spot_img
spot_img

ಟಿ. ನರಸೀಪುರ ಗುಂಜಾ ನರಸಿಂಹಸ್ವಾಮಿ ದೇಗುಲ ದರ್ಶನ, ತೆಪ್ಪ ವಿಹಾರ

Must Read

- Advertisement -

ನಾವು ಕುಶಾಲನಗರದಿಂದ ಹೊರಟಾಗ ಬೆಳಗಿನ ಜಾವ ಐದಾಗಿತ್ತು. ಆರಕ್ಕೆಲ್ಲಾ ನಾವು ಹುಣಸೂರು ಬಳಿಗೆ ಸಾಗಿ ಅಲ್ಲಿ ಕಾಫಿ ಟಿ ಕುಡಿದು ಟಿ.ನರಸೀಪುರಕ್ಕೆ ಎಂಟು ಗಂಟೆಗೆ ತಲುಪಿದೆವು. ಸೋಮನಾಥಪುರದಿಂದ ಸೋಸಲೆ ಮಾರ್ಗವಾಗಿ ಕಾವೇರಿ ಹರಿದಂತೆ ಕಾವೇರಿ ಕಪಿಲಾ ನದಿಗಳ ಸಂಗಮದ ಬಳಿ ಬಲದಂಡೆಯ ಮೇಲಿರುವ ತಿರುಮಕೊಡಲು ನರಸೀಪುರ ಹಲವು ದೇಗುಲಗಳ ತ್ರಿವೇಣಿ ಸಂಗಮ ಕ್ಷೇತ್ರ.  ಇಲ್ಲಿ ಕಾವೇರಿಯೊಂದಿಗೆ ಕಪಿಲಾ ಮತ್ತು ಅಂತರ್ವಾಹಿನಿಯಾಗಿ ಸ್ಫಟಿಕ ಸರೋವರ  ಸೇರುತ್ತದೆ. ಬ್ರಹ್ಮ ವಿಷ್ಣು ಮಹೇಶ್ವರರ ಮೂರು ಕಿರೀಟಗಳು ಇಲ್ಲಿ ಕೂಡಿರುವುದರಿಂದ ತ್ರಿಮಕುಟ ಕ್ಷೇತ್ರ ಎಂಬ ಹೆಸರಿದೆ. ಇಲ್ಲಿ ಕಾವೇರಿ ವಿಶಾಲವಾಗಿ ಹರಿಯುತ್ತದೆ. ಕಪಿಲಾ ನದಿ ತೀರದಲ್ಲಿ ಗುಂಜಾ ನರಸಿಂಹಸ್ವಾಮಿ ದೇವಾಲಯವಿದೆ. ಬಾಗಿಲು ತೆರೆಯುವುದು ಒಂಬತ್ತರ ನಂತರ ಎಂದು ತಿಳಿಯಿತು. ಒಂದು ಕೆಎಸ್‍ಆರ್‍ಟಿಸಿ ಬಸ್ ಬುಕ್ ಮಾಡಿ ಐವತ್ತು ಜನ ಪ್ರವಾಸದಲ್ಲಿದ್ದೆವು. ಮೂರು ತೆಪ್ಪಗಳಲ್ಲಿ ಮೂವತ್ತು ಮಂದಿ ತ್ರಿವೇಣಿ ಸಂಗಮದಲ್ಲಿ ತೆಪ್ಪ ವಿಹಾರ ನಡೆಸಿದವು. ಅಲ್ಲಿಯೇ ದೇವಸ್ಥಾನದ ಸನಿಹವೇ ಹೊರಭಾಗದಲ್ಲಿ ಊಟ ತಿಂಡಿ ತಿನ್ನಲು   ಊಟದ ಹಾಲ್ ಇತ್ತಾಗಿ ಬಸ್ಸಿನಲ್ಲಿ ರೆಡಿ ಮಾಡಿಕೊಂಡು ತಂದಿದ್ದ ಪಲಾವ್  ತಿಂದು ಮುಗಿಸುವ ಹೊತ್ತಿಗೆ ದೇವಸ್ಥಾನದ ಬಾಗಿಲು ತೆರೆಯಿತು.

