ಮೂಡಲಗಿ – ಯಾರು ದೇಶವನ್ನು ಪ್ರೀತಿಸಲಾರರೋ ಅವರು ಯಾರನ್ನೂ ಪ್ರೀತಿಸಲಾರರು. ಸ್ವತಃ ತನ್ನನ್ನೇ ಪ್ರೀತಿಸಲಾರರು ಆದ್ದರಿಂದ ದೇಶವನ್ನು ಪ್ರೀತಿಸಬೇಕು ದೇಶಕ್ಕಾಗಿ ದುಡಿಯಬೇಕು ಎಂದು ಖ್ಯಾತ ಮಕ್ಕಳ ಸಾಹಿತಿ ಪ್ರೊ.ಸಂಗಮೇಶ ಗುಜಗೊಂಡ ಹೇಳಿದರು.
ಭಾರತೀಯ ಸೇನೆಯಲ್ಲಿ ಸೇವೆ ಸಲ್ಲಿಸಿ ನಿವೃತ್ತರಾಗಿ ತವರಿಗೆ ಮರಳಿ ಬಂದ ಮೂಡಲಗಿಯ ಯೋಧ ಈರಪ್ಪ ಚಿಪ್ಪಲಕಟ್ಟಿಯವರಿಗೆ ಹಮ್ಮಿಕೊಳ್ಳಲಾಗಿದ್ದ ಸತ್ಕಾರ ಸಮಾರಂಭದಲ್ಲಿ ಅವರು ಮಾತನಾಡಿದರು.
ಜಗತ್ತಿನಲ್ಲೇ ನಮ್ಮದು ಎರಡನೇ ಶ್ರೇಷ್ಠ ಸೈನ್ಯ. ಎಲ್ಲಾ ಸಂದರ್ಭದಲ್ಲಿ ಭಾರತೀಯ ಸೇನೆ ತನ್ನ ಸಾಮರ್ಥ್ಯವನ್ನು ಯಶಸ್ವಿಯಾಗಿ ತೋರಿಸಿಕೊಟ್ಟಿದೆ. ಅಂಥ ಸೇನೆಯಲ್ಲಿ ಸೇವೆ ಸಲ್ಲಿಸಿ ಬಂದ ಈರಪ್ಪ ಅವರ ಜೀವನ ಧನ್ಯ. ಈರಪ್ಪ ಅವರು ಎಲ್ಲ ಯುವಕರಿಗೆ ಸ್ಫೂರ್ತಿಯಾಗಲಿ ಎಂದರು.
ಗೋಕಾಕ ತಾಲೂಕಾ ಪಂಚಾಯತ ಸಿಬ್ಬಂದಿ ಜಗದೀಶ ಯರಗಟ್ಟಿ ಮಾತನಾಡಿ, ಭಾರತ ಮಾತೆಯ ಹೆಸರಿನಲ್ಲೇ ಒಗ್ಗಟ್ಟು ಇದೆ. ಘೋಷಣೆಯಲ್ಲಿ ಸ್ಫೂರ್ತಿ ಇದೆ ಎಂದರು.
ಮೂಡಲಗಿ ತಹಶೀಲ್ದಾರ ಡಿ ಜಿ ಮಹಾತ್ ಮಾತನಾಡಿ, ಯುವಕರು ಸದೃಢವಾಗಿದ್ದರೆ ಸಮಾಜ ಸದೃಢವಾಗಿರುತ್ತದೆ. ಸಮಾಜ ಸದೃಢವಾಗಿದ್ದರೆ ದೇಶ ಸದೃಢವಾಗಿರುತ್ತದೆ. ಎಲ್ಲ ಯುವಕರು ದೇಶಕ್ಕೆ ಸೇವೆ ಸಲ್ಲಿಸಲು ಸನ್ನದ್ಧವಾಗಿರಬೇಕು ಎಂದರು.
ಸಾಹಿತಿ ಶಿವಾನಂದ ಬೆಳಕೂಡ ಮಾತನಾಡಿ, ಈರಪ್ಪನಂಥ ಪುತ್ರನನ್ನು ಪಡೆದ ತಾಯಿ ತಂದೆಯ ಜೀವನ ಧನ್ಯವಾದುದು. ಅವನು ನಮ್ಮ ನೆಂಟರಲ್ಲಿ ಒಬ್ಬನಾಗಿದ್ದು ನಮಗೂ ಹೆಮ್ಮೆಯಾಗಿದೆ ಎಂದರು.
