನವಾಗಿ ಕಾಣುವುದಿಲ್ಲವೇ.? ಹೀಗೆ, ಈ ಬೇರೆ ಬೇರೆ ತುಲನಾತ್ಮಕ ಸತ್ಯಗಳ ಆ ಪರಮಸತ್ಯದೊಂದಿಗೆ ಏಕ ರೀತಿಯ ಸಂಬಂಧವುಳ್ಳವುಗಳಾಗಿವೆ.

ಆದ್ದರಿಂದ ಪ್ರತಿಯೊಂದು ಧರ್ಮವೂ ಸತ್ಯ, ಏಕೆಂದರೆ, ಅದು ಒಂದೇ ಪರಮಧರ್ಮದ ಒಂದೊಂದು ರೂಪ”. ಇಂಥಹ ಅನೇಕ ಚರ್ಚೆಗಳಲ್ಲಿ ತೊಡಗಿದ ಹರಿಪದಬಾಬು ವಿವೇಕಾನಂದರು ಅವರ ಮನೆಯಲ್ಲಿ ಇದ್ದ ಎರಡು ದಿನಗಳಲ್ಲಿ ಅವರಿಂದ ಮಂತ್ರದೀಕ್ಷೆ ಪಡೆಯುವ ಮೂಲಕ ತನ್ನಲ್ಲಿದ್ದ ಮೌಡ್ಯಗಳನ್ನು ಪರಿಹರಿಸಿಕೊಂಡಿದ್ದ.

ಇಂಥಹ ಈ ಕಟ್ಟಡ ಹಾಗೂ ಭಾಟೆಯವರ ನಿವಾಸಗಳನ್ನು ರಾಮಕೃಷ್ಣ ಆಶ್ರಮ ಇಂದಿಗೂ ಉಳಿಸಿದ್ದು ಬೆಳಗಾವಿಗೆ ಬರುವವರು ತಪ್ಪದೇ ಈ ಸ್ಥಳಗಳನ್ನು ವೀಕ್ಷಿಸಲೇಬೇಕು. ಬೆಳಗಾವಿಯಲ್ಲಿ ವಿವೇಕಾನಂದರು ತಂಗಿದ್ದ ಆ ಕಟ್ಟಡ ಇಂದು ಪೂರ್ಣ ದುರಸ್ತಿಗೊಂಡು ಪವಿತ್ರಸ್ಮಾರಕವಾಗಿ ಕಂಗೊಳಿಸುತ್ತಿದೆ. ರಾಮಕೃಷ್ಣ ಆಶ್ರಮ ಸಾಧುಗಳ ನಿವಾಸ, ಗ್ರಂಥಾಲಯ, ಪುಸ್ತಕಮಳಿಗೆ, ಪ್ರಾರ್ಥನಾಮಂದಿರ, ಪೂಜಾಗೃಹಗಳಿಂದ ಹಾಗೂ ಸಭಾಮಂಟಪಗಳಿಂದ ಕಂಗೊಳಿಸುತ್ತಿದ್ದು.

