spot_img
spot_img

ನಾನು ಓದಿದ ಪುಸ್ತಕ- ಐ ಕಾಂಟ್ ಬ್ರೀದ್

Must Read

- Advertisement -

ಕಾವ್ಯವು ಕವಿಯ ಸಂವೇದನೆ, ಕವಿಯ ಅನುಭವದಿಂದಿಳಿದ ರಸ ವಸ್ತುವೆ ಕಾವ್ಯ. ಕಾವ್ಯವು ಲೋಕದ ಆದರ್ಶದ ಪ್ರತಿಮೆ. ಈ ಲೋಕಕ್ಕೆ ವಿರುದ್ಧವಾದದ್ದಲ್ಲ,ಈ ಲೋಕವನ್ನು ಬಣ್ಣಿಸಬೇಕೆಂದಲ್ಲ. ಲೋಕದ ಜಂಜಡಗಳನ್ನು ಯಥಾವತ್ತಾಗಿ ಎತ್ತಿ ಬರೆಯುವುದಾಗಿದೆ. ಅದು ಅತಿಶಯವಾಗಿರಬೇಕು-ಎನ್ನುವುದು ಬಲ್ಲವರಿಂದ ಕೇಳಲಾಗಿದೆ.

ಅತ್ಯಂತ ಸೂಕ್ಷ್ಮ ಸಾಹಿತಿಯಾದವರು ಅಕ್ಷರವನ್ನೆ ಆಸ್ತಿಯನ್ನಾಗಿ ಮಾಡಿಕೊಳ್ಳುತ್ತಾರೆ. ಭಾಷೆಯನ್ನು ಮತ್ತೆ. . . ಮತ್ತೆ ಮುರಿದು ಕಟ್ಟುವ ಕ್ರಮವು ಕಾವ್ಯದ ಗುಣಮಟ್ಟ ಗಟ್ಟಿಯಾಗಿ ನೆಲೆಯನ್ನು ಕಂಡುಕೊಳ್ಳುತ್ತದೆ.

“ಐ ಕಾಂಟ್ ಬ್ರೀದ್” ಕವನ ಸಂಕಲನವು ಬಹು ಮುಖ್ಯವಾದ ಕಾವ್ಯ ರಚನಾ ಪುಸ್ತಕ ಎಂದು ಒಂದೇ ನುಡಿಯಲ್ಲಿ ಹೇಳಲಾಗದು. ಇತ್ತೀಚಿನ ಕವಿಗಳು ನವ್ಯಕಾಲಘಟ್ಟದಲ್ಲಿ ಅನೇಕ ಸಂವೇದನಾಶೀಲ ಕವಿತೆಗಳನ್ನು ಓದಲು ನೀಡುತ್ತಿದ್ದಾರೆ.

- Advertisement -

ಸಮಾನತೆಯ ಕಸುವು ತರಲು,ಸಮಾಜದ ಕಣ್ಣರಳಿಸುವರು. ಹಲವಾರು ಶಬ್ದಗಳನ್ನು,ವಿಭಿನ್ನತೆಯಲಿ ಹುಟ್ಟು ಹಾಕುತ್ತಿದ್ದಾರೆ.

ಬವಣೆ, ಶೋಷಣೆ, ಬದುಕಿನ ನೂರಾರು ತುಲನಾತ್ಮಕ ಅರಿವಿಗಾಗಿ ನೆರವಾಗುವ ಕಾವ್ಯವನ್ನು ನಾವಿಂದು ಓದುತ್ತಿದ್ದೇವೆ. ಧರ್ಮ ಮತ್ತು ರಾಜಕೀಯ ಹುನ್ನಾರವನು ಬಟಾಬಯಲುಗೊಳಿಸುವ ಕವಿತೆಗಳು ದೀರ್ಘಕಾಲದ ಅನುಸಂಧಾನದಂತೆ, ಪೊದೆಯ ಮುಳ್ಳಿನಿಂದಲೇ ಹಸಿಯಾದ ಗಾಯವನು ಮಾಡಿಕೊಂಡು ನಾಟಿದ ಮುಳ್ಳನು ತೋಡಿ ತೆಗೆದು ನಿರಾಳವಾಗುವಂತೆ ಓದುಗರ ಎದೆಯ ಕಾವನ್ನು ತಣಿಸಿಬಿಡಲ್ಲ ಹೊಸ ಹೊಸ ಸಾಹಿತಿಗಳಿದ್ದಾರೆ.