ಗುಂಜಾ ನರಸಿಂಹಸ್ವಾಮಿ ದೇವಾಲಯವು ವಿಜಯನಗರ ಕಾಲದ್ದಾಗಿ ದ್ರಾವಿಡ ಮತ್ತು ಹೊಯ್ಸಳ ವಾಸ್ತುಶಿಲ್ಪದ ಸಂಯೋಜನೆಯೊಂದಿಗೆ ಕೃಷ್ಣದೇವರಾಯನ ಕಾಲದ ಶಾಸನಗಳನ್ನು ಹೊಂದಿದೆ. ಗರ್ಭಗೃಹ, ಮಂಟಪ, ಪ್ರಾಕಾರ, ಗೋಪುರ ಮಹಾದ್ವಾರಗಳನ್ನೊಳಗೊಂಡಿದೆ. ದೇವಾಲಯದ ಪ್ರಾಕಾರದೊಳಗೆ ವರದರಾಜ, ರಾಮ, ಕೃಷ್ಣ ಮೊದಲಾದ ಮೂರ್ತಿಗಳ ಚಿಕ್ಕ ಚಿಕ್ಕ ಗುಡಿಗಳಿವೆ. ಗೋಡೆಯಲ್ಲಿ ಹಿರಣ್ಯ ಕಶಿಪು ಸಂಹಾರ, ಯೋಗನರಸಿಂಹ ಮೊದಲಾದ ನರಸಿಂಹ ದೇವರ 9 ವಿವಿಧ ರೂಪಗಳನ್ನು ಬಿಡಿಸಲಾಗಿದೆ. ಗರ್ಭಗೃಹದಲ್ಲಿರುವ ನರಸಿಂಹನ ಚಿತ್ರವು ಗುಂಜಾ ಮರದ ಬೀಜದೊಂದಿಗೆ ಕೊಂಬೆಯೊಂದಿಗೆ ತೂಗುವ ತಕ್ಕಡಿಯನ್ನು ಹೊಂದಿದೆ. ಇದರಿಂದಾಗಿ ಇದನ್ನು ಗುಂಜಾ ನರಸಿಂಹಸ್ವಾಮಿ ಎಂದು ಕರೆಯಲಾಗುತ್ತದೆ. ಬಲಗೈಯ ಹೆಬ್ಬರಳು ಹಾಗೂ ತೋರು ಬೆರಳುಗಳ ನಡುವೆ ಗುಂಜಾ ಸಸ್ಯದ ಕಾಂಡವೊಂದನ್ನು ಬಿಡಿಸಲಾಗಿದೆ. ಇದು ಬೀಜದ ಗುಲಗಂಜಿಯ ಅಳತೆಯಿಂದ ಕಾಶಿ ಯಾತ್ರಾ ಕೇಂದ್ರಕ್ಕೆ ಹೋಲಿಸಿ ಒಂದು ಗುಲಗುಂಜಿ ತೂಕ ಹೆಚ್ಚು ಎನ್ನುತ್ತಾರೆ. ಗಂಗೆ ಯಮುನಾ ಮತ್ತು ಸರಸ್ವತಿ ಸಂಗಮವಾಗಿರುವ ಪ್ರಯಾಗ ವಾರಣಾಸಿಯಲ್ಲಿದೆ. ಇಲ್ಲಿಗೆ ಕಳೆದ ವರ್ಷ ಡಿಸೆಂಬರ್‍ನಲ್ಲಿ ಹೋಗಿ ಮಿಂದು ಬಂದಿದ್ದೆವು. ಉತ್ತರ ಭಾರತದಲ್ಲಿ ಕಾಶಿ ಪವಿತ್ರವೆಂದು ಪರಿಗಣಿಸಲಾಗಿದೆ. ಟಿ.ನರಸೀಪುರವನ್ನು ದಕ್ಷಿಣ ಕಾಶಿ ಎಂದು ಕರೆಯಲಾಗಿದೆ. ಮತ್ತು ನಾಗರಿ ಲಿಪಿಯಲ್ಲಿನ ಬೃಹತ್ ದಾಖಲೆಗಳಿಗೆ ಹೆಸರುವಾಸಿಯಾಗಿದೆ. ಮೈಸೂರು ಅರಸರ ಕಾಲದಲ್ಲಿ ವಿಸ್ತಾರಗೊಂಡ ಈ ದೇವಾಲಯದ ಮಹಾದ್ವಾರದ ಬಳಿಯ ಮೂರ್ತಿ ಗೋಪುರವನ್ನು ಮೂಗೂರು ಅರಸರು ಕಟ್ಟಿಸಿದರೆಂದೂ ಹೇಳುತ್ತಾರೆ. ನಾವು ದೇವಾಲಯದ ಗರ್ಭಗುಡಿ ಪ್ರವೇಶಿಸುವ ಮೊದಲು ಹಲ್ಲಿ ಸ್ಫರ್ಶ ಮಾಡಿದೆವು. ಇದು ಪ್ರವೇಶಧ್ವಾರದ ಬಳಿ ಛಾವಣಿ ಕಲ್ಲಿನಲ್ಲಿದ್ದು ಮೇಲೆ ಹತ್ತಲು ಚಿಕ್ಕ ಮೆಟ್ಟಿಲಿದ್ದು ಇದನ್ನು ಹತ್ತಿ ಕೈಯಿಂದ ಸ್ಪರ್ಶ ಮಾಡಿ ಜನ ಹತ್ತಿಳಿಯುತ್ತಿದ್ದರು. ಅಂತೆಯೇ ನಾವು ಅನುಸರಿಸಿದೆವು.  ನಮ್ಮನ್ನು ವಿದೇಶಿ ಪ್ರವಾಸಿಗರು ಅನುಸರಿಸಿದ್ದು ಆಶ್ಚರ್ಯವೆನಿಸಿತು!

