ಬೆಳಗಾವಿ – ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷೆಯ ರೈಲು ಯೋಜನೆಯಾದ ವಂದೇ ಭಾರತ ರೈಲು ರಾಜ್ಯ ರಾಜಧಾನಿ ಬೆಂಗಳೂರಿನಿಂದ ಧಾರವಾಡದವರೆಗೆ ಶುರುವಾಗಿದೆ. ಇದು ಅತ್ಯಂತ ಒಳ್ಳೆಯ ಕೆಲಸವೇನೋ ಸರಿ ಆದರೆ ಇದೇ ವಿಷಯದಲ್ಲಿ ಬೆಳಗಾವಿಗೆ ಯಾಕೆ ಅನ್ಯಾಯವಾಯಿತು ಎಂಬುದೇ ತಿಳಿಯುತ್ತಿಲ್ಲ. ಧಾರವಾಡದ ವರೆಗೆ ಬಂದ ರೈಲು ಬೆಳಗಾವಿಗೆ ಬರಬಾರದಿತ್ತೇ ?
ಬಹುಶಃ ದಿ. ಸುರೇಶ ಅಂಗಡಿಯವರು ಇಂದು ಜೀವಂತವಾಗಿದ್ದು ರೈಲು ಮಂತ್ರಿಯಾಗಿದ್ದರೆ ಇದು ಸಾಧ್ಯವಾಗುತ್ತಿತ್ತೋ ಏನೋ… ಆದರೆ ಈ ನಮ್ಮ ಸರ್ಕಾರಗಳಿಗೆ ಏನಾಗಿದೆ ? ಬೆಳಗಾವಿಗೆ ಯಾಕೆ ಅನ್ಯಾಯವಾಗಲು ಬಿಡುತ್ತಿದ್ದಾರೆ ? ಬೆಳಗಾವಿ ಎಂದರೆ ರಾಜ್ಯದ ಪ್ರತಿಷ್ಠೆ. ಆದರೆ ಎಲ್ಲ ವಿಭಾಗಗಳಿಂದಲೂ ಬೆಳಗಾವಿಗೆ ಅನ್ಯಾಯ ರಾಜ್ಯ ಸರ್ಕಾರ ಹಾಗೂ ಸಂಸದರ ಇಚ್ಛಾಶಕ್ತಿಯ ಕೊರತೆಯಿಂದಾಗಿ ಅನ್ಯಾಯವಾಗುತ್ತಿದೆ.
ಬೆಳಗಾವಿಯ ವಿಮಾನ ನಿಲ್ದಾಣದಿಂದ ಕೆಲವು ವಿಮಾನ ಹಾರಾಟಗಳು ರದ್ದಾಗಿವೆ, ಬೆಳಗಾವಿಯಲ್ಲಿ ಇದ್ದ ರೇಷ್ಮೆ ಇಲಾಖೆಯನ್ನು ಹಾವೇರಿಗೆ ಸ್ಥಳಾಂತರಗೊಳಿಸಲಾಯಿತು, ಸುವರ್ಣ ಸೌಧ ನಿರ್ಮಾಣವಾಯಿತಾದರೂ ಅಲ್ಲಿಗೆ ಯಾವುದೇ ಇಲಾಖೆಗಳ ಕಚೇರಿಗಳನ್ನು ಸ್ಥಳಾಂತರ ಮಾಡದೆ ಭೂತ ಬಂಗಲೆಯನ್ನಾಗಿ ಮಾಡಲಾಗಿದೆ, ಸ್ಮಾರ್ಟ್ ಸಿಟಿಯಾಗಲಿರುವ ಬೆಳಗಾವಿ ಇನ್ನೂ ಹದಗೆಟ್ಟು ಹೈದರಾಬಾದ್ ಆಗಿದೆ… ಹೀಗೆ ಅನೇಕ ವಿಷಯಗಳಲ್ಲಿ ಬೆಳಗಾವಿಗೆ ಅನ್ಯಾಯವಾಗುತ್ತಿದೆ.