ಇಂದು ನಾನೋದಿದ ಪುಸ್ತಕ ” ಐ ಕಾಂಟ್ ಬ್ರೀದ್” ಕವನ ಸಂಕಲನವು ವರ್ತಮಾನದಲ್ಲಿ ಕುಳಿತು ಮಾತನಾಡುವ,ಮುಖಾಮುಖಿಯಾಗುವ,
ಅರ್ಥವಾಗುವ,ಬತ್ತಿ ಹೋಗುವ ಮನಸುಗಳ ದಿಡ್ಡಿ ಬಾಗಿಲು ಹಾಕುವ ದುಸ್ಥಿತಿಯ ಕಾರಣವನ್ನು ಹುಡುಕಿ ಕೊಡುತ್ತದೆ.

- Advertisement -

ಹೌದು,ಸದ್ಯದ ಕಾಲಮಾನದಲ್ಲಿ ಹಸಿವಿನಿಂದ ಅಸಮಾನತೆ ಅವಮಾನಗಳಿಂದಾಗುವ ಪ್ರಶ್ನೆಗಳು ಸಾವಿರ-ಸಾವಿರಗಳಿವೆ. ವಯ ಕರಗಿ ಮುದುಕರಾದಾಗ ಮೂಲೆಯಲ್ಲಿ ಕುಳಿತು ಅಂತರ್ಮುಖಿಯಾದರೆ ಯಾವ ಪ್ರಯೋಜನವಿದೆ.

ಅನುಭವಿಸಿದ, ಅನುಭವಿಸುತ್ತಿರುವ ಕರಾಳ ನೋವುಗಳ ಚಿತ್ರಣವನ್ನು “ಐ ಕಾಂಟ್ ಬ್ರೀದ್” ಕವನ ಸಂಕಲನವು ಶಬ್ದ ರೂಪಕಗಳ ಸಿವುಡು ಕಟ್ಟಿ,ವರ್ತಮಾನದ ಒತ್ತಡಗಳನ್ನರಿಯುವ ಕನ್ನಡಿಯಂತೆ ನಿಚ್ಚಳ ತೋರುವ ಪ್ರತಿಬಿಂಬವಾಗಿದೆ. ಬರಹಗಾರನೊಬ್ಬ ಯಾಕೆ ಬರೆಯುತ್ತಾನೆ ಎಂಬುದನ್ನು ಪೂರ್ಣ ಅರಿಯಬೇಕಾದರೆ,ಪುಸ್ತಕದ ಎದೆಯ ಪರದೆಯನು ಸರಿಸುತ ಸಾಲುಗಳನು ಓದಬೇಕು.

(ನಾನು ಮನೀಷಾ)
“ಬರುತ್ತೇನೆ
ಬಂದೇ ಬರುತ್ತೇನೆ
ಮತ್ತೆ ಇದೇ ನೆಲದಲ್ಲಿ
ನನ್ನ ಸುಟ್ಟವರ ಮನೆಯಲ್ಲಿಯೇ-
ಮಗಳಾಗಿ ಹುಟ್ಟಿ,
ಅವರ ಮನೆ ಬೆಳಗುವ
ನಂದಾ ದೀಪವಾಗುತ್ತೇನೆ”

ಸಮಾಜದಲ್ಲಿ ಅವರು ಅಪರಾಧಿಗಳು. ಅಹಂ ಭಾವದ ಹೀನ ಕುದುರೆಯೇರಿ ಪಯಣಿಸಿದವರು. ಕವಿಯಲ್ಲದೇ ಬೇರೆ ಯಾರಾದರೂ ಆಗಿದ್ದರೆ,ಅವರ ಮನೆತನದ ಜನ್ಮ ಜಾಲಾಡಿಬಿಡುವ ಮನಸ್ಥಿತಿಯಲ್ಲಿ ನಾವಿರುತ್ತಿದ್ದೆವು.

