ಸಿಂದಗಿ: ಧಾರ್ಮಿಕ ಅಲ್ಪಸಂಖ್ಯಾತರನ್ನು ಹಿಂದುಳಿದ ವರ್ಗ 2ಬಿ ಇಂದ ಕೈಬಿಟ್ಟ ಹಿನ್ನೆಲೆ ಕರ್ನಾಟಕ ರಾಜ್ಯ ಬಿಜೆಪಿ ಸರ್ಕಾರವು ಸಂಪುಟ ಸಭೆಯಲ್ಲಿ ಕೆಲವೊಂದಿಷ್ಟು ಕಾನೂನು ತಿದ್ದುಪಡಿ ಮಾಡಿದ್ದು ಅದರಲ್ಲಿ ಧಾರ್ಮಿಕ ಅಲ್ಪಸಂಖ್ಯಾತರ 4% 2ಬಿ ಮೀಸಲಾತಿಯನ್ನು ತೆಗೆದು 2ಸಿ ಹಾಗೂ 2ಡಿ ಒಕ್ಕಲಿಗ, ಪಂಚಮಸಾಲಿ ಸಮುದಾಯಗಳಿಗೆ ತಲಾ 2% ಕೊಟ್ಟಿದ್ದು ಅಸಾಂವಿಧಾನಿಕವಾಗಿದೆ ಎಂದು ಬಿಎಸ್‍ಪಿ ಪಕ್ಷದ ರಾಜ್ಯ ಪ್ರಧಾನ ಕಾರ್ಯದರ್ಶಿ ದಸ್ತಗೀರ್ ಮುಲ್ಲಾ ಹೇಳಿದ್ದಾರೆ.
ಈ ಕುರಿತು ಪತ್ರಿಕಾ ಹೇಳಿಕೆ ನೀಡಿದ ಅವರು, ಹಾಗೂ ಒಂದು ಸಮುದಾಯವನ್ನು ಗುರಿಯಾಗಿಟ್ಟುಕೊಂಡು ಉದ್ದೇಶ ಪೂರ್ವಕವಾಗಿ ಅಲ್ಪಸಂಖ್ಯಾತರನ್ನು ಕೈಬಿಟ್ಟಿದ್ದಾರೆ. ದೇಶದಲ್ಲಿ ಹಾಗೂ ರಾಜ್ಯದಲ್ಲಿ ಆರ್ಥಿಕವಾಗಿ, ಸಾಮಾಜಿಕವಾಗಿ, ಶೈಕ್ಷಣಿಕವಾಗಿ, ರಾಜಕೀಯವಾಗಿ ಎಸ್ಸಿ ಎಸ್ಟಿ ಗಿಂತಲೂ ಹಿಂದುಳಿದ ಸಮಾಜ ಯಾವುದಾದರು ಇದೇ ಅಂದ್ರೆ ಅದು ಧಾರ್ಮಿಕ ಅಲ್ಪಸಂಖ್ಯಾತರಾದ ಮುಸ್ಲಿಮರು ಅಂತ ನ್ಯಾಯಮೂರ್ತಿ ಸಾಚಾರ್ ಹಾಗೂ ರಂಗನಾಥ ಮಿಶ್ರಾ ವರದಿಗಳು ಅಧ್ಯಯನ ಮಾಡಿ ಸರ್ಕಾರಕ್ಕೆ ವರದಿ ಸಲ್ಲಿಸಿದ್ದು ಇದೆ. ಆದರೆ ಈ ಆಳುವ ಬಿಜೆಪಿ ಸರ್ಕಾರ ಉದ್ದೇಶ ಪೂರ್ವಕವಾಗಿ ಮುಸ್ಲಿಮರ ಮೀಸಲಾತಿ ಕಸಿದುಕೊಂಡಿದೆ.
ಅಷ್ಟಕ್ಕೂ 2ಸಿ, 2ಡಿ ಯಲ್ಲಿ ಬರುವ ಒಕ್ಕಲಿಗ ಮತ್ತು ಪಂಚಮಸಾಲಿ ಸಮುದಾಯಗಳು ಆರ್ಥಿಕವಾಗಿ, ಸಾಮಾಜಿಕವಾಗಿ, ಶೈಕ್ಷಣಿಕವಾಗಿ, ರಾಜಕೀಯವಾಗಿ ಪ್ರಬಲ ಇರುವ ಸಮುದಾಯಗಳು ಅವರಿಗೆ 2ಸಿ 2ಡಿ ಮೀಸಲಾತಿಯ ಅವಶ್ಯಕತೆ ಇಲ್ಲ.
ಮೀಸಲಾತಿ ಕೊಡುವುದಾದರೆ ಇನ್ನೂ ಸಾಕಷ್ಟು ಸಣ್ಣ ಅತೀ ಸಣ್ಣ ಹಿಂದುಳಿದ ಸಮುದಾಯಗಳಿವೆ ಅಂತವರಿಗೆ ಕೂಡಬೇಕಾಗಿತ್ತು. ಆದರೆ ಪಂಚಮಸಾಲಿ ಹಾಗೂ ಒಕ್ಕಲಿಗರಿಗೆ ಕೊಟ್ಟಿದ್ದು ದುರಂತ.
ಅದರಲ್ಲೂ ಇಂದು ಅತೀ ಹಿಂದುಳಿದ ಸಮುದಾಯದ ಮೀಸಲಾತಿ ಕಿತ್ತುಕೊಂಡು ಬೇರೆ ಸಮುದಾಯಕ್ಕೆ ಕೊಡುವುದು ಇದು ಅನ್ಯಾಯ ಈ ಸರ್ಕಾರದ ನಡೆಯನ್ನು ಖಂಡಿಸುತ್ತೇನೆ ಹಾಗೂ ಮುಸ್ಲಿಮರ ಮೀಸಲಾತಿಗೆ ಯಾವುದೇ ರೀತಿಯ ಧಕ್ಕೆ ಆಗದಂತೆ ನೋಡಿಕೊಳ್ಳಬೇಕು ಎಂದು ಕೇಂದ್ರ ಸರ್ಕಾರಕ್ಕೆ ಒತ್ತಾಯಿಸುತ್ತೇವೆ.
ಒಂದು ವೇಳೆ ಯಥಾಸ್ಥಿತಿ ಕಾಯ್ದುಕೊಳ್ಳದಿದ್ದರೆ ರಾಜ್ಯವ್ಯಾಪ್ತಿ ಉಗ್ರ ಹೋರಾಟ ನಡೆಸುವುದು ಅನಿವಾರ್ಯವಾಗುತ್ತದೆ ಎಂದು ಎಚ್ಚರಿಕೆ ನೀಡಿದ್ದಾರೆ.