ಸಿಂದಗಿ- ಮಾಜಿ ಸಚಿವ ದಿ.ಎಮ್.ಸಿ.ಮನಗೂಳಿ ಅವರ ಮೂರನೆ ಪುಣ್ಯಸ್ಮರಣೆ ಕಾರ್ಯಕ್ರಮವು ಪಟ್ಟಣದ ಎಚ್.ಜಿ.ಪದವಿ ಪೂರ್ವ ಕಾಲೇಜ ಮೈದಾನದಲ್ಲಿ ರವಿವಾರ ಅತ್ಯಂತ ಅರ್ಥಪೂರ್ಣವಾಗಿ ನೆರವೇರಿತು.
ಎಮ್.ಸಿ.ಮನಗೂಳಿ ಅವರ ಸಮಾಧಿ ಹೂಗುಚ್ಚಗಳಿಂದ ಸಿಂಗಾರಗೊಂಡಿತ್ತು. ಬೆಳಗ್ಗೆ ಎಮ್.ಸಿ,ಮನಗೂಳಿ ಅವರ ಸಮಾಧಿಗೆ ರುದ್ರಾಭೀಷೇಕ, ಪೂಜೆಯನ್ನು ಮನಗೂಳಿ ಅವರ ಧರ್ಮಪತ್ನಿ ಸಿದ್ದಮ್ಮಗೌಡತಿ ನೇತೃತ್ವದಲ್ಲಿ ಕುಟುಂಬದವರು ನೆರವೇರಿಸಿದರು.
ಎಮ್.ಸಿ.ಮನಗೂಳಿ ಅವರು ಈ ನಾಡು ಕಂಡ ಅಪರೂಪದ ರಾಜಕಾರಣಿ, ಸರಳತೆ, ಮಾನವೀಯತೆ ಮತ್ತು ಮಮತೆಗೆ ಹೊಸ ಭಾಷ್ಯ ಬರೆದ ಮನಗೂಳಿ ಅವರ ಬದುಕು ಒಂದು ಇತಿಹಾಸ. ಅವರ ಶರೀರ ನಮ್ಮಿಂದ ಮರೆಯಾಗಿರಬಹುದು ಆದರೆ ಅವರ ಅಭಿವೃದ್ದಿ ಪರವಾದ ಕಾರ್ಯಗಳು ಇಂದಿಗೂ ಜೀವಂತವಾಗಿವೆ. ಅವರ ನಡೆ ನುಡಿ ನಿಜಕ್ಕೂ ಸಾತ್ವಿಕತೆಯಿಂದ ಕೂಡಿತ್ತು. ನಾವು ಅನೇಕ ರಾಜಕಾರಣ ಗಳನ್ನು ನೋಡಿದ್ದೇವೆ ಆದರೆ ಮನಗೂಳಿ ಅವರಂತಹ ವ್ಯಕ್ತಿತ್ವದ ರಾಜಕಾರಣ ಗಳನ್ನು ಕಂಡಿಲ್ಲ. ಬದುಕಿನ ಅನೇಕ ಕಷ್ಟಗಳನ್ನು ಎದುರಿಸಿ ಸಾಮಾನ್ಯ ವ್ಯಕ್ತಿಯಾಗಿದ್ದವರು ತಮ್ಮ ವ್ಯಕ್ತಿತ್ವದಿಂದ ಅಸಾಮಾನ್ಯ ಸಾಧನೆ ಮಾಡಿದವರು. ಹೋರಾಟದ ಬದುಕನ್ನೇ ನಿಲುವಾಗಿಸಿ ಸರಳ ಬದುಕನ್ನು ನಿರ್ವಹಿಸಿದ ಅವರ ರಾಜಕಾರಣ ಚಿಂತನಮಯವಾಗಿತ್ತು ಎಂದು ಕಾರ್ಯಕ್ರಮದಲ್ಲಿ ನೆರದಿದ್ದ ಜನಸ್ತೋಮ ದಿ.ಎಮ್.ಸಿ.ಮನಗೂಳಿ ಅವರ ಗುಣಗಾನವನ್ನು ಮಾಡುತ್ತಿದ್ದುದುಕಂಡು ಬಂದಿತು.
ನಂತರ ತಾಲೂಕಿನ ಸಾವಿರಾರು ಜನ ದಿ.ಮನಗೂಳಿ ಅವರ ಅಭಿಮಾನಿಗಳ ಬಳಗ, ವಿವಿಧ ಶಾಲಾ ಕಾಲೇಜುಗಳ ವಿದ್ಯಾರ್ಥಿಗಳು, ಕಾರ್ಯಕರ್ತರು, ರೈತರು,ಶಿಕ್ಷಕರು ಸೇರಿದಂತೆ ಅನೇಕರು ಮನಗೂಳಿ ಅವರ ಸಮಾಧಿಗೆ ತಂಡೋಪತಂಡವಾಗಿ ಆಗಮಿಸಿ ಪುಷ್ಪ ನಮನ ಸಲ್ಲಿಸಿದರು.
ಈ ಸಂದರ್ಭದಲ್ಲಿ ದಿ.ಎಮ್.ಸಿ.ಮನಗೂಳಿ ಅವರ ಧರ್ಮಪತ್ನಿ ಸಿದ್ದಮ್ಮಗೌಡತಿ ಮಕ್ಕಳಾದ ಡಾ.ಅರವಿಂದ ಮನಗೂಳಿ, ಶಾಸಕ ಅಶೋಕ ಮನಗೂಳಿ, ಡಾ.ಶಾಂತವೀರ ಮನಗೂಳಿ, ಡಾ.(ಚನ್ನವೀರಪ್ಪ (ಮುತ್ತು) ಮನಗೂಳಿ, ಅನ್ನಪೂರ್ಣಾ ನಿಡೋಣ ಮತ್ತು ಸೊಸೆಯಂದಿರು, ಮೊಮ್ಮಕ್ಕಳು ಸೇರಿದಂತೆ ತಾಲೂಕಿನ ಸಾವಿರಾರು ಜನ ಅಭಿಮಾನಿಗಳು, ಕುಟುಂಬಸ್ಥರು, ವ್ಯಾಪಾರಸ್ಥರು, ವಿವಿಧ ಸಂಘಟನೆಗಳ ಕಾರ್ಯಕರ್ತರು, ವಿವಿಧ ಪಕ್ಷದ ಮುಖಂಡರು, ತಾಲೂಕಾ ಶಿಕ್ಷಣ ಪ್ರಸಾರಕ ಮಂಡಳಿಯ ನಿರ್ದೇಶಕರು, ಸಂಸ್ಥೆಯ ವಿವಿಧ ಅಂಗ ಸಂಸ್ಥೆಗಳ ಮುಖ್ಯಸ್ಥರು, ಶಿಕ್ಷಕರು, ವಿದ್ಯಾರ್ಥಿಗಳು ಸೇರಿದಂತೆ ಸಾವಿರಾರೂ ಜನ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.