ಆದರೆ…ಇಲ್ಲಿ ಕವಿಯೇ ಮನಿಷಾಳ ಮನಸ್ಸನ್ನು ಬದಲಿಸಿದ್ದಾರೆ. ಮಾಡಬಾರದ ಅವಕೃತ್ಯವನು ನೆನಸಿಕೊಂಡರೆ,ರೋಷ ಆವೇಶವೂ ಒಟ್ಟಿಗೆ ಉಕ್ಕಿ ಬರುತ್ತದೆ ನಮಗೆ. ಕರಾಳ ನೋವಿನಲ್ಲೂ ಬೆಳಕಾಗಿಸುವ ನಿರಾಳತೆಯನು ಕವಿಯು ವ್ಯಕ್ತಪಡಿಸಿದ್ದಾರೆ.

ಬಾಳಿ ಬದುಕುವ ಸುಂದರ ಮುಗುದೆಯೊಬ್ಬಳು ಸುಟ್ಟು ಕರಕಲು ಹೆಣವಾದಾಗ ಅಂದು ದೇಶವೇ ತಲ್ಲಣಿಸಿತು. ಸದ್ದಿಲ್ಲದೆ ಬಿದ್ದರೂ,ಬೆಂಕಿ ಕೆನ್ನಾಲಿಗೆ ಚಾಚಿದರೂ,ಹೀನಾಯ ದುಸ್ಥಿತಿಗೆ ಕಾರಣರಾದವರ ಕುರಿತು ಬರೆದ ಸಾಲುಗಳು ಹೃದಯವನು ಕಲುಕುತ್ತದೆ. ಅನಾಗರಿಕರು ಕಾಮದ ಚಿತ್ರಹಿಂಸೆ ನೀಡಿ, ಪ್ರಾಣವನು ಆಹುತಿ ತೆಗೆದುಕೊಂಡ ಮನಿಷಾಳ ಭಾವನೆಯೊಳಗೆ ಹೊಕ್ಕು ವಿಷಾದದಿಂದ ಕವಿಯು ಹೇಳಿದ್ದಾರೆ.

(ದೂರು)
“ಭ್ರಮೆಗಳ ದೂರುಗಳು ದಾಖಲಾಗಿದ್ದರೂ
ನ್ಯಾಯಾದೀಶ ಇನ್ನೂ ಬಂದಿಲ್ಲ
ಏಕೆಂದರೆ. . . . .
ಇನ್ನೂ ತಾಸು ರಾಹು ಕಾಲವಿದೆ”

ಭಾಷೆ ಬಹಳ ಸರಳ,ಮತ್ತು ನೇರವಾದದ್ದು. ನ್ಯಾಯಾಲಯದಲ್ಲೂ ಮುಹೂರ್ತ ಕಂಡುಕೊಳ್ಳುವ ಹವ್ಯಾಸವಾದರೆ, ಅಜ್ಞಾನದ ಪರಮಾವಧಿ. ಜ್ಞಾನದ ಪರಿಚ್ಛೇದವಾದಂತೆ. ಮೌಡ್ಯದ ಹುಟ್ಟು ಗುಣ ಸುಟ್ಟರೂ ಬೇರಿಡಿದಂತೆ. ,ನಮ್ಮತನದ ಸ್ವಾಸ್ಥ್ಯದ ಗೌಪ್ಯ ಆರಂಭವೆ ಎನ್ನಬಹುದು. ಬೆಳಕು ಮುಳುಗುವ ಗಳಿಗೆ. ನ್ಯಾಯದ ತಕ್ಕಡಿ ತೂಗಲೂ ಯಮಗಂಡಕಾಲದ ಬಂಧನವಿದೆ ಎಂದಾಯಿತು. ಅದಕ್ಕಾಗಿ ತೀಕ್ಷ್ಣ ಅರಿವು ಬೇಕು ಎಂದು ಕವಿಯ ಅಭಿಪ್ರಾಯವಾಗಿದೆ

(ಐ ಕಾಂಟ್ ಬ್ರೀದ್)
“ಕೈ ಕಾಲುಗಳನ್ನು
ಒತ್ತಿ ಹಿಡಿದು
ಕುತ್ತಿಗೆಗೆ ನಿಮ್ಮ ಬೂಟುಗಾಲುಗಳನು ಪರಿಚಯಿಸಿ,
ತುಳಿದು
ತಿರುವಿ
ಹೊಪಸಕಿ ಹಾಕುವ ಪರಿಗೆ
ಅಳುತ್ತ ಅಬ್ಬರಿಸಿತು ಕರಿಮೋಡ”

