ನಾವಿಂದು ಬಸವ ಜಯಂತಿ ಸಡಗರದಲ್ಲಿ ಇದ್ದೇವೆ. ಇಂದು ವಿಶ್ವ ಪುಸ್ತಕ ದಿನ ಕೂಡ. ಬಸವಣ್ಣನವರ ವಚನಗಳು ಕೃತಿಗಳನ್ನು ಪರಸ್ಪರ ವಿನಿಮಯ ಮಾಡಿಕೊಂಡು ಎರಡು ವಿಭಿನ್ನ ಕಾರ್ಯಕ್ರಮ ಇಂದು ಸಂಘಟಿಸಿದರೆ ಓದುವ ಹವ್ಯಾಸವನ್ನು ಇನ್ನಷ್ಟು ಹೆಚ್ಚು ಜನಪ್ರಿಯಗೊಳಿಸಬಹುದು.
ಪ್ರತಿ ವರ್ಷದ ಎಪ್ರೀಲ್ ೨೩ರಂದು ವಿಶ್ವ ಪುಸ್ತಕ ಮತ್ತು ಕೃತಿಸ್ವಾಮ್ಯ ದಿನ (ಇದನ್ನು ಅಂತಾರಾಷ್ಟ್ರೀಯ ಪುಸ್ತಕ ದಿನ ಎಂದೂ ಕರೆಯುತ್ತಾರೆ). ವಿಶ್ವಸಂಸ್ಥೆಯ ಶೈಕ್ಷಣಿಕ, ವೈಜ್ಞಾನಿಕ ಮತ್ತು ಸಾಂಸ್ಕೃತಿಕ ಆಯೋಗ (ಯುನೆಸ್ಕೋ) 1995ರಲ್ಲಿ ಮೊದಲ ಬಾರಿಗೆ ಓದುವಿಕೆ, ಪ್ರಕಾಶನ ಮತ್ತು ಕೃತಿಸ್ವಾಮ್ಯಗಳ ಬಗ್ಗೆ ಅರಿವು ಮತ್ತು ಪ್ರಚಾರ ನೀಡಲು ಈ ಕಾರ್ಯಕ್ರಮ ಹಮ್ಮಿಕೊಂಡಿತು. ಈ ಕಾರ್ಯಕ್ರಮ ಹಮ್ಮಿಕೊಳ್ಳುವ ಮೂಲಕ ಯುನೇಸ್ಕೊ ಯುವಜನತೆಯಲ್ಲಿ ಪುಸ್ತಕ ಪ್ರೇಮ, ಓದಿನ ಖುಷಿ ಅಥವಾ ಗಮ್ಮತ್ತು ಹೆಚ್ಚಿಸುವ ಮತ್ತು ಉತ್ತಮ ಲೇಖಕನನ್ನು ಗೌರವಿಸುವ ಹಂಬಲ ಹೊಂದಿದೆ.
ನೂರಕ್ಕೂ ಹೆಚ್ಚು ರಾಷ್ಟ್ರಗಳು ಮತ್ತು ವಿಶ್ವಾದ್ಯಂತ ಅನೇಕಾನೇಕ ಪುಸ್ತಕ ಪ್ರಕಾಶಕರು, ಪುಸ್ತಕ ವ್ಯಾಪಾರಿಗಳು, ಗ್ರಂಥಾಲಯಗಳು, ಶಾಲಾ-ಕಾಲೇಜು-ವಿಶ್ವವಿದ್ಯಾಲಯಗಳು, ಸಾಂಸ್ಕೃತಿಕ ಸಂಘಟನೆಗಳು ಮತ್ತು ಸಾಹಿತ್ಯ ವೇದಿಕೆಗಳು ಈ ದಿನಾಚಾರಣೆಯಲ್ಲಿ ಭಾಗವಹಿಸಿ ಪುಸ್ತಕ ಮತ್ತು ಓದುವಿಕೆಯ ಮಹತ್ವ ಸಾರಲಿವೆ.
ಈ ದಿನದಂದು ವಿಲಿಯಮ್ ಶೆಕ್ಸ ಪಿಯರ್ ರವರ ಪುಣ್ಯತಿಥಿಯನ್ನೂ ಸಹ ಆಚರಿಸುವರು.
ಜಾಗತಿಕ ಮಟ್ಟದಲ್ಲಿ ವಚನಗಳು ತನ್ನದೇ ಪ್ರಾಮುಖ್ಯತೆಯನ್ನು ಹೊಂದಿದ ವಚನ ಸಾಹಿತ್ಯದ ಮೂಲಕ ಅಪಾರ ಪರಿವರ್ತನೆಗೆ ನಾಂದಿ ಹಾಡಿದ ಬಸವಣ್ಣನವರ ಕುರಿತು ಈ ದಿನ ಬಸವ ಜಯಂತಿ ಜರುಗುವ ಮೂಲಕ ವಚನ ಸಾಹಿತ್ಯದ ಪ್ರಭಾವ ನಾವು ನೆನೆಯಲೇಬೇಕು.
ಪುಸ್ತಕಗಳನ್ನು ಯಾಕೆ ಓದಬೇಕು ಎಂದು ಪ್ರಶ್ನಿಸಿದರೆ ಒಬ್ಬೊಬ್ಬರ ಉತ್ತರ ಒಂದೊಂದು ರೀತಿಯಾಗಿರಬಹುದು. ಪುಸ್ತಕ ಓದುವುದು ಕೆಲವರಿಗೆ ಹವ್ಯಾಸವಾದರೆ ಮತ್ತೆ ಕೆಲವರಿಗೆ ಜ್ಞಾನ ವೃದ್ಧಿಗಿರುವ ದಾರಿ.
ಪ್ರತಿಯೊಬ್ಬ ಓದುಗನ ಅಭಿರುಚಿ ಭಿನ್ನವಾಗಿರಬಹುದು. ಆದರೆ ಆ ಓದು ಆತನ ಜ್ಞಾನದಾಹವನ್ನು ತಣಿಸುತ್ತದೆ. ಪುಸ್ತಕ ಓದುವುದರಿಂದ ನಮ್ಮ ಕಲ್ಪನಾ ಶಕ್ತಿ ಹೆಚ್ಚುವುದರ ಜತೆಯಲ್ಲಿ ಮನೋವಿಕಾಸಕ್ಕೆ ನೆರವಾಗುತ್ತದೆ.
ಒಂದೊಂದು ಪುಸ್ತಕವು ತನ್ನದೇ ಆದ ವೈವಿಧ್ಯಮಯ ಕಥಾ ಮತ್ತು ಜ್ಞಾನ ಹಂದರವನ್ನು ಒಳಗೊಂಡಿದ್ದು, ಬೇರೆ ಬೇರೆ ಪ್ರಪಂಚದ ಅರಿವು ಮೂಡಿ ಸುತ್ತದೆ. ಒಟ್ಟಿನಲ್ಲಿ ಪುಸ್ತಕಗಳು ಕೇವಲ ಜ್ಞಾನದ ಗುಚ್ಛವಾಗಿರದೆ ಒಂದು ಪ್ರದೇಶದ ಭಾಷೆ, ಸಂಸ್ಕೃತಿ ಇವೆಲ್ಲವನ್ನು ಬೆಸೆಯುವ ಕೊಂಡಿಗಳಾಗಿರುತ್ತವೆ.
ವಿಶ್ವ ಪುಸ್ತಕ ಮತ್ತು ಕೃತಿಸ್ವಾಮ್ಯ ದಿನಾಚರಣೆ ಪುಸ್ತಕ ಉದ್ಯಮದ ಮೂರು ಪ್ರಮುಖ ಕೊಂಡಿಗಳಾದ ಪ್ರಕಾಶಕರು, ಪುಸ್ತಕ ಮಾರಾಟ ಗಾರರು ಮತ್ತು ಗ್ರಂಥಾಲಯಗಳನ್ನು ಪ್ರತಿನಿಧಿಸುವ ದಿನವಾಗಿದೆ. ಇವರೆಲ್ಲರೂ ಪುಸ್ತಕಗಳ ಮೂಲಕ ಸಮಾಜಕ್ಕೆ ನೀಡುತ್ತಿರುವ ಕೊಡುಗೆಯನ್ನು ನೆನಪಿಸುವ ಮತ್ತು ಇಂದಿನ ಆಧುನಿಕ ತಂತ್ರ ಜ್ಞಾನ ಜಗತ್ತಿನ ನಡುವೆಯೂ ಪುಸ್ತಕಗಳು ಉಳಿಸಿಕೊಂಡಿರುವ ಮಹತ್ವವನ್ನು ಸಾರುವ ದಿನ ಇದಾಗಿದೆ.
ಕರ್ನಾಟಕದ ಬೆಂಗಳೂರು ಮೈಸೂರು ಗುಲ್ಬರ್ಗ ಬೆಳಗಾವಿ ಬಳ್ಳಾರಿ ಮಂಡ್ಯ ಹೀಗೆ ವಿವಿಧ ಜಿಲ್ಲೆಗಳಲ್ಲಿ ಪುಸ್ತಕ ಪ್ರಕಾಶನ ಸಂಸ್ಥೆಗಳು ಪುಸ್ತಕ ಪ್ರಕಟಣೆಯಲ್ಲಿ ತೊಡಗಿವೆ. ಇವರು ಲೇಖಕ. ಗ್ರಂಥಾಲಯ ನಡುವಿನ ಕೊಂಡಿಯಾಗಿ ಕಾರ್ಯ ಮಾಡುತ್ತಿವೆ. ಪುಸ್ತಕ ಪ್ರಕಟಿಸಲು ತೊಂದರೆ ಅನುಭವಿಸುವ ಲೇಖಕರು ಇಂತಹ ಪ್ರಕಾಶನಗಳ ಮೂಲಕ ಒಪ್ಪಂದ ಕೈಗೊಂಡು ತಮ್ಮ ಪುಸ್ತಕ ಪ್ರಕಟಣೆಯಲ್ಲಿ ತೊಡಗಿರುವುದನ್ನು ನಾವು ಕಾಣುತ್ತೇವೆ.
ಪುಸ್ತಕ ದಿನ
ಆರಂಭದಲ್ಲಿ ವೆಲಿನ್ಸಿಯಾದ ಬರಹಗಾರ ವಿಸೆಂಟ್ ಕ್ಲವೆಲ್ ಆಂಡ್ರ್ಯೂ ಅವರ ಜನ್ಮದಿನವಾದ ಅ.7ರಂದು ಪುಸ್ತಕ ದಿನವನ್ನು ಆಚರಿಸಲಾಗುತ್ತಿದ್ದರೆ ಅನಂತರ ಅವರು ಮರಣ ಹೊಂದಿದ ಅಂದರೆ ಎ.23ರಂದು ವಿಶ್ವ ಪುಸ್ತಕ ದಿನವನ್ನು ಆಚರಿಸಲು ತೀರ್ಮಾನಿಸಲಾಯಿತು.
ಅದಲ್ಲದೆ ಇದೇ ದಿನ ದಂದು ಪ್ರಮುಖ ಲೇಖಕರಾದ ವಿಲಿಯಂ ಶೇಕ್ಸ್ ಪಿಯರ್, ಮಿಗುಯೆಲ್ ಡಿ. ಸರ್ವಾಂಟೆಸ್ ಮತ್ತು ಇಂಕಾಗಾರ್ಸಿ ಲಾಸೊಡೆ ಲಾವೆಗಾ ಮರಣ ಹೊಂದಿದ್ದು ಈ ಕಾರಣದಿಂದಾಗಿ ಈ ದಿನವನ್ನೇ ಆಯ್ಕೆ ಮಾಡಲಾಯಿತು.
1995ರಲ್ಲಿ ಯುನೆಸ್ಕೋ ಎ.23ರಂದು ವಿಶ್ವ ಪುಸ್ತಕ ಮತ್ತು ಕೃತಿಸ್ವಾಮ್ಯ ದಿನ ಎಂದು ಅಧಿಕೃತವಾಗಿ ಘೋಷಿಸಿತು. ಉದ್ದೇಶ: ಜನರಲ್ಲಿ ಓದುವ, ಅಭಿರುಚಿ ಹೆಚ್ಚಿಸುವ ಮತ್ತು ಕೃತಿಸ್ವಾಮ್ಯದ ಬಗ್ಗೆ ಜಾಗೃತಿ ಮೂಡಿಸಲು, ಲೇಖಕರಿಗೆ ಗೌರವ ಸಲ್ಲಿಸಲು, ಹೊಸ ಲೇಖಕರಿಗೆ ಬರೆಯಲು ಸ್ಪೂರ್ತಿಯಾಗಿ ವಿಶ್ವ ಪುಸ್ತಕ ದಿನವನ್ನು ಆಚರಣೆಗೆ ತರಲಾಯಿತು.
ನಾವೇನು ಮಾಡಲು ಸಾಧ್ಯ
ಇಂದು ಬಸವ ಜಯಂತಿ ಕೂಡ ಆಗಿರುವುದರಿಂದ ಬಸವಣ್ಣನವರ ಹಾಗೂ ವಚನಕಾರರ ಕೃತಿಗಳನ್ನು ನೀಡುವ ಮೂಲಕ ಈ ದಿನ ಸಾರ್ಥಕ ಪಡಿಸಬಹುದು.
ಗ್ರಂಥಾಲಯಗಳಿಗೆ ನಿಮ್ಮ ಬಳಿ ಇರುವ ಪುಸ್ತಕ ನೀಡಬಹುದು.
ನೀವೇ ಈ ದಿನದ ನೆನಪಿಗೆ ನಿಮಗೆ ಮಹತ್ವ ಎನಿಸುವ ಪುಸ್ತಕ ಖರೀದಿಸಬಹುದು.
ವರ್ಷವಿಡೀ ಬರುವ ಮಹತ್ವದ ದಿನಗಳಲ್ಲಿ ನಿಮ್ಮ ಪ್ರೀತಿಪಾತ್ರರಿಗೆ ಪುಸ್ತಕ ಕೊಡುಗೆಯಾಗಿ ನೀಡುವ ಸಂಕಲ್ಪ ಮಾಡುವ ಮೂಲಕ ನಿಮ್ಮ ಮನೆಯಲ್ಲಿ ಪುಸ್ತಕ ಖರೀದಿಸಿ ಇಟ್ಟುಕೊಳ್ಳುವ ಮೂಲಕ ಈ ದಿನದ ನೆನಪಾಗಿಸುವುದು.
ಸಾಯಂಕಾಲ ಸಮಯದಲ್ಲಿ ಓರ್ವ ಲೇಖಕನನ್ನೂ ಪರಿಚಯಿಸುವ ಮೂಲಕ ಆತನ ಕೃತಿಗಳನ್ನು ಪರಿಚಯಿಸುವ ಪುಟ್ಟ ಕಾರ್ಯ ಕ್ರಮವನ್ನು ಆಯೋಜಿಸಬಹುದು.
ಲೇಖಕರು ತಮ್ಮ ಕೃತಿಗಳು ಬಿಡುಗಡೆಗೆ ಸಿದ್ಧವಾಗಿದ್ದ ಲ್ಲಿ ಈ ದಿನ ಬಿಡುಗಡೆ ಸಮಾರಂಭ ಏರ್ಪಡಿಸಿ ಪ್ರಕಾಶಕ ರನ್ನು ಗೌರವಿಸಬಹುದು
ಲೇಖಕರು ಒಂದೇ ಸ್ಥಳದಲ್ಲಿ ವಾಸಿಸುತ್ತಿದ್ದ ಲ್ಲಿ ಎಲ್ಲರೂ ಒಂದು ನಿಗದಿತ ಸ್ಥಳದಲ್ಲಿ ಸೇರುವ ಮೂಲಕ ತಮ್ಮ ತಮ್ಮ ಕೃತಿಗಳ ಪ್ರದರ್ಶನ ಏರ್ಪಾಡು ಮಾಡಬಹುದು.
ಹೇಳುತ್ತಾ ಹೋದರೆ ಪುಸ್ತಕ ಮಹತ್ವ ನಮಗೆ ಹೇಗೆ ಯಾವ ರೀತಿ ತಿಳಿಸಲು ಸಾಧ್ಯತೆ ಇದೆಯೋ ಆ ಎಲ್ಲಾ ರೀತಿಯ ಕಾರ್ಯ ಗಳನ್ನು ಹಮ್ಮಿಕೊಳ್ಳಬಹುದು.
*ಪುಸ್ತಕ ದ ಮಹತ್ವ*
ಪುಸ್ತಕಗಳು ಯಾವತ್ತೂ ನಮ್ಮ ಜೀವಸಖರಂತೆ ಎಂಬ ಮಾತು ಸತ್ಯ. ಬಂಧುಗಳು, ಗುರುಗಳು, ಸಹಪಾಠಿಗಳು, ಸಹೋದ್ಯೋಗಿಗಳು ಬರಬಹುದು, ಹೋಗಬಹುದು ಆದರೆ ಪುಸ್ತಕಗಳಿವೆಯಲ್ಲಾ ಯಾವತ್ತಿಗೂ ಜೊತೆಗಿರುವ ಸ್ನೇಹಿತರು.
ಸಂಸ್ಕೃತಿಯ ಪ್ರಸರಣೆಯಲ್ಲಿ ಮುಖ ಪಾತ್ರ ಪುಸ್ತಕಗಳದ್ದು. ಅದು ಶಾಸನಗಳಿಂದ, ತಾಳೆ ಓಲೆಗಳಿಂದ, ಈಗ ನಾವು ಓದುತ್ತಿರುವ ಪುಸ್ತಕಗಳು ಮತ್ತು ಇ-ಪುಸ್ತಕಗಳಿರಹುದು. ಕಾಲದಿಂದ ಕಾಲಕ್ಕೆ ಸಮಾಜ, ತಂತ್ರಜ್ಞಾನ ಬೆಳೆದಂತೆಲ್ಲ ಅದರ ಬಾಹ್ಯ ಸ್ವರೂಪ ಬದಲಾಗಿದ್ದರೂ ಆಂತರಂಗಿಕವಾದ ಉದ್ದೇಶ ಒಂದೇ ಆಗಿದೆ. ಶಿಕ್ಷಣ ನಮ್ಮನ್ನು ಅಕ್ಷರಸ್ತರನ್ನಾಗಿ ಮಾಡಬಹುದು ಆದರೆ ಪುಸ್ತಕಗಳು ಮಾತ್ರ ಸಂಸ್ಖೃತಿಯ ವಕ್ತಾರರನ್ನಾಗಿ, ವಾರಸುದಾರರನ್ನಾಗಿ ಮಾಡುತ್ತವೆ.
ಲೇಖಕ, ಪ್ರಕಾಶಕ ಮತ್ತು ಓದುಗ ಇವು ಮೂರೂ ತ್ರಿವೇಣಿ ಸಂಗಮವಿದ್ದಂತೆ ಎಂಬ ಮಾತನ್ನು ನಿವೃತ್ತ ಗ್ರಂಥಾಲಯ ಅಧಿಕಾರಿಯೊಬ್ಬರು ಆಗಾಗ ಹೇಳುತ್ತಿದ್ದರು. ಈ ಮೂವರೂ ಪರಸ್ಪರ ಪ್ರೇರಕರು ಮಾತ್ರವಲ್ಲ ಪೂರಕರು. ಅಂದರೆ ಲೇಖಕರಿಲ್ಲದೆ ಓದುಗರನ್ನು, ಓದುಗರಿಲ್ಲದೆ ಲೇಖಕರನ್ನು, ಇವರಿಬ್ಬರೂ ಇಲ್ಲದ ಪ್ರಕಾಶಕರನ್ನು ಊಹಿಸಿಕೊಳ್ಳುವುದೂ ಸಾಧ್ಯವಿಲ್ಲ. ಓದುಗ ಮತ್ತು ಲೇಖಕರ ನಡುವಿನ ಕೊಂಡಿ ಪ್ರಕಾಶಕ. ಇವರೆಲ್ಲರ ನಡುವೆ ಸೌಹಾರ್ಧಯುತವಾದ ಸಂಬಂಧವಿರಬೇಕು.
ಒಂದು ಪುಸ್ತಕದ ಓದು ನಮಗೆ ಅನೇಕ ಗೆಳಯರನ್ನು ಕೊಡುವುದರ ಜೊತೆಗೆ, ಓದಿನ ಹವ್ಯಾಸವು ನಾವು ಬಯಸಿದ್ದು ನಮಗೆ ಸಿಗುವಂತಾಗುತ್ತದೆ. ನಾವು ಭೌತಿಕವಾಗಿ ಚಲಿಸದೆ ನಮಗೆ ಸುಖಕರ ಪ್ರಯಾಣದ ಅನುಭವವನ್ನು ನೀಡುತ್ತವೆ
ಯಾರು ಪುಸ್ತಕ ಓದುವ ಹವ್ಯಾಸ ಬೆಳೆಸಿಕೊಂಡಿರುವರೋ ಅವರಿಗೆ ಮಾತ್ರ ಓದಿನ ರುಚಿ ಗೊತ್ತಿರುತ್ತದೆ.ಓದು ಮನುಷ್ಯನ್ನು ಮನುಷ್ಯನಾಗಿ ನೋಡುವುದನ್ನು ಕಲಿಸುತ್ತದೆ
ಸರಕಾರಿ ಶಾಲೆಗಳಲ್ಲಿ ಓದುವ ಮೂಲೆ, ತಗೆ ಪುಸ್ತಕ ಹೊರಗೆ, ಶೃದ್ಧಾ ವಾಚನಾಲಯ ಕಾರ್ಯಕ್ರಮಗಳು. ಸರಕಾರ ಶಾಲೆಗಳಿಗೆ ಅನುದಾನ ನೀಡಿ ಗ್ರಂಥಾಲಯಕ್ಕೆ ಅವಶ್ಯಕ ಮಕ್ಕಳ ಬುದ್ದಿ ಮಟ್ಟಕ್ಕೆ ಅನುಗುಣವಾಗಿ ಹಾಗೂ ಸ್ಥಳಿಯ ಬರಹಗಾರರ ಪುಸ್ತಕ ಖರೀದಿಸುವುದರೊಂದಿಗೆ ಬರಹಗಾರರ ಮನೋಬಲವನ್ನು ಹೆಚ್ಚಿಸುವತ್ತ ದಿಟ್ಟ ನೆಡ ಹೊಂದಿದ್ದು ಈ ದಿಸೆಯಲ್ಲಿ ಪುಸ್ತಕ ಖರೀದಿ ಜರುಗುತ್ತಿರುವುದು ಕೂಡ ಸಾರ್ಥಕ ಕಾರ್ಯ.(ಎನ್ ಸಿ.ಎಪ್.೨೦೦೫ ಆಶಯದಂತೆ)
ಪ್ರಪಂಚದಲ್ಲಿ ಮರಣವಿಲ್ಲದ ವರ ಪಡೆದಿರುವ ವಸ್ತುವೆಂದರೆ.ಅದು. -ಪುಸ್ತಕ
ಓದುವ ಹವ್ಯಾಸ ವುಳ್ಳವರಿಗೆ ತಾನು ಒಂಟಿ ಎಂಬ ಅನಾಥ ಪ್ರಜ್ಞೆ ಎಂದೂ ಬಾಧಿಸಲಾರದು. ಪುಸ್ತಕಗಳು ಓದುಗನ ಒಡನಾಡಿಯಾಗಿ ಎಲ್ಲ ಸಮಯದಲ್ಲಿಯೂ ಜತೆಯಾಗಿರುತ್ತದೆ..
ನೀವು ತಿಳಿದುಕೊಳ್ಳಬೇಕಾದ ಏಕೈಕ ವಿಷಯವೆಂದರೆ ಗ್ರಂಥಾಲಯದ ಸ್ಥಳ.” – ಆಲ್ಬರ್ಟ್ ಐನ್ಸ್ಟೈನ್
ಪುಸ್ತಕದಷ್ಟು ನಿಷ್ಠಾವಂತ ಸ್ನೇಹಿತರಿಲ್ಲ” – ಅರ್ನೆಸ್ಟ್ ಹೆಮಿಂಗ್ವೇ
ಒಳ್ಳೆಯ ಸ್ನೇಹಿತರು, ಒಳ್ಳೆಯ ಪುಸ್ತಕಗಳು ಮತ್ತು ಆತ್ಮಸಾಕ್ಷಿ ಇದು ಆದರ್ಶ ಜೀವನ.” – ಮಾರ್ಕ್ ಟ್ವೈನ್
“ನಾನು ಅತ್ಯುತ್ತಮ ಗ್ರಂಥಾಲಯ ಹೊಂದಿಲ್ಲದಿದ್ದರೆ ನಾನು ದುಃಖಪಡುತ್ತೇನೆ.” – ಜೇನ್ ಆಸ್ಟೆನ್, ಪ್ರೈಡ್ ಅಂಡ್ ಪ್ರಿಜುಡೀಸ್
ಹುಟ್ಟಿನಿಂದ ಸಾಯುವವರೆಗೂ ಎಲ್ಲರೂ ಕಲಿಯುತ್ತಾರೆ. ಬಾಲ್ಯದಲ್ಲಿ ನಾವು ನಮ್ಮ ಪೋಷಕರಿಂದ ಕಲಿಯುತ್ತೇವೆ, ನಮ್ಮ ಸುತ್ತಮುತ್ತಲಿನ ಸಮಾಜ, ಇತ್ಯಾದಿಗಳಿಂದ ಕಲಿಯುತ್ತೇವೆ. ವಾಸ್ತವವಾಗಿ, ಜೀವನದ ಪ್ರತಿಯೊಂದು ಹಂತದಲ್ಲೂ ನಾವು ಏನನ್ನಾದರೂ ಕಲಿಯುತ್ತೇವೆ. ವ್ಯಕ್ತಿಯ ಕಲಿಕೆಯು ಅವನ ಸ್ಥಾನ, ಖ್ಯಾತಿ, ಸಾಮಾಜಿಕ ಸ್ಥಾನಮಾನ ಮತ್ತು ಜೀವನ ಮೌಲ್ಯಗಳನ್ನು ನಿರ್ಧರಿಸುತ್ತದೆ. ಕಲಿಕೆಯ ಪಯಣದಲ್ಲಿ ಪುಸ್ತಕಗಳು ಪ್ರಮುಖ ಪಾತ್ರವಹಿಸುತ್ತವೆ. ಪುಸ್ತಕಗಳನ್ನು ಅತ್ಯುತ್ತಮ ಮಾರ್ಗದರ್ಶಿ, ಸ್ಫೂರ್ತಿ, ನೈತಿಕ ಬೆಂಬಲಿಗ ಮತ್ತು ಕೆಲವೊಮ್ಮೆ ಮುಂಬರುವ ಜೀವನಕ್ಕೆ ಒಂದು ಮಹತ್ವದ ತಿರುವು ಎಂದು ಸಾಬೀತುಪಡಿಸಬಹುದು, ಉತ್ತಮ ಪುಸ್ತಕಗಳನ್ನು ಓದುವ ಅಭ್ಯಾಸವು ನಿಮಗೆ ಉತ್ತಮ ತಿಳುವಳಿಕೆಯನ್ನು ನೀಡುತ್ತದೆ ಮತ್ತು ವಿದ್ಯಾವಂತರಾಗಲು ಅನುವು ಮಾಡಿಕೊಡುತ್ತದೆ ಮತ್ತು ದೈಹಿಕ ಮತ್ತು ಮಾನಸಿಕ ಸದೃಢತೆ ಮತ್ತು ನಮ್ಯತೆಯ ಅತ್ಯುತ್ತಮ ಬದಲಾವಣೆಗಳೊಂದಿಗೆ ನಿಮ್ಮ ಜೀವನಶೈಲಿಯನ್ನು ನಿರ್ಮಿಸುತ್ತದೆ.
ನನ್ನನ್ನು ತಲೆ ತಗ್ಗಿಸಿ ಓದು, ನಾನು ನಿನ್ನನ್ನು ತಲೆಯತ್ತುವಂತೆ ಮಾಡುತ್ತೇನೆ”
ಹೀಗೆ ಪುಸ್ತಕ ಮಹತ್ವ ಸಾರುವ ಅನೇಕ ಸಂಗತಿಗಳನ್ನು ನಾವು ನೋಡುತ್ತೇವೆ.
ನಾವು ಪುಸ್ತಕ ರಚಿಸುವ ಲೇಖಕರು ಪ್ರಕಟಿಸುವ ಪ್ರಕಾಶಕರಿಗೆ ಗೌರವ ನೀಡಬೇಕು ಎಂದಾದರೆ ಕೊಂಡು ಓದುವ ಸಂಸ್ಕೃತಿ ಬೆಳೆಸುವುದು ಅಗತ್ಯ.
ವೈ. ಬಿ ಕಡಕೋಳ