ಅರೆರೆ! ಇದೇನಪ್ಪಾ ನಮ್ಮೊಳಗು ಶತ್ರು ಇದಾನ, ನಮ್ಮೊಳಗೊಕ್ಕ ಆ ಶತ್ರುವೆಂಬ ರಕ್ಕಸ ಯಾರೆಂದು ಯೋಚಿಸ್ತಿದೀರಾ? ಬೇಡವೇ ಬೇಡ ಯೋಚಿಸೋದು. ಇದಾರೆ ನಮ್ಮೊಳಗೊಕ್ಕ ಶತ್ರು. ಸಾಮಾನ್ಯವಾಗಿ ಯಾರಾದರೂ ಬೆಳಿತಿದ್ದಾರೆ, ಏನೂ ಇಲ್ಲದವರು ಏನೋ ಸಾಧನೆ ಮಾಡ್ತಿದಾರೆ, ಹೊಸತೇನನ್ನೋ ಮಾಡಲು ಹೆಜ್ಜೆಗಳನ್ನು ಇರಿಸ್ತಿದ್ದಾರೆ ಅಂದ್ರೆ ಸಾಕು ಅಲ್ಲಿ ನಮಗೆ ಗೊತ್ತಿಲ್ಲದೇ ಶತ್ರುಗಳು ಹುಟ್ಟಿಕೊಳ್ತಾರೆ. “ಅಕ್ಕರೆ ತೋರದವರು ಸಕ್ಕರೆ ನಗು”ಬೀರಿ ಒಳಗೊಳಗೇ ಕತ್ತಿಗಿಂತ ಹರಿತವಾಗಿ ಇರಿಯುವ ಮಾತುಗಳನ್ನು ಆಡುತ್ತಾರೆ ಸಹಜವಾಗಿ ಅಂಥವರಿರಬೇಕು, ತಪ್ಪಿದ ಗುರಿ ತಲುಪಲು ನಮ್ಮನ್ನು ತಯಾರಿಯಾಗುವಂತೆ ಮಾಡುವ ಛಲವನ್ನು ಹುಟ್ಟಿಸಬಲ್ಲವರು ಅವರೇ ಮಾತ್ರ.
ನಮ್ಮ ಸುತ್ತಲೂ ನಾವು ಒಂದು ಕೋಟೆ ಕಟ್ಟಿ ಎಷ್ಟೇ ಮುಂದುವರೆಯಲು ಪ್ರಯತ್ನಿಸಿದರು ಅದನ್ನು ಹಾಳುಗೆಡವಲು ಒಂದಷ್ಟು ಪಡೆಗಳು ಕಾದಿರುತ್ತವೆ. ಆದರೆ ಅದರ ರಕ್ಷಣೆಗಾಗಿ ಗುರಾಣಿ ಹಿಡಿದು ಸದ್ದಿಲ್ಲದೆ ಹೋರಾಟ ನಡೆಸಬೇಕಿದೆ. ಇಲ್ಲಿ ಯಾರೂ ಯಾರ ಗೆಲುವನ್ನು ಸಂಭ್ರಮಿಸುವುದಿಲ್ಲ, ಯಾರೂ ಯಾರ ಯಶಸ್ಸಿಗೂ ರತ್ನಗಂಬಳಿ ಹಾಸುವವರಿಲ್ಲ, ಇಲ್ಲಿ ಎಲ್ಲವನ್ನು ನಾವೇ ಸಂಭ್ರಮಿಸಬೇಕು. ಹಾಗಾದರೆ ನಿಜವಾಗಿಯೂ ಶತ್ರು ಎಂದರೆ ಯಾರೂ? ಹೌದು ನಿಜವಾಗಿ ಶತ್ರು ಅವರಲ್ಲ, ನಾವು ಅವರನ್ನು ಶತ್ರು ವೆಂದು ಭಾವಿಸಿದಾಗ ಮಾತ್ರ ನಮಗೆ ಅವರು ಶತ್ರು ವಾಗಿ ಕಾಡಬಲ್ಲರು, ಬೆಂಬಿಡದೆ ಅವರ ಧ್ಯಾನದಲ್ಲೇ ನಾವು ಸದಾ ಅವರೇ ನಮ್ಮ ಶತ್ರು ಗಳೆಂದು ನಮ್ಮ ಬುದ್ದಿ ಮತ್ತು ಮನಸ್ಸಿನ ಸಾಮ್ರಾಜ್ಯದಲ್ಲಿ ಅವರಿಗೂ ಸ್ಥಾನವನ್ನು ನೀಡಿಬಿಟ್ಟಿರುತ್ತೇವೆ.