ರಾಮಕೃಷ್ಣ ಮಹಾಸಂಘದ ಹಿರಿಯ ಸಂನ್ಯಾಸಿಗಳಾದ ಸ್ವಾಮಿ ಪುರುಷೋತ್ತಮಾನಂದಜಿ ಅವರ ಅದ್ಯಕ್ಷತೆಯಲ್ಲಿ ರಾಮಕೃಷ್ಣ ಆಶ್ರಮ ಅನೇಕ ಉತ್ತಮ ಯೋಜನೆಗಳನ್ನು ಹಮ್ಮಿಕೊಂಡಿದ್ದು ೨೦೦೪ ರ ಜನೇವರಿ ೨೧ ರಿಂದ ೨೫ ರವರೆಗೆ ಬೆಳಗಾವಿಯ ರಾಮಕೃಷ್ಣ ಮಿಷನ್ ಆಶ್ರಮದಲ್ಲಿ ಶ್ರೀ ರಾಮಕೃಷ್ಣ ದೇವಸ್ಥಾನ ಉದ್ಘಾಟನಾ ಸಮಾರಂಭ ಜರುಗಿದ್ದು ಅಂದಿನಿಂದ ಇಂದಿನವರೆಗೂ ವೀಕ್ಷಕರಿಗೂ ಅದು ಲಬ್ಯವಾಗಿದ್ದು ಈಗ ಇತಿಹಾಸ. ಸದಾ ಒಂದಿಲ್ಲೊಂದು ಸಾಂಸ್ಕೃತಿಕ ಚಟುವಟಿಕೆಗಳ ಮೂಲಕ ಈ ಆಶ್ರಮ ಉತ್ತಮ ಕಾರ‍್ಯಗಳನ್ನು ಜರುಗಿಸುತ್ತಿರುವುದು ಶ್ಲಾಘನೀಯ.

ವಿವೇಕಾನಂದರ ಆಶಯದಂತೆ ರಾಮಕೃಷ್ಣ ಮಠಗಳು ಇಂದು ವಿವೇಕರ ಸಂದೇಶ, ಧರ್ಮ ಪ್ರಚಾರ ಮಾಡುವುದಲ್ಲದೇ ಸಮಾ ವಿವೇಕಾನಂದರ ಆಶಯದಂತೆ ಮಠವು ಸಮಾಜದಲ್ಲಿನ ಬಡವರಿಗೆ ಅನ್ನದಾನ, ಬಟ್ಟೆ ಕಂಬಳಿ ವಿತರಿಸುತ್ತ ನೆರವಾಗುವ ಜೊತೆಗೆ ಉಚಿತ ಆರೋಗ್ಯ,ಕಣ್ಣು ತಪಾಸಣೆ, ಮತ್ತು ಚಿಕಿತ್ಸೆ,ಬಡ ವಿದ್ಯಾರ್ಥಿಗಳ ಶಿಕ್ಷಣಕ್ಕೆ ನೆರವಾಗಲು ಶಿಷ್ಯವೇತನ, ಪುಸ್ತಕ, ವಿತರಿಸಲಾಗುತ್ತಿದ್ದು, ಕಂಪ್ಯೂಟರ್ ತರಭೇತಿ ಕೇಂದ್ರ, ಗ್ರಂಥಾಲಯವನ್ನು ಒಳಗೊಂಡಿದೆ.

ವಿವೇಕಾನಂದರ ಸಂದೇಶದ ಬಗ್ಗೆ ಜಾಗೃತಿಯನ್ನುಂಟು ಮಾಡಲು ಶಾಲೆ-ಕಾಲೇಜುಗಳಲ್ಲಿ ಉಪನ್ಯಾಸವನ್ನು ಈ ಸಂಸ್ಥೆಯವರು ಏರ್ಪಡಿಸುತ್ತಿದ್ದು ವ್ಯಕ್ತಿತ್ವ ವಿಕಸನ ಶಿಬಿರ. ಯೋಗಾಸನ.ಯುವಕ ಸಂಘ.ಬಾಲಕ ಸಂಘಗಳನ್ನು ರಚಿಸುವ ಮೂಲಕ ಸ್ವಾಮಿ ವಿವೇಕಾನಂದರ ಪುಸ್ತಕ ಪ್ರದರ್ಶನ, ಕಡಿಮೆ ದರದಲ್ಲಿ ಪುಸ್ತಕಗಳನ್ನು ನೀಡುವ ಮೂಲಕ ವಿವೇಕವಾಣಿಯ ಸಂದೇಶದ ಸವಿಯನ್ನು ಉಣಬಡಿಸುವ ಕಾರ್ಯ ಮಾಡುತ್ತಿರುವುದು ಶ್ಲಾಘನೀಯ.