ಅಸಹಾಯಕರಿಗೆ ಎದುರಾಗುವ ಕ್ರೌರ್ಯ ಅಧಿಕಾರದ ಅನ್ಯಾಯವು ಎಷ್ಟೇ ಕಠಿಣವೆನಿಸಿದರೂ,ಬದುಕಬಲ್ಲ ಅಶಕ್ತರು, ಜೀವನ ಜಂಜಾಟ ಶೋಷಣೆಯನ್ನು ಸಹಿಸಿಕೊಂಡು,ಕೆಂಡವನು ನುಂಗಬೇಕಾಗಿದೆ. ತಮಗೆ ಬೇಕಾದ ಕೆಲಸ ಕಾರ್ಯಗಳನ್ನು,ಲಾಭವನ್ನು ಪಡೆದ ನಂತರ ದರ್ಪದಲಿ ಬೆನ್ನು ತಿರುಗಿಸುತ್ತಾರೆ. ಇವರುಗಳು ಸ್ವಾರ್ಥಿಗಳಷ್ಟೇ ಅಲ್ಲ,ಕ್ರೂರಿಗಳು ಎನ್ನುವುದಕ್ಕೆ ಖಂಡಿಸಿದ್ದಾರೆ.

ಊಸರವಳ್ಳಿಯ ಸಾಮಾಜಿಕ ವ್ಯವಸ್ಥೆಯು ಬೂಟುಗಾಲುಗಳಿಂದಾದರೂ ತುಳಿದು,ಕುತ್ತಿಗೆ ಕೊಳವಿಯ ಮೇಲಾದರೂ ಅಬ್ಬರಿಸುತ್ತದೆ. ಇಂಥಹ ದುರ್ವ್ಯವಸ್ಥೆಯು ಭವಿಷ್ಯದ ಬೆಳಗು-ಮುಳುಗು ನಿರ್ಧರಿಸುವ ದಬ್ಬಾಳಿಕೆಯನು ಟೀಕಿಸುವ ದನಿಯಾಗಿ ಕಾವ್ಯವು ಓದುಗರ ಸ್ಮೃತಿಯಲ್ಲಿ ಉಳಿದು ಬಿಡುವ ಸಾಲುಗಳು ಪುಸ್ತಕದಲ್ಲಿವೆ.

“ನಿನ್ನ ಬಣ್ಣಕ್ಕಂಟಿದ ಮೈಲಿಗೆಯ ಶಾಪ-
ನನ್ನೂರಲ್ಲೂ ಗಟ್ಟಿ ಬೇರುಗಳ ತಳ ಹೊಂದಿದೆ”

ಪ್ರಪಂಚ ಎಂಬುದೊಂದು ಜಾತಿಯ ಸಂತೆಯಾಗಿರುವುದರಿಂದ ಗುಡ್ಡ ಗವಾರದ ಕಾಡುಗಲ್ಲಿಗೂ,ಪ್ರಮಾಣಿಕವಾಗಿ ಮತಪಂಥಗಳ ಹೆಸರು ಬರೆಯಲಾಗಿದೆ. ಮಸಣಕ್ಕೂ ಜಾತಿವಾರು ಹೆಸರಿಡಲಾಗಿದೆ. ತಂತ್ರಜ್ಞಾನದ ಕಾಲದಲ್ಲೂ ಜಾತಿಯ ಬೇರುಗಳು ಆಳವಾಗಿಳಿದುಬಿಟ್ಟಿವೆ. ನಿತ್ಯವೂ ಬೇರು ಆಳಕ್ಕಿಳಿಯುತ್ತಲೇ ಇದೆ.