ಹಾಗಾದ್ರೆ ನಮ್ಮೊಳಗಿನ ಶತ್ರು ಯಾರು? ಅದು ಯಾರು ಅಂದ್ರೆ ನಮ್ಮನ್ನು ಶತ್ರು ಎಂದು ಭಾವಿಸಿಕೊಂಡವರನ್ನು ನಾವು ಕೂಡ ಕಂಡು ಶತ್ರುತ್ವ ಬೆಳೆಸಿಕೊಂಡು ಹಗೆ ಸಾಧಿಸಲು ಮುಂದಾಗುವುದು, ನಮ್ಮ ಒಳಗೆ ಹುಟ್ಟುವ ಶತ್ರುತ್ವದಿಂದ. ಅಥವಾ ನಾನೇನನ್ನೋ ಸಾಧಿಸಿ, ಸಿದ್ಧಿಸಿದ್ದೇನೆ ಎಂಬ ಭ್ರಮೆಯಿಂದಲೂ ತಗ್ಗಿ ಬಗ್ಗಿ ನಡೆಯದೆ ನಾನೇ ಎಂಬುದನ್ನು ತಲೆಗೇರಿಸಿಕೊಂಡು ಹಿರಿಯರು ಕಿರಿಯರೆನ್ನದೆ ಹಿರಿಯರನ್ನು ಕಂಡಾಗ ಗೌರವಿಸದೆ, ಕಿರಿಯರನ್ನು ಕಂಡಾಗ ಆತ್ಮೀಯತೆ, ಪ್ರೀತಿ ತೋರದೆ ನಾನು, ನನ್ನದೇ, ನಾನೇ ಎನ್ನುವ ಒಣ ಜಂಭವಿದೆಯಲ್ಲ ಅದಕ್ಕಿಂತ ದೊಡ್ಡ ಶತ್ರು ಯಾರು ಇಲ್ಲಾ. ನಾನೇ ಸರ್ವಸ್ವ, ನನ್ನದೇ ಎನ್ನುವವರ ಒಳಗಿರುವ ನಾನು ಎಂಬ ಅಹಂ ಇದೆಯಲ್ಲ ಅದು ನಿಜವಾಗಿ ನಮಗೆ ಗೊತ್ತಿಲ್ಲದಂತೆ ನಮ್ಮ ಗುರಿ ತಪ್ಪಿಸುತ್ತದೆ.
ದೇಹದಲ್ಲಿ ಬಲವಿದ್ದರೆ ಸಾಲದು, ಬುದ್ದಿಯಲ್ಲಿ ಬಲವಿರಬೇಕು. ಆ ಬುದ್ದಿಗೆ ಜಂಭ, ಒಣ ಜಂಭವಂತು ಇರಲೇಬಾರದು. ಇದು ಒಂದು ಕಡೆಯಾದರೆ ಕೆಲವರಿಗೆ ಯಾವ ಅಹಂ, ನಾನು, ನನ್ನದು ಎಂಬುದು ನೆತ್ತಿಗೇರದೆ ತಾನಾಯಿತು ತನ್ನ ಕೆಲಸವಾಯಿತು ಎಂದು ತನ್ನಷ್ಟಕ್ಕೆ ತಾನು ಯಾರ ತಂಟೆ ತಕರಾರಿಗೂ ಹೋಗದೆ ಬದುಕುವವರನ್ನು ಕಂಡಾಗಲು ಜನ ಎಷ್ಟು ಅಹಂ ಇದೆ ನೋಡು ಎನ್ನುವುದು ಸಹಜ. ಆದರೆ ತನ್ನದೇ ದಾರಿಯಲ್ಲಿ ಸಾಗುವವರಿಗೆ, ಎಷ್ಟೇ ಊಳಿಟ್ಟರು ಸಹ ಅದಕ್ಕೆ ತಲೆ ಕೆಡಿಸಿಕೊಳ್ಳದೆ ಮುನ್ನಡೆಯುವವರು ಇದ್ಯಾವುದೂಕ್ಕೂ ಜಗ್ಗದೆ ಬದುಕಿನಲ್ಲಿ ಬಲವಾದ ಹೆಜ್ಜೆ ಗುರುತುಗಳನ್ನು ಊರುತ್ತಾರೆ. ಹಾಂ ಇನ್ನೂ ಒಂದು ಮಾತು ಹೇಳೋದಾದ್ರೆ ಸಂಸ್ಕೃತದಲ್ಲಿನ ಒಂದು ಗಾದೆ ಆಗಾಗ ಯಾರಾದರೂ ಇತರರನ್ನು ಕಳೆದು ಮಾತನಾಡಿದಾಗ ನೆನಪಾಗುತ್ತಲೇ ಇರುತ್ತದೆ. ಅದೇನೆಂದರೆ “ಆತ್ಮಚಿತ್ರಂ ನ ಜಾನಂತಿ ಪರಚಿದ್ರಾನುಸರಿಣ” ಅರ್ಥ ಏನಂದ್ರೆ ಪರರ ದೋಷಗಳನ್ನು ಹುಡುಕುವವರಿಗೆ ತಮ್ಮ ದೋಷಗಳನ್ನು ಕಂಡುಕೊಳ್ಳಲು ಸಾಧ್ಯವಿಲ್ಲ. ಇದನ್ನು ನೆನಪಿಸಿಕೊಂಡಾಗ ಇದಕ್ಕಿಂತ ನಮ್ಮೊಳಗಿನ ದೊಡ್ಡ ವೈರಿ ಇನ್ನ್ಯಾರಿದ್ದಾರೆ. ನಾನೇ ಸರಿ ಎಂದು ತಿಳಿದು ಬೀಗುವವರಿಗೆ ನಮ್ಮವರು, ನಮ್ಮದು ಎನ್ನುವ ಲೆಕ್ಕವೇ ಇರುವುದಿಲ್ಲ. ಬಹುತೇಕ ಅಬ್ಬರ, ಆಡಂಬರವಿಲ್ಲದೆ ಸರಳವಾಗಿ ಬದುಕುವವರನ್ನು ಕಂಡರೆ, ಒಳಿತಾಗುವುದೆಂದರೆ ಅದನ್ನು ಸಂಭ್ರಮಿಸದೆ ತಮ್ಮೊಳಗೆ ತಾವೇ ಮತ್ತೊಬ್ಬರಿಗೆ ಶಪಿಸುವವರ ಒಳಗಿರುವ ವೈರತ್ವ ಅವರ ನಂತರವೂ ಕೊನೆಗಾಣುವುದಿಲ್ಲ. “ಬೂದಿ ಮುಚ್ಚಿದ ಕೆಂಡದ ಹಾಗೆ” ನಮ್ಮೊಳಗಿರುವ ಹಗೆ, ನಾನು, ನಾನು ಹೇಳಿದ್ದೆ ಸತ್ಯ, ಅಂತಿಮ ಎಂಬ ವಿತಂಡ ವಾದವು ಸಹ ನಮ್ಮನ್ನು ಆ ಕೆಂಡದಂತೆ ಒಳಗೊಳಗೇ ಸುಡುತ್ತದೆ. ನಿಜವಾಗಿಯೂ ನಮ್ಮೊಳಗೇ ಇರಬೇಕಾದದ್ದು ಪ್ರೀತಿ, ನಂಬಿಕೆ, ಆತ್ಮವಿಶ್ವಾಸ.
