ಸಿಂದಗಿ- ಪ್ರಸ್ತುತ ದಿನಮಾನಗಳಲ್ಲಿ ನಗರ ಪ್ರದೇಶದಲ್ಲಿ ವಿವಿಧ ಕಾರಣಗಳಿಂದ ಮತದಾನ ಪ್ರಮಾಣ ಕಡಿಮೆಯಾಗುತ್ತಿರುವುದು ವಿಷಾದನಿಯ. ಇಂತಹ ಸಂದರ್ಭದಲ್ಲಿ ವಿದ್ಯಾರ್ಥಿಗಳಿಂದ ಮತದಾನದ ಜಾಗೃತಿ
ಮಾಡುವ ಕಾರ್ಯ ಅತ್ಯಂತ ಪ್ರಸ್ತುತವಾಗಿದೆ ಎಂದು ಸಾರಂಗಮಠದ ಡಾ.ಪ್ರಭುಸಾರಂಗದೇವ ಶಿವಾಚಾರ್ಯರು ಹೇಳಿದರು.
ಅವರು ಸಾರ್ವತ್ರಿಕ ಲೋಕಸಭಾ ಚುನಾವಣೆ ೨೦೨೪ ರ ನಿಮಿತ್ತ ಭಾರತ ಚುನಾವಣಾ ಆಯೋಗ, ಜಿಲ್ಲಾಡಳಿತ ಹಾಗೂ ಜಿಲ್ಲಾ ಪಂಚಾಯತ ವಿಜಯಪುರ, ಜಿಲ್ಲಾ ಸ್ವೀಪ್ ಸಮಿತಿ ವಿಜಯಪುರ, ತಾಲೂಕಾ ಆಡಳಿತ ಹಾಗೂ ತಾಲೂಕಾ
ಪಂಚಾಯತ ಮತ್ತು ತಾಲೂಕ ಸ್ವೀಪ್ ಸಮಿತಿ ಸಿಂದಗಿ, ಶ್ರೀ ಪದ್ಮರಾಜ ಶಿಕ್ಷಣ ಮಹಾವಿದ್ಯಾಲಯ ಸಿಂದಗಿ ಇಂದ ಶುಕ್ರವಾರ ಹಮ್ಮಿಕೊಂಡಿರುವ ಮತದಾನ
ಜಾಗೃತಿ ಅಭಿಯಾನಕ್ಕೆ ಚಾಲನೆ ನೀಡಿ ಮಾತನಾಡಿದರು.
ಪ್ರತಿಯೊಬ್ಬರು ಮತದಾನ ಪ್ರಕ್ರಿಯೆಯಲ್ಲಿ ಪಾಲ್ಗೊಳ್ಳಬೇಕು, ಮತದಾನ ನಮ್ಮ ಹಕ್ಕು ಅದನ್ನು ಶ್ರದ್ಧೆಯಿಂದ ಪೂರೈಸಿ ಪ್ರಜಾಪ್ರಭುತ್ವದ ವ್ಯವಸ್ಥೆಯನ್ನು ಗಟ್ಟಿಗೊಳಿಸಲು ಕೈಜೋಡಿಸಬೇಕು ಎಂದರು.
ಈ ಸಂದರ್ಭದಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿ ಆರೀಫ್ ಬಿರಾದಾರ ಮಾತನಾಡಿ, ಪ್ರಜಾಪ್ರಭುತ್ವದಲ್ಲಿ ದೃಢ ವಿಶ್ವಾಸವುಳ್ಳ ಭಾರತದ ಪೌರರಾದ ನಾವು ನಮ್ಮದೇಶದ ಪ್ರಜಾಸತ್ತಾತ್ಮಕ ಸಂಪ್ರದಾಯಗಳು ಮತ್ತು ಮುಕ್ತ ನ್ಯಾಯಸಮ್ಮತ ಮತ್ತು ಶಾಂತಿಯುತ ಚುನಾವಣೆಯಲ್ಲಿ ನಿರ್ಭೀತಿಯಾಗಿ
ಧರ್ಮ-ಜನಾಂಗ-ಜಾತಿ-ಮತ-ಭಾಷೆ ಯಾವುದೇ ದ್ರಾಕ್ಷಿಣ್ಯಗಳಿಂದ ಪ್ರಭಾವಿತರಾಗದೆ ಪ್ರತಿಜ್ಞೆಯನ್ನು ಸ್ವೀಕರಿಸಿ ಮತ ಚಲಾಯಿಸಬೇಕು.ಮತದಾನದ ಪ್ರಮಾಣ ೧೦೦ಕ್ಕೆ ೧೦೦ ಪ್ರತಿಶತವಾಗಬೇಕು ಆ ನಿಟ್ಟಿನಲ್ಲಿ
ಜನಜಾಗೃತಿ ಅವಶ್ಯವಾಗಿದೆ ಎಂದರು.
ಈ ವೇಳೆ ಮತದಾನ ಜಾಗೃತಿ ಅಭಿಯಾನವು ಸಾರಂಗಮಠದಿಂದ ಪ್ರಾರಂಭಗೊಂಡು ಕನಕದಾಸ ವೃತ್ತ, ಗೌಡರ ಓಣಿ, ಮಲ್ಲಿಕಾರ್ಜುನ ದೇವಸ್ಥಾನ, ಹೆಗ್ಗೇರೇಶ್ವರ ದೇವಸ್ಥಾನ, ಹಳೇಬಜಾರ ಮಾರ್ಗವಾಗಿ ಸಾಗಿ ಶ್ರೀ
ಸ್ವಾಮಿ ವಿವೇಕಾನಂದ ವೃತ್ತದಲ್ಲಿ ಕೊನೆಗೊಂಡಿತು. ಮಾರ್ಗಮಧ್ಯದಲ್ಲಿ ಪ್ರಶಿಕ್ಷಣಾರ್ಥಿಗಳು ಮನೆಮನೆಗೆ ತೆರೆಳಿ ಕರಪತ್ರನೀಡಿ ಮತದಾನ ಜಾಗೃತಿ ಮಾಡಿ ಮತದಾನದ ಘೋಷಣೆಗಳು ಮೊಳಗಿಸಿದರು.
ಅಭಿಯಾನದಲ್ಲಿ ಪ್ರಾಚಾರ್ಯ ಜೆ.ಸಿ.ನಂದಿಕೋಲ, ಉಪನ್ಯಾಸಕರಾದ ಸುಧಾಕರ ಚವ್ಹಾಣ, ಪ್ರಶಾಂತ ಕುಲಕರ್ಣಿ, ಆರ್.ಎ,ಹಾಲಕೇರಿ, ಸಿ.ಜಿ.ಕತ್ತಿ, ಮಹಾದೇವಿ ಹಿರೇಮಠ, ವಿದ್ಯಾ ಮೋಗಲಿ ಸೇರಿದಂತೆ ಪ್ರಶಿಕ್ಷಣಾರ್ಥಿಗಳು
ಉಪಸ್ಥಿತರಿದ್ದರು.