ಬೆಳಗಾವಿಯು ಮಹಾರಾಷ್ಟ್ರ ಹಾಗೂ ಗೋವಾ ರಾಜ್ಯಗಳೊಡನೆ ನೇರ ಸಂಪರ್ಕ ಹೊಂದಿದ್ದು ಅನೇಕ ವಿಷಯಗಳಲ್ಲಿ ಪರಸ್ಪರ ಅವಲಂಬಿತರಾಗಿವೆ. ಅಲ್ಲದೆ ಬೆಳಗಾವಿ ಜಿಲ್ಲೆಯಾದ್ಯಂತದಿಂದ ಜನರು ನಗರಕ್ಕೆ ಬರುತ್ತಿದ್ದು ನಗರವು ಕೈಗಾರಿಕಾ ಕ್ಷೇತ್ರದಲ್ಲಿ ಕೂಡ ಸಾಕಷ್ಟು ಬೆಳವಣಿಗೆ ಕಂಡಿದೆ. ಇದು ಇನ್ನೂ ಉತ್ತರೋತ್ತರ ಅಭಿವೃದ್ಧಿ ಕಾಣಬೇಕಾದರೆ ರೈಲು ಹಾಗೂ ವೈಮಾನಿಕ ಕ್ಷೇತ್ರದಲ್ಲಿ ಅಭಿವೃದ್ಧಿ ಕಾಣಬೇಕಾಗಿದೆ ಈ ಹಿನ್ನೆಲೆಯಲ್ಲಿ ವಂದೇ ಭಾರತ ರೈಲು ಬೆಳಗಾವಿಯ ತನಕ ಬಂದಿದ್ದರೆ ಹೆಚ್ಚು ಅನುಕೂಲವಾಗುತ್ತಿತ್ತು.
ಆದರೆ ಇದರ ಹಿಂದೆ ಸಂಸದರ ನಿಷ್ಕ್ರಿಯತೆ ಕಾರಣ ಎಂದರೆ ತಪ್ಪಲ್ಲ. ರಾಜ್ಯ ಸಭಾ ಸದಸ್ಯ ಈರಣ್ಣ ಕಡಾಡಿ ಇದ್ದಾರೆ, ಸಂಸದೆ ಮಂಗಳಾ ಅಂಗಡಿ ಇದ್ದಾರೆ. ಇವರಾದರೂ ತಮ್ಮ ಪತಿಯ ಕನಸನ್ನು ನನಸು ಮಾಡಲು ಪ್ರಯತ್ನಿಸಬೇಕಿತ್ತು. ಬಹಳ ದಿನಗಳಿಂದ ಜನರ ಬೇಡಿಕೆಯಾದ ವಂದೇ ಭಾರತ ರೈಲನ್ನು ಬೆಳಗಾವಿಗೆ ತರಲು ಕಡಾಡಿಯವರು ವಿಶೇಷ ಮುತುವರ್ಜಿ ವಹಿಸಬೇಕಾಗಿತ್ತು ಆದರೆ ಇದ್ಯಾವುದೂ ಆಗದೆ ರೈಲು ಮಾತ್ರ ಧಾರವಾಡದ ತನಕ ಬಂದು ನಿಂತಿದೆ.
ಇನ್ನೂ ಕಾಲ ಮಿಂಚಿಲ್ಲ ಜಿಲ್ಲೆಯ ಸಂಸದರು, ಇನ್ನುಳಿದ ರಾಜಕೀಯ ನಾಯಕರು ಕಾರ್ಯ ಪ್ರವೃತ್ತರಾದರೆ ವಂದೇ ಭಾರತ ರೈಲು ಬೆಳಗಾವಿಯ ತನಕವೂ ಉರುಳಿಕೊಂಡು ಬರಬಹುದು. ಕಾದು ನೋಡಬೇಕಷ್ಟೇ…
ಉಮೇಶ ಬೆಳಕೂಡ
ಮೂಡಲಗಿ