ದೇವರ ಅಸ್ತಿತ್ವ ಮತ್ತು ಸೃಷ್ಟಿ
ಚಿತ್ರವನು ನವಿಲೊಳು ವಿಚಿತ್ರವನು ಗಗನದೊಳು
ಪತ್ರ ಪುಷ್ಪಗಳ ವಿವಿಧ ವರ್ಣಗಳಿಂದ
ಚಿತ್ರಿಸಿದವರಾರು ? ಸರ್ವಜ್ಞ
ಈ ಸೃಷ್ಟಿಯಲ್ಲಿ ಅನೇಕ ಅದ್ಭುತಗಳಿವೆ.ಅದಕ್ಕೆ ಕಾರಣ ಕಣ್ಣಿಗೆ
ಕಾಣದ ಶಕ್ತಿಯಿದೆ.ಅದುವೆ ದೇವರು ಎಂದು ಸರ್ವಜ್ಞನ ಸಂದೇಶ. ಭೂತಭೂತಗಳು ಕೂಡಿ ಅದ್ಭುತವು ಜನಿಸಿತ್ತು
ಎಂದು ಅಲ್ಲಮ ಹೇಳುವಂತೆ ಪಂಚಭೂತಗಳಿಂದ ಜಗತ್ತು,
ಜೀವಿಗಳು ಸೃಷ್ಟಿಯಾದವು. ಆದರೆ ಅವುಗಳ ಹಿಂದೆ ದೇವ
ಇದ್ದಾನೆ. ಪ್ರಕೃತಿ ಪುರುಷರಿಂದ ಜಗತ್ತು ಉಂಟಾಯಿತು.
ಪಕ್ಷಿಗಳಲ್ಲಿ ಅತಿ ಸುಂದರವಾದ ನವಿಲಿನ ಗರಿಗಳಲ್ಲಿ ಬಣ್ಣದ
ಕಣ್ಣುಗಳನ್ನು , ಆಕಾಶದಲ್ಲಿ ಚಂದ್ರ ಸೂರ್ಯ ನಕ್ಷತ್ರ ,ಮೋಡ
ಅಂತರದಲ್ಲಿ ಚಿತ್ರವಿಚಿತ್ರವಾಗಿ ಬೆಳಗುವುದನ್ನು, ಗಿಡಮರಬಳ್ಳಿಗಳಲ್ಲಿ ಬಹಳ ಸುಂದರವಾದ ಎಲೆ ಮತ್ತು ಹೂವುಗಳ್ನು ಚಿತ್ರಿಸಿದವನು ಯಾರು ಎಂದು ಬೆರಗಾಗಿ ಕೇಳುವುದರ ಮುಖಾಂತರ ದೇವರ ಅಸ್ತಿತ್ವ ಮತ್ತು ಅವನ ಸೃಷ್ಟಿಯನ್ನು ಸರ್ವಜ್ಞ ಸಾಬೀತುಪಡಿಸುತ್ತಾನೆ.
ಇಂಗಿನೊಳು ನಾತವನು ತೆಂಗಿನೊಳಗೆಳೆನೀರ
ಭೃಂಗ ಕೋಗಿಲೆಯ ಕಂಠದೊಳು ಗಾಯನವ
ತುಂಬಿದವರಾರು ? ಸರ್ವಜ್ಞ
ಇಂಗು ಒಂದು ಗಿಡದ ಹಾಲು.ಅದು ಆರೋಗ್ಯಕ್ಕೆ ಮತ್ತು
ಜೀರ್ಣಶಕ್ತಿ ಹೆಚ್ಚಿಸುವ ಔಷಧ. ಆದರೆ ಅದಕ್ಕೆ ಬಹಳ
ತೀಷ್ಣವಾದ ವಾಸನೆಯಿದೆ. ಅದಕ್ಕೆ ಆ ವಾಸನೆ ಹೇಗೆ ಬಂತು ?ತೆಂಗಿನ ಕಾಯಿಯ ಎಳೆನೀರು ಆರೋಗ್ಯಕ್ಕೆ ತುಂಬಾ ಒಳ್ಳೆಯದು.ಆ ನೀರು ಕುಡಿಯುವುದರಿಂದ ಕರುಳುಗಳ ಕಲ್ಮಶ ತೊಲಗಿ ಜೀರ್ಣ ಶಕ್ತಿ ಹೆಚ್ಚಿಸುತ್ತದೆ. ತೆಂಗು ಕೆಳಗಿಂದ ನೀರು ಹೀರಿ ಮೇಲಿರುವ ಕಾಯಿಯಲ್ಲಿ ಹೇಗೆ ಸೇರಿಸಿತು ?
