ಸಿಂದಗಿ– ಜೀವನದಲ್ಲಿ ಎಷ್ಟೇ ಕಷ್ಟಗಳು ಬಂದರೂ ಜಗ್ಗದೆ ಸಾಧಿಸುವೇ ಎಂಬ ಛಲದಿಂದ ಮುನ್ನುಗ್ಗುವ ಭಾವ ಹೊಂದಿದವರಲ್ಲಿ ದಿ.ಎಮ್.ಸಿ.ಮನಗೂಳಿ ಅವರು ಒಬ್ಬರೂ ಅವರೊಬ್ಬ ಅಜಾತಶತ್ರು ಎಂದು ವಿಜಯಪುರ ಬಿರಾದಾರ ಕಣ್ಣಿನ ಆಸ್ಪತ್ರೆಯ ವೈದ್ಯ ಡಾ.ಸುನೀಲ ಬಿರಾದಾರ ಅವರು ಹೇಳಿದರು.
ಅವರು ಪಟ್ಟಣದ ಎಚ್.ಜಿ.ಕಾಲೇಜು ಮೈದಾನದಲ್ಲಿ ರವಿವಾರ ಸಿಂದಗಿಯ ಮನಗೂಳಿ ಕುಟುಂಬ ಹಮ್ಮಿಕೊಂಡಿರುವ ಮಾಜಿ ಸಚಿವ ಎಮ್.ಸಿ.ಮನಗೂಳಿ ಅವರ ಮೂರನೆ ಪುಣ್ಯಸ್ಮರಣೆಯ ನಿಮಿತ್ತ ಆಯೋಜಿಸಲಾದ ಉಚಿತ ನೇತ್ರ ತಪಾಸಣೆ ಮತ್ತು ಶಸ್ತ್ರಚಿಕಿತ್ಸೆ ಶಿಬಿರದಲ್ಲಿ ಭಾಗವಹಿಸಿ ಮಾತನಾಡಿದರು.
ದಿ.ಮನಗೂಳಿ ಅವರು ಅತ್ಯಂತ ಸರಳ ವ್ಯಕ್ತಿ ಇಂದಿನ ಯುವ ರಾಜಕಾರಣಿಗಳಿಗೆ ಅವರೊಬ್ಬ ಮಾದರಿ. ಮಾತು ಸಾಧನೆಯಾಗಬಾರದು ಸಾಧನೆ ಮಾತಾಗಬೇಕು ಎಂಬುದನ್ನು ಮಾಡಿ ತೋರಿಸಿದ ವ್ಯಕ್ತಿತ್ವ ಅವರದು ಎಂದ ಅವರು ಇಂದಿನ ಒತ್ತಡದ ಬದುಕಿನಲ್ಲಿ ನಾವು ನಮ್ಮ ಆರೋಗ್ಯದ ಕಡೆಗೆ ಹೆಚ್ಚು ಮಹತ್ವ ನೀಡುತ್ತಿಲ್ಲ. ದೇಹದ ಎಲ್ಲ ಅಂಗಗಳಲ್ಲಿ ಕಣ್ಣು ಕೂಡಾ ಶ್ರೇಷ್ಠ ಅಂಗ ಅದನ್ನು ನಾವೆಲ್ಲ ನಿರಂತರ ರಕ್ಷಣೆ ಮಾಡಿಕೊಳ್ಳಬೇಕು. ದಿ.ಮನಗೂಳಿ ಅವರ ಪುಣ್ಯಸ್ಮರಣೆಗೆ ಉಚಿತ ನೇತ್ರ ಶಿಬಿರ ಆಯೋಜನೆ ಮಾಡಿದ್ದು ಅತ್ಯಂತ ಶ್ಲಾಘನೀಯ ಕಾರ್ಯ ಇದರಿಂದ ಅದೆಷ್ಟೋ ಬಡ ಜನತೆಗೆ ಈ ಶಿಬಿರ ಅನುಕೂಲ ಮಾಡಿಕೊಡಲಿದೆ ಎಂದರು.
ಶಿಬಿರಕ್ಕೆ ಶಾಸಕ ಅಶೋಕ ಮನಗೂಳಿ ಚಾಲನೆ ನೀಡಿ ಮಾತನಾಡಿ, ನಮ್ಮ ತಂದೆ ಅವರು ಬಡ ಜನತೆ ಹಾಗೂ ಗ್ರಾಮೀಣ ಭಾಗದ ಜನತೆಯ ಮೇಲೆ ಹೆಚ್ಚು ಪ್ರೀತಿವುಳ್ಳವರಾಗಿದ್ದವರು. ದೇಹದ ಅತ್ಯಂತ ಅಮೂಲ್ಯ ಭಾಗದ ಚಿಕಿತ್ಸೆಗೆ ಇಂದಿನ ದಿನಮಾನಗಳಲ್ಲಿ ಲಕ್ಷಾಂತರ ರೂಪಾಯಿಗಳು ಖರ್ಚಾಗುತ್ತದೆ. ಪ್ರಸ್ತುತ ಬರಗಾಲದ ಸಮಯ ಇಂಥ ದಿನಗಳಲ್ಲಿ ಗ್ರಾಮೀಣ ಭಾಗದ ಮತ್ತು ನಗರ ಭಾಗದ ಜನತೆಗೆ ಅನುಕೂಲವಾಗಲಿ ಎಂದು ಅವರ ಪುಣ್ಯಸ್ಮರಣೆಯ ದಿನದಂದು ದಿ.ಎಮ್.ಸಿ.ಮನಗೂಳಿ ಪ್ರತಿಷ್ಠಾನದಿಂದ ಉಚಿತ ನೇತ್ರ ತಪಾಸಣೆ ಹಾಗೂ ಶಸ್ತ್ರ ಚಿಕಿತ್ಸೆ ಶಿಬಿರವನ್ನು ಆಯೋಜಿಸಲಾಗಿದೆ. ಮುಂಬರುವ ದಿನಗಳಲ್ಲಿ ಪ್ರತಿಷ್ಠಾನದಿಂದ ಅನೇಕ ಸಾಮಾಜಿಕ, ಶೈಕ್ಷಣಿಕ ಕಾರ್ಯಕ್ರಮಗಳನ್ನು ರೂಪಿಸುವ ಯೋಜನೆಯನ್ನು ಹಮ್ಮಿಕೊಂಡಿದ್ದೇವೆ ಎಂದರು.
ಈ ವೇಳೆ 312 ಜನರು ಉಚಿತ ನೇತ್ರ ತಪಾಸಣೆಗೆ ಒಳಪಟ್ಟರು ಅವರಲ್ಲಿ 64 ಜನರು ಉಚಿತ ನೇತ್ರ ಶಸ್ತ್ರಚಿಕಿತ್ಸೆಗೆ ಒಳಪಟ್ಟಿದ್ದಾರೆ.
ಕಾರ್ಯಕ್ರಮದಲ್ಲಿ ಕೃಷಿಕ ಸಮಾಜದ ಮುಖಂಡ ಶಿವಪ್ಪಗೌಡ ಬಿರಾದಾರ, ಎಮ್.ಎಸ್.ಪಾಟೀಲ, ಗೋಲ್ಲಾಳಪ್ಪಗೌಡ ಪಾಟೀಲ, ಮಹಾದೇವಪ್ಪಗೌಡ ಬಿರಾದಾರ, ಡಾ. ಸಂಗಮೇಶ ಪಾಟೀಲ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸುರೇಶ ಪೂಜಾರಿ, ಸಾಧಿಕ ಸುಂಬಂಡ ಸೇರಿದಂತೆ ಅನೇಕರು ಇದ್ದರು.