ಬೆಳಗಾವಿ: ಭಾರತವು ಜಗತ್ತಿಗೆ ಕೇವಲ ಸಂಖ್ಯಾಶಾಸ್ತ್ರದ ಶೂನ್ಯ ನೀಡಿಲ್ಲ. ಬುದ್ದ ಬಸವ ಅಂಬೇಡ್ಕರ ಎಂಬ ಮೂರು ಬೆಳಕಿನ ಹಾಗೂ ಜ್ಞಾನದ ಅಮರ ಜ್ಯೋತಿಗಳನ್ನು ನೀಡಿದೆ. ಈ ಅಮರ ಜ್ಯೋತಿಗಳು ಎಂದೂ ನಂದುವದಿಲ್ಲ. ಸದಾ ನಮ್ಮ ಬದುಕಿನಲ್ಲಿ ಬೆಳಕಾಗಿರುತ್ತವೆ ಎಂದು ಬಸವ ಭೀಮ ಸೇನೆಯ ಅಧ್ಯಕ್ಷ ಆರ್.ಎಸ್.ದರ್ಗೆ ಹೇಳಿದ್ದಾರೆ.
ಬಸವ ಭೀಮ ಸೇನೆಯ ವತಿಯಿಂದ ಶುಕ್ರವಾರದಂದು ನಗರದ ಶ್ರೀ ಬಸವೇಶ್ವರ ಉದ್ಯಾನದಲ್ಲಿಯ ಬಸವಣ್ಣನವರ ಪ್ರತಿಮೆಯ ಬಳಿ ಆಯೋಜಿಸಲಾಗಿದ್ದ ಬಸವಣ್ಣನವರ ಲಿಂಗೈಕ್ಯೆ ದಿನ ಬಸವ ಪಂಚಮಿ, ಬಸವ ಪಂಚಮಿ ನಿಮಿತ್ಯ ಲಿಂಗಾಯತ ಧರ್ಮಗುರುವಿಗೆ ಧನ್ಯವಾದ ಮತ್ತು ಧರ್ಮ ಕಟ್ಟಿದ ಬಸವಾದಿ ಶರಣರಿಗೆ ಶರಣು ಶರಣಾರ್ಥಿ ಕಾರ್ಯಕ್ರಮದ ನೇತೃತ್ವ ವಹಿಸಿ ಮಾತನಾಡಿದ ಅವರು, ಭಾರತದಲ್ಲಿ ಉದಯಿಸಿದ ಬುದ್ಧ ಧರ್ಮ ಇಂದು ಜಗತ್ತಿನ 7 ದೇಶಗಳಲ್ಲಿ ಅಧಿಕೃತ ಧರ್ಮವಾಗಿದೆ. 12 ನೇ ಶತಮಾನದಲ್ಲಿ ಬಸವಾದಿ ಶರಣರು ಹುಟ್ಟದಿದ್ದರೇ, ಭಾರತಕ್ಕೆ ಭವ್ಯವಾದ ಇತಿಹಾಸವೇ ಇರುತ್ತಿರಲಿಲ್ಲ. 20 ನೇ ಶತಮಾನದಲ್ಲಿ ಅಂಬೇಡ್ಕಕರು ಹುಟ್ಟದಿದ್ದರೇ, 21 ನೇ ಶತಮಾನವು ಭಾರತದ ಪಾಲಿಗೆ ಶೂನ್ಯ ಶತಮಾನವಾಗುತಿತ್ತು ಎಂದರು.
ಬಸವಣ್ಣನವರ ಹೆಸರು ಹೇಳಿಕೊಂಡು ಬದುಕುವ ಲಿಂಗಾಯತ ಮಠಾಧೀಶರುಗಳು, ಬಸವಣ್ಣನವರ ಮಕ್ಕಳಾಗಿ ಧರ್ಮದ ಹೋರಾಟಕ್ಕೆ ಎದ್ದು ನಿಲ್ಲಬೇಕು. ಅನುಭವ ಮಂಟಪವನ್ನು ಶಕ್ತಿ ಕೇಂದ್ರವನ್ನಾಸಬೇಕು ಎಂದು ಮನವಿ ಮಾಡಿದ ಅವರು ಬಸವಣ್ಣನವರಿಗೆ ಧನ್ಯವಾದ ಮತ್ತು ಬಸವಾದಿ ಶರಣರಿಗೆ ಶರಣು ಶರಣಾರ್ಥಿ ಹೇಳೀದರು.
ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಗೋಕಾಕ ತಾಲೂಕ ವಚನೋತ್ಸವ ಸಮಿತಿ ಅಧ್ಯಕ್ಷ ಜಿ.ಎಸ್.ಕರ್ಪೂರಮಠ ಅವರು, ಬಸವಾಭಿಮಾನಿಗಳು ಕೇವಲ ವಚನಗಳನ್ನು ಓದಿದರೇ ಸಾಲದು, ಲಿಂಗಾಯತ ಧರ್ಮದ ಅರ್ಥಪೂರ್ಣ ಆಚರಣೆಗಳನ್ನು ಆಚರಿಸಬೇಕು. ಬಸವಾದಿ ಶರಣರ ಆಶಯಗಳು ನಮ್ಮ ನಿತ್ಯ ಜೀವನದ ಭಾಗವಾಗಬೇಕು ಎಂದರು.
ಜಾಗತಿಕ ಲಿಂಗಾಯತ ಮಹಾಸಭೆಯ ಜಿಲ್ಲಾಧ್ಯಕ್ಷ ಬಸವರಾಜ ರೊಟ್ಟಿ ಮಾತನಾಡಿ ಲಿಂಗಾಯತ ಧರ್ಮದ ಮಾನ್ಯತೆಗಾಗಿಯೇ ಹುಟ್ಟಿಕೊಂಡಿರುವ ಜಾಗತಿಕ ಲಿಂಗಾಯತ ಮಹಾಸಭೆಯನ್ನು ಬಹುದೊಡ್ಡ ಮಟ್ಟದಲ್ಲಿ ಸಂಘಟಿಸಲಾಗುತ್ತಿದೆ.ಕರೋನಾ ನಿಯಂತ್ರಣಕ್ಕೆ ಬಂದ ನಂತರ ತಾಲೂಕು ಘಟಕಗಳನ್ನು ಹಾಗೂ ಗ್ರಾಮ ಘಟಕಗಳನ್ನು ಉದ್ಘಾಟಿಸಲಾಗುವದು ಎಂದರು.
ಸಾನ್ನಿಧ್ಯ ವಹಿಸಿದ್ದ ಲಿಂಗಾಯತ ಧರ್ಮ ಮಹಾಪೀಠದ ಶ್ರೀ ಬಸವಪ್ರಭು ಸ್ವಾಮೀಜಿಗಳು ಆಶೀರ್ವಚನ ನೀಡಿ, ಬಸವಣ್ಣನವರ ನಿಸರ್ಗಮಯ ಜೀವನವು ಇಂದು ವಿಶ್ವಕ್ಕೆ ಮೆಚ್ಚುಗೆಯಾಗಿದೆ. ಎಲ್ಲರನ್ನು ಅಪ್ಪಿಕೊಳ್ಳುವ ಬಸವಾದಿ ಶರಣರ ಹಾಗೂ ಲಿಂಗಾಯತ ಧರ್ಮಿಯರ ಬದುಕು ಪರಿಪೂರ್ಣ ಬದುಕು ಎಂದರು.
ಸಿದ್ರಾಮ ಸಾವಳಗಿ, ಬಿ.ಡಿ.ಪಾಟೀಲ, ಬಿ.ಎಸ್.ಪಾಟೀಲ, ಯಲ್ಲಪ್ಪ ಹುದಲಿ, ಸಂತೋಷ ಹೊಂಗಲ, ಹೀರಾಲಾಲ ಚವ್ಹಾಣ, ರಾಜಶ್ರೀ ದಯನ್ನವರ ಮುಂತಾವರು ಉಪಸ್ಥಿತರಿದ್ದರು.