- Advertisement -

ಕಾವೇರಿ ನದಿಯ ಎಡಭಾಗದಲ್ಲಿ ಭಿಕ್ಷೇಶ್ವರಸ್ವಾಮಿ ದೇವಸ್ಥಾನವಿದೆ. ಈ ಭಾಗಕ್ಕೆ ನಾವು ತೆಪ್ಪದಲ್ಲಿ ಹೋದೆವು.  ದೇಗುಲಕ್ಕೆ ಹೋಗಲಿಲ್ಲ. ನದಿ ಮಧ್ಯದ ನಂದಿಗೆ ನಮಸ್ಕರಿಸಿ ತೆಪ್ಪ ಅಲ್ಲಿಂದ ವಾಪಸ್ಸಾಯಿತು. ಟಿ.ನರಸೀಪುರದಲ್ಲಿ ಅಗಸ್ತ್ಯೇಶ್ವರ, ಸೋಮೇಶ್ವರ, ಮಾರ್ಕೇಂಡೇಶ್ವರ, ಹನುಮಂತೇಶ್ವರ ಮತ್ತು ಗರ್ಗೇಶ್ವರ  ದೇವಾಲಯಗಳು ಇದ್ದು ಒಟ್ಟಾಗಿ ಪಂಚಲಿಂಗೇಶ್ವರ ಎಂದು ಕರೆಯುತ್ತಾರೆ.