ಒಂದೊಳ್ಳೆ ಕೆಲಸ ನಡೀತಿದೆ ಅಂದ್ರೆ ಅಲ್ಲಿ ನಮ್ಮ ಹಾರೈಕೆ ಇರಬೇಕೆ ಹೊರತು ಅವರು ಮಾಡುವ ಕೆಲಸ ಆಗಬಾರದೆಂಬ ನಕಾರಾತ್ಮಕ ಚಿಂತನೆಗಳು ಸಲ್ಲವು. ಏಕೆಂದರೆ ಅವು ನಮ್ಮನ್ನು ನಮ್ಮ ಕೆಲಸದಲ್ಲಿ ಎಡವುವಂತೆ ಮಾಡುತ್ತವೆ. ಬಾನಗಡಿ ಕೆಲಸ ಮಾಡುವುದನ್ನು ನಿಲ್ಲಿಸಬೇಕು. ಬಹುಶ್ರುತ ರೀತಿಯಲ್ಲಿ ಇನ್ನೊಬ್ಬರ ಬದುಕಿನಲ್ಲಿ ಎಂದಿಗೂ ಕೆಟ್ಟದ್ದನ್ನು ಬಯಸದೆ, ಕೆಟ್ಟದ್ದನ್ನು ಮಾಡದೆ ಸಾಗಿದ್ದಾದರೆ ಭಗವಂತ ನಿನ್ನನ್ನು ಮೇಲಕ್ಕೆ ಎತ್ತಿಯೇ ತೀರುತ್ತಾನೆ. ಇನ್ನು ಅತಿಯಾಗಿ ವಾದ ಮಾಡುವ, ವಿತಂಡವಾದ ಮಾಡುವ, ನಾನೆ ಸರಿ, ನನ್ನದೇ ಸರಿ ಎಂದು ವರ್ತಿಸುವ ಅಮಾಯಕರಂತೆ ಕಾಣುವ ಅಪಾಯಕಾರಿ ವ್ಯಕ್ತಿಗಳನ್ನು ಅಪರಿಚಿತರೆಂದು ಭಾವಿಸಿಬಿಡಿ. ಏಕೆಂದರೆ ಅಪರಿಚಿತರ ಮೇಲೆ ಪ್ರೀತಿ, ವಿಶ್ವಾಸ, ನಂಬಿಕೆ ದ್ವೇಷ ಇವ್ಯಾವ ಭಾವನೆಗಳು ನಮಗೆ ಇರುವುದಿಲ್ಲ. ಹಾಗಾಗಿ ನಮ್ಮೊಳಗಿರುವ ನಮ್ಮನ್ನು ನಾವೇ ಜಾಗೃತಗೊಳಿಸಿಕೊಂಡು ಮಾತನಾಡಬೇಕು. ನಮ್ಮೊಳಗಿರುವ ನಮಗೆ ನಾನು ಏನನ್ನೋ ಸಾಧಿಸಿದ್ದೇನೆ ಎಂಬ ಅಹಂ ನೆತ್ತಿಗೇರಿದ್ದಾದರೆ ನಿಜವಾಗಿಯೂ ನಮ್ಮೊಳಗೇ ಅಲ್ಲಿ ಶತ್ರು ಜೀವ ಪಡೆದಿದ್ದಾನೆ ಎಂದರ್ಥ. ನಾನು ಏನೋ ಸಾಧಿಸಿದ್ದೇನೆ, ನಾನೇ ಎಲ್ಲ, ಎಲ್ಲರೂ ನನ್ನ ಮಾತನ್ನೇ ಒಪ್ಪಿಕೊಳ್ಳಬೇಕು, ನಾನೇ ಅಂತಿಮ ಸತ್ಯ ಎಂಬ ಭ್ರಮೆಯಿಂದ ಹೊರಗೆ ಬಂದು ಬಿಡಬೇಕು. ಇನ್ನೊಬ್ಬರ ಕೆಲಸಗಳನ್ನು ಕಂಡಾಗ ಅಸೂಯೆ ಪಡುವುದು, ಇನ್ನೊಬ್ಬರನ್ನು ಗೌರವಿಸದೆ ಇರುವುದು, ನಾನು ಮಾಡುವುದೇ ಸರಿ ಎನ್ನುವುದು ಯಾವಾಗ ನಮ್ಮೊಳಗೆ ಬರುತ್ತದೆಯೋ ಆವಾಗ ನಮ್ಮೊಳಗೆ ನಿಜವಾದ ಶತ್ರು ಹುಟ್ಟಿಕೊಳ್ಳುತ್ತಾನೆ. ನಾವು ಇರುವ ಸ್ಥಾನಕ್ಕಿಂತಲೂ ಮತ್ತಷ್ಟು ಮೇಲೆ ಹೋಗದಿರಲು ಕಾರಣವೂ ಸಹ ನಮ್ಮೊಳಗಿನ ಶತ್ರು.