ಶ್ರೀ ರಾಮಕೃಷ್ಣದೇವಸ್ಥಾನ ಅಭೂತಪೂರ್ವವಾಗಿದೆ.೧೮೯೭ ರಲ್ಲಿ ಸ್ವಾಮಿ ವಿವೇಕಾನಂದರು ಕೊಲ್ಕತ್ತಾದಲ್ಲಿ ತಮ್ಮ ಗುರುವಿನ ಹೆಸರಿನಲ್ಲಿ “ರಾಮಕೃಷ್ಣ ಮಿಷನ್” ಎಂಬ ಸಂಸ್ಥೆಯನ್ನು ಪ್ರಾರಂಭಿಸಿದ್ದು ಇಂದು ದೇಶದೆಲ್ಲೆಡೆ ಇಂಥಹ ಸಂಸ್ಥೆಗಳು ಇದ್ದು.ಬೆಳಗಾವಿಯ ಮಂದಿರದಲ್ಲಿ ಸ್ವಾಮಿ ವಿವೇಕಾನಂದರು,ಶ್ರೀ ರಾಮಕೃಷ್ಣ ಪರಮಹಂಸರು, ಶ್ರೀ ಮಾತೆ ಶಾರದಾದೇವಿಯವರ ಭಾವಚಿತ್ರಗಳು ಕಂಗೊಳಿಸುತ್ತಿವೆ.

ಅಷ್ಟೇ ಅಲ್ಲ ದ್ಯಾನಸ್ಥರಾಗಲು ಹೇಳಿ ಮಾಡಿಸಿದ ಈ ಪ್ರಾರ್ಥನಾ ಮಂದಿರ ವಿಶೇಷವಾಗಿದೆ. ಬೆಳಗಾವಿ ಬರುವವರು ತಪ್ಪದೇ ಕೋಟೆಯಲ್ಲಿರುವ ಶ್ರೀ ರಾಮಕೃಷ್ಣ ಆಶ್ರಮಕ್ಕೆ ಭೇಟಿ ನೀಡಿ ವಿವೇಕಾನಂದರ ಸ್ಮರಣೆಯನ್ನು ನೆನಪಿಸುವ ಈ ತಾಣವನ್ನೊಮ್ಮೆ ವೀಕ್ಷಿಸಿ ಪುನೀತರಾಗಿ.

ಯುವ ಜನತೆಗೆ ವಿವೇಕಾನಂದರ ಆದರ್ಶಗಳು

ಸ್ವಾಮಿ ವಿವೇಕಾನಂದರು (ನರೇಂದನಾಥ ದತ್ತ)(ಜನೇವರಿ ೧೨ ೧೮೬೩ ಜನನ) ಭಾರತದ ಅತ್ಯಂತ ಪ್ರಸಿದ್ದ ಹಾಗೂ ಪ್ರಭಾವಶಾಲೀ ತತ್ವಜ್ಞಾನಿಗಳು. ನಿರ್ಭಯತೆ, ಆಶಾವಾದ, ಮತ್ತು ಸಾಮಾಜಿಕ ಸಮಸ್ಯೆಗಳ ಬಗೆಗಿನ ವಿಶಾಲ ದೃಷ್ಟಿಯ ಸಂಕೇತವಾಗಿ ಇಡೀ ವಿಶ್ವಕ್ಕೆ ಮಾದರಿಯಾದ ಸನ್ಯಾಸಿ.ಸ್ವಾಮಿ ವಿವೇಕಾನಂದರ ಜನ್ಮದಿನವಾದ ಜನೇವರಿ ೧೨ “ರಾಷ್ಟ್ರೀಯ ಯುವ ದಿನ”ವೆಂದು ೧೯೮೪ ರಿಂದ ಕೇಂದ್ರ ಸರಕಾರ ಸೂಚಿಸಿದ್ದು ಅಂದಿನಿಂದ ಇದನ್ನು ಆಚರಿಸಲಾಗುತ್ತಿದೆ. ಪ್ರತಿಯೊಬ್ಬರೂ ವಿವೇಕಾನಂದರ ಬದುಕಿನ ಆದರ್ಶಗಳ ಕುರಿತು ಈ ಸಂದರ್ಭದಲ್ಲಿ ಅರ್ಥೈಸಿಕೊಳ್ಳಬೇಕು.

ವಿವೇಕಾನಂದರ ಪೂರ್ವಾಶ್ರಮದ ಹೆಸರು ನರೇಂದ್ರನಾಥ ದತ್ತ.ತಂದೆ ವಿಶ್ವನಾಥ ದತ್ತ ತಾಯಿ ಭುವನೇಶ್ವರಿ ದೇವಿ. ೧೮೬೩ ಜನೇವರಿ ೧೨ ರಂದು ಕಲಕತ್ತೆಯಲ್ಲಿ ಜನನ.ಶ್ರೀ ರಾಮಕೃಷ್ಣ ಪರಮಹಂಸರ ಶಿಷ್ಯರಾದ ಮೇಲೆ ವಿವೇಕಾನಂದ ಹೆಸರು ಪಡೆದರು.ಇವರು ಕಲಕತ್ತೆಯ ಸ್ಕಾಟಿಷ್ ಚರ್ಚ್ ಕಾಲೇಜಿನಲ್ಲಿ ತತ್ವಶಾಸ್ತ್ರ ಅದ್ಯಯನ ಮಾಡಿದರು.

ವಿವೇಕಾನಂದರು ಪ್ರಪಂಚದಾದ್ಯಂತ ಪರ್ಯಟನೆ ಮಾಡಿ ಅಲ್ಲಿನ ಭಕ್ತರನ್ನುದ್ದೇಶಿಸಿ ಮಾಡಿದ ಭಾಷಣಗಳು ನಾಲ್ಕು ಪುಸ್ತಕಗಳಲ್ಲಿ ಪ್ರಕಟಗೊಂಡಿದ್ದು. ಅವುಗಳಲ್ಲಿ ಅವರು ಯುವಜನತೆಗೆ ನೀಡಿದ ಆದರ್ಶಗಳನ್ನು ನಾವಿಂದು ನೆನೆಯುವ ಜೊತೆಗೆ ಪ್ರತಿದಿನ ಅವುಗಳನ್ನು ಅಳವಡಿಸಿಕೊಂಡಿದ್ದಾದರೆ ಬದುಕು ಸಾರ್ಥಕ.

ಯೌವನವು ಒಂದು ಪರಮಾದ್ಬುತ ಸ್ಥಿತಿ.ಈ ಯೌವನ ಎಂಬ ಪದದಲ್ಲಿ ಏನಿದೆ. ಏನಿಲ್ಲ.? ಶಕ್ತಿ, ಬಲ, ತೇಜಸ್ಸು, ಹುಮ್ಮಸ್ಸು, ಸಾಹಸ, ರಭಸ, ಭರವಸೆ ಎಲ್ಲವೂ ಇದೆ.ಆದರೆ ಒಂದನ್ನು ಬಿಟ್ಟು, ಅದು ತಾಳ್ಮೆ, ವಿವೇಕ, ಅಂತಹ ಎಲ್ಲ ಯುವಶಕ್ತಿಯ ಎಲ್ಲ ಗುಣಗಳ ಜೊತೆಗೆ ವಿವೇಕ ಹೊಂದಿ ಆನಂದಭರಿತರಾಗಿ ಯೋಗಿಯಾಗಿ ಬಾಳಿದವರು ವಿವೇಕಾನಂದರು.

ಅಂದು ಅವರು ನುಡಿದ ಮಾತುಗಳು ಇಂದಿಗೂ ಪ್ರಸ್ತುತ. ಹಾಗಾದರೆ ಕೆಲವು ಅವರ ನುಡಿಗಳನ್ನು ಮತ್ತೊಮ್ಮೆ ನೆನೆಯೋಣವಲ್ಲವೇ.?