ಕ್ರಿ.ಶ. 10-12ನೇ ಶತಮಾನದಲ್ಲಿ ಕಟ್ಟಿಸಿರಬಹುದಾದ ಅಗಸ್ತ್ಯೇಶ್ವರ ದೇವಾಲಯ ಪಟ್ಟಣದ ಮತ್ತೊಂದು ಪ್ರಸಿಧ್ದ ಪುರಾತನ ದೇವಾಲಯ. ಇದು ಗುಂಜಾ ನರಸಿಂಹ ದೇವಾಲಯಕ್ಕಿಂತ ಹಿಂದಿನದು. ಈ ದೇವಾಲಯದ ಸಂಕೀರ್ಣವು ಗಂಗ, ಚೋಳ, ಹೊಯ್ಸಳ ಮತ್ತು ವಿಜಯನಗರ ಕಾಲದ ಅನೇಕ ಸ್ಮಾರಕಗಳನ್ನು ಹೊಂದಿದೆ. ದೇವಾಲಯದ ಶಿವಲಿಂಗವನ್ನು ಅಗಸ್ತ್ಯ ಋಷಿಗಳು ಪ್ರತಿಷ್ಠೆ ಮಾಡಿದರೆಂಬುದು ಪ್ರತೀತಿ ಇದೆ. ಅಗಸ್ತ್ಯೇಶ್ವರ ಲಿಂಗದಲ್ಲಿ ಒಂದು ಉದ್ಧರಣೆಯಷ್ಟು ತೀರ್ಥ ಸದಾ ತುಂಬಿರುತ್ತದೆ. ಅರ್ಚಕರು ಆ ತೀರ್ಥವನ್ನು ತೆಗೆದು ಭಕ್ತರಿಗೆ ನೀಡಿದಂತೆ ಲಿಂಗದ ಗುಳಿಯಲ್ಲಿ ಇನ್ನೊಂದು ಉದ್ಧರಣೆ ತೀರ್ಥ ಕೂಡಲೇ ತುಂಬುತ್ತದೆ. ಈ ತೀರ್ಥವು ಗಂಗಾ ಕಾವೇರಿ ತೀರ್ಥ ಎಂದು ಪ್ರಸಿದ್ಧವಾಗಿದೆ. ದಂತಕಥೆಯಂತೆ ಒಮ್ಮೆ ಅಗಸ್ತ್ಯರು ಶಿವಪೂಜೆ ಮಾಡಬೇಕೆಂದು ಬಯಸಿ ಆಂಜನೇಯನಿಗೆ ನರ್ಮದೆಯಿಂದ ಒಂದು ಶಿವಲಿಂಗ ತರಲು ಹೇಳಿದರಂತೆ.! ನಿಗದಿತ ವೇಳೆಗೆ ಆಂಜನೇಯನಿಗೆ ಲಿಂಗ ತರಲು ಸಾಧ್ಯವಾಗದೆ ಅಗಸ್ತ್ಯರು ತಾವೇ ಮರಳಿನಿಂದ ಲಿಂಗವನ್ನು ರೂಪಿಸಿ ನಿಶ್ಚಯ ಮುಹೂರ್ತದಲ್ಲಿ ವಿಧಿಯುಕ್ತವಾಗಿ ಪ್ರತಿಷ್ಠೆ ಮಾಡುತ್ತಾರೆ. ಆನಂತರ ಆಂಜನೇಯನು ಲಿಂಗವನ್ನು ಹೊತ್ತು ತರುತ್ತಾನೆ. ಆದರೆ ಅಷ್ಟರೊಳಗೆ ಲಿಂಗ ಪ್ರತಿಷ್ಠೆ ಆಗಿದ್ದು ಇದರಿಂದ ಕೋಪಗೊಂಡು ಲಿಂಗವನ್ನು ಭಿನ್ನ ಮಾಡಿದನೆಂದು, ಭಿನ್ನವಾದ ಲಿಂಗದಲ್ಲಿ ತೀರ್ಥೋದ್ಭವವಾಯಿತೆಂದು ಪ್ರತೀತಿ ಇದೆ.  ಆಂಜನೇಯನು ತಂದ ಲಿಂಗವನ್ನು ಕಾವೇರಿ ತೀರದಲ್ಲಿ ಮತ್ತೆ ಪ್ರತಿಷ್ಠೆ ಮಾಡಿ ಅದನ್ನು ಅಗಸ್ತ್ಯರು ಹನುಮಂತೇಶ್ವರ ಎಂದು ಕರೆದರು. ಅಗಸ್ರ್ಯರು ಪ್ರತಿಷ್ಠೆ ಮಾಡಿದೆಂದು ಹೇಳಲಾದ ಅಗಸ್ತ್ಯೇಶ್ವರ ಗುಡಿಯಲ್ಲಿ ಸೋಮೇಶ್ವರ, ಮಾರ್ಕಂಡೇಶ್ವರ ಲಿಂಗಗಳಿವೆ. ಅಗಸ್ತ್ಯೇಶ್ವರ ಗುಡಿಯ ನವರಂಗದಲ್ಲಿ ಸೂರ್ಯ, ಸುಬ್ರಹ್ಮಣ್ಯ ವಿಗ್ರಹಗಳಿವೆ. ಗುಡಿಯ ಒಂದೆಡೆ ಪಾರ್ವತಿ ಗುಡಿ ಇದೆ. ನಾಲ್ಕು ಅಡಿ ಎತ್ತರದ ಈ ದೇವಿಗೆ ಪೂರ್ಣಯಂಗಳ ಕಾಮಾಕ್ಷಿ ಎಂದು ಕರೆಯುತ್ತಾರೆ. ಪ್ರಾಕಾರದೊಳಗೆ ಇರುವ 2 ಅಡಿ ಎತ್ತರದ ಅಶ್ವಥನಾರಾಯಣ ಮೂರ್ತಿಯು ನೃತ್ಯಭಂಗಿಯಲ್ಲಿದೆ. ನಂದಿ ವಿಷ್ಣು ಮೊದಲಾದ ಮೂರ್ತಿಗಳು ಪ್ರಾಕಾರದೊಳಗಿವೆ.

