ಮೂಡಲಗಿ: ‘ಶಿಕ್ಷಕರು ಪಾಠೋಪಕರಣಗಳ ಬಳಕೆಯ ಜೊತೆಗೆ ಉತ್ತಮ ಬೋಧನಾ ಕೌಶಲ್ಯತೆಯನ್ನು ಹೊಂದುವುದು ಅವಶ್ಯವಿದೆ’ ಎಂದು ಗೋಕಾಕದ ಎಲ್‍ಇಟಿಯ ಲಕ್ಷ್ಮಣರಾವ ಭೀ. ಜಾರಕಿಹೊಳಿ ಶಿಕ್ಷಣ ಮಹಾವಿದ್ಯಾಲಯದ ಪ್ರಾಚಾರ್ಯ ಡಾ. ಅಡಿವೆಪ್ಪ ಬಿ. ಪಾಟೀಲ ಹೇಳಿದರು.
ತಾಲ್ಲೂಕಿನ ಕಲ್ಲೋಳಿಯ ಸಮೂಹ ಸಂಪನ್ಮೂಲ ಕೇಂದ್ರ (ಸಿಆರ್‍ಪಿ)ದಲ್ಲಿ 2024-25ನೇ ಸಾಲಿಗೆ ಸರ್ಕಾರಿ ಶಾಲೆಗಳಿಗೆ ನೂತನವಾಗಿ ಆಯ್ಕೆಯಾಗಿರುವ ಅತಿಥಿ ಶಿಕ್ಷಕರಿಗೆ ಏರ್ಪಡಿಸಿದ್ದ ಒಂದು ದಿನದ ಬೋಧನಾ ಕೌಶಲ್ಯತೆ ಗಳ ಕುರಿತು ಕಾರ್ಯಾಗಾರದ ಮುಖ್ಯ ಅತಿಥಿಯಾಗಿ ಮಾತನಾಡಿದ ಅವರು ಕಪ್ಪು ಹಲಗೆಯ ಬರವಣಿಗೆ ಮತ್ತು ಮಕ್ಕಳ ಏಕಾಗ್ರತೆಯನ್ನು ಕೇಂದ್ರಿಕರಿಸಿ ಪಾಠ ಮಾಡುವ ಮೂಲಕ ಪರಿಣಾಮಕಾರಿಯಾದ ಬೋಧನಾ ಪ್ರಕ್ರಿಯೆ ಮಾಡಬೇಕು ಎಂದರು.
ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಸಾಹಿತಿ, ಪತ್ರಕರ್ತ ಬಾಲಶೇಖರ ಬಂದಿ ಮಾತನಾಡಿ, ಪವಿತ್ರವಾದ ಶಿಕ್ಷಕ ವೃತ್ತಿಯನ್ನು ಗೌರವಿಸಬೇಕು ಮತ್ತು ಅತ್ಯಂತ ಆಸಕ್ತಿಯಿಂದ ಪಾಠ ಮಾಡುವ ಮೂಲಕ ವೃತ್ತಿಗೆ ಗೌರವ ತರಬೇಕು ಎಂದರು.
ಇಂದಿನ ಮಕ್ಕಳು ನಾಳಿನ ದೇಶದ ಶ್ರೇಷ್ಠ ಪ್ರಜೆಗಳಾಗುತ್ತಾರೆ. ಕೊಠಡಿಯಲ್ಲಿರುವ ಯಾವ ಮಗುವನ್ನು ಸಹ ನಿರ್ಲಕ್ಷಬಾರದು. ಪ್ರತಿ ಮಗುವಿನಲ್ಲಿ ಒಬ್ಬ ಸಾಧಕನನ್ನು ಕಾಣಬೇಕು ಎಂದು ಸಲಹೆ ನೀಡಿದರು.
ಸಿಆರ್‍ಪಿ ಗಣಪತಿ ಉಪ್ಪಾರ ಪ್ರಾಸ್ತಾವಿಕ ಮಾತನಾಡಿ ಬಿಇಒ ಅಜೀತ ಮನ್ನಿಕೇರಿ ಅವರ ಮಾರ್ಗದರ್ಶನದಲ್ಲಿ ಅತಿಥಿ ಶಿಕ್ಷಕರಿಗೆ ಪುನಃಶ್ಚೇತನಗೊಳಿಸಿ ಆಯಾ ಶಾಲೆಗಳಿಗೆ ಕಳಿಸುವ ಸಲುವಾಗಿ ಕಾರ್ಯಾಗಾರವನ್ನು ಏರ್ಪಡಿಸಲಾಗಿದೆ ಎಂದರು.
ಸಮಾರಂಭದ ಪ್ರಾರಂಭದಲ್ಲಿ ಕಾರ್ಯಾಗಾರದಲ್ಲಿ ಭಾಗವಹಿಸಿದ್ದ 35 ಜನ ಅತಿಥಿ ಶಿಕ್ಷಕ, ಶಿಕ್ಷಕಿಯರಿಗೆ ಪುಷ್ಪ ನೀಡುವ ಮೂಲಕ ಸ್ವಾಗತಿಸಿದರು.
ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಪ್ರಭಾರಿ ಮುಖ್ಯ ಶಿಕ್ಷಕ ಎಸ್.ಪಿ. ಗೋಸಬಾಳ, ಡಿ.ವೈ. ಮಾಳೇದ, ಎಸ್.ಬಿ. ಹೂಗಾರ ಇದ್ದರು. ಸಿಆರ್‍ಪಿ ಗಣಪತಿ ಉಪ್ಪಾರ ಪ್ರಾಸ್ತಾವಿಕ ಮಾತನಾಡಿದರು, ಗಂಗಾಧರ ಕಟ್ಟಿಕಾರ ವಂದಿಸಿದರು.