  1. ನಮ್ಮ ಪ್ರಥಮ ಕರ್ತವ್ಯವೇ ನಮ್ಮಲ್ಲಿ ಆತ್ಮನಿಂದನೆ ಇರಕೂಡದು.ನಾವು ಬದುಕಿನಲ್ಲಿ ಮುಂದುವರಿಯಬೇಕಾದರೆ ಮೊದಲು ನಮ್ಮಲ್ಲಿ ಆತ್ಮಶೃದ್ದೆ ಇರಬೇಕು.
  2. ನಾವು ಯಾವುದಕ್ಕೆ ಯೋಗ್ಯರೋ ನಮಗೆ ಆ ಸ್ಥಳ ದೊರಕುತ್ತದೆ. ಪ್ರತಿಯೊಂದು ಗುಂಡಿಗೂ ಒಂದು ಗುರಿಯಿದ್ದಂತೆ ಪ್ರತಿಯೊಬ್ಬ ಮನುಷ್ಯನಿಗೂ ಒಂದು ಗುರಿ ಅವಶ್ಯಕ. ಯಾವುದೇ ಗುರಿ ತಲುಪಬೇಕಾದರೆ ನಮ್ಮ ಹಿಂದೆ ಗುರುವಿನ ಮಾರ್ಗದರ್ಶನವಿರಬೇಕು.ಮುಂದೆ ಗುರಿಯ ಕಡೆಗೆ ಸಾಗುವ ಪ್ರಯತ್ನವಿರಬೇಕು. ಆ ಗುರಿ ಒಳ್ಳೆಯದಾಗಿರಬೇಕು ಹೊರತು ಮತ್ತೊಬ್ಬರಿಗೆ ಕೇಡನ್ನು ಬಗೆಯುವಂತಾಗಿರಬಾರದು.
  3. ನಾವು ಏನನ್ನು ಮಾಡುವುದಿಲ್ಲ. ಯಾರಾದರೂ ಮಾಡಿದರೆ ಅವರಲ್ಲಿ ತಪ್ಪು ಕಂಡು ಹಿಡಿಯುತ್ತೇವೆ. ಇದು ನಮ್ಮ ಯುವಜನಾಂಗದ ಅಶಾಂತಿಗೆ ಕಾರಣ. ಅದನ್ನು ಬಿಡಿ ಎಲ್ಲರಿಗೂ ಅವಕಾಶವಿರಲಿ ಎಂಬ ಮನೋಭಾವ ತಾಳಿರಿ.
  4. ಯುವಕರೇ ಓರ್ವ ಹಗಲು ರಾತ್ರಿ,”ಅಯ್ಯೋ ನಾನು ದು:ಖಿ, ದೀನ. ಯಾವುದಕ್ಕೂ ಪ್ರಯೋಜನವಿಲ್ಲ” ಎಂದು ಭಾವಿಸುತ್ತಿದ್ದರೆ ಅವನು ನಿಷ್ಪ್ರಯೋಜಕನಾಗುತ್ತಾನೆ. ನಾವೇ ಎಲ್ಲವನ್ನೂ ಏನನ್ನು ಬೇಕಾದರೂ ಮಾಡಲುಸಿದ್ದ.ಏನನ್ನೂ ಬೇಕಾದರೂ ಸಾಧಿಸಿಯೇ ತೀರುವೆವು ಎಂಬ ದೃಢ ವಿಶ್ವಾಸ ನಿಮ್ಮಲ್ಲಿ ಬೆಳೆಯಲಿ.
  5. ತಾಯಿಯನ್ನು ಪೂಜಿಸದ ಪಾಪಿ ಯಾವನೊಬ್ಬನೂ ಕೀರ್ತಿವಂತನಾಗಿಲ್ಲ ಭರತಖಂಡದಲ್ಲಿ ಪೂಜ್ಯತಮಳಾದ ಮಾತೆಗೇ ಅಗ್ರಸ್ಥಾನ ದೊರೆತಿದೆ. ಮಾತೆಯೇ ದೇವರು ಎಂಬ ತಿಳುವಳಿಕೆ ಹೊಂದಿರಿ.
  6. ನಮಗೆ ಬೇಕಾಗಿರುವುದು ನಿಯಮದಲ್ಲಿ ನಾವು ನಿಯಮಾತೀತರಾಗಬೇಕು, ನಾವು ನಿಯಮಾತೀತರು ಎಂಬುದರ ಮೇಲೆ ಮಾನವ ಕೋಟಿಯ ಇತಿಹಾಸವೆಲ್ಲ ನಿಂತಿದೆ.
