ಗರಡಿ ಮನೆಯ ನವೀಕರಣ
ಮೂಡಲಗಿ: ೭೦ ವರ್ಷಗಳ ಹಿಂದೆ (೧೯೫೫ರಲ್ಲಿ) ಸ್ಥಾಪನೆಗೊಂಡು ಶಿಥಿಲಾವಸ್ಥೆಗೆ ತಲುಪಿದ್ದ ಗರಡಿ ಮನೆಯನ್ನು ಪುನರ್ ನಿರ್ಮಾಣಗೊಳಿಸುವ ಮೂಲಕ ಕುಸ್ತಿಯ ಗತ ವೈಭವ ಮರುಕಳಿಸುವಂತೆ ಮಾಡಲಾಗಿದ್ದು, ಪಟ್ಟಣದ ಯುವಕರು ಇದರ ಸದುಯೋಗಪಡಿಸಿಕೊಳ್ಳಬೇಕೆಂದು ರಾಜ್ಯಸಭಾ ಸಂಸದ ಈರಣ್ಣ ಕಡಾಡಿ ಕರೆ ನೀಡಿದರು.
ಗುರುವಾರ ಸೆ-೨೬ ರಂದು ಕಲ್ಲೋಳಿ ಪಟ್ಟಣದಲ್ಲಿ ರಾಜ್ಯಸಭಾ ಸಂಸದರ ಸ್ಥಳೀಯ ಪ್ರದೇಶಾಭಿವೃದ್ಧಿ ಯೋಜನೆಯಡಿ ನವೀಕರಿಸಲಾದ ಗರಡಿ ಮನೆ ಕಟ್ಟಡ ಕಾಮಗಾರಿಯನ್ನು ಉದ್ಘಾಟಿಸಿ ಮಾತನಾಡಿದ ಸಂಸದ ಈರಣ್ಣ ಕಡಾಡಿ ಅವರು, ಮೊದಲೆಲ್ಲ ಕುಸ್ತಿ ಆಡುವುದೆಂದರೆ ಪ್ರತಿಷ್ಠೆಯ ವಿಷಯವಾಗಿತ್ತು. ಇಂದಿನ ಯುವಕರು ದುಶ್ಚಟಗಳಿಗೆ ಬಲಿಯಾಗಿ, ಮಾನಸಿಕ ಹಾಗೂ ದೈಹಿಕವಾಗಿ ದುರ್ಬಲರಾಗುತ್ತಿದ್ದಾರೆ ಮತ್ತೆ ಅವರನ್ನು ಗರಡಿ ಮನೆಗಳತ್ತ ಸೆಳೆಯಬೇಕಾಗಿದೆ. ಇತ್ತೀಚಿನ ದಿನಗಳಲ್ಲಿ ಜಾತ್ರೆಗಳಲ್ಲಿ ಮಾತ್ರ ನಾವು ಕುಸ್ತಿ ಆಟವನ್ನು ನೋಡುವಂತಾಗಿದೆ. ಭಾರತೀಯ ಇತಿಹಾಸ ಮತ್ತು ಸಂಸ್ಕೃತಿ ವೈಭವೀಕರಿಸಲು ಕುಸ್ತಿ, ಕಬಡ್ಡಿಯಂತಹ ದೇಶಿ ಆಟಗಳನ್ನು ಪ್ರೋತ್ಸಾಹಿಸಬೇಕಾಗಿದೆ ಎಂದರು.
ಗರಡಿ ಮನೆಗಳು ಕಟ್ಟುಮಸ್ತಾದ ದೇಹ ದಾರ್ಢ್ಯತೆಗೆ ಯೋಗ್ಯ ಸ್ಥಳಗಳಾಗಿದ್ದವು. ಇದರಿಂದಾಗಿ ಆರೋಗ್ಯ ಉತ್ತಮವಾಗಿರುತ್ತಿತ್ತು. ವಿಪರ್ಯಾಸವೆಂದರೆ ಇಂದಿನ ಮಕ್ಕಳಿಗೆ ಗರಡಿ ಮನೆಗಳ ಮಹತ್ವ ತಿಳಿದಿಲ್ಲ. ವ್ಯಾಯಾಮ ಶಾಲೆ, ಗರಡಿ ಮನೆಗಳನ್ನು ಮರುಸ್ಥಾಪಿಸಿ ಯುವಕರನ್ನು ಪ್ರೇರಣೆಗೋಳಿಸುವ ಮೂಲಕ ಪ್ರಾಚೀನ ಭಾರತದ ಕ್ರೀಡೆಗಳಾದ ಕುಸ್ತಿ ಕಬಡ್ಡಿ ಆಟಗಳಿಗೆ ಆದ್ಯತೆ ನೀಡಲಾಗುತ್ತದೆ. ಪಟ್ಟಣದ ಯುವಜನತೆ ತಮ್ಮ ದೇಹದಾರ್ಢ್ಯ ಅಭ್ಯಾಸಕ್ಕಾಗಿ ಈ ಸುಸಜ್ಜಿತ ಗರಡಿ ಮನೆಯ ಸದುಯೋಗಪಡಿಸಿಕೊಳ್ಳಬೇಕೆಂದು ಕರೆ ನೀಡಿದರು.
ಪಂಚಾಯತ ಮುಖ್ಯಾಧಿಕಾರಿ ಪರಶುರಾಮ ದೇವಮಾನೆ ಪ್ರಮುಖರಾದ ಪ್ರಭು ಕಡಾಡಿ, ಗಿರಮಲ್ಲಪ್ಪ ಸಂಸುದ್ದಿ, ಪರಪ್ಪ ಮಳವಾಡ, ಶಿವಾನಂದ ಹೆಬ್ಬಾಳ, ಶಿವಪ್ಪ ಬಿ.ಪಾಟೀಲ, ಮಲ್ಲಪ್ಪ ಖಾನಗೌಡರ, ಅಜೀತ ಚಿಕ್ಕೋಡಿ, ದಸಗೀರ ಕಮತನೂರ, ಸೋಮಲಿಂಗ ಹಡಗಿನಾಳ, ಭೀಮರಾಯ ಕಡಾಡಿ, ಗೋವಿಂದ ಕಡಾಡಿ, ಸಿದ್ದಪ್ಪ ಹೆಬ್ಬಾಳ, ಶ್ರೀಶೈಲ ಕಡಾಡಿ, ಪಟ್ಟಣದ ಪೈಲವಾನರಾದ ಲಕ್ಷ್ಮಣ ಉಮರಾಣಿ, ಹಣಮಂತ ಮೆಚ್ಚನ್ನವರ, ಚಿಂತಾಮಣಿ ಗುದನ್ನವರ, ಬಸವರಾಜ ಕರಡಿಗುದ್ದಿ, ದಸ್ತಗೀರ ತಹಶೀಲ್ದಾರ, ಗೂಳಪ್ಪ ವಿಜಯನಗರ, ಪರಪ್ಪ ಕಡಾಡಿ, ಅರುಣ ಕಡಾಡಿ, ಗುರುನಾಥ ಮಧಭಾಂವಿ ಪಟ್ಟಣ ಗುತ್ತಿಗೆದಾರ ಈರಣ್ಣ ಮುನ್ನೋಳಿಮಠ, ಗೋಕಾಕ ಕೆ.ಆರ್.ಡಿ.ಎಲ್. ಸಂಸ್ಥೆಯ ಸಿಬ್ಬಂದಿ ಮಲ್ಲು ಕಮತೆ ಸೇರಿದಂತೆ ಗರಡಿ ಮನೆ ವಿದ್ಯಾರ್ಥಿಗಳು ಕಾರ್ಯಕರ್ತರು ಉಪಸ್ಥಿತರಿದ್ದರು.