ಮೊದಲು ನಾವು ಹೋರಾಟ ಮಾಡಬೇಕಿರುವುದು ನಮ್ಮೊಳಗಿರುವ ದುಷ್ಟ ಆಲೋಚನೆಗಳೊಂದಿಗೆ ಗುದ್ದಾಡಬೇಕು. ನಾನು ಗೆದ್ದಿದ್ದೇನೆ ಎಂಬ ಅಹಂನೊಂದಿಗೆ ಸೆಣಸಾಡಿ ನಾನು ಇಲ್ಲಿಯವರೆಗೂ ಸಾಧಿಸಿರುವುದು ಏನೇನೂ ಅಲ್ಲ, ಸಾಧಿಸಬೇಕಿರುವುದು ಸಾಕಷ್ಟಿದೆ ಎಂಬುದನ್ನು ಅರಿಯಬೇಕಿದೆ. ನಮ್ಮೊಳಗಿರುವ ನಾನು ಎಂಬುದನ್ನು ಆಗಾಗ ಬಡಿದು ಮೂಲೆಗೆ ಕೂಡಿಸಿ ಸಾವಧಾನದ ಬದುಕನ್ನು ಸಾಗಿಸಬೇಕಿದೆ. ಕೆಲವೊಮ್ಮೆ ತಿಳಿದೋ, ತಿಳಿಯದೆಯೋ ಯಾರಿಂದಾದರೂ ನಿಮಗೆ ಮನಸ್ಸಿಗೆ ನೋವಾದರೆ ಅರೆ, ಅವರು ನನಗೆ ತುಂಬಾ ನೋವು ಕೊಟ್ರು, ನಾನು ಅದನ್ನ ತಿರುಗಿಸಿ ಕೊಟ್ಟೆ ಕೊಡ್ತೀನಿ, ನಾನು ಅವರು ಮಾಡಿದ್ದನ್ನ ಎಂದಿಗೂ ಮರೆಯೋದಿಲ್ಲ, ಮರೆಯೋಕೆ ಸಾಧ್ಯನೇ ಇಲ್ಲ. ಎಂಬುದಾಗಿ ದ್ವೇಷ ಇಟ್ಟುಕೊಂಡು, ಹಗೆ ಸಾಧಿಸಿಕೊಂಡು ಹೋದ್ರೆ ನಿಜವಾಗಿಯೂ ನಾವು ಬೆಳೆಯಲು ಸಾಧ್ಯವೇ ಇಲ್ಲ. ಬದುಕಿನಲ್ಲಿ ಏನೆಲ್ಲಾ ದಕ್ಕಿದೆಯೋ ಅದನ್ನ ಅರಗಿಸಿಕೊಳ್ಳುವುದನ್ನು ಕಲಿಯಬೇಕಿದೆ. ಕೆಲವೊಂದನ್ನು ಅಲ್ಲಲ್ಲಿಯೇ ತೊರೆದು ಸಾಗಬೇಕಿದೆ. ಹೇಗೆ ಅಂದ್ರೆ ಒಮ್ಮೊಮ್ಮೆ ಘಜನಿಯ ಹಾಗೆ ಇದ್ದುಬಿಡಬೇಕು. ಏಕೆಂದರೆ ಘಜನಿಗೆ ಆ ಕ್ಷಣ ನಡೆದದ್ದು ಮರುಕ್ಷಣ ನೆನಪಿಗೆ ಬರ್ತಿರ್ಲಿಲ್ವಂತೆ ಘಜನಿಗೆ ಮರೆವಿನ ಕಾಯಿಲೆ ಹೆಚ್ಚಿತ್ತು. ಹಾಗಾಗಿ ಆಗಾಗ ಕೆಲವು ಸಂಗತಿಗಳು, ವಿಚಾರಗಳು, ವ್ಯಕ್ತಿಗಳನ್ನು ಘಜನಿಯ ಹಾಗೆ ನಾವು ಮರೆತುಬಿಡಬೇಕು. ವಲ್ಲದ ಸಂಗತಿಗಳಿಗೆ ತಲೆಯಲ್ಲಿ ಜಾಗ ಕೊಡಬಾರದು. ತಲೆಗೂ ಮನಸ್ಸಿಗೂ ಅವುಗಳು ಭಾರವಾಗಿಯೇ ಭಾಸವಾಗುತ್ತವೆ ಹಾಗಾಗಿ ಕೆಲವುಗಳನ್ನು ಮರೆಯುವ ಕಾಯಿಲೆಯನ್ನು ನಾವು ರೂಢಿಸಿಕೊಳ್ಳಬೇಕು. ಯಾರದೋ ಮೇಲೆ ಹಗೆ ಸಾಧಿಸಲು ಪ್ರಯತ್ನಿಸುತ್ತೇವೆ ಎಂದರೆ ನಿಜವಾಗಿಯೂ ನನ್ನ ಪ್ರಕಾರ ನಾವೇ ಕೈಲಾಗದವರು. ಕೈಲಾಗದವರು ಮಾತ್ರ ಮತ್ತೊಬ್ಬರ ಮೇಲೆ ಹಗೆ ಸಾಧಿಸಬೇಕೆ ಹೊರತು ಮತ್ತೇನನ್ನೋ ಸಾಧಿಸುತ್ತೇನೆ ಎಂಬ ಭರವಸೆ ಇರುವವರು ಎಂದಿಗೂ ಯಾರ ಮೇಲೆ ದ್ವೇಷ ಸಾಧಿಸುವುದಿಲ್ಲ. ಕೆಲವೊಮ್ಮೆ ನಮ್ಮಷ್ಟಕ್ಕೆ ನಾವು ನಮ್ಮದೇ ದಾರಿಯಲ್ಲಿ ಸಾಗುತ್ತಿದ್ದರು ನಮ್ಮನ್ನು ದ್ವೇಷಿಗಳೆಂದು ದೂಷಿಗಳು ಎಂದು ಭಾವಿಸುವವರು ಇದ್ದೇ ಇರುತ್ತಾರೆ ಅದಕ್ಕೆಲ್ಲ ಕಿವಿ ಮತ್ತು ಮನಸ್ಸನ್ನು ಕೊಡಲೇಬಾರದು. ಬದುಕು ತುಂಬಾ ದೊಡ್ಡದು ಆ ಬದುಕಿಗೆ ನಾವು ಅತಿ ಚಿಕ್ಕವರು. ಇರುವಷ್ಟು ದಿನ ನಮಗಾಗಿ ನಮ್ಮ ಖುಷಿಗಾಗಿ ಬದುಕಬೇಕೆ ಹೊರತು, ಮತ್ಯಾರನ್ನೋ ದ್ವೇಷಿಸುವ ಬರದಲ್ಲಿ ಪ್ರೀತಿ ಮತ್ತು ಸಂಭ್ರಮ ತುಂಬಿ ತುಳುಕುವ ಮನಸ್ಸಿನಲ್ಲಿ ವೈರತ್ವಕ್ಕೆ ಯಾಕೆ ಜಾಗ ಕೊಡಬೇಕು. ಅದರಿಂದ ನಮ್ಮ ಮನಸ್ಸಿಗೆ ಘಾಸಿಯಾಗುವುದು ಹೊರತು ಬೇರೆ ಯಾರಿಗೂ ಅಲ್ಲ. ಹಾಗಾಗಿ ಶತ್ರುಗಳೆಂದು ಯಾರಿಗೂ ಇರುವುದಿಲ್ಲ, ಅದೆಲ್ಲವು ನಮ್ಮ ಆಲೋಚನೆಯ ಮೇಲೆ ನಿಂತಿರುತ್ತದೆ. ನಮ್ಮೊಳಗೇ ಇರುವ ಅಹಂ ಅನ್ನು ಸುಟ್ಟಾಗ ಶತ್ರು ಎಂದು ಯಾರನ್ನು ಭಾವಿಸುವುದು. ಹೌದು ಆರಕ್ಕೇರದ ಮೂರಕ್ಕಿಳಿಯದೆ ಈ ಬದುಕಿನಲ್ಲಿ ಇರೋ ನಾಲ್ಕು ದಿನವಾದರೂ ನೆಮ್ಮದಿಯ ಬದುಕನ್ನು ಬದುಕಬೇಕಿದೆ. ನಮ್ಮೊಳಗಿನ ಶತ್ರುವನ್ನು ನಾವೇ ಸದೆಬಡಿಯಬೇಕಿದೆ.
ಡಾ ಮೇಘನ ಜಿ
ಉಪನ್ಯಾಸಕರು