ಮೂಡಲಗಿ: ‘ವೈವಾಹಿಕ ಜೀವನದಲ್ಲಿ ಮಹಿಳೆ ಗಂಡನಿಂದ ಜೀವನಾಂಶ ಪಡೆದು ಬದುಕುವುದಕ್ಕಿಂತ ಪತಿಯೊಂದಿಗೆ ಹೊಂದಾಣಿಕೆ ಮಾಡಿಕೊಂಡು ನೆಮ್ಮದಿಯ ಬದುಕನ್ನು ಸಾಗಿಸುವುದು ಉತ್ತಮ’ ಎಂದು ಮೂಡಲಗಿ ದಿವಾಣಿ ಹಾಗೂ ಪ್ರಥಮ ದರ್ಜೆ ನ್ಯಾಯಾಧೀಶೆ ಜ್ಯೋತಿ ಪಾಟೀಲ ಅವರು ಅಭಿಪ್ರಾಯಪಟ್ಟರು.
ಮೂಡಲಗಿಯ ಶಾಂತಿನಿಕೇತನ ಶಾಲೆಯ ಆತಿಥ್ಯದಲ್ಲಿ ಭಾಗ್ಯಲಕ್ಷ್ಮೀ ಮಹಿಳಾ ಮಂಡಳ, ಸ್ವಾಮಿ ವಿವೇಕಾನಂದ ಗ್ರಾಮೀಣ ಅಭಿವೃದ್ಧಿ ಸಂಸ್ಥೆ ಹಾಗೂ ಲಯನ್ಸ್ ಕ್ಲಬ್ ಮೂಡಲಗಿ ಪರಿವಾರ ಇವರ ಸಂಯುಕ್ತ ಆಶ್ರಯದಲ್ಲಿ ಜರುಗಿದ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ಮಹಿಳೆಯರು ವೈವಾಹಿಕ ಜೀವನದಲ್ಲಿ ಜರುಗುವ ಸಮಸ್ಯೆಗಳನ್ನು ಇತ್ಯರ್ಥಮಾಡಿಕೊಂಡು ಉತ್ತಮ ಬದುಕು ಸಾಗಿಸಿಕೊಳ್ಳುವುದು ಜಾಣ ನಡೆಯಾಗಿದೆ. ನ್ಯಾಯಾಲಯದ ಕಟ್ಟೆ ಹತ್ತುವುದು ನಿಮ್ಮ ಬದುಕಿನ ನೆಮ್ಮದಿಯನ್ನು ಹಾಳು ಮಾಡಿಕೊಂಡಂತೆ ಎಂದು ಮಹಿಳೆಯರಿಗೆ ಕಿವಿಮಾತು ಹೇಳಿದರು.
18 ವಯಸ್ಸಿನ ಒಳಗಿನ ಹೆಣ್ಣು ಮಕ್ಕಳಿಗೆ ಮದುವೆಯನ್ನು ಮಾಡುವುದು ಕಾನೂನಿನಲ್ಲಿ ಅವಕಾಶವಿಲ್ಲ. ಹೆಣ್ಣು ಮಕ್ಕಳಲ್ಲಿ ಇರುವ ಜ್ಞಾನ, ಪ್ರತಿಭೆ, ಕಲೆಗಳಲ್ಲಿ ಸಾಧನೆಗೆ ಅವಕಾಶ ದೊರೆಯುವಂತೆ ಅವಳ ಬೆಳವಣಿಗೆಗೆ ಪೂರಕವಾದ ಪರಿಸರ ನಿರ್ಮಿಸಬೇಕು ಎಂದರು.
ಮಹಿಳೆಯರು ಅಡುಗೆ ಮನೆಗೆ ಸೀಮಿತರಾಗದೆ ಗೃಹ ಕೈಗಾರಿಕೆಗಳಲ್ಲಿ ತೊಡಗಿ ಸ್ವಾವಲಂಬಿಯಾಗಿ ಬದುಕುವುದನ್ನು ಕಲಿಯಬೇಕು. ಟಿವಿ, ಮೊಬೈಲ್‍ಗಳೊಂದಿಗೆ ವ್ಯರ್ಥ ಸಮಯ ಹಾಳು ಮಾಡದೆ ಉದ್ಯಮಶೀಲತೆಯತ್ತ ಗಮನಹರಿಸಿ ಆರ್ಥಿಕವಾಗಿ ಸದೃಢತೆಗೆ ಆದ್ಯತೆ ನೀಡಬೇಕು ಎಂದರು.
ಸಮುದಾಯ ಆರೋಗ್ಯ ಕೇಂದ್ರದ ಮುಖ್ಯ ವೈದ್ಯಾಧಿಕಾರಿ ಡಾ. ಭಾರತಿ ಕೋಣಿ ಮಾತನಾಡಿ, ಹೆಣ್ಣು ಭ್ರೂಣಹತ್ಯೆ ಆಗದಂತೆ ಎಚ್ಚರವಹಿಸಿರಿ, ಮಹಿಳೆಯರು ಹೆಣ್ಣು ಮಕ್ಕಳನ್ನು ಹೆರಲು ಹಿಂಜರಿಯಬಾರದು ಎಂದರು.
ಭಾಗ್ಯಲಕ್ಷ್ಮೀ ಮಂಡಳದ ಕಾರ್ಯದರ್ಶಿ ಮಾಲತಿ ಆಶ್ರೀತ ಪ್ರಾಸ್ತಾವಿಕ ಮಾತನಾಡಿದರು.
ಪುರಸಭೆ ಸದಸ್ಯ ಈರಣ್ಣ ಕೊಣ್ಣೂರ, ಬಾಲಶೇಖರ ಬಂದಿ, ಲಯನ್ಸ್ ಅಧ್ಯಕ್ಷ ಶ್ರೀಶೈಲ್ ಲೋಕನ್ನವರ, ಮುಖ್ಯ ಶಿಕ್ಷಕ ಎಂ.ಎ. ನದಾಫ ಮಾತನಾಡಿದರು.
ಭಾಗ್ಯಲಕ್ಷ್ಮೀ ಮಹಿಳಾ ಮಂಡಳದ ಅಧ್ಯಕ್ಷೆ ಸುಜಾತಾ ಎಸ್. ಹಿರೇಮಠ ಅಧ್ಯಕ್ಷತೆ ವಹಿಸಿದ್ದರು. ಭೂದಾನಿ ಪಾರವ್ವ ಒಂಟಗೂಡಿ, ಶಿವಾನಂದ ಗಾಡವಿ, ಕೃಷ್ಣಾ ಕೆಂಪಸತ್ತಿ, ರಮೇಶ ಒಂಟಗೂಡಿ ವೇದಿಕೆಯಲ್ಲಿದ್ದರು.
ಮಹಿಳೆಯರಿಗೆ ಏರ್ಪಡಿಸಿದ್ದ ವಿವಿಧ ಸ್ಪರ್ಧೆಗಳಲ್ಲಿ ವಿಜೇತರಿಗೆ ಲಯನ್ಸ್ ಕ್ಲಬ್‍ದಿಂದ ಬಹುಮಾನಗಳನ್ನು ವಿತರಿಸಿದರು.
ಶಿವಲೀಲಾ ಮಠಪತಿ ಮತ್ತು ಅಂಕಿತಾ ಕಲ್ಯಾಣಿ ನಿರೂಪಿಸಿದರು.