ಮೂಡಲಗಿ: ‘ಬಡ ಕಲಾವಿದರಾಗಿರುವ ಉತ್ತರ ಕರ್ನಾಟಕದ ಜಾನಪದ ಕಲಾವಿದರು ತಮ್ಮ ಕಲೆಗಳಲ್ಲಿ ಶ್ರೀಮಂತಿಕೆಯನ್ನು ಹೊಂದಿದ್ದಾರೆ’ ಎಂದು ಗೋಕಾಕದ ಜಾನಪದ ವಿದ್ವಾಂಸ ಡಾ. ಸಿ.ಕೆ. ನಾವಲಗಿ ಹೇಳಿದರು.
ತಾಲ್ಲೂಕಿನ ಕಲ್ಲೋಳಿಯ ಶ್ರೀ ರಾಮಲಿಂಗೇಶ್ವರ ಶಿಕ್ಷಣ ಸಂಸ್ಥೆಯ ಆತಿಥ್ಯದಲ್ಲಿ ಬೆಂಗಳೂರಿನ ಕರ್ನಾಟಕ ಜಾನಪದ ಅಕಾಡೆಮಿ ಹಾಗೂ ಕಲ್ಲೋಳಿಯ ವೀರಭದ್ರೇಶ್ವರ ಜಾನಪದ ಕಲಾ ಪೋಷಕ ಸಂಘ ಇವರ ಆಶ್ರಯದಲ್ಲಿ ಜರುಗಿದ ಗ್ರಾಮೀಣ ಜಾನಪದ ಕಲೆಗಳ ಸಮಾವೇಶದ ಸಮಾರೋಪದ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಜಾನಪದವು ಎಂದೂ ಸಾಯುವುದಿಲ್ಲ ಅದು ಮನುಷ್ಯರ ಸಾವನ್ನು ದೂರ ಮಾಡುವಂತ ಶಕ್ತಿಯನ್ನು ಹೊಂದಿದೆ ಎಂದರು.
ಉತ್ತರ ಕರ್ನಾಟಕದಲ್ಲಿ ಸಾಕಷ್ಟು ಜಾನಪದ ಕಲೆಗಳು ಇದ್ದರೂ ಸಹ ಕಲೆಗಳ ಮತ್ತು ಕಲಾವಿದರ ಬಗ್ಗೆ ನಿರ್ಲಕ್ಷತೆಯು ಮೊದಲಿನಿಂದಲೂ ನಡೆದು ಬಂದಿದೆ. ಜಾನಪದ ಕಲೆಗಳು ಉಳಿಯಬೇಕಾದರೆ ಮತ್ತು ಕಲಾವಿದರು ಬೆಳೆಯಬೇಕಾದರೆ ಸರ್ಕಾರ, ಅಕಾಡೆಮಿಗಳು ಉತ್ತರ ಕರ್ನಾಟಕದ ಕಲಾವಿದರಿಗೆ ಹೆಚ್ಚು ಅವಕಾಶಗಳನ್ನು ನೀಡಬೇಬೇಕು ಎಂದರು.
ಬೆಳಗಾವಿ ಜಿಲ್ಲೆಯಲ್ಲಿ ಸಾಕಷ್ಟು ಜಾನಪದ ಕಲೆಗಳು ಬೆಳೆದು ಬಂದಿವೆ. ಆದರೆ ಪ್ರೋತ್ಸಾಹವಿಲ್ಲದೆ ನಶೀಸಿ ಹೋಗುವಂತ ಅಪಾಯವಿದೆ. ಜಾನಪದ ಕಲೆಗಳಿಗೆ ಪ್ರೋತ್ಸಾಹ ನೀಡುವಂತ ಕಾರ್ಯಕ್ರಮಗಳು ಹೆಚ್ಚು ಹೆಚ್ಚು ಆಗಬೇಕು ಎಂದರು.