ಗಾಳಿ, ಮಳೆ, ಮೋಡ, ಭೂಮಿ ಭಾನು, ಸೂರ್ಯ ಚಂದ್ರ, ಬೆಳಕು-ಕತ್ತಲು ಇವುಗಳಿಗೂ ಸಹ ಅವರವರ ಜಾತಿಯಂತೆ ಬದಲಾಗಿದ್ದರೆ ಗತಿಯೇನು? ಆಗಿನ ಕಾಲದಲ್ಲಿ ತರಗತಿಯೊಳಗೆ ಪುಸ್ತಕ ಮುಟ್ಟಿದರೂ ಮೈಲಿಗೆ ಎಂದು ನೀರು ಚಿಮುಕಿಸಿಕೊಳ್ಳುತ್ತಿದ್ದರು. ಅವತ್ತಿನಿಂದ ಇವತ್ತಿಗೆ ತುಸು ಕಡಿಮೆ ಎನಿಸಿದೆ. ಸಂಪೂರ್ಣ ಜಾತಿ ನಿರ್ಮೂಲನೆಯಾಗಿದ್ದರೆ,ಇವತ್ತಿಗೆ ಪ್ರತಿಯೊಬ್ಬರಲ್ಲೂ ಅಂಬೇಡ್ಕರ್ ನ ದರ್ಶನವಾಗುತ್ತಿತ್ತೇನೋ. . ಎಂದೆನಿಸುತ್ತದೆ.

(ಅಮಲು)
“ಬೆಂಕಿ ಹಚ್ಚಲು
ಪೆಟ್ರೋಲ್ ಡೀಸೇಲ್
ಸೀಮೆ ಎಣ್ಣೆಗಳೇ
ಬೇಕೆಂದಿಲ್ಲ
ಧರ್ಮಗಳ ಅಮಲನ್ನು
ಲೇಪಿಸಿದರೆ ಸಾಕು
ಬೆಂಕಿ ಹಚ್ಚುತ್ತಾರೆ
ಬೆಳಕ ಕೊಲ್ಲುತ್ತಾರೆ

ಸತ್ಯಕ್ಕಿಂತ ಸುಳ್ಳಿಗೆ ಸುಂದರ ವರ್ಣನೆಗಳಿವೆ.ಹೀಗಾಗಿ ಸುಳ್ಳಿಗೆ ಆಯುಷ್ಯ ಜಾಸ್ತಿ.ಸತ್ಯವೆಂದರೆ ಈಗೀಗ ಅಸಹ್ಯವೆ.ಧರ್ಮದ ದಾರಿಯಲ್ಲಿ ನಡೆದವರನ್ನು ಬೆಕ್ಕು ಬಿಕ್ಕಳಿಸುವಂತೆ ನೋಡಿ ಮೂಗು ಮುರಿಯುತ್ತಾರೆ. ಒಂದು ವರ್ಣದವರು,ವಿರುದ್ಧವಿರುವ ಜಾತಿಗೆ ಅಬ್ಬರಿಸುತ್ತಾರೆ ಎಂದರೆ, ಧರ್ಮದ್ವೇಷದ ಉಡಿಯಲ್ಲಿ ಸಣ್ಣ ಕಿಡಿ ಹಾಕಿಬಿಡುವುದು.

ಹೇಡಿಗಳಾದವರು, ಕೇಡಿಗಳಾದವರು, ಹಿಂಸಾವಲಂಬಿಯಾದವರು ಇಂತಹ ನಿಷ್ಕ್ರಿಯರ ಬಾಯಿಗಳು ಎಲ್ಲಾ ದಿಕ್ಕಿನಿಂದಲೂ ಸವಾಲೆಸೆದು ಮನುಷ್ಯ-ಮನುಷ್ಯರ ಮನಸ್ಸಿಗೆ ಬೆಂಕಿ ಹಚ್ಚಿ,ದೂರ ಸರಿದು ತಮ್ಮನು ತಾವು ಬೆಳೆಸಿಕೊಳ್ಳುವವರು ಇದ್ದಾರೆ ಎನ್ನುವ ಪರಿಕಲ್ಪನೆಯನ್ನಿಟ್ಟುಕೊಂಡು ಮಹೇಶ ಬಳ್ಳಾರಿಯವರು ಕಾವ್ಯದ ಮೊನಚಿನಿಂದ ತಿವಿದಿದ್ದಾರೆ.