ಮತ್ತು ಜೇನುನೊಣ ಮತ್ತು ಕೋಗಿಲೆಗಳು ಕಿವಿಗೆ
ಇಂಪಾದ ಸುಮಧುರ ನಾದ ಹೊರಡಿಸುತ್ತವೆ. ಅವುಗಳ
ಕೊರಳಿನಲ್ಲಿ ಆ ಇಂಪಾಗಿ ಹಾಡುವ ಕಲೆ ಹೇಗೆ ಬಂತು?
ಹೀಗೆ ಪ್ರಶ್ನಿಸುತ್ತ ಸರ್ವಜ್ಞ ಪರೋಕ್ಷವಾಗಿ ಆ ದೇವರು ಎಂದು
ಉತ್ತರಿಸುತ್ತಾನೆ.
ಹಿಡಿಹಣ್ಣು ಕುಂಬಳಕೆ ಮಿಡಿಹಣ್ಣು ಆಲಕ್ಕೆ
ಆಡಿ ನೆಳಲೊಳಿಪ್ಪ ಪಾಂಥ ತಾ ಕೆಡದಂತೆ
ಮೃಡನು ಮಾಡಿಹನು ಸರ್ವಜ್ಞ
ಕೆಳಗೆ ಹಬ್ಬಿರುವ ಸಣ್ಣ ಕುಂಬಳ ಬಳ್ಳಿಯಲ್ಲಿ ದೊಡ್ಡದಾದ ಕುಂಬಳ ಕಾಯಿಯನ್ನು ಸೃಷ್ಟಿದ್ದಾನೆ. ಆದರೆ ದೊಡ್ಡ
ಮರವಾದ ಆಲದ ಗಿಡದಲ್ಲಿ ಅತಿ ಚಿಕ್ಕ ಹಣ್ಣು ಸೃಷ್ಟಿಸಿದ್ದಾನೆ.
ದೇವರು ಎಂಥ ದಡ್ದ ಇದ್ದಾನೆ. ಹೀಗೆಂದು ಪ್ರಯಾಣಿಕನೊಬ್ಬ ಆಲದಗಿಡದ ಕೆಳಗೆ ಕೂತು ಆಲೋಚಿಸುತ್ತಾನೆ.ಆಗ ಆಲದ
ಕಾಯಿಗಳು ನಾಲ್ಕಾರು ತಲೆಯ ಮೇಲೆ ಬೀಳಲು ಅವನಿಗೆ
ಅರ್ಥವಾಗುತ್ತದೆ. ಏಕೆಂದರೆ ಕಂಬಳಕಾಯಿಯ ಗಾತ್ರದ
ಕಾಯಿಗಳು ತಲೆಮೇಲೆ ಬಿದ್ದಿದ್ದರೆ ನನ್ನ ಗತಿ ಏನಾಗುತಿತ್ತು.
ನಿಜವಾಗಿ ದೇವರು ಜಾಣನೆಂದು ಪ್ರಶಂಸೆ ಮಾಡುತ್ತಾನೆ.
ಹೀಗೆ ಒಂದು ಚಿಕ್ಕ ಕಥೆಯನ್ನು ಮೂರು ಸಾಲಿನಲ್ಲಿ ಹೇಳಿ
ದೇವರ ಸೃಷ್ಟಿಯನ್ನು ಹೇಳುವುದರ ಮುಖಾಂತರ ದೇವರ
ಅಸ್ತಿತ್ವವನ್ನು ರುಜುವಾತು ಮಾಡುತ್ತಾನೆ
ಎನ್.ಶರಣಪ್ಪ ಮೆಟ್ರಿ
ಗಂಗಾವತಿ
944903090