ಜಾನಪದ ಕಲಾವಿದ ಈಶ್ವರಚಂದ್ರ ಬೆಟಗೇರಿ ‘ಪುರವಂತಿಕೆ ಕಲೆ’, ಮೂಡಲಗಿಯ ಬಾಲಶೇಖರ ಬಂದಿ ‘ಸಂಬಾಳ ಕಲೆ’, ನೇಸರಗಿಯ ಎಂ.ಬಿ. ಕೊಪ್ಪದ ‘ವೀರಗಾಸೆ ಕಲೆ’, ಬಿ.ಸಿ. ಹೆಬ್ಬಾಳ ‘ ಕರಡಿ ಮಜಲು ಕಲೆ’ ಹಾಗೂ ಅಥಣಿಯ ಅಶೋಕ ಕಾಂಬಳೆ ‘ಚೌಡಕಿ ಕಲೆ’ ಕುರಿತು ಮಾತನಾಡಿದರು.
ಕಾಗವಾಡದ ಡಾ. ಆನಂದಕುಮಾರ ಜಕ್ಕಣ್ಣವರ ಆಶಯ ನುಡಿ ಹೇಳಿದರು, ಸಮಾರೋಪ ಭಾಷಣವನ್ನು ಕಸಾಪ ಅಧ್ಯಕ್ಷ ಡಾ. ಸಂಜಯ ಶಿಂಧಿಹಟ್ಟಿ ಮಾಡಿದರು.
ಮುಖ್ಯ ಅತಿಥಿಗಳಾಗಿ ಕರ್ನಾಟಕ ಜಾನಪದ ಅಕಾಡೆಮಿಯ ರಿಜಿಸ್ಟಾರ ಎನ್. ನಮ್ರತಾ, ಅಧೀಕ್ಷಕ ಪ್ರಕಾಶ, ಕಿತ್ತೂರ ಕಾರ್ನಟಕ ಕಲಾವಿದರ ಒಕ್ಕೂಟದ ರಾಜ್ಯಾಧ್ಯಕ್ಷ ಗುಳಪ್ಪ ವಿಜಯನಗರ, ಕೆ.ಎನ್. ಸಂಗಮ, ಸಾಮುಯೆಲ್ ಡ್ಯಾನಿಯಲ್, ಡಾ. ವಿ.ಆರ್. ಮುಂಜಿ, ಸಿಂಧನೂರದ ಯರಿಯಪ್ಪ ಬೆಳಗುರ್ಕಿ, ಎನ್.ಬಿ. ಸಂಗ್ರಾಜಕೊಪ್ಪ, ಬಿ.ಎ. ದೇಸಾಯಿ, ಡಾ. ಮಹಾದೇವ ಪೋತರಾಜ, ಆರ್.ಎ. ಬಡಿಗೇರ, ಸುಭಾಷ ವಾಲಿಕಾರ, ವೈ.ಬಿ. ಕೊಪ್ಪದ ಭಾಗವಹಿಸಿದ್ದರು.
ಸಮಾರಂಭದಲ್ಲಿ ಮಾಜಿ ಯೋಧರನ್ನು, ಕ್ರೀಡಾ ಪ್ರತಿಭೆ ಮತ್ತು ಪರೀಕ್ಷೆಯಲ್ಲಿ ರ್ಯಾಂಕ್ ಪಡೆದ ವಿದ್ಯಾರ್ಥಿಗಳನ್ನು ಸನ್ಮಾನಿಸಿದರು.
ಶಿಕ್ಷಣ ಸಂಸ್ಥೆ ಆಡಳಿತಾಧಿಕಾರಿ ಡಾ. ಸುರೇಶ ಹನಗಂಡಿ ಪ್ರಾಸ್ತಾವಿಕ ಮಾತನಾಡಿದರು.
ಪ್ರೊ. ಶಂಕರ ನಿಂಗನೂರ, ಡಾ. ಕೆ.ಎಸ್. ಪರವ್ವಗೋಳ ನೀರೂಪಿಸಿದರು, ಮೀಶಿನಾಯಿಕ ವಂದಿಸಿದರು.