(ಇರುಳು)
“ಕಂದೀಲು ಮತ್ತು
ನನ್ನ ನಡುವೆ
ಸ್ಥಿತಿ ನಿಸ್ತೇಜ
ಬೆಳಕಿದೆ
ಇಲ್ಲದಂತೆ-
ಬೆಳಕಿಲ್ಲವೆಂದಲ್ಲ
ಸಾಲುವುದಿಲ್ಲ
ಹಸಿದ ಕತ್ತಲ ಕಂದಕದಲ್ಲಿ
ತುತ್ತು ಬೆಳಕು
ಅಲ್ಲಿ ಮೂಡಿದಷ್ಟೇ ಬೆಳಕು
ಮಿತಿಯ ಪರಿಮಿತಿ

ಎಂಟು ದಿಕ್ಕುಗಳ ವಿಸ್ತಾರತೆಗೆ ಯಾವ ಲೆಕ್ಕ ತುಂಡು ಬೆಳಕು?” ಸುಮಾರು ವರುಷಗಳಿಂದ ಹಸಿದವರಿಗೆ ಅನ್ನ,ನೀರು ಕರೆ ಕರೆದು ನೀಡುತಿದ್ದರು. ಈಗಲೂ ನೀಡುತ್ತಾರೆ ಸ್ವಾರ್ಥದ ಪರವಿರಬೇಕು. ದಿನದಿನಕ್ಕೆ ಮಾನವೀಯ ಮೌಲ್ಯವನ್ನು,ವ್ಯಕ್ತಿತ್ವವನ್ನು ಕಳೆದುಕೊಳ್ಳುತ್ತದೆ ಎನ್ನುವುದಕ್ಕೆ ಈ ಕವಿತೆಯ ಸಾಲುಗಳೆ ಸಾಕ್ಷಿ.

ಒಂದು ದೀಪದಿಂದ ಮಗದೊಂದು ದೀಪವನು ಬೆಳಗಿಸಬೇಕು ನಿಜ. ಈ ದಿನಗಳಲ್ಲಿ ಬೆಳಗುವ ದೀಪವನ್ನಾರಿಸುವ ಜಾಯಮಾನ ರೂಡಿಗತವಾಗಿದೆ. ಹಸಿದ ಕತ್ತಲ ಕಂದಕದಲ್ಲಿ ತುತ್ತು ಬೆಳಕು ಸಾಲುವುದೆ ಎನ್ನುವದು ಪ್ರಶ್ನೆಯಾಗಿದೆ. ಚಿಕ್ಕದಾಗಿ ಮೂಡಿದ ಬೆಳಕು ಕಾಳಕತ್ತಲಿಗೆ ಸಮವಾದೀತೆ?ಸಾಕಾದೀತೆ?ತುಂಡು ಬೆಳಕು,ಹಸಿದವಗೆ ತುತ್ತು ಅನ್ನ ಯಾವ ಲೆಕ್ಕ ಎನ್ನುವ ಬರಹವು ಅನನ್ಯತೆ ವ್ಯಕ್ತವಾಗಿದೆ.

“ನಮ್ಮೂರ ನೆಲದ ಮೇಲೆ
ನೆಲೆಗಳ ಮೇಲೆ
ಕನ್ನ ಹಾಕಿ ದಾಳಿ ಮಾಡಿ
ಕೊಳ್ಳೆ ಹೊಡೆದು,
ದಾರಿಗುಂಟ
ಒದ್ದಾಡುತ-ನರಳಾಡುತ ಬಿದ್ದ ನನ್ನವರ ಎದೆ-
ಮೇಲೆಯೇ ತುಳಿತದ
ಹೆಜ್ಜೆಗಳಿಟ್ಟು
ನಿರಾತಂಕವಾಗಿ ಸಾಗುತ್ತಿರುವ ನಿಮ್ಮ-
ಕಬಂಧ ಬಾಹುಗಳ ‘ಕೊಳ್ಳು’ವಿಕೆಯ ಕೊಲ್ಲುವಿಕೆಗೆ

ಕವಿಯು,ವಿಕೃತ ಮನದವರನು,ಅನಾಗರಿಕರನು,ಅನೀತಿಗರ ಪರಚಿದ ಗಾಯಕೆ ತೀರಾ ನಯವಾಗಿ ಮುಲಾಮು ಸವರಿ, ಶಬ್ದಗಳ ವಾಗ್ದಾಳಿಯಲಿ ಮಕಾಡೆ ಮಲಗಿಸುವ ವಾಸ್ತುವನ್ನು ಅರಿತಿದ್ದಾರೆ.ನೆತ್ತಿಯ ಮೇಲೆ ನೆರಳಿಲ್ಲದವರಿಗೆ,ಒಂದಿಷ್ಟು ಕೂಳಿಲ್ಲದವರಿಗೆ,ನಿರ್ಬಲರನು ತಮ್ಮ ಥಳುಕಿನ ಬೆಡಗಿನಲಿ ತುಳಿದು,ಅವರಿವರ ಸುಖವನು ಸುಲಿಗೆ ಮಾಡುವುದೇ ಕಬಂಧ ಬಾಹುಗಳದ್ದಾಗಿದೆ.

