spot_img
spot_img

ನಮ್ಮ ಹೆಮ್ಮೆಯ ಕನ್ನಡ ಧ್ವಜದ ವಿನ್ಯಾಸಕ ಮ.ರಾಮಮೂರ್ತಿ ಅವರ ಜನುಮ ದಿನ ಇಂದು

Must Read

- Advertisement -

ಕನ್ನಡ ಸಮಾರಂಭಗಳಲ್ಲಿ ನಾವು ಉಪಯೋಗಿಸುವ ಕನ್ನಡ ಭಾವುಟವನ್ನು ಸೃಜಿಸಿದ ಮಹನೀಯ ಮ. ರಾಮಮೂರ್ತಿ. ಅವರು ಕನ್ನಡ ಬಾವುಟವನ್ನು ಮಾತ್ರ ಸೃಜಿಸಲಿಲ್ಲ. ಕನ್ನಡಿಗರು ತಲೆ ಎತ್ತಿ ಗೌರವದಿಂದ ಬಾಳುವ ಹಾಗೆ ಕನ್ನಡದ ಬಾವುಟವು ನಿರಂತರ ಹಾರಾಡುವ ಹಾಗೆ ತಮ್ಮ ಕೊನೆಯ ಉಸಿರಿರುವವರೆಗೂ ಕನ್ನಡ ನಾಡು ನುಡಿಗಾಗಿ ಶ್ರಮಿಸಿದರು.

1960ರ ದಶಕದಲ್ಲಿ ಅನ್ಯಭಾಷಿಗರ ಪ್ರಾಬಲ್ಯದಿಂದ ಬೆಂಗಳೂರು ನಗರದಲ್ಲಿ ಕನ್ನಡಕ್ಕೆ ಹೀನಾಯ ಸ್ಥಿತಿ ಒದಗಿದಾಗ ಕನ್ನಡದ ವಾತಾವರಣವನ್ನು ಮೂಡಿಸಲು, ಕನ್ನಡಿಗರನ್ನು ಎಚ್ಚರಿಸಲು ಹುಟ್ಟಿಕೊಂಡದ್ದೇ ಕನ್ನಡ ಚಳವಳಿ. ಹೀಗೆ ಹೋರಾಟ ಮಾಡಲು ಪ್ರಾರಂಭಿಸಿದವರಲ್ಲಿ ಕೊಣಂದೂರು ಲಿಂಗಪ್ಪ, ಅ.ನ.ಕೃ. ಮೈ.ಸು.ನಟರಾಜ್, ಮೈ.ಸು. ಶೇಷಗಿರಿರಾವ್, ನಾಡಿಗೇರ ಕೃಷ್ಣರಾವ್, ಕರ್ಲಮಂಗಲಂ ಶ್ರೀಕಂಠಯ್ಯ ಮೊದಲಾದವರುಗಳ ಜೊತೆಗೆ ಕೈಜೋಡಿಸಿದವರು ಮ.ರಾಮಮೂರ್ತಿ. ರಾಮಮೂರ್ತಿಯವರು 1918ರ ಮಾರ್ಚ್ 11ರಂದು ನಂಜನಗೂಡಿನಲ್ಲಿ ಜನಿಸಿದರು. ತಂದೆ ಮಹಾನ್ ಸ್ವಾತಂತ್ರ್ಯ ಹೋರಾಟಗಾರರಾದ ವೀರಕೇಸರಿ ಸೀತಾರಾಮಶಾಸ್ತ್ರಿಗಳು. ತಾಯಿ ಸುಬ್ಬಮ್ಮನವರು.

ವೈದಿಕ ಮನೆತನದಲ್ಲಿ ಹುಟ್ಟಿದ ರಾಮಮೂರ್ತಿಯವರಿಗೆ ಸಂಸ್ಕೃತ ಕಡ್ಡಾಯವಾಗಿದ್ದು ಶ್ಲೋಕಗಳನ್ನು ಕಂಠಪಾಠ ಮಾಡಿದ್ದರು. ಪ್ರಾಥಮಿಕ ಶಾಲೆಗೆ ಸೇರಿದ್ದರೂ ಪಾಠಕ್ಕಿಂತ ಆಟದ ಕಡೆಯೇ ಗಮನ ಹೆಚ್ಚಾಗಿತ್ತು. ಕುಮಾರವ್ಯಾಸ, ರಾಘವಾಂಕ, ಹರಿಹರ ಮೊದಲಾದವರ ಕಾವ್ಯಗಳ ಬಗ್ಗೆ ಆಸಕ್ತಿ ಹುಟ್ಟುವಂತೆ ಮಾಡಿದವರು ಶಾಲಾ ಮಾಸ್ತರಾಗಿದ್ದ ಸುಬ್ರಹ್ಮಣ್ಯ ಅಯ್ಯರ್‌ ಅವರು.