  7. ವ್ಯಕ್ತಿಯಾಗಲಿ, ಜನಾಂಗವಾಗಲೀ, ಮತ್ತೊಬ್ಬರಿಂದ ಪ್ರತ್ಯೇಕವಾಗಿ ಬಹಳ ಕಾಲ ಬಾಳಲಾರದು.ಎಲ್ಲರೂ ಸುಖವಾಗಿರುವತನಕ ಯಾರೂ ಸುಖವಾಗಿರಲಾರರು. ಆದ್ದರಿಂದ ನಾವೆಲ್ಲ ಒಂದೇ ಎಂಬ ಐಕ್ಯಮಂತ್ರವನ್ನು ಹೇಳಿರಿ.
    ವಿಕಾಸವೇ ಜೀವನ, ಸಂಕೋಚವೇ ಮರಣ. ಪ್ರೀತಿಯೇ ಜೀವನ,ದ್ವೇಷವೇ ಮರಣ” ಎಂಬುದನ್ನು ಅರಿಯಿರಿ.
  8. ಏಳಿರಿ, ಕಾರ್ಯೋನ್ಮುಖರಾಗಿರಿ ಈ ಬದುಕಾದರೂ ಎಷ್ಟು ದಿನ,ಮಾನವರಾಗಿ ಹುಟ್ಟಿದ ಮೇಲೆ ಎನನ್ನಾದರೂ ಸಾಧಿಸಿ.
  9. ಜೀವನವೊಂದು ಗರಡಿಮನೆ,ಇಲ್ಲಿ ಬಲಿಷ್ಠರಾಗಲು ಬಂದಿದ್ದೇವೆ.
  10. ಮನದೊಳಗಿನ ಪುಸ್ತಕ ತೆರೆಯದ ಹೊರತು ಎಷ್ಟು ಪುಸ್ತಕ ಓದಿದರೂ ವ್ಯರ್ಥವೇ.
  11. ನಿಮ್ಮ ಯೋಜನೆಯಂತೆಯೇ ನೀವು,ನೀವೊಬ್ಬ ಋಷಿ ಎಂದು ಭಾವಿಸಿದರೆ ಋಷಿಯೇ ಆಗಿರುತ್ತೀರಿ.
  12. ಎಲ್ಲ ಕಾರ್ಯಕ್ಷೇತ್ರಗಳಲ್ಲೂ ನೀವು ದಕ್ಷತೆಯುಳ್ಳವರಾಗಿರಬೇಕು. ಮಣಗಟ್ಟಲೆ ಸಿದ್ದಾಂತಗಳ ಗೊಂದಲದಿಂದಾಗಿ ರಾಷ್ಟ್ರಕ್ಕೆ ರಾಷ್ಟ್ರವೇ ಇಂದು ಹಾಳುಬಡಿದುಕೊಂಡಿದೆ. ನಾವು ಮಾಡುವ ಕೃತ್ಯಗಳಲ್ಲಿ ಸಂಭವಿಸಬಹುದಾದ ದೋಷ-ತಪ್ಪು ಎಂಬುವುಗಳೇ ನಮಗೆ ಪಾಠ ಕಲಿಸುವಂಥವು.
  13. ನಾಯಕನಲ್ಲಿ ಚಾರಿತ್ರ್ಯವಿಲ್ಲದಿದ್ದರೆ ಅನುಯಾಯಿಗಳಲ್ಲಿ ಸ್ವಾಮಿನಿಷ್ಠೆ ಇರುವುದಿಲ್ಲ.
  14. ನನಗೆ ಬೇಕು ವಿದ್ಯುತ್ತಿನ ಇಚ್ಚಾಶಕ್ತಿಗಳು ಮತ್ತು ನಡುಗುವುದನ್ನೇ ಅರಿಯದ ಗಂಡೆದೆಗಳು!
  15. ನೀನು ನಿನಗಿಷ್ಟವಾದ ಯಾವ ವಸ್ತುವಿನ ಮೇಲಾದರೂ ಧ್ಯಾನ ಮಾಡಿಕೋ ನಾನು ಮಾತ್ರ ಸಿಂಹದ ಹೃದಯದ ಮೇಲೆ ಧ್ಯಾನ ಮಾಡುವವನು. ಅದರಿಂದ ನನಗೆ ಶಕ್ತಿ ಬರುತ್ತದೆ
  16. ಪರಿಶುದ್ದರೂ ನಿಸ್ವಾರ್ಥಿಗಳೂ ಆದ ಕೆಲವೇ ಕೆಲವು ಸ್ತ್ರೀಪುರುಷರನ್ನು ನನಗೆ ಒದಗಿಸಿ; ಇಡೀ ಜಗತ್ತನ್ನೇ ಅಲುಗಾಡಿಸಿ ಬಿಡುತ್ತೇನೆ ನಾನು!