ಹೀಗೆ ಮಹೇಶ ಬಳ್ಳಾರಿಯವರು ಕೊಪ್ಪಳ ಜಿಲ್ಲೆಯ ಉತ್ತಮ ಸಾಹಿತಿಗಳಲ್ಲಿ ಒಬ್ಬರು.ಕಾವ್ಯದ ಪ್ರತಿ ಮಜಲುಗಳನು ವಿಸ್ತಾರವಾಗಿ,ಮನ ಮುಟ್ಟುವಂತೆ ವಿಶಿಷ್ಟ ಮತ್ತು ವಿನೂತನ ಶೈಲಿಯಲಿ ಬರೆಯುವ,ನೀಡುವ ಕೊಡುಗೆ ಅವರಿಗಿದೆ.ನಾಡಿನ ಅನೇಕ ಸಾಹಿತ್ಯ ಕಾರ್ಯಕ್ರಮಗಳನ್ನು ಲೀಲಾಜಾಲವಾಗಿ ಮಾಡುತ್ತಿರು ಸಾಧನೆಯು ಅವರ ಮುಡಿಗೇರಿದೆ.

“ಐ ಕಾಂಟ್ ಬ್ರೀದ್” *ಕವನ ಸಂಕಲನವು ಮೌಲಿಕವಾಗಿದೆ.ಬದುಕಿನ ಮರ್ಮವನು ತಿಳಿಸುವ,ನಯನಾಜೂಕಿನ ಕ್ರಾಂತಿ ಬಿಂಬಿಸಿದಂತೆ ಮಹೇಶ ಬಳ್ಳಾರಿ ಇವರ ವಿನಯ ಗುಣಗಳು ಇಲ್ಲಿ ಮೆರೆದಿವೆ.ಪುಸ್ತಕ ಓದಲು ಸಂತವೆನಿಸುತ್ತದೆ.ಆತ್ಮೀಯ ಓದುಗ ಸನ್ಮಿತ್ರರೆ,ಈ ಕೃತಿಯನ್ನೊಮ್ಮೆ ಓದಿರೆಂದು ತಿಳಿಸುತ್ತಾ ಮಗದೊಮ್ಮೆ ಮಹೇಶ ಬಳ್ಳಾರಿಯವರ ಉತ್ತಮೊತ್ತಮ ಕೃತಿಗಳು ಕನ್ನಡ ಸಾರಸ್ವತ ಲೋಕಕ್ಕೆ ಲೋಕಾರ್ಪಣೆಯಾಗುತ್ತಿರಲಿ ಎಂದು ಅಭಿನಂದಿಸುತ್ತೇನೆ.

ಶರಶ್ಚಂದ್ರ ತಳ್ಳಿ ಕುಪ್ಪಿಗುಡ್ಡ

- Advertisement -
- Advertisement -

Latest News

ದಿನಕ್ಕೊಬ್ಬ ಶರಣ ಮಾಲಿಕೆ

ಕಿನ್ನರಿ ಬ್ರಹ್ಮಯ್ಯ ........................................... 12ನೇ ಶತಮಾನದ ಬಸವಾದಿ ಶಿವಶರಣರ ಕೀರ್ತಿವಾರ್ತೆಯನ್ನು ಕೇಳಿ ಪ್ರಭಾವಿತರಾಗಿ ನಾಡು ಹೊರನಾಡಿನಿಂದ ಅನೇಕ ಜನ ಶರಣರು ಕಲ್ಯಾಣಕ್ಕೆ ಬರಹತ್ತಿದರು. ಬಸವಣ್ಣನವರ ಸಮಕಾಲೀನರಾಗಿದ್ದ ಶರಣರಾದ ಗುಜರಾತದಿಂದ...
- Advertisement -

More Articles Like This

- Advertisement -
close
error: Content is protected !!
Join WhatsApp Group