- Advertisement -

ಅಗಸ್ತ್ಯೇಶ್ವರ ದೇವಾಲಯದ ಬಳಿಯೇ ವ್ಯಾಸರಾಯ ಮಠದ ವ್ಯಾಸರಾಯರಿಂದ ಪ್ರತಿಷ್ಠಿತವಾದ ಶ್ರೀ ಮದಾಂಜನೇಯ ದೇವಾಲಯ, ಶ್ರೀ ಶೇಷಚಂದ್ರಿಕಾಚಾರ್ಯರ ಬೃಂದಾವನ ಇಲ್ಲಿದೆ. ಆನಂದೇಶ್ವರ, ಮೂಲಸ್ಥಾನೇಶ್ವರ, ಗ್ರಾಮ ದೇವತೆ ಶ್ರೀ ದುರ್ಗಾದೇವಿಯ ದೇವಾಲಯಗಳು ಇಲ್ಲಿವೆ. ಸೋಮಗಿರಿ, ಅರ್ಕಗಿರಿ, ಕನಕಗಿರಿ, ದೇವಗಿರಿ, ಮಹಾಬಲಗಿರಿ, ಇಂದುರಾಂಚಲ, ಮಲ್ಲಿಕಾಚಲ, ಕುಂದಶೈಲಗಳೆಂಬ ಅಷ್ಟದಳ ಪರ್ವತದಿಂದ ಆವೃತ್ತವಾಗಿರುವ ಟಿ.ನರಸೀಪುರದಲ್ಲಿ ಯುಗಾದಿ ಹಬ್ಬದಂದು ತಿರುಮಕೂಡಲು ಸಂಗಮ ಜಾತ್ರೆ  ಜರುಗುತ್ತದೆ.



-ಗೊರೂರು ಅನಂತರಾಜು, ಹಾಸನ. 

ಮೊ: 9449462879. 

ವಿಳಾಸ: ಹುಣಸಿನಕೆರೆ ಬಡಾವಣೆ, 29ನೇ ವಾರ್ಡ್,3ನೇ ಕ್ರಾಸ್, ಶ್ರೀ ಶನೇಶ್ವರ ದೇವಸ್ಥಾನ ರಸ್ತೆ, ಹಾಸನ.

- Advertisement -
- Advertisement -

Latest News

ಎಮ್ಮೆ ತಮ್ಮನ ಕಗ್ಗದ ತಾತ್ಪರ್ಯ

  ಉಪ್ಪಿಷ್ಟು ಹುಳಿಯಿಷ್ಟು ಸಿಹಿಯಿಷ್ಟು ಖಾರಿಷ್ಟು ಸೇರಿದರೆ ಬಹಳರುಚಿ ಮಾಡಿದಡಿಗೆ ಅಳುನಗುವು ಸುಖದುಃಖ ನೋವ್ನಲಿವು ಸೇರಿದರೆ ಅನುಭಾವದಡಿಗೆ ರುಚಿ - ಎಮ್ಮೆತಮ್ಮ ಶಬ್ಧಾರ್ಥ ಅನುಭಾವ = ಅತೀಂದ್ರಿಯವಾದ ಅನುಭವ ತಾತ್ಪರ್ಯ ನಾವು ಮಾಡುವ ಅಡಿಗೆಯಲ್ಲಿ ಷಡ್ರಸಗಳಾದ ಉಪ್ಪು...
- Advertisement -

More Articles Like This

- Advertisement -
close
error: Content is protected !!
Join WhatsApp Group