ಇವು ವೀರಸನ್ಯಾಸಿ ವಿವೇಕಾನಂದರ ಧೀರ ನುಡಿಗಳು. ಇವರು ಹಾರ್ವಡ್ ವಿಶ್ವವಿದ್ಯಾಲಯದಲ್ಲಿ ಪೌರ್ವಾತ್ಯ ತತ್ವಜ್ಞಾನದ ಗೌರವ ಪ್ರಾದ್ಯಾಪಕರಾಗಿ ಆಯ್ಕಯಾದ ಮೊದಲ ಏಷ್ಯಾಖಂಡದ ವ್ಯಕ್ತಿ.ಸ್ವಾಮಿ ವಿವೇಕಾನಂದರ ಜೀವನ ಸಂದೇಶಗಳನ್ನು ಆಳವಾಗಿ ಅದ್ಯಯನ ಮಾಡುವದರ ಜೊತೆಗೆ ಅವರ ಆದರ್ಶವನ್ನು ಜೀವನದಲ್ಲಿ ಅಳವಡಿಸಿಕೊಂಡಿದ್ದಾದರೆ ಭಾರತದ ಭವಿಷ್ಯ ಉಜ್ವಲವಾಗುವುದರಲ್ಲಿ ಸಂದೇಹವೇ ಇಲ್ಲ.