- Advertisement -

ತಂದೆ ಸೀತಾರಾಮಶಾಸ್ತ್ರಿಗಳು ಗಾಂಧೀಜಿಯವರ ವಿಚಾರಧಾರೆಗಳಿಗೆ ಮನಸೋತು ಚಳವಳಿ ಹಾದಿ ಹಿಡಿದರು. ಚಳವಳಿ ಪ್ರಚಾರಕ್ಕಾಗಿ ಬೆಂಗಳೂರನ್ನು ಕೇಂದ್ರವಾಗಿರಿಸಿಕೊಂಡು ಪ್ರಾರಂಭಿಸಿದ ಪತ್ರಿಕೆ ‘ವೀರಕೇಸರಿ’. ಚಳವಳಿಯಿಂದ ಕಾರಾಗೃಹವಾಸವನ್ನನುಭವಿಸಬೇಕಾಗಿ ಬಂದರೂ ಅವರು ಧೃತಿಗೆಡಲಿಲ್ಲ. ಮಾಧ್ಯಮಿಕ ಶಾಲೆಯ ನಂತರ ರಾಮಮೂರ್ತಿಯವರು ಬೆಂಗಳೂರಿನ ಗಾಂಧಿನಗರದಲ್ಲಿದ್ದ ಆರ್ಯ ವಿದ್ಯಾಶಾಲೆಗೆ ಸೇರಿದರು. ಅಂದಿನ ದಿನದಲ್ಲಿ ಆ ಶಾಲೆಯ ಮುಖ್ಯೋಪಾಧ್ಯಾಯರಾಗಿದ್ದ ಮಹಾನ್ ಸಾಹಿತಿ ದೇವುಡುರವರು ಬಾಲಕ ರಾಮಮೂರ್ತಿಯ ಕಾಳಜಿ ವಹಿಸಿಕೊಂಡರು.

ಸಾಹಿತ್ಯ ವಾತಾವರಣದಿಂದ ಪ್ರೇರಿತರಾದ ಮ ರಾಮಮೂರ್ತಿಯವರು ಬರೆದ ಮೊದಲ ಕಥೆ ‘ಗುರುದಕ್ಷಿಣಿ’. ಇದನ್ನು ಮಕ್ಕಳಿಗಾಗಿಯೇ ಪತ್ರಿಕೆಯನ್ನು ಪ್ರಕಟಿಸುತ್ತಿದ್ದ ಅಶ್ವತ್ಥನಾರಾಯಣ ರಾಯರು ತಮ್ಮ ‘ಮಕ್ಕಳಪುಸ್ತಕ’ದಲ್ಲಿ ಪ್ರಕಟಿಸಿದರು. ರಾಮಮೂರ್ತಿಯವರು ಅಶ್ವತ್ಥ ನಾರಾಯಣರಾಯರ ಬಳಿ ಇದ್ದ ಅನೇಕ ಪುಸ್ತಕಗಳನ್ನು ಪಡೆದು ಓದಿ ಮುಗಿಸಿದ್ದರು.

ತಂದೆಯವರು ಪ್ರಕಟಿಸುತ್ತಿದ್ದ ವೀರಕೇಸರಿ ಪತ್ರಿಕೆ ಸಂಪೂರ್ಣವಾಗಿ ಸ್ವಾತಂತ್ರ್ಯ ಚಳವಳಿಯ ಪ್ರಚಾರ, ಆಂದೋಲನದಲ್ಲಿ ತೊಡಗಿಸಿಕೊಂಡಿದ್ದರಿಂದ ರಾಮಮೂರ್ತಿಯವರೂ ಈ ಪತ್ರಿಕೆಯಲ್ಲಿ ಆಸಕ್ತರಾಗಿ ತಂದೆಯವರ ಜೊತೆಗೆ ಕೈಜೋಡಿಸಿದರು. ಇದಕ್ಕಾಗಿ ಇಂಗ್ಲಿಷ್ ಭಾಷೆಯನ್ನು ನಾರಾಯಣಸ್ವಾಮಿ ಅಯ್ಯರ್‌ ಅವರಿಂದ ಕಲಿತು, ಇಂಗ್ಲಿಷ್‌ನಲ್ಲಿ ಬರುತ್ತಿದ್ದ ಸುದ್ದಿ ಸಂಗ್ರಹಗಳನ್ನು ಪತ್ರಿಕೆಗಾಗಿ ಅನುವಾದಿಸತೊಡಗಿದರು.