ಮಂಜುನಾಥ ಸೈನಿಕ ತರಬೇತಿ ಕೇಂದ್ರದ ಅಧ್ಯಕ್ಷ ಲಕ್ಷ್ಮಣ ಅಡಿಹುಡಿ ಮಾತನಾಡಿದರು.
ಸಾನ್ನಿಧ್ಯ ವಹಿಸಿದ್ದ ನೀಲಕಂಠ ಮಠದ ಶ್ರೀ ಶಿವಾನಂದ ಸ್ವಾಮಿಗಳು ಹಾಗೂ ಅತಿಥಿಗಳು ಕುರುಹಿನಶೆಟ್ಟಿ ಸಮಾಜ ಹಾಗೂ ಗೋಕಾಕ ತಾಲೂಕಾ ಪಂಚಾಯತ ಸಿಬ್ಬಂದಿ ವರ್ಗದವರು ಈರಪ್ಪ ಚಿಪ್ಪಲಕಟ್ಟಿಯವರನ್ನು ಆತ್ಮೀಯವಾಗಿ ಸತ್ಕರಿಸಿದರು.
ಸತ್ಕಾರ ಸ್ವೀಕರಿಸಿ ಮಾತನಾಡಿದ ಈರಪ್ಪ ಚಿಪ್ಪಲಕಟ್ಟಿ ಮೊದಲು ದೇಶಭಕ್ತಿ ಗೀತೆಯೊಂದನ್ನು ಹಾಡಿದರು.
ನನ್ನಂಥವನನ್ನು ಗುರುತಿಸಿ ಸನ್ಮಾನ ಮಾಡಿರುವ ನಮ್ಮ ಸಮಾಜದ ಎಲ್ಲ ಬಾಂಧವರು ಹಾಗೂ ವಿವಿಧ ಸಂಘಟನೆಗಳಿಗೆ ಧನ್ಯವಾದ ಸಲ್ಲಿಸುವುದಾಗಿ ಹೇಳಿದರು.
ನಾನು ಎಲ್ಲ ಯೋಧರ ಜೊತೆಗೂಡಿ ಸಿಂಗಪೂರ್ ಆರ್ಮಿಯ ಜೊತೆ ನಡೆದ ಸಮಾರಾಭ್ಯಾಸ ಸ್ಮರಣೀಯವಾದುದು. ಪುಲ್ವಾಮಾ ದಾಳಿಯ ಸಂದರ್ಭದಲ್ಲಿ ನನ್ನ ಜೊತೆಗಾರರನ್ನು ಕಳೆದುಕೊಂಡಿದ್ದು ದುಃಖದ ವಿಷಯ ಆ ಸಮಯದಲ್ಲಿ ನಾವೆಲ್ಲ ಸ್ಥೈರ್ಯ ಕಳೆದುಕೊಳ್ಳದೆ ಪರಿಸ್ಥಿತಿಯನ್ನು ಎದುರಿಸಿದೆವು ಎಂದರು.
ಕುರುಹಿನಶೆಟ್ಟಿ ಸಮಾಜದ ಅಧ್ಯಕ್ಷ ಈಶ್ವರ ಮುರಗೋಡ ಅಧ್ಯಕ್ಷತೆ ವಹಿಸಿದ್ದರು.
ವೇದಿಕೆಯ ಮೇಲೆ ಪುರಸಭಾ ಅಧ್ಯಕ್ಷ ಹಣಮಂತ ಗುಡ್ಲಮನಿ, ಬಿಜೆಪಿ ಮುಖಂಡ ಪ್ರಕಾಶ ಮಾದರ, ಲಕ್ಷ್ಮಣ ಅಡಿಹುಡಿ, ಶ್ರೀಮತಿ ಶಕುಂತಲಾ ಚಿಪ್ಪಲಕಟ್ಟಿ, ನಿಂಗಪ್ಪ ಫಿರೋಜಿ ಉಪಸ್ಥಿತರಿದ್ದರು.
ಪತ್ರಕರ್ತ ಉಮೇಶ ಬೆಳಕೂಡ ಸ್ವಾಗತಿಸಿ ಕಾರ್ಯಕ್ರಮ ನಿರ್ವಹಿಸಿದರು. ಮಹಾಲಿಂಗ ವಂಟಗೂಡಿ ವಂದಿಸಿದರು.