ರಾಷ್ಟ್ರಕವಿ ಕುವೆಂಪುರವರು ಬರೆದ” ಸ್ವಾಮಿ ವಿವೇಕಾನಂದ” ಕೃತಿಯನ್ನು ತಪ್ಪದೇ ಓದಿ, ಅವರ ನುಡಿಗಳಲ್ಲಿ ನಮ್ಮ ಜೀವನಕ್ಕೆ ಅವಶ್ಯಕವಾಗಿ ಬೇಕಾಗುವ ವ್ಯಾಪಾರ, ಬೇಸಾಯ, ಮಾರಾಟ ಸಂಸ್ಕೃತಿ ಮೊದಲಾದವುಗಳ ಜೊತೆಗೆ ಮೂಡನಂಬಿಕೆಗಳನ್ನು ಅಳೆಯುವ ತತ್ವಗಳಿವೆ.

ಅಷ್ಟೇ ಅಲ್ಲ ಅವರು ಅಂದು ಹೇಳಿದ ವಿಚಾರ ಧಾರೆ “ಭಾವೀ ಭಾರತದ ಹಿರಿಮೆ ಗರಿಮೆ ಸಾದಿಸುವುದರ ರಹಸ್ಯವಿರುವುದು ಸಂಘಟನೆಯಲ್ಲಿ, ಶಕ್ತಿ ಸಂಚಯನದಲ್ಲಿ, ಇಚ್ಛಾಶಕ್ತಿಯ ಹೊಂದಾಣಿಕೆಯಲ್ಲಿ ಜಗಳಗಳನ್ನೆಲ್ಲ ನಿಲ್ಲಿಸಬೇಕು, ಎಂಬುದು ಇಂದಿಗೂ ಪ್ರಸ್ತುತ.

ವಿವೇಕವಾಣಿಯಾದ “ಓ ಧೀರನೇ ನಿನ್ನೆಲ್ಲ ಶಕ್ತಿಸಾಮರ್ಥ್ಯಗಳನ್ನೂ ಒಗ್ಗೂಡಿಸಿಕೊಂಡು ಕಗ್ಗತ್ತಲೆಯಂಥ ಪರಿಸ್ಥಿತಿಗಳಲ್ಲೂ ಎದೆಗೆಡದೆ ಮುನ್ನಡೆ “ಎಂಬುದನ್ನೂ ನಾವೆಲ್ಲರೂ ಮರೆಯದೇ ಪಾಲಿಸುತ್ತ ಬದುಕಿದ್ದಾದರೆ ಯುವಜನಾಂಗ ಬದುಕಿನಲ್ಲಿ ಉತ್ತಮ ಮಾರ್ಗದಲ್ಲಿ ಮುನ್ನಡೆಯುವದರಲ್ಲಿ ಸಂದೇಹವಿಲ್ಲ.ಇವು ಕೆಲವು ಅವರ ನುಡಿಮುತ್ತುಗಳು.

ವಿವೇಕಾನಂದರ ಜನ್ಮದಿನ ಯುವಶಕ್ತಿ ದಿನವಾಗಿ ಆಚರಿಸುವ ನಾವುಗಳು ಅವರ ಬದುಕಿನ ಆದರ್ಶ ಅಳವಡಿಸಿಕೊಳ್ಳುವುದು ಅನುಕರಣೀಯವಾದುದು.


ವೈ.ಬಿ.ಕಡಕೋಳ(ಶಿಕ್ಷಕರು)
ಮಾರುತಿ ಬಡಾವಣೆ,ಶಿಂದೋಗಿ ಕ್ರಾಸ್,ಮುನವಳ್ಳಿ

- Advertisement -

1 COMMENT

Comments are closed.

- Advertisement -

Latest News

ಉಚಿತ ಕಣ್ಣು ತಪಾಸನೆ ಹಾಗೂ ಶಸ್ತ್ರಚಿಕಿತ್ಸೆ ಶಿಬಿರ

ಸಿಂದಗಿ; ಪೂಜ್ಯ ಶ್ರೀ ಚೆನ್ನವೀರಸ್ವಾಮೀಜಿ ಪ್ರತಿಷ್ಠಾನ, ಸಿಂದಗಿ, ಜಿಲ್ಲಾ ಅಂಧತ್ವ ನಿವಾರಣಾ ಸಂಸ್ಥೆ, ವಿಜಯಪುರ ಹಾಗೂ ಅನುಗ್ರಹ ವಿಜನ್ ಫೌಂಡೇಶನ್ ಟ್ರಸ್ಟ್, ವಿಜಯಪುರ, ಜಿ.ಪಿ. ಪೋರವಾಲ...
- Advertisement -

More Articles Like This

- Advertisement -
close
error: Content is protected !!
Join WhatsApp Group