- Advertisement -

ವೀರಕೇಸರಿ ಪತ್ರಿಕೆಯು ಕಾರಣಾಂತರದಿಂದ ಪ್ರಕಟಣೆಯನ್ನು ನಿಲ್ಲಿಸಿದ್ದರಿಂದ ರಾಮಮೂರ್ತಿಯವರೇ ‘ವಿನೋದಿನಿ’, ‘ಕಥಾವಾಣಿ’, ‘ವಿನೋದವಾಣಿ’ ಮುಂತಾದ ಪತ್ರಿಕೆಗಳನ್ನು ಹುಟ್ಟುಹಾಕಿದರು. ಲೈಂಗಿಕ ವಿಜ್ಞಾನದ ಪತ್ರಿಕೆಯ ಕೊರತೆಯನ್ನು ತುಂಬಲು ‘ಕಾಮಕಲಾ’ ಎಂಬ ಪತ್ರಿಕೆಯನ್ನು ಪ್ರಾರಂಭಿಸಿದ್ದರು. ಸ್ವಾತಂತ್ರ್ಯ ಪೂರ್ವದ ಬಿಗಿ ನೀತಿಯ ಪತ್ರಿಕಾ ಕಾನೂನಿನಿಂದ ಕೋರ್ಟು ಮೆಟ್ಟಿಲು ಹತ್ತಬೇಕಾಗಿಬಂದರೂ ಧೈರ್ಯಗೆಡದೆ ಪತ್ರಿಕೆಯ ಧ್ಯೇಯೋದ್ದೇಶಗಳನ್ನು ವಿವರಿಸಿ ಗೆದ್ದು ಬಂದರು. ಆದರೆ ಮುಂದೆ ಬಂದ ದಿನಗಳಲ್ಲಿ ಲೈಂಗಿಕ ವಿಜ್ಞಾನದ ಹೆಸರಿನಿಂದ ಅನೇಕ ಅಶ್ಲೀಲ ಪತ್ರಿಕೆಗಳು ಹುಟ್ಟಿಕೊಂಡಿದ್ದರಿಂದ ರಾಮಮೂರ್ತಿಯವರು ತಮ್ಮ ಪತ್ರಿಕೆಯನ್ನು ನಿಲ್ಲಿಸಬೇಕಾಯಿತು.

ಕನ್ನಡದ ವಾತಾವರಣವನ್ನು ಮೂಡಿಸಲು, ಸಾಂಸ್ಕೃತಿಕ ಕಾರ್ಯಕ್ರಮಗಳಾದ ರಾಮೋತ್ಸವ ಮುಂತಾದವುಗಳಲ್ಲಿ ಕನ್ನಡ ಕಲಾವಿದರಿಗೆ ಮನ್ನಣೆ ಸಿಗುವಂತೆ ಮಾಡಲು, ಬಿಡುಗಡೆಯಾದ ಕನ್ನಡ ಚಲನಚಿತ್ರಗಳಿಗೆ ಚಿತ್ರಮಂದಿರಗಳು ದೊರೆಯುವಂತೆ ಮಾಡಲು, ಚಲನಚಿತ್ರ ನಿರ್ಮಾಣದಲ್ಲಿ ಕನ್ನಡಗರಿಗೆ ಆದ್ಯತೆ ದೊರೆಯುವಂತಾಗಲು, ಕಾರ್ಖಾನೆಗಳಲ್ಲಿ ಕನ್ನಡಿಗರಿಗೆ ಉದ್ಯೋಗವಕಾಶಗಳನ್ನು ದೊರೆಯುವಂತಾಗಲು ‘ಕನ್ನಡ ಸಂಯುಕ್ತರಂಗ’ ಎಂಬ ಸಂಸ್ಥೆಯನ್ನು ಪ್ರಾರಂಭಿಸಿದಾಗ ಅ.ನ.ಕೃ. ಅವರು ಅಧ್ಯಕ್ಷರಾಗಿ ಮ ರಾಮಮೂರ್ತಿಯವರು ಕಾರ್ಯಯದರ್ಶಿಗಳಾಗಿ ಜವಾಬ್ಧಾರಿ ಹೊರಬೇಕಾಯಿತು. ಇದರ ಮುಖವಾಣಿಯಾಗಿ ‘ಕನ್ನಡ ಯುವಜನ’ ಎಂಬ ಪತ್ರಿಕೆಯನ್ನು ಹೊರಡಿಸಿದರು.

ದೇಶಕ್ಕೆ ಸ್ವಾತಂತ್ರ್ಯ ಬಂದ ಹೊಸತರಲ್ಲಿ ಬೆಂಗಳೂರಿನ ಸುತ್ತಮುತ್ತ ಕನ್ನಡೇತರರ ಹಾವಳಿ ಮಿತಿಮೀರಿದಾಗ, ಜನ ಸಾಮಾನ್ಯರಲ್ಲಿ ಕನ್ನಡದ ಅರಿವು ಮೂಡಿಸಲು ಇರುವ ಏಕೈಕ ಮಾರ್ಗವೆಂದರೆ ಕನ್ನಡವನ್ನು ಎಲ್ಲರೂ ಓದುವಂತಾಗಲು ಕುತೂಹಲ ಭರಿತ ಕಾದಂಬರಿಗಳ ಕ್ಷೇತ್ರವೂ ಒಂದು ಎಂದು ಚಿಂತಿಸಿದ ರಾಮಮೂರ್ತಿಯವರು, ಅನೇಕ ಪತ್ತೇದಾರಿ ಕಾದಂಬರಿಗಳ ರಚನೆಗೆ ಮುಂದಾದರು. 1950-60ರ ದಶಕದಲ್ಲಿ ಅವರು ಹಲವಾರು ಪತ್ತೆದಾರಿ ಕಾದಂಬರಿಗಳನ್ನು ರಚಿಸಿದರು. ವಿಪ್ಲವ, ಇಬ್ಬರು ರಾಣಿಯರು, ಚಿತ್ರಲೇಖ, ರಾಜದಂಡ, ವಿಷಕನ್ಯೆ, ಮರೆಯಾಗಿದ್ದ ವಜ್ರಗಳು ಮುಂತಾಗಿ ಅವರು ರಚಿಸಿದ ಪತ್ತೇದಾರಿ ಕಾದಂಬರಿಗಳ ಸಂಖ್ಯೆ 150ಕ್ಕೂ ಹೆಚ್ಚು. ಈ ಪತ್ತೇದಾರಿ ಕಾದಂಬರಿಗಳ ಜೊತೆಗೆ ಅವರು ಹಲವಾರು ಐತಿಹಾಸಿಕ ಕಾದಂಬರಿಗಳನ್ನೂ ರಚಿಸಿದ್ದು ಸಾವನದುರ್ಗದ (ಮಾಗಡಿ ಸಮೀಪ) ರಸವತ್ತಾದ ವರ್ಣನೆಯ ‘ಭಾಗ್ಯದ ಮದುವೆ’; ಬಾಗೇಪಲ್ಲಿ ಪಾಳೆಗಾರಿಕೆಯ ಸುತ್ತ ಹೆಣೆದ ಕೋಟೆ ಕೊತ್ತಲಗಳ ವರ್ಣನೆಯ ‘ಪ್ರೇಮಮಂದಿರ’ ಮಹತ್ವವಾದವು. ಇವಲ್ಲದೆ ‘ಹಿಪ್ಪರಗಿ’ ಸೀಮೆ ಮತ್ತು ‘ಇಬ್ಬರು ರಾಣಿಯರು’ ಮುಂತಾದ ಕಾದಂಬರಿಗಳು ವಿಪುಲವಾದ ಚಾರಿತ್ರಿಕ ವರ್ಣನೆಗಳಿಂದ ಕೂಡಿದ್ದರೆ, ಶಿವಮೊಗ್ಗ ಜಿಲ್ಲೆಯ ‘ನಗರ’ದಲ್ಲಿ ನಡೆದ ರೈತ ಬಂಡಾಯ ಕುರಿತ ‘ರಾಜದಂಡ’ ಚಾರಿತ್ರಿಕವಾಗಿ ಅದ್ವಿತೀಯ ಕಾದಂಬರಿ ಎನಿಸಿದೆ.

ಆರಡಿ ಎತ್ತರದ ಆಜಾನುಬಾಹು. ದೃಷ್ಟಿನೋಟದಿಂದಲೇ ಎದುರಿಗೆ ನಿಂತವರನ್ನು ಸೆರೆ ಹಿಡಿದುಬಿಡುವ ಬೊಗಸೆ ಕಂಗಳು, ಕಂಚಿನ ಕಂಠ ಇವು ಮ ರಾಮಮೂರ್ತಿಯವರ ಬಾಹ್ಯ ರೂಪಗಳಾದರೆ, ವೇದಿಕೆ ಹತ್ತಿ ನಿಂತರೆ ಸಾಕು ಆವೇಶಭರಿತರಾಗಿ, ನಿರರ್ಗಗಳವಾಗಿ ಮಾಡುತ್ತಿದ್ದ ಭಾಷಣದಿಂದ ಕನ್ನಡಿಗರ ನರನಾಡಿಗಳನ್ನು ಕನ್ನಡಕ್ಕಾಗಿ ಪ್ರಚೋದಿಸುವ ಧ್ವನಿ ಅವರದ್ದಾಗಿತ್ತು.

ಹೀಗೆ ಪರಮಸಾಹಸಿಯಾದ ರಾಮಮೂರ್ತಿಯವರು ಕೃಷಿಕ ಜೀವನವನ್ನು ನಡೆಸಲು ಬಯಸಿ ಬೆಂಗಳೂರು – ಕನಕಪುರ ರಸ್ತೆಯ ತಲಘಟ್ಟಪುರದ ತಮ್ಮ ಜಮೀನಿನಲ್ಲಿ ನೀರಿನ ಆಸರೆಗಾಗಿ ಬಾವಿ ತೋಡಿಸುತ್ತಿದ್ದಾಗ, ಬಾವಿಯಲ್ಲಿ ನೀರು ಬಂದಿತೆಂಬ ಸಂತಸದಿಂದ ದಿವಾಕರ ಮತ್ತು ಮಂಜುನಾಥ ಎಂಬ ಮಕ್ಕಳಿಬ್ಬರೊಡನೆ ಬಾವಿಗಿಳಿದಾಗ, ಮೇಲಿಂದ ಮಣ್ಣು ಕುಸಿದು ಕೂಲಿಗಳೊಡನೆ ಮೂವರೂ ದುರ್ಮರಣಕ್ಕೀಡಾದರು. ಅದ್ವಿತೀಯ ಕನ್ನಡ ಹೋರಾಟಗಾರ, ಕಾದಂಬರಿಕಾರ, ಸ್ವಾತಂತ್ರ್ಯ ಹೋರಾಟಗಾರ, ಪತ್ರಕರ್ತ, ಚಳವಳಿಯ ಅಧ್ವರ್ಯು, ಕನ್ನಡ ಸೇನಾನಿ ಎಂಬ ಕನ್ನಡದ ದೀಪ ನಂದಿ ಹೋದದ್ದು ಡಿಸೆಂಬರ್ 25ರ 1967ರಲ್ಲಿ.

ಇಂದು ನಮ್ಮ ಸಾರ್ವಜನಿಕ ಜೀವನದಲ್ಲಿ ಕನ್ನಡ ಭಾಷೆ ನಮಗೆ ಒಂದಷ್ಟು ಉಸುರಿಸುವುದಕ್ಕಾದರೂ ಉಳಿದಿದೆ ಎಂದರೆ ಮ. ರಾಮಮೂರ್ತಿ ಅಂತಹ ಹಿರಿಯರ ಕೊಡುಗೆಯಿಂದ ಎಂದು ನೆನೆಯುತ್ತಾ ಈ ಕನ್ನಡ ನಾಡಿನ ಮಹಾತ್ಮ ಚೇತನಕ್ಕೆ ಸಾಷ್ಟಾಂಗ ಪ್ರಣಾಮಗಳನ್ನು ಅರ್ಪಿಸುತ್ತಿದ್ದೇವೆ.

- Advertisement -
- Advertisement -

Latest News

‘Silent killer’ ಎಂದು ಕರೆಯಲ್ಪಡುವ ಒಂದು ಹಾವುಂಟು !

ಈ ಹಾವನ್ನು ಈ ರೀತಿ ಕರೆಯಲು ಹಲವು ಕಾರಣಗಳುಂಟು. ಈ ಹಾವು ರಾತ್ರಿ ವೇಳೆಯಲ್ಲಿಯೇ ಹೆಚ್ಚು ಓಡಾಟ ಮಾಡುವುದು (ನಿಶಾಚರಿ). ಮತ್ತೆ ಈ ಹಾವು ಮನುಷ್ಯರಿಗೆ...
- Advertisement -

More Articles Like This

- Advertisement -
close
error: Content is protected !!